ಈ ಸಂಜೆ

803k Followers

ಒತ್ತಡಕ್ಕೆ ಮಣಿದ ಬಿಎಂಟಿಸಿ, ಪಾಸ್ ದರ ಪರಿಷ್ಕರಣೆ : ಇಲ್ಲಿದೆ ಹೊಸ ದರಗಳ ಪಟ್ಟಿ

25 May 2020.1:19 PM

ಬೆಂಗಳೂರು, ಮೇ 25- ಸಾರ್ವಜನಿಕರ ಒತ್ತಡ ಹೆಚ್ಚಾದ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ದೈನಂದಿನ ಪಾಸ್ ದರವನ್ನು ಪರಿಷ್ಕರಣೆ ಮಾಡಿದೆ. 70ರೂ.ಗಳ ದಿನದ ಪಾಸ್ ದರವನ್ನು 50ರೂ.ಗೆ ಇಳಿಕೆ ಮಾಡಿದೆ. ಅದೇ ರೀತಿ ಹೊಸದಾಗಿ 30ರೂ., 20ರೂ., 15ರೂ., 10ರೂ., 5ರೂ.ಗಳ ಹೊಸ ಪಾಸ್‍ಗಳನ್ನು ಬಿಡುಗಡೆ ಮಾಡಿದ್ದು, ಟಿಕೆಟ್ ಬದಲಾಗಿ ಇವುಗಳನ್ನು ನೀಡಲು ನಿರ್ಧರಿಸಿದೆ.

ಈವರೆಗೆ ದಿನದ ಪಾಸ್‍ಅನ್ನು 70ರೂ.ಗೆ ನೀಡಲಾಗಿತ್ತು. ಕೊರೊನಾ ಸಾಂಕ್ರಾಮಿಕ ಭೀತಿ ಹಿನ್ನೆಲೆಯಲ್ಲಿ ಹಣ ಪಡೆದು ಟಿಕೆಟ್ ನೀಡುತ್ತಿರಲಿಲ್ಲ. ಪ್ರತಿಯೊಬ್ಬರೂ ಪಾಸ್ ಪಡೆದೇ ಪ್ರಯಾಣಿಸಬೇಕಿತ್ತು. ಹಾಗಾಗಿ ಪ್ರತಿ ಸ್ಟೇಜ್‍ಗೆ ಪ್ರಯಾಣಿಸಲು ಪ್ರಯಾಣಿಕರು 70ರೂ.

ಕೊಡಲೇಬೇಕಿತ್ತು.

ಸಾರ್ವಜನಿಕ ಪ್ರಯಾಣಿಕರಿಗೆ ಇದು ತೀವ್ರ ಹೊರೆಯಾಗಿ ಪರಿಣಮಿಸಿತ್ತು. ಇದರಿಂದ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.5ರೂ., 10ರೂ. ಪ್ರಯಾಣಕ್ಕೆ 70ರೂ.ಗಳನ್ನು ಅನಗತ್ಯವಾಗಿ ತೆರಬೇಕಲ್ಲ ಎಂಬ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲದೆ, ಬಿಎಂಟಿಸಿಯಲ್ಲಿ ಪ್ರಯಾಣಿಕರ ಸಂಖ್ಯೆಯೂ ಕೂಡ ವಿರಳವಾಗಿತ್ತು.

ಅನಿವಾರ್ಯ ಪರಿಸ್ಥಿತಿಯಲ್ಲಿ ಪ್ರಯಾಣ ಮಾಡುವವರು 70ರೂ. ಕೊಟ್ಟು ಪ್ರಯಾಣ ಮಾಡುತ್ತಿದ್ದರು. ಅಲ್ಲದೆ, ಇಷ್ಟೊಂದು ಹಣ ಕೊಟ್ಟು ಬಸ್‍ನಲ್ಲಿ ಏಕೆ ಹೋಗಬೇಕೆಂದು ಹಲವರು ಆಟೋದಲ್ಲಿ ಪ್ರಯಾಣಿಸುತ್ತಿದ್ದರು. ಬಿಎಂಟಿಸಿಯ ಈ ಧೋರಣೆಗೆ ಸಾರ್ವಜನಿಕರ ಆಕ್ರೋಶ ಹೆಚ್ಚಾಗಿತ್ತು. ಅಲ್ಲದೆ, ಹಲವು ಪ್ರತಿಭಟನೆಗಳು ಕೂಡ ನಡೆದವು.

ಇದರಿಂದ ಎಚ್ಚೆತ್ತ ಬಿಎಂಟಿಸಿ 70ರೂ. ಇದ್ದ ದಿನದ ಪಾಸ್ ದರವನ್ನು 50ರೂ.ಗೆ ಇಳಿಸಿ ಹೊಸದಾಗಿ 30ರೂ., 20ರೂ., 10ರೂ., 5ರೂ.ಗಳ ಪಾಸ್ ನೀಡಲು ನಿರ್ಧರಿಸಿದೆ. ಇಂದಿನಿಂದಲೇ ಹೊಸ ಪರಿಷ್ಕøತ ದರ ಜಾರಿಗೆ ಬರಲಿದೆ ಎಂದು ಸಾರಿಗೆ ಸಚಿವರೂ ಆದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಕೊರೊನಾ ಭೀತಿ ಹಿನ್ನೆಲೆಯಲ್ಲಿ ಜನ ಅನಗತ್ಯವಾಗಿ ಹೆಚ್ಚು ಬಸ್‍ಗಳಲ್ಲಿ ಓಡಾಡಬಾರದು, ನಗದು ಪಡೆದು ಟಿಕೆಟ್ ನೀಡಿದರೆ ರೋಗ ಹರಡುವ ಶಂಕೆ ಇದೆ. ಹೀಗಾಗಿ ನಾವು ದಿನದ ಪಾಸ್ ನೀಡಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟಿದ್ದೆವು.

ಸಾರ್ವಜನಿಕ ಪ್ರಯಾಣಿಕರ ನಿರ್ಬಂಧಕ್ಕೆ ಈ ಕ್ರಮ ಕೈಗೊಳ್ಳಲಾಗಿತ್ತು. ಸಾರ್ವಜನಿಕರಿಂದ ಸುಲಿಗೆ ಮಾಡುವ ಉದ್ದೇಶ ನಮ್ಮದಲ್ಲ. ಸಾರ್ವಜನಿಕರ ಅನುಕೂಲಕ್ಕಾಗಿಯೇ ಸಾರಿಗೆ ಸಂಸ್ಥೆ ಇರುವುದು.

ಈಗ ಪ್ರಯಾಣಿಕರ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಪಾಸ್ ದರವನ್ನು ಇಳಿಸಲಾಗಿದೆ. ತಾತ್ಕಾಲಿಕವಾಗಿ ಈ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.

ದರ ಕಡಿಮೆ ಮಾಡಿದ ಹಿನ್ನೆಲೆಯಲ್ಲಿ ಪ್ರಯಾಣಿಕರ ಓಡಾಟ ಸ್ವಾಭಾವಿಕವಾಗಿ ಹೆಚ್ಚಾಗುತ್ತದೆ. ನಾವು ಬಸ್‍ಗಳನ್ನು ಹೆಚ್ಚು ಕಾರ್ಯಾಚರಣೆ ನಡೆಸುತ್ತೇವೆ ಮತ್ತು ಹೆಚ್ಚು ಟ್ರಿಪ್‍ಗಳನ್ನು ಮಾಡುತ್ತೇವೆ ಎಂದು ಅವರು ಹೇಳಿದರು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: eesanje

#Hashtags