ಉದಯವಾಣಿ

1.4M Followers

ಎಸೆಸೆಲ್ಸಿ ಪರೀಕ್ಷೆಗೆ ಸೆಪ್ಟಂಬರ್‌ ಮೊದಲ ವಾರದಲ್ಲಿ ಅಧಿಸೂಚನೆ

31 Aug 2022.08:50 AM

ಬೆಂಗಳೂರು: ಮುಂದಿನ 2023ರ ಮಾರ್ಚ್‌/ಎಪ್ರಿಲ್‌ನಲ್ಲಿ ನಡೆಯಲಿರುವ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯ ಅಧಿಸೂಚನೆಯನ್ನು ಮುಂದಿನ ಸೆಪ್ಟಂಬರ್‌ ಮೊದಲ ವಾರದಲ್ಲಿ ಪ್ರಕಟಿಸಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಸಿದ್ಧತೆ ನಡೆಸಿದೆ.

ಸಾಮಾನ್ಯವಾಗಿ ಎಸೆಸೆಲ್ಸಿ ಪರೀಕ್ಷೆ ಅಧಿಸೂಚನೆಯನ್ನು ಅಕ್ಟೋಬರ್‌ನಲ್ಲಿ ಪ್ರಕಟಿಸಲಿದೆ. ಆದರೆ, ಈ ಬಾರಿ ಎಸೆಸೆಲ್ಸಿ ಪರೀಕ್ಷೆಯನ್ನು 2019ರ ಸಾಲಿನ ಮಾದರಿಯಲ್ಲಿ ನಡೆಸುತ್ತಿದೆ. ಇದಕ್ಕೆ ಬೇಕಾದ ನಿಯಮಗಳ ಕರಡನ್ನು ಈಗಾಗಲೇ ಅಂತಿಮಗೊಳಿಸಿದ್ದು, ಮತ್ತೊಂದು ಸುತ್ತಿನ ಪರಿಶೀಲನೆ ಬಳಿಕ ಅಧಿಸೂಚನೆ ಹೊರಡಿಸಲಿದೆ.

ಕಳೆದ 2 ವರ್ಷಗಳಲ್ಲಿ ಕೊರೊನಾ ದಿಂದ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿದಿದ್ದು, ಸಾಧ್ಯವಾದಷ್ಟು ಬೇಗ ಪರೀಕ್ಷಾ ಸಮಯ ತಿಳಿಸಿ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಿದರೆ, ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಅಣಿಗೊಳಿಸಲು ಸಹಕರಿಯಾಗಲಿದೆ ಎಂಬ ಉದ್ದೇಶದಿಂದ ಪರೀಕ್ಷಾ ಅಧಿಸೂಚನೆ ಹೊರಡಿಸಲು ಮಂಡಳಿ ಸಿದ್ಧತೆ ನಡೆಸುತ್ತಿದೆ.

ಕೊರೊನಾ ಕಾರಣದಿಂದ 2021 ಮತ್ತು 2022ನೇ ಸಾಲಿನಲ್ಲಿ ಸರಿಯಾದ ಪ್ರಮಾಣದಲ್ಲಿ ಪಾಠ-ಪ್ರವಚನಗಳು ನಡೆದಿರಲಿಲ್ಲ. ಈ ಕಾರಣದಿಂದ ಶೇ. 20 ಪಠ್ಯ ಕಡಿತ ಮಾಡಲಾಗಿತ್ತು ಮತ್ತು ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಬಹು ಆಯ್ಕೆ ಪ್ರಶ್ನೆ ಮಾದರಿಯನ್ನು (ಎಂಸಿಕ್ಯು) ಅನುಸರಿಸಿ ಪರೀಕ್ಷೆ ನಡೆಸಿತ್ತು.

ಇದೀಗ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿರುವುದರಿಂದ 2019ರಲ್ಲಿ ನಡೆಸಿದ್ದ ಪರೀಕ್ಷೆ ಮಾದರಿಯನ್ನು ಅನುಸರಿಸಲಾಗು ತ್ತಿದೆ. 2019ರಲ್ಲಿ ಪ್ರಶ್ನೆಗಳಿಗೆ ವಿಸ್ತಾರವಾಗಿ ಉತ್ತರ ಬರೆಯುವುದು, ಶೇ. 20ರಷ್ಟು ಅಂಕಗಳಿಗೆ ಕಠಿಣ ಪ್ರಶ್ನೆಗಳನ್ನು ನೀಡುವ ವಿಧಾನ ಅನುಸರಿಸಲಾಗಿತ್ತು. ಬಹು ಆಯ್ಕೆ ಪ್ರಶ್ನೆ ಮಾದರಿ ಇರಲಿಲ್ಲ. ಇದೇ ವಿಧಾನವನ್ನು ಈ ಬಾರಿ ಮತ್ತೆ ಅನುಸರಿಸಲಾಗುತ್ತಿದೆ.

ಸಾಮಾನ್ಯವಾಗಿ ಎಸೆಸೆಲ್ಸಿ ಪರೀಕ್ಷೆ ಮಾರ್ಚ್‌ ಕೊನೆಯ ವಾರದಿಂದ ಎಪ್ರಿಲ್‌ 2ನೇ ವಾರದವರೆಗೆ ನಡೆಸಲು ತಾತ್ಕಾಲಿಕ ವೇಳಾಪಟ್ಟಿ ಕೂಡ ಸಿದ್ಧಪಡಿಸುತ್ತಿದೆ. ಅಧಿಸೂಚನೆ ವೇಳೆ ತಾತ್ಕಾಲಿಕ ವೇಳಾಪಟ್ಟಿಯನ್ನು ಕೂಡ ಪ್ರಕಟಿಸುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ.

ಒಂದು ತಿಂಗಳು ಬೇಗ ಏಕೆ?
2 ವರ್ಷಗಳಲ್ಲಿ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಪರೀಕ್ಷಾ ಸಮಯ ಮತ್ತು ನೋಂದಣಿಯನ್ನು ಆದಷ್ಟು ಬೇಗ ತಿಳಿಸಿದರೆ, ಮಕ್ಕಳನ್ನು ಪರೀಕ್ಷೆಗೆ ಸಿದ್ಧಗೊಳಿಸುವ ಪ್ರಕ್ರಿಯೆಯನ್ನು ಶಾಲೆಗಳು ಆರಂಭಿಸಲಿವೆ. ಈ ವರ್ಷ 15 ದಿನ ಮೊದಲೇ ತರಗತಿಗಳನ್ನು ಸಹ ಆರಂಭಿಸಲಾಗಿದೆ. ಹೀಗಾಗಿ ಮಾಸಿಕ ಪರೀಕ್ಷೆ, ಪುನರಾವರ್ತನೆಯಂತಹ ಪ್ರಕ್ರಿಯೆ ಆರಂಭಿಸಲು ಶಾಲೆಗಳಿಗೆ ಸಮಯ ಸಿಗಲಿದೆ.

ಸ್ಯಾಟ್ಸ್‌ ಮಾಹಿತಿ ಕಡ್ಡಾಯ
ಕಳೆದ ಬಾರಿ ಪರೀಕ್ಷಾ ಶುಲ್ಕವನ್ನು 100 ರೂ.ವರೆಗೆ ಹೆಚ್ಚಳ ಮಾಡಿದೆ. ಆದ್ದರಿಂದ 2023ನೇ ಸಾಲಿನ ಪರೀಕ್ಷೆಗೆ ಶುಲ್ಕ ಹೆಚ್ಚಳ ಮಾಡುತ್ತಿಲ್ಲ. ಆದರೆ, ಈ ಬಾರಿ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳುವ ವೇಳೆ ತಮ್ಮ ಸ್ಯಾಟ್ಸ್‌ ಸಂಖ್ಯೆ ದಾಖಲಿಸುವುದನ್ನು ಇದೇ ಮೊದಲ ಬಾರಿಗೆ ಕಡ್ಡಾಯಗೊಳಿಸಿದೆ. ವಿದ್ಯಾರ್ಥಿಗಳ ನಿಖರ ಮಾಹಿತಿ ಮತ್ತು ಮಕ್ಕಳು ಶಾಲೆಯನ್ನು ಬಿಡುತ್ತಿದ್ದರೆ, ಪತ್ತೆ ಹಚ್ಚುವ ಕಾರಣದಿಂದ ಸ್ಯಾಟ್ಸ್‌ ಮಾಹಿತಿ ಕಡ್ಡಾಯ ಗೊಳಿಸಲಾಗಿದೆ ಎಂದು ಮಂಡಳಿ ನಿರ್ದೇಶಕ ಎಚ್‌.ಎನ್‌. ಗೋಪಾಲಕೃಷ್ಣ ಹೇಳುತ್ತಾರೆ.

ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಳ್ಳಲು ಸಾಧ್ಯವಾ ದಷ್ಟು ಹೆಚ್ಚಿನ ಸಮಯ ನೀಡುವುದು ಮುಖ್ಯ ಉದ್ದೇಶವಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿಕೊಂಡ ಬಳಿಕ ಹೆಚ್ಚಿನವರು ಪರೀಕ್ಷಾ ಸಿದ್ಧತೆ ನಡೆಸುತ್ತಾರೆ. ಆದಷ್ಟು ಬೇಗ ಪರೀಕ್ಷಾ ಸಮಯ ನಿಗದಿ ಮಾಡಿದರೆ, ಸಿದ್ಧತೆ ಕೂಡ ಉತ್ತಮವಾಗಿ ನಡೆಸಲು ಸಾಧ್ಯವಾಗಲಿದೆ.
– ಎಚ್‌.ಎನ್‌. ಗೋಪಾಲಕೃಷ್ಣ,
ನಿರ್ದೇಶಕರು, ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Udayavani

#Hashtags