ಪ್ರಜಾವಾಣಿ

1.5M Followers

39 ಮೋಟಾರು ವಾಹನ ನಿರೀಕ್ಷಕರ ಹುದ್ದೆ: 'ಅನರ್ಹ'ರ ನೇಮಕಕ್ಕೆ ತರಾತುರಿ!

10 Sep 2022.06:07 AM

ವದೆಹಲಿ: ಕಡಿಮೆ ಎತ್ತರ ಇದ್ದ ಕಾರಣಕ್ಕೆ ವೈದ್ಯಕೀಯ ಪರೀಕ್ಷೆಯಲ್ಲಿ ಅನರ್ಹಗೊಂಡವರು, ದೃಷ್ಟಿದೋಷ ಇದ್ದವರು ಹಾಗೂ ವೈದ್ಯಕೀಯ ಪರೀಕ್ಷೆಗೆ ಗೈರುಹಾಜರಾದವರನ್ನು ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಕರ್ನಾಟಕ ಸಾರಿಗೆ ಇಲಾಖೆಯು ತರಾತುರಿಯಲ್ಲಿ ಸಿದ್ಧತೆಗಳನ್ನು ನಡೆಸಿದೆ.

2006ನೇ ಸಾಲಿನ ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳ ವೈದ್ಯಕೀಯ ಪರೀಕ್ಷೆ
ಯಲ್ಲಿ ತೇರ್ಗಡೆ ಹೊಂದಿ ದ್ದರೂ ನೇಮಕಾತಿ ಆದೇಶ ನೀಡಿಲ್ಲ ಎಂದು ಆರೋಪಿಸಿ 11 ಅಭ್ಯರ್ಥಿಗಳು ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದಾರೆ. 'ಈ ಅಭ್ಯರ್ಥಿಗಳನ್ನು ಇಲಾಖೆಗೆ ಯಾವ ರೀತಿಯಲ್ಲಿ ಸೇರಿಸಿಕೊಳ್ಳಬಹುದು' ಎಂಬ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ಸಾರಿಗೆ ಇಲಾಖೆಯ ಕಾರ್ಯದರ್ಶಿಗೆ ಸುಪ್ರೀಂ ಕೋರ್ಟ್‌ ಜುಲೈ ತಿಂಗಳಲ್ಲಿ ನಿರ್ದೇಶನ ನೀಡಿತ್ತು.

ಆಗಸ್ಟ್‌ 30ರಂದು ನಡೆದ ವಿಚಾರಣೆ ವೇಳೆ ಕರ್ನಾಟಕ ಸರ್ಕಾರದ ಪರ ವಕೀಲರು, 'ಪರೀಕ್ಷೆಗೆ ಹಾಜರಾದ 39 ಅಭ್ಯರ್ಥಿಗಳು ಕಡಿಮೆ ಎತ್ತರ ಹೊಂದಿದ್ದಾರೆ ಎಂಬುದು ವೈದ್ಯಕೀಯ ಪರೀಕ್ಷೆಯಲ್ಲಿ ಸಾಬೀತಾಗಿತ್ತು. ನೇಮಕಾತಿ ಪ್ರಕ್ರಿಯೆ ವೇಳೆ ಅಭ್ಯರ್ಥಿಗಳ ಅರ್ಹತೆ ಬಗ್ಗೆ ಕರ್ನಾಟಕ ಸರ್ಕಾರ ಜಾಹೀರಾತು ನೀಡಿತ್ತು. ಆದರೆ, ಮೋಟಾರು ವಾಹನ ನಿರೀಕ್ಷಕರ ಎತ್ತರದ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ನಿಯಮ ರೂಪಿಸಿಲ್ಲ. ಹೀಗಾಗಿ, ಕಡಿಮೆ ಎತ್ತರವನ್ನು ಗಣನೆಗೆ ತೆಗೆದುಕೊಳ್ಳಬೇಕಿಲ್ಲ' ಎಂದು ವಾದ ಮಂಡಿಸಿದರು.

ಆಗ ನ್ಯಾಯಪೀಠವು, ಕಡಿಮೆ ಎತ್ತರದ ವಿಷಯವನ್ನು ಹೊರಗಿಟ್ಟು ಮತ್ತೆ ವೈದ್ಯಕೀಯ ಪರೀಕ್ಷೆ ನಡೆಸಿ 39 ಅಭ್ಯರ್ಥಿಗಳನ್ನು ಇಲಾಖೆಗೆ ಸೇರಿಸಿಕೊಳ್ಳಬಹುದು ಎಂದು ಹೇಳಿತು. ಈ ಬಗ್ಗೆ ಎರಡು ವಾರಗಳಲ್ಲಿ ಪ್ರಮಾಣಪತ್ರ ಸಲ್ಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ
ನೀಡಿತು.

ಅದರ ಬೆನ್ನಲ್ಲೇ, ಸಾರಿಗೆ ಇಲಾಖೆಯ ಕಾರ್ಯದರ್ಶಿ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅವರಿಗೆ ಪತ್ರ ಬರೆದು ಅಭ್ಯರ್ಥಿಗಳ ಪರೀಕ್ಷೆಗೆ ವೈದ್ಯಕೀಯ ಮಂಡಳಿ ಸ್ಥಾಪಿಸುವಂತೆ ಕೋರಿದ್ದಾರೆ.

ಮುಂದಿನ ವಾರವೇ ವೈದ್ಯಕೀಯ ಪರೀಕ್ಷೆ ನಡೆಸಿ 39 ಅಭ್ಯರ್ಥಿಗಳ ನೇಮಕ ಮಾಡಿಕೊಳ್ಳಲು ಸಿದ್ಧತೆ ನಡೆದಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ. 'ಈ ಅಭ್ಯರ್ಥಿಗಳಲ್ಲಿ ಮೂವರು ದೃಷ್ಟಿದೋಷ ಹೊಂದಿದವರು. ಮೂವರು ವೈದ್ಯಕೀಯ ಪರೀಕ್ಷೆಗೆ ಗೈರುಹಾಜರಾದವರು. ಉಳಿದ ಅಭ್ಯರ್ಥಿಗಳು ನಿಗದಿಪಡಿಸಿದ ಮಾನದಂಡಕ್ಕಿಂತ ಕಡಿಮೆ ಎತ್ತರ ಹೊಂದಿದವರು' ಎಂದು ಮೂಲಗಳು ತಿಳಿಸಿವೆ.

'ವಿಶೇಷ ಮೇಲ್ಮನವಿ ಅರ್ಜಿ ವಿಚಾರಣೆ ವೇಳೆಗೆ 2019 ರಲ್ಲಿ ಹಾಜರಾಗಿದ್ದ ಸಾರಿಗೆ ಇಲಾಖೆಯ ಆಗಿನ ಪ್ರಧಾನ ಕಾರ್ಯದರ್ಶಿ ಅಂಜುಂ ಪರ್ವೇಜ್‌, ವೃಂದ ಮತ್ತು ನೇಮಕಾತಿ ನಿಯಮದ ಪ್ರಕಾರ 39 ಅಭ್ಯರ್ಥಿಗಳು ಅನರ್ಹರು ಎಂದು ಪ್ರಮಾಣಪತ್ರ ಸಲ್ಲಿಸಿದ್ದರು. ಆದರೆ, ಇದೀಗ ಸಾರಿಗೆ ಇಲಾಖೆ ಏಕಾಏಕಿ ನಿಲುವು ಬದಲಿಸಿ ಇವರನ್ಮು ನೇಮಕ ಮಾಡಿಕೊಳ್ಳಲು ಮುಂದಾಗಿದೆ. ಈ ವಿಚಾರವನ್ನು ಸಚಿವ ಸಂಪುಟದ ಗಮನಕ್ಕೂ ತಂದಿಲ್ಲ. ಸಾರಿಗೆ ಇಲಾಖೆಯ ನಡೆಯೇ ಅನುಮಾನಾಸ್ಪದವಾಗಿದೆ' ಎಂದು ಕರ್ನಾಟಕ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

'ವೃಂದ ಮತ್ತು ನೇಮಕಾತಿ ನಿಯಮದ ಬಗ್ಗೆ ಸಾರಿಗೆ ಇಲಾಖೆಯ ಅಭ್ಯರ್ಥಿಗಳು ಸುಪ್ರೀಂ ಕೋರ್ಟ್‌ಗೆ ತ‍ಪ್ಪು ಮಾಹಿತಿ ನೀಡಿದ್ದಾರೆ. ಸುಪ್ರೀಂ ಕೋರ್ಟ್ ಸೂಚಿಸಿದ್ದರೂ 11 ಅರ್ಹ ಅಭ್ಯರ್ಥಿಗಳ ಬಗ್ಗೆ ಚಕಾರವೇ ಎತ್ತದೆ ಅನರ್ಹರನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದ್ದಾರೆ. ಇದರ ಹಿಂದೆ ಹಗರಣ ನಡೆದಿರುವ ಅನುಮಾನ ಇದೆ. ಇದರ ಬಗ್ಗೆ ಕರ್ನಾಟಕ ಸರ್ಕಾರ ಸಮಗ್ರ ತನಿಖೆ ನಡೆಸಬೇಕು' ಎಂದು ಹಲವು ಅಭ್ಯರ್ಥಿಗಳು
ಆಗ್ರಹಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಸಾರಿಗೆ ಇಲಾಖೆಯ ಕಾರ್ಯದರ್ಶಿ ಎನ್‌.ವಿ.ಪ್ರಸಾದ್‌ ಅವರಿಗೆ ಎರಡು ಸಲ ಕರೆ ಮಾಡಲಾಯಿತು. ಅವರು ಕರೆ ಸ್ವೀಕರಿಸಲಿಲ್ಲ. ನೇಮಕಾತಿ ಪ್ರಕ್ರಿಯೆ ಬಗ್ಗೆ ವಾಟ್ಸ್‌ ಆಯಪ್‌ ಮೂಲಕ ಕಳುಹಿಸಿದ ಪ್ರಶ್ನೆಗಳನ್ನು ನೋಡಿದ ಅವರು
ಪ್ರತಿಕ್ರಿಯಿಸಲಿಲ್ಲ.

ಪ್ರಕರಣದ ಹಿನ್ನೆಲೆ: 245 ಮೋಟಾರು ವಾಹನ ನಿರೀಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು 2006ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಬಳಿಕ ಹುದ್ದೆಗಳ ಸಂಖ್ಯೆಯನ್ನು 145ಕ್ಕೆ ಇಳಿಸ ಲಾಗಿತ್ತು. ಕರ್ನಾಟಕ ಲೋಕಸೇವಾ ಆಯೋಗವು (ಕೆಪಿಎಸ್‌ಸಿ) ಪರೀಕ್ಷೆ ನಡೆಸಿ 145 ಅಭ್ಯರ್ಥಿಗಳ ಪಟ್ಟಿಯನ್ನು 2008ರಲ್ಲಿ ಪ್ರಕಟಿಸಿತ್ತು. ಬಳಿಕ ಈ ಅಭ್ಯರ್ಥಿಗಳಿಗೆ ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ನಡೆಸಲಾಗಿತ್ತು. 39 ಅಭ್ಯರ್ಥಿಗಳು ಅನರ್ಹರು ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು 2008ರ ಸೆಪ್ಟೆಂಬರ್‌ 12ರಂದು ವರದಿ ನೀಡಿದ್ದರು.

ನೇಮಕಾತಿ ಪ್ರಕ್ರಿಯೆ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ ಕೆಲವು ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯ (ಕೆಎಟಿ) ಮೆಟ್ಟಿಲೇರಿದ್ದರು. ಈ ನೇಮಕಾತಿ ಪ್ರಕ್ರಿಯೆಯನ್ನು ಕೆಎಟಿ ರದ್ದುಪಡಿಸಿತ್ತು. ಈ ಆದೇಶವನ್ನು ಹೈಕೋರ್ಟ್‌ ಸಹ ಎತ್ತಿ ಹಿಡಿದಿತ್ತು. ಬಳಿಕ ಕೆಲವು ಅಭ್ಯರ್ಥಿಗಳು ಸು‍‍ಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು. ವೈದ್ಯಕೀಯ ಪರೀಕ್ಷೆಯಲ್ಲಿ ಉತ್ತೀರ್ಣರಾದ 105 ಅಭ್ಯರ್ಥಿಗಳನ್ನು ಷರತ್ತುಬದ್ಧವಾಗಿನೇಮಕ ಮಾಡಿಕೊಳ್ಳಬಹುದು
ಎಂದು ಸುಪ್ರೀಂ ಕೋರ್ಟ್‌ ಮಧ್ಯಂತರ ಆದೇಶ ಹೊರಡಿಸಲಾಗಿತ್ತು. ಬಳಿಕ ಅವರನ್ನು ನೇಮಕ
ಮಾಡಿಕೊಳ್ಳಲಾಗಿತ್ತು. ‌

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Prajavani

#Hashtags