TV9 ಕನ್ನಡ

371k Followers

ಮೀಸಲಾತಿ ಹೆಚ್ಚಳಕ್ಕೆ ಸುಗ್ರೀವಾಜ್ಞೆ, ಮುಂದಿನ ಅಧಿವೇಶನದಲ್ಲಿಯೇ ವಿಧೇಯಕ ಮಂಡನೆ; ಸಚಿವ ಸಂಪುಟ ತೀರ್ಮಾನ

20 Oct 2022.3:02 PM

ಸುಗ್ರೀವಾಜ್ಞೆ ಮೂಲಕ SC, ST ಮೀಸಲಾತಿ ಹೆಚ್ಚಳಕ್ಕೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಮೊದಲು ಆಡಳಿತಾತ್ಮಕ ಆದೇಶಕ್ಕೆ ರಾಜ್ಯ ಸರ್ಕಾರ ತೀರ್ಮಾನಿಸಿತ್ತು. ಈಗ ಕಾನೂನು ಪರಿಮಿತಿಯಲ್ಲಿ ತೀರ್ಮಾನಿಸಿ ಸುಗ್ರೀವಾಜ್ಞೆಗೆ ನಿರ್ಧಾರ ಮಾಡಲಾಗಿದೆ. -ಸಚಿವ ಮಾಧುಸ್ವಾಮಿ

ಬೆಂಗಳೂರು: ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಸಚಿವ ಸಂಪುಟ ಸಭೆ ನಡೆದಿದೆ. ಸುಗ್ರೀವಾಜ್ಞೆ ಮೂಲಕ SC, ST ಮೀಸಲಾತಿ ಏರಿಕೆಗೆ ಸಂಪುಟ ಅಸ್ತು ಎಂದಿದೆ ಎಂದು ಸಚಿವ ಸಂಪುಟ ಸಭೆ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದರು. ಎಸ್​​ಸಿಯಲ್ಲಿ 103 ಜಾತಿಗಳಿವೆ, ಎಸ್​ಟಿಯಲ್ಲಿ 56 ಜಾತಿಗಳಿವೆ. ಸುಗ್ರೀವಾಜ್ಞೆ ಮೂಲಕ SC, ST ಮೀಸಲಾತಿ ಹೆಚ್ಚಳಕ್ಕೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಈ ಮೊದಲು ಆಡಳಿತಾತ್ಮಕ ಆದೇಶಕ್ಕೆ ರಾಜ್ಯ ಸರ್ಕಾರ ತೀರ್ಮಾನಿಸಿತ್ತು. ಈಗ ಕಾನೂನು ಪರಿಮಿತಿಯಲ್ಲಿ ತೀರ್ಮಾನಿಸಿ ಸುಗ್ರೀವಾಜ್ಞೆಗೆ ನಿರ್ಧಾರ ಮಾಡಲಾಗಿದ್ದು ಬಳಿಕ ಮುಂದಿನ ಅಧಿವೇಶನದಲ್ಲಿ ವಿಧೇಯಕ ಮಂಡನೆಗೆ ತೀರ್ಮಾನಿಸಲಾಗಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.

ಬಿಬಿಎಂಪಿಗೆ 1,500 ಕೋಟಿ ರೂ. ನೀಡಲು ಸಂಪುಟ ಒಪ್ಪಿಗೆ

ಬೆಂಗಳೂರಿನಲ್ಲಿ ಸುರಿಯುತ್ತಿರವ ಮಳೆಯಿಂದಾಗಿ ಭಾರೀ ಅನಾಹುತಗಳು ಸಂಭವಿಸಿವೆ. ಈ ಸಂಬಂಧ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲೂ ಚರ್ಚೆಯಾಗಿದ್ದು ಬೆಂಗಳೂರಿನಲ್ಲಿ ಮಳೆಗಾಲುವೆ ನಿರ್ಮಾಣಕ್ಕೆ ಬಿಬಿಎಂಪಿಗೆ 1,500 ಕೋಟಿ ರೂ. ನೀಡಲು ಸಂಪುಟ ಒಪ್ಪಿಗೆ ನೀಡಿದೆ. ಬೆಂಗಳೂರು ನಗರದಲ್ಲಿ 800 ಮೀಟರ್ ಮಳೆಗಾಲುವೆ ನಿರ್ಮಾಣ, ಜಲಜೀವನ ಮಿಷನ್​ ಯೋಜನೆಯಡಿ ಕುಡಿಯುವ ನೀರು ಪೂರೈಕೆ ಮಾಡಲು 24 ಯೋಜನೆಗಳಿಗೆ ಒಪ್ಪಿಗೆ ನೀಡಲಾಗಿದೆ.

ನಗರದ ಮಳೆ ಸಂಬಂಧ ಸಿಎಂ ಬೊಮ್ಮಾಯಿ ಮಾತನಾಡಿದ್ದು, ಎಸ್​ಡಿಆರ್​ಎಫ್​ ಬಲಪಡಿಸುವುದು ನಮ್ಮ ಉದ್ದೇಶವಾಗಿದೆ. ಪ್ರವಾಹದ ವೇಳೆ ಎಸ್​ಡಿಆರ್​ಎಫ್​ ತಂಡವು ಉತ್ತಮ ಕೆಲಸ ಮಾಡಿದ್ದಕ್ಕೆ ಅಭಿನಂದನೆ. ಬೆಂಗಳೂರಲ್ಲಿ ಪ್ರತಿವರ್ಷ ಹೊಸದಾಗಿ 5,000 ವಾಹನ ಬರುತ್ತಿವೆ. ನಿರಂತರ ಮಳೆಯಿಂದಾಗಿ ರಸ್ತೆ ಗುಂಡಿಗಳು ನಿರ್ಮಾಣವಾಗ್ತಿದೆ. ರಸ್ತೆ ಗುಂಡಿ ಸಮಸ್ಯೆ ಪರಿಹಾರಕ್ಕೆ ಶಾಶ್ವತ ಕ್ರಮ ಕೈಗೊಳ್ಳುತ್ತೇವೆ ಎಂದರು.

ರಾಯಚೂರು ವಿವಿಯ ಮೂಲ ಸೌಕರ್ಯಕ್ಕೆ ಮೂಲಸೌಕರ್ಯಕ್ಕೆ 15 ಕೋಟಿ ನೀಡಲು ಸಂಪುಟ ಅನುಮೋದನೆ ನೀಡಿದೆ. ಇನ್ನು ನಿಗಮ-ಮಂಡಳಿ ಅಧ್ಯಕ್ಷರ ನೇಮಕಕ್ಕೆ ಸಂಪುಟ ಒಪ್ಪಿಗೆ ನೀಡಿದ್ದು 38ರಿಂದ 40 ನಿಗಮ-ಮಂಡಳಿಗೆ ನೇಮಕಾತಿ ಆದೇಶ ಸಾಧ್ಯತೆ ಇದೆ. ವಿಜಯಪುರ ಏರ್​ಪೋರ್ಟ್​ಗೆ ಬಸವೇಶ್ವರ ಹೆಸರಿಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ ಎಂದು ಸಚಿವ ಸಂಪುಟ ಸಭೆ ಬಳಿಕ ಸಚಿವ ಮಾಧುಸ್ವಾಮಿ ಮಾಹಿತಿ ನೀಡಿದರು.

ಮೀಸಲಾತಿ ಹೆಚ್ಚಳ : ಅದು ಅಷ್ಟು ಸುಲಭವೇ? ಕಾನೂನು ಏನು ಹೇಳುತ್ತೆ?

ಕರ್ನಾಟಕ ಸರ್ಕಾರ ರೂಪಿಸುವ ಮೀಸಲಾತಿ ಶೇ.50 ರಷ್ಟನ್ನು ಮೀರಲಿದೆ. ಎಲ್ಲಾ ಮೀಸಲಾತಿ ಸೇರಿದರೂ ಅದು ಶೇ 50 ಮೀರುವಂತಿಲ್ಲ. ಮಹಾರಾಷ್ಟ್ರ ಸರ್ಕಾರ, ಮರಾಠಾ ಸಮುದಾಯಕ್ಕೆ ಶೇ.16ರಷ್ಟು ಮೀಸಲಾತಿ ನೀಡಿದ್ದನ್ನು ಸುಪ್ರೀಂಕೋರ್ಟ್ 2021 ರಲ್ಲಿ ರದ್ದು ಮಾಡಿತ್ತು. ಈ ಹಿನ್ನೆಲೆಯಲ್ಲಿ ಇದೀಗ ಎಸ್​ಟಿ, ಎಎಸ್​​ಸಿ ಸಮುದಾಯಗಳ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಕಾನೂನು ತೊಡಕುಗಳು ಎದುರಾಗಲಿವೆ. ಈ ಬಗ್ಗೆ ಹೈಕೋರ್ಟ್, ಸುಪ್ರೀಂಕೋರ್ಟ್​ನಲ್ಲಿ ಸರ್ಕಾರ ಸವಾಲು ಎದುರಿಸಬೇಕಿದೆ.

ಕರ್ನಾಟಕದ ಮೀಸಲಾತಿ ವಿವರ ಇಂತಿದೆ.

ಪ್ರಸ್ತುತ ಕರ್ನಾಟಕದಲ್ಲಿ ಪ್ರವರ್ಗ 1ಕ್ಕೆ ಶೇ 4, (95 ಜಾತಿಗಳು), ಪ್ರವರ್ಗ 2 (ಎ) ಶೇ 15 (102 ಜಾತಿಗಳು), ಪ್ರವರ್ಗ 3ಬಿ ಶೇ 4 (ಮುಸ್ಲಿಮರು), ಪ್ರವರ್ಗ 3ಎ ಶೇ 4.4 (ಒಕ್ಕಲಿಗ ಮತ್ತು ಬಲಿಜ), ಪ್ರವರ್ಗ 3ಬಿ ಶೇ 5 5 (ಲಿಂಗಾಯತರು ಮತ್ತು ಇತರೆ 5), ಪರಿಶಿಷ್ಟ ಜಾತಿಗಳ ಮೀಸಲಾತಿ ಶೇ 15 (101 ಜಾತಿಗಳು), ಪರಿಶಿಷ್ಟ ಪಂಗಡಗಳ ಮೀಸಲಾತಿಗೆ ಶೇ 3 (50 ಜಾತಿಗಳು)

ಸುಪ್ರೀಂ ಕೋರ್ಟ್ ಹೇಳಿದ್ದೇನು?

ಎಲ್ಲಾ ಮೀಸಲಾತಿ ಸೇರಿದರೂ ಅದು ಶೇ 50 ರಷ್ಟನ್ನು ಮೀರುವಂತಿಲ್ಲ. ಅಸಾಧಾರಣ, ಅಸಾಮಾನ್ಯ ಸಂದರ್ಭಗಳಲ್ಲಿ ಮಾತ್ರ ಶೇ 50ರ ಮೀಸಲಾತಿ ಮೀರಬಹುದು ಎಂದು 1992 ರಲ್ಲಿ ಇಂದಿರಾ ಸಾಹ್ನಿ ಪ್ರಕರಣದಲ್ಲಿ ಸುಪ್ರೀಂಕೋರ್ಟ್ 9 ನ್ಯಾಯಮೂರ್ತಿಗಳ ಸಂವಿಧಾನ ಪೀಠ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ವಿವಿಧ ಸಮುದಾಯಗಳು ಮೀಸಲಾತಿಗಾಗಿ ಹೋರಾಟಗಳನ್ನು ಮಾಡುತ್ತಿದ್ದು, ಇದು ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಇನ್ನು ಸರ್ಕಾರದ ಮುಂದಿರುವ ಒಂದು ದಾರಿ ಅಂದ್ರೆ ಅದು ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ಸಂವಿಧಾನದ 9ನೇ ಶೆಡ್ಯೂಲ್ ಮೂಲಕ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕಷ್ಟೇ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: TV9 Kannada

#Hashtags