ಕನ್ನಡದುನಿಯಾ

1.6M Followers

ವಿಧವೆ ತಾಯಿಗೆ ಮಗನ ಆಸ್ತಿಯಲ್ಲೂ ಸಮಾನ ಪಾಲು: ಹೈಕೋರ್ಟ್ ಮಹತ್ವದ ತೀರ್ಪು

27 Oct 2022.10:34 AM

ಬೆಂಗಳೂರು: ವಿಧವೆಯಾಗಿರುವ ಮಹಿಳೆ ತನ್ನ ಗಂಡನ ಹೆಸರಿನಲ್ಲಿದ್ದ ಆಸ್ತಿಯನ್ನು ಮಕ್ಕಳಿಗೆ ಪಾಲು ಮಾಡುವ ಸಂದರ್ಭದಲ್ಲಿ ಗಂಡು ಮಕ್ಕಳಲ್ಲಿ ಯಾವುದೇ ಮಗ ಮೃತಪಟ್ಟಿದ್ದರೆ ಆ ಮೃತ ಮಗನ ಪಾಲಿನ ಆಸ್ತಿಯಲ್ಲಿ ಸಮಾನ ಪಾಲು ಪಡೆಯಲು ಅರ್ಹರಾಗಿರುತ್ತಾರೆ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಹಿಂದೂ ಉತ್ತರಾಧಿಕಾರಿ ಕಾಯ್ದೆಯ ಅನ್ವಯ ಮೃತ ಮಗನಿಗೆ ಬಂದಿರುವ ಆಸ್ತಿ ಆತನ ಪತ್ನಿ ಮತ್ತು ಮಕ್ಕಳಿಗೆ ಸಮಾನವಾಗಿ ಹಂಚಿಕೆ ಆಗಬೇಕಿದೆ. ಜೊತೆಗೆ ವಿಧವೆ ತಾಯಿಗೂ ಸಮಾನ ಹಂಚಿಕೆಯಾಗಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದ್ದು, ಈ ನಿಯಮ ವಿಧವೆ ತಾಯಂದಿರಿಗೆ ಮಾತ್ರ ಅನ್ವಯವಾಗುತ್ತದೆ ಎಂದು ತಿಳಿಸಿದೆ.

ಬೀದರ್ ನ ಹನುಮಂತರೆಡ್ಡಿ ಮತ್ತು ಈರಮ್ಮ ದಂಪತಿ ಹಾಗೂ ಅವರ ಮಕ್ಕಳ ನಡುವಿನ ಆಸ್ತಿ ಹಂಚಿಕೆ ಪ್ರಕರಣದಲ್ಲಿ ನೀಡಿರುವ ತೀರ್ಪು ಇದಾಗಿದೆ. ಹನುಮಂತರೆಡ್ಡಿ -ಈರಮ್ಮ ದಂಪತಿಗೆ ಪೊರಸರೆಡ್ಡಿ, ಭೀಮರೆಡ್ಡಿ, ರೇವಮ್ಮ, ಬಸವ ರೆಡ್ಡಿ ಅವರು ಮಕ್ಕಳಾಗಿದ್ದು, ಇವರಲ್ಲಿ ಭೀಮರೆಡ್ಡಿ ಮೃತಪಟ್ಟಿದ್ದಾರೆ. ಈರಮ್ಮನ ಪತಿ ಹನುಮಂತರೆಡ್ಡಿ ಅವರೂ ನಿಧನರಾಗಿದ್ದಾರೆ.

ಆಸ್ತಿ ಹಂಚಿಕೆ ವಿಚಾರದಲ್ಲಿ ಮಕ್ಕಳು, ತಾಯಿ ನಡುವೆ ಗೊಂದಲ ಉಂಟಾಗಿ ಬೀದರ್ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಕೋರ್ಟ್ ತೀರ್ಪು ಸಮಾಧಾನ ತರದ ಕಾರಣ ಈರಮ್ಮ ಹೈಕೋರ್ಟ್ ಮೆಟ್ಟಿಲೇರಿದ್ದರು.

ಪತಿಯ ಆಸ್ತಿಯಲ್ಲಿ ಆತನ ಪತ್ನಿ, ಮಕ್ಕಳಿಗೆ ಕೊಟ್ಟಂತೆ ಸಮಾನ ಪಾಲು ಉತ್ತರ ಕರ್ನಾಟಕದಲ್ಲಿ ವಿಧವೆ ಪತ್ನಿಗೆ ಕೊಡುವುದಿಲ್ಲ. ಆದರೆ ಆಸ್ತಿ ಹಂಚಿಕೆ ಸಂದರ್ಭದಲ್ಲಿ ಗಂಡನ ಪಾಲಿಗೆ ಬರಬೇಕಾದ ಆಸ್ತಿಯಲ್ಲಿ ಆಕೆಗೆ ಭಾಗಶಃ ಪಾಲು ನೀಡಲಾಗುತ್ತದೆ.

ಈ ಪ್ರಕರಣದಲ್ಲಿ ಮೂರು ಹಂತದಲ್ಲಿ ಇಂದು ಉತ್ತರಾಧಿಕಾರ ಕಾಯ್ದೆ ಪ್ರಕಾರ ಆಸ್ತಿ ಹಂಚಿಕೆ ಮಾಡಬೇಕಿದೆ ಎಂದು ಹೈಕೋರ್ಟ್ ಹೇಳಿದೆ.

ಮೊದಲ ಹಂತದಲ್ಲಿ ಹನುಮಂತರೆಡ್ಡಿ ಅವರ ಆಸ್ತಿಯನ್ನು ಹನುಮಂತರೆಡ್ಡಿ ಹಾಗೂ ಅವರ ನಾಲ್ಕು ಮಕ್ಕಳು ಸೇರಿ 5 ಪಾಲು ಮಾಡಬೇಕು.

ಎರಡನೇ ಹಂತದಲ್ಲಿ ಹನುಮಂತರೆಡ್ಡಿ ಅವರಿಗೆ ಬಂದಿರುವ ಆಸ್ತಿಯಲ್ಲಿ ಆತನ ಪತ್ನಿ ಈರಮ್ಮ ಮತ್ತು ಮಕ್ಕಳಿಗೆ ಸಮಾನವಾಗಿ ಪಾಲು ಮಾಡಬೇಕು.

ಮೂರನೇ ಹಂತದಲ್ಲಿ ಆಸ್ತಿ ಹಂಚಿಕೆ ಮಾಡುವಾಗ ಮೃತಪಟ್ಟ ಭೀಮರೆಡ್ಡಿಗೆ ಬಂದಿರುವ ಆಸ್ತಿಯಲ್ಲಿ ಭೀಮರೆಡ್ಡಿ ಪತ್ನಿ, ಪುತ್ರಿ ಹಾಗೂ ತಾಯಿ ವಿಧವೆ ಈರಮ್ಮನವರಿಗೆ ಸಮಾನ ಹಂಚಿಕೆಯಾಗಬೇಕು. ಆಗ ತನ್ನ ಪತಿಯ ಪಾಲಿಗೆ ಬಂದ ಆಸ್ತಿಯಿಂದ ಬಂದಿರುವ ಭಾಗಶಃ ಆಸ್ತಿ ಮತ್ತು ಭೀಮರೆಡ್ಡಿ ಪಾಲಿಗೆ ಬಂದಿರುವ ಆಸ್ತಿಯಲ್ಲಿನ ಭಾಗ ಸೇರಿ ವಿಧವೆ ತಾಯಿಗೆ ಆಸ್ತಿ ಹಂಚಿಕೆಯಾಗಬೇಕು ಎಂದು ಹೈಕೋರ್ಟ್ ತಿಳಿಸಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags