ಪ್ರಜಾವಾಣಿ

1.5M Followers

ಹೆಚ್ಚುವರಿ ಶಿಕ್ಷಕರ ಪ್ರಕ್ರಿಯೆ ಸ್ಥಗಿತಗೊಳಿಸಲು ಬಸವರಾಜ ಗುರಿಕಾರ ಆಗ್ರಹ

14 Dec 2022.10:56 AM

ಧಾರವಾಡ: 'ಶಾಲಾ ಶಿಕ್ಷಕರ ಮರು ಹೊಂದಾಣಿಕೆ ಮತ್ತು ಶಿಕ್ಷಕರ ಹೆಚ್ಚುವರಿ ಪ್ರಕ್ರಿಯೆಯಲ್ಲಿ ಸಾಕಷ್ಟು ಲೋಪದೋಷಗಳಿದ್ದು, ಇದು ಸರ್ಕಾರಿ ಶಾಲೆಗಳಿಗೆ ಮಾರಕವಾಗಲಿದೆ. ಪರೀಕ್ಷೆ ಸಮೀಪಿಸುತ್ತಿರುವ ಈ ಹೊತ್ತಿನಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಇದನ್ನು ಕೈಬಿಡಬೇಕು' ಎಂದು ಒತ್ತಾಯಿಸಿ ಅಖಿಲ ಭಾರತ ಶಿಕ್ಷಕರ ಫೆಡರೇಷನ್‌ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ಅವರು, 'ಈಗಿರುವ ವಿದ್ಯಾರ್ಥಿ-ಶಿಕ್ಷಕ ಅನುಪಾತ ಗುಣಾತ್ಮಕ ಕಲಿಕೆಗೆ ಪೂರಕವಾಗಿಲ್ಲ. 1ರಿಂದ 5ನೇ ತರಗತಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 1ರಿಂದ 11 ಇದ್ದರೆ ಒಬ್ಬರೇ ಶಿಕ್ಷಕ ಇರಬೇಕು ಎಂಬ ನಿಯಮವಿದೆ. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೂ ತರಗತಿಗಳು 5 ಇರುತ್ತದೆ. ಇವುಗಳಿಗೆ ಒಬ್ಬರು ಅಥವಾ ಇಬ್ಬರು ಶಿಕ್ಷಕರು ಪಾಠ ಮಾಡುವುದು ಕಷ್ಟ. ಇಂಥ ಅವೈಜ್ಞಾನಿಕ ನಿಯಮ ಅಳವಡಿಸಿಕೊಂಡು ಮರು ಹೊಂದಾಣಿಕೆ ಶಿಕ್ಷಕರ ಹೆಚ್ಚುವರಿ ಮಾಡುವುದರಿಂದ ಸರ್ಕಾರಿ ಶಾಲೆಗಳನ್ನು ಶಾಶ್ವತವಾಗಿ ಮುಚ್ಚುವ ಹುನ್ನಾರ ಅಡಗಿದೆ' ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

'ಎಲ್ಲಾ ಪ್ರಾಥಮಿಕ ಶಾಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರು ವಿಷಯ ಬೋಧನೆಯ ಜತೆಗೆ, ಬೋಧಕೇತರ ಕೆಲಸಗಳನ್ನೂ ಮಾಡುತ್ತಿದ್ದಾರೆ. ಆದರೆ ವಿಷಯವಾರು ಶಿಕ್ಷಕರು ಬೇಕು ಎಂಬ ನೆಪದಲ್ಲಿ ವಿಷಯವಾರು ಮರುಹೊಂದಾಣಿಕೆ ಮಾಡಲಾಗುತ್ತಿದೆ. ಎಲ್ಲಾ ವಿಷಯಗಳನ್ನೂ ಬೋಧಿಸಬಲ್ಲ ಅನುಭವಿ ಶಿಕ್ಷಕರು 1ರಿಂದ 8ನೇ ತರಗತಿಗೆ ನೇಮಕಗೊಂಡಿದ್ದಾರೆ. ಈಗಿರುವ ಶಾಲೆಗಳಲ್ಲಿ ವಿಷಯವಾರು ಶಿಕ್ಷಕರೆಂದು ಗುರುತಿಸಿ ಇವರಿಗೆ ಪದವೀಧರ ಶಿಕ್ಷಕರ ವೇತನ ಶ್ರೇಣಿ ನಿಗದಿಗೊಳಿಸಿದ್ದರೆ ಸರ್ಕಾರಕ್ಕೆ ಆರ್ಥಿಕವಾಗಿ ಉಳಿತಾಯವಾಗುತ್ತದೆ. ಹೊಸ ನೇಮಕಾತಿಯ ಪ್ರಶ್ನೆಯೇ ಉದ್ಭವಿಸುವದಿಲ್ಲ' ಎಂದು ಸಲಹೆ ನೀಡಿದ್ದಾರೆ.

'ಸರ್ಕಾರ ಇದೇ ಶೈಕ್ಷಣಿಕ ಸಾಲಿನಲ್ಲಿ 43,697 ಹುದ್ದೆಗಳನ್ನು ನೇಮಕ ಮಾಡಿಕೊಳ್ಳಲು ಸಾಧ್ಯವಿಲ್ಲ ಅಂದಮೇಲೆ, ಶಿಕ್ಷಕರ ಮರು ಹೊಂದಾಣಿಕೆಗೆ ಹೆಚ್ಚುವರಿಗೆ ಯಾವ ಅರ್ಥವಿದೆ. ಹಾಲಿ ಶಿಕ್ಷಕರಿಗೆ ಮಾನಸಿಕ ಹಿಂಸೆ ನೀಡುವ ಕಾರ್ಯ ಮಾತ್ರ ಇಲಾಖೆ ಆರಂಭಿಸಿದೆ ಎಂಬ ಸಂಶಯ ಮೂಡುತ್ತಿದೆ. ಸದ್ಯ 1.86 ಲಕ್ಷ ಶಿಕ್ಷಕರ ಹುದ್ದೆಗಳಲ್ಲಿ 1.61 ಲಕ್ಷ ಶಿಕ್ಷಕರು ಮಾತ್ರ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಉಳಿದ 25 ಸಾವಿರಕ್ಕೂ ಹೆಚ್ಚು ಹುದ್ದೆಗಳು ಮಾಯವಾಗಿವೆ. ಇದ್ದ ಹುದ್ದೆಗಳನ್ನು ಉಳಿಸಿಕೊಳ್ಳದೆ ಇಲಾಖೆ ಈಗ ಮರು ಹೊಂದಾಣಿಕೆ ಹೆಚ್ಚುವರಿ ನೆಪದಲ್ಲಿ ಸರ್ಕಾರಿ ಶಾಲೆಗಳ ಸುಧಾರಣೆಗೆ ಕ್ರಮ ಕೈಗೊಳ್ಳುತ್ತೇವೆ ಎಂಬುದು ಹಾಸ್ಯಾಸ್ಪದ' ಎಂದು ಗುರಿಕಾರ ಹೇಳಿದ್ದಾರೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Prajavani

#Hashtags