ವಿಜಯವಾಣಿ

505k Followers

ಶಾಲೆಯಲ್ಲಿ ವಿಚಿತ್ರವಾಗಿ ವರ್ತಿಸುವ 9 -10ನೇ ತರಗತಿ ವಿದ್ಯಾರ್ಥಿನಿಯರು! ಮನೆಯಲ್ಲಿ ಮಾತ್ರ ಸಂಪೂರ್ಣ ನಾರ್ಮಲ್!

19 Dec 2022.9:27 PM

ಧ್ಯಪ್ರದೇಶ: ಇತ್ತೀಚೆಗೆ, ಮಧ್ಯಪ್ರದೇಶದ ಶಹದೋಲ್ ಜಿಲ್ಲೆಯ ಕೆಲ ವಿದ್ಯಾರ್ಥಿನಿಯರು ವಿಚಿತ್ರವಾಗಿ ವರ್ತಿಸುತ್ತಿದ್ದಾರೆ. ಇದರ ಹಿಂದಿನ ಕಾರಣ ತಿಳಿಯದೇ ತಜ್ಞರು ಇದನ್ನು 'ನಿಗೂಢ ಕಾಯಿಲೆ' ಎಂದು ಕರೆದಿದ್ದಾರೆ.

ಶಹದೋಲ್ ಜಿಲ್ಲೆಯ ಜೈತ್ವಾರಾದ ಬಿಲ್ತಿಕುರಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಒಂಬತ್ತು ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿನಿಯರು ಶಾಲೆಯ ಆವರಣದಲ್ಲಿ ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿದ್ದರು.

ವಿಚಿತ್ರ ಎಂದರೆ ಅವರು ತಮ್ಮ ಮನೆಯಲ್ಲಿ ಸಂಪೂರ್ಣವಾಗಿ ಆರೋಗ್ಯಕರವಾಗಿ ಇದ್ದರು.

ತಕ್ಷಣ ಗ್ರಾಮದಲ್ಲಿ ವಿವಿಧ ರೀತಿಯ ವದಂತಿಗಳು ಹಬ್ಬಿವೆ. ಕೆಲವು ಸ್ಥಳೀಯರು ಶಾಲೆಯಲ್ಲಿ ದೆವ್ವ ಬಿಡಲಾಗಿದೆ ಎಂದು ಹೇಳಿದ್ದಾರೆ. ಮತ್ತೊಂದೆಡೆ ತಜ್ಞರು, ಇದು ಮಾನಸಿಕ ಸಮಸ್ಯೆ ಮತ್ತು ಬಹುಶಃ ಸಾಮೂಹಿಕ ಹಿಸ್ಟೀರಿಯಾದ ಪ್ರಕರಣ ಎಂದು ಹೇಳುತ್ತಿದ್ದಾರೆ.

ಅನೇಕ ವಿಲಕ್ಷಣ ಘಟನೆಗಳು ನಡೆದ ನಂತರ, ಶಾಲೆಯ ಹಿರಿಯ ತರಗತಿಗಳನ್ನು ಪಕ್ಕದ ಶಾಲಾ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು.

'ಮೊದಲು ಏಳಕ್ಕೂ ಹೆಚ್ಚು ಹುಡುಗಿಯರು ಶಾಲೆಯಲ್ಲಿ ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿದರು. ಇದು ಹಲವಾರು ವರ್ಷಗಳ ನಂತರ ಸಂಭವಿಸಿದೆ. ಶಾಲೆ ಪ್ರಾರಂಭವಾದಾಗ, ಇದೇ ರೀತಿಯ ಸಮಸ್ಯೆ ವರದಿಯಾಗಿತ್ತು. ಆದರೆ ಧಾರ್ಮಿಕ ಆಚರಣೆಯ ನಂತರ ಪರಿಸ್ಥಿತಿ ಸುಧಾರಿಸಿತ್ತು. ಬಹುಶಃ ಇಲ್ಲಿಗೆ ಯಾರೋ ದೆವ್ವ ಕಳುಹಿಸಿರಬೇಕು. ಪೀಡಿತ ಹುಡುಗಿಯರು ಮನೆಯಲ್ಲಿದ್ದಾರೆ ಆರೋಗ್ಯವಾಗಿ, ಆರಾಮವಾಗಿದ್ದಾರೆ' ಎಂದು ಬಿಲ್ತಿಕುರಿ ಗ್ರಾಮದ ಸರಪಂಚ್ ಶಿವಕುಮಾರ್ ಪಣಿಕಾ ಮಾಹಿತಿ ನೀಡಿದರು.

ಕೇವಲ ಹದಿನೈದು ದಿನಗಳ ಅವಧಿಯಲ್ಲಿ ಈ ಎಲ್ಲಾ ಘಟನೆಗಳು ವರದಿಯಾಗಿದ್ದು, ಸಂತ್ರಸ್ತ ಬಾಲಕಿಯರನ್ನು ನೆರೆಯ ಬಿಜೂರಿ ಪಂಚಾಯತ್‌ನ ಪಿಎಚ್‌ಸಿಗೆ ಚಿಕಿತ್ಸೆಗಾಗಿ ರವಾನಿಸಲಾಗಿತ್ತು. ಬಾಲಕಿಯರಿಗೆ ಚಿಕಿತ್ಸೆ ನೀಡಿದ ಡಾ.ಭೂಪೇಂದ್ರ ಸಿಂಗ್, 'ಕಳೆದ 15 ದಿನಗಳಿಂದ ಇದು ನಡೆಯುತ್ತಿದೆ. ಪ್ರತಿದಿನವೂ ಅದೇ ಹುಡುಗಿಯರು ವಿಚಿತ್ರವಾಗಿ ವರ್ತಿಸುತ್ತಿಲ್ಲ. ನಿತ್ಯವೂ ಈ ವರ್ತನೆ ಬೇರೆ ಬೇರೆ ಮಕ್ಕಳಲ್ಲಿ ಕಂಡುಬರುತ್ತಿದೆ. ಮುಖ್ಯವಾಗಿ ಅವರು ಅರೆ ಪ್ರಜ್ಞೆಯ ಅವಸ್ಥೆಗೆ ತಲುಪುತ್ತಾರೆ. ಈ ಸ್ಥಿತಿಯಲ್ಲಿ ಅವರು ಇತರರ ಕೂದಲನ್ನು ಎಳೆಯಲು ಪ್ರಾರಂಭಿಸುತ್ತಾರೆ. ಡಿ.14 ರಂದು ಇದು ನನ್ನ ಮುಂದೆಯೂ ನಡೆದಿದೆ. ನಾವು ಎಲ್ಲಾ ಪರೀಕ್ಷೆಗಳನ್ನು ಮಾಡಿರುವುದರಿಂದ ಇದು ಕೆಲವು ಮಾನಸಿಕ ಸಮಸ್ಯೆ ಎಂದು ತೋರುತ್ತದೆ. ಶುಕ್ರವಾರ ಹಾಗೂ ಶನಿವಾರ ಹೆಣ್ಣುಮಕ್ಕಳ ಮನೆಗಳಿಗೆ ಭೇಟಿ ನೀಡಿದ್ದೆ. ಮನೆಯಲ್ಲಿ ಅವರು ಚೆನ್ನಾಗಿದ್ದಾರೆ' ಎಂದು ಘಟನೆ ಬಗ್ಗೆ ವಿವರಗಳನ್ನು ನೀಡಿದ್ದಾರೆ.

'ನಾವು ಮಾತನಾಡದ ಕೆಲವು ವಿಷಯಗಳು ಇರುತ್ತವೆ. ಅವನ್ನು ನಾವು ನಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳುತ್ತೇವೆ. ಇವು ನಮಗೆ ಒತ್ತಡವನ್ನು ನೀಡುತ್ತವೆ. ಈ ಒತ್ತಡವನ್ನು ಹಿಡಿದಿಟ್ಟುಕೊಳ್ಳುವ ಮಿತಿ ಮೀರಿದಾಗ, ಅದು ದೈಹಿಕ ಲಕ್ಷಣಗಳಾಗಿ ರೂಪಾಂತರಗೊಳ್ಳುತ್ತದೆ. ಇದನ್ನು ಕನ್ವರ್ಶನ್ ಡಿಸಾರ್ಡರ್, ಹಿಸ್ಟೀರಿಯಾ ಅಥವಾ ಡಿಸೋಸಿಯೇಟೆಡ್ ಡಿಸಾರ್ಡರ್ ಎಂದು ಕರೆಯಲಾಗುತ್ತದೆ' ಎಂದು ಸಲಹೆಗಾರ ಮನೋವೈದ್ಯ ಡಾ ಸತ್ಯಕಾಂತ್ ತ್ರಿವೇದಿ ಹೇಳಿದರು.

'ಹದಿಹರೆಯದ ಹುಡುಗಿಯರಲ್ಲಿ ಇದು ಏಕೆ ಹೆಚ್ಚು ಗೋಚರಿಸುತ್ತದೆ ಎಂಬುದಕ್ಕೆ, ಅವರು ಸೀಮಿತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹೊಂದಿರಬಹುದು ಮತ್ತು ಆ ಸಮಯದಲ್ಲಿ ಹಲವಾರು ಬದಲಾವಣೆಗಳಿಗೆ ಒಳಗಾಗುತ್ತಿದ್ದಾರೆ. ಇದಕ್ಕೆ ಚಿಕಿತ್ಸೆಯಾಗಿ ಕೌನ್ಸೆಲಿಂಗ್ ಪ್ರಮುಖ ಪಾತ್ರವನ್ನು ಹೊಂದಿದೆ. ಮತ್ತು ಮುಖ್ಯವಾಗಿ, ಈ ಹುಡುಗಿಯರು ಏನು ಹೇಳುತ್ತಾರೆಂದು ನಾವು ಹೆಚ್ಚು ಕೇಳಬೇಕು' ಎಂದು ಡಾ ತ್ರಿವೇದಿ ಹೇಳಿದರು. (ಏಜೆನ್ಸೀಸ್​)

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vijayvani

#Hashtags