ಉದಯವಾಣಿ

1.4M Followers

ಶಿಕ್ಷಕನಿಂದ ಹಲ್ಲೆಗೊಳಗಾದ ಶಿಕ್ಷಕಿಯ ಆರೋಗ್ಯ ವಿಚಾರಿಸಿದ ಸಚಿವ ಬಿ.ಸಿ. ನಾಗೇಶ್

20 Dec 2022.10:58 PM

ಹುಬ್ಬಳ್ಳಿ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ ಅವರು ಮಂಗಳವಾರ ಕಿಮ್ಸ್‌ಗೆ ಭೇಟಿ ನೀಡಿ, ಶಿಕ್ಷಕನಿಂದ ದಾಳಿಗೊಳಗಾಗಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಶಿಕ್ಷಕಿ ಗೀತಾ ಬಾರಕೇರ ಅವರ ಆರೋಗ್ಯ ವಿಚಾರಿಸಿದರು.

ಗಾಯಾಳು ಶಿಕ್ಷಕಿಯ ಕುಟುಂಬಕ್ಕೆ ಧೈರ್ಯ ತುಂಬಿದರು. ಶಿಕ್ಷಕಿಯ ಆರೋಗ್ಯ ಸ್ಥಿತಿ ಮತ್ತು ಚಿಕಿತ್ಸೆ ಕುರಿತು ವೈದ್ಯರಿಂದ ಮಾಹಿತಿ ಪಡೆದರು. ಹದ್ಲಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕ ಮುತ್ತಪ್ಪ ಹಡಗಲಿ, ಶಾಲೆಯ 4ನೇ ತರಗತಿ ವಿದ್ಯಾರ್ಥಿ ಭರತ್‌ ಮೇಲೆ ಸೋಮವಾರ ಬೆಳಗ್ಗೆ ಹಲ್ಲೆ ನಡೆಸಿ, ಒಂದನೇ ಮಹಡಿಯಿಂದ ಕೆಳಗೆ ತಳ್ಳಿದ್ದ. ಬಳಿಕ ಶಿಕ್ಷಕಿ ಗೀತಾ ಯಲ್ಲಪ್ಪ ಬಾರಕೇರ ಮೇಲೂ ಸಲಾಕೆಯಿಂದ ಹಲ್ಲೆ ನಡೆಸಿದ್ದ. ಬಾಲಕ ಭರತ ಮೃತಪಟ್ಟಿದ್ದಾನೆ.

ಶಿಕ್ಷಕಿ ಗೀತಾ ಅವರಿಗೆ ಸಮೀಪದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್‌ಗೆ ದಾಖಲಿಸಲಾಗಿದೆ. ಪರಾರಿಯಾಗಿರುವ ಆರೋಪಿ ಶಿಕ್ಷಕನ ಬಂಧನಕ್ಕೆ ಶೋಧ ಕಾರ್ಯ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಶಾಲೆಯಲ್ಲಿ ನಡೆದ ಈ ಘಟನೆ ಅತ್ಯಂತ ದುರಾದೃಷ್ಟಕರ. ಶಾಲೆ ಆವರಣದಲ್ಲಿ ಇಂತಹ ಘಟನೆಗಳನ್ನು ಊಹಿಸಲು ಅಸಾಧ್ಯ. ಘಟನೆಯಿಂದ ಆತಂಕಗೊಂಡ ಶಾಲೆಯ ಮಕ್ಕಳು ಮತ್ತು ಶಿಕ್ಷಕರಿಗೆ ಕೌನ್ಸೆಲಿಂಗ್‌ ಮಾಡಿ ಧೈರ್ಯ ತುಂಬಲಾಗುತ್ತದೆ. ಘಟನೆಗೆ ಕಾರಣ ಏನೆಂಬುದು ಆರೋಪಿ ಬಂಧನ ಬಳಿಕ ತಿಳಿದು ಬರಲಿದೆ. ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಹಿರಿಯ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಬಿ.ಸಿ. ನಾಗೇಶ ತಿಳಿಸಿದರು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Udayavani

#Hashtags