TV9 ಕನ್ನಡ

368k Followers

OPS: ರಾಜ್ಯದಲ್ಲೂ ಜಾರಿಯಾಗುತ್ತಾ ಹಳೆ ಪಿಂಚಣಿ? ಅಧ್ಯಯನ ನಡೆಸಲು ಮೂವರ ತಂಡ ರಾಜಸ್ಥಾನಕ್ಕೆ

09 Mar 2023.3:01 PM

ಳೆ ಪಿಂಚಣಿ ವ್ಯವಸ್ಥೆ ಅಥವಾ ಒಪಿಎಸ್ ಜಾರಿ ಬಗ್ಗೆ ಅಧ್ಯಯನ ಕೈಗೊಳ್ಳುವುದಕ್ಕಾಗಿ ಕರ್ನಾಟಕದ ಮೂರು ಮಂದಿ ಅಧಿಕಾರಿಗಳ ತಂಡ ರಾಜಸ್ಥಾನಕ್ಕೆ ಭೇಟಿ ನೀಡಲಿದೆ ಎಂದು ವರದಿಯಾಗಿದೆ.

ಜೈಪುರ: ಹಳೆ ಪಿಂಚಣಿ ವ್ಯವಸ್ಥೆ ಅಥವಾ ಒಪಿಎಸ್(OPS) ಜಾರಿ ಬಗ್ಗೆ ಅಧ್ಯಯನ ಕೈಗೊಳ್ಳುವುದಕ್ಕಾಗಿ ಕರ್ನಾಟಕದ (Karnataka) ಮೂರು ಮಂದಿ ಅಧಿಕಾರಿಗಳ ತಂಡ ರಾಜಸ್ಥಾನಕ್ಕೆ (Rajasthan) ಭೇಟಿ ನೀಡಲಿದೆ ಎಂದು ವರದಿಯಾಗಿದೆ.

ಸಮಿತಿಯು ಮಾರ್ಚ್ 25ರಂದು ರಾಜಸ್ಥಾನಕ್ಕೆ ಭೇಟಿ ನೀಡುವ ನಿರೀಕ್ಷೆ ಇದೆ. ಇದರೊಂದಿಗೆ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ತರುವ ವಿಚಾರದಲ್ಲಿ ಆಸಕ್ತಿ ವಹಿಸಿರುವ ಬಿಜೆಪಿ ಆಡಳಿತವಿರುವ ಮೊದಲ ರಾಜ್ಯವಾಗಿ ಕರ್ನಾಟಕ ಗುರುತಿಸಿಕೊಂಡಿದೆ ಎಂದು 'ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ. 2006ರ ನಂತರ ಸೇವೆಗೆ ಸೇರಿರುವ ನೌಕರರಿಗೆ ಹಳೆ ಪಿಂಚಣಿ ವ್ಯವಸ್ಥೆ ಅನುಷ್ಠಾನಗೊಳಿಸುವ ಬಗ್ಗೆ ಅಧ್ಯಯನ ನಡೆಸಲು ರಾಜ್ಯ ಸರ್ಕಾರ ಇತ್ತೀಚೆಗೆ ಸಮಿತಿ ರಚಿಸಿತ್ತು. ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಈ ಸಮಿತಿ ರಚಿಸಲಾಗಿತ್ತು. ಈ ಸಮಿತಿಯು ರಾಜಸ್ಥಾನ ಸೇರಿದಂತೆ ಒಇಎಸ್ ಜಾರಿಗೊಳಿಸಿರುವ ಐದು ರಾಜ್ಯಗಳಿಗೆ ಭೇಟಿ ನೀಡಲಿದ್ದು, ಮುಂದಿನ ಎರಡು ತಿಂಗಳ ಒಳಗಾಗಿ ಶಿಫಾರಸುಗಳನ್ನು ಸರ್ಕಾರಕ್ಕೆ ಸಲ್ಲಿಸಲಿದೆ ಎಂದು ವರದಿ ಉಲ್ಲೇಖಿಸಿದೆ.

ಸಮಿತಿಯು ಮೊದಲಿಗೆ ರಾಜಸ್ಥಾನಕ್ಕೆ ಭೇಟಿ ನೀಡಲಿದೆ. ಅಲ್ಲಿನ ಮುಖ್ಯ ಕಾರ್ಯದರ್ಶಿ ಉಷಾ ಶರ್ಮಾ, ಹಣಕಾಸು ಕಾರ್ಯದರ್ಶಿ ಅಖೀಲ್ ಅರೋರಾ ಹಾಗೂ ಮುಖ್ಯಮಂತ್ರಿಗಳ ಮುಖ್ಯ ಕಾರ್ಯದರ್ಶಿ ಕುಲದೀಪ್ ರಾಂಕಾ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಲಿದೆ ಎಂದು ಮೂಲಗಳು ಹೇಳಿವೆ.

ರಾಜಸ್ಥಾನ ಸರ್ಕಾರವು 2022ರ ಏಪ್ರಿಲ್​​ನಲ್ಲಿ ಹಳೆ ಪಿಂಚಣಿ ವ್ಯವಸ್ಥೆಯನ್ನು ಮರಳಿ ಜಾರಿಗೊಳಿಸಿದೆ. ಈಗಾಗಲೇ ಸುಮಾರು 650 ಮಂದಿ ಪಿಂಚಣಿದಾರರು ಅದರ ಪ್ರಯೋಜನ ಪಡೆಯುತ್ತಿದ್ದಾರೆ.

2004ರ ಜನವರಿ 1 ಮತ್ತು 2022 ಮಾರ್ಚ್ 31ರ ನಡುವೆ ನಿವೃತ್ತರಾದ ನೌಕರರು ಹಿಂಪಡೆದ ಹಣವನ್ನು ಠೇವಣಿ ಇಡುವುದಕ್ಕಾಗಿ ಕಾರ್ಯವಿಧಾನವನ್ನೂ ರಾಜ್ಯ ಸರ್ಕಾರವು ರಚಿಸುತ್ತಿದೆ. ಏಪ್ರಿಲ್ 1 ರ ನಂತರ ನಿವೃತ್ತರಾದವರಿಗೆ ಪಿಂಚಣಿ ವಿತರಣೆಯನ್ನು ರಾಜ್ಯ ಸರ್ಕಾರ ಪ್ರಾರಂಭಿಸಿದ್ದು, ಸರಾಗವಾಗಿ ನಡೆಯುತ್ತಿದೆ. ಆದರೆ ಏಪ್ರಿಲ್ 1 ರ ಮೊದಲು ನಿವೃತ್ತರಾದ ನೌಕರರು ಈ ಹಿಂದಿನಂತೆ ರಾಜ್ಯದ ಸಾಮಾನ್ಯ ಆದಾಯ ನಿಧಿಗೆ ಹಣ ಠೇವಣಿ ಇಡಲು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿ ಸರಿಯಾದ ಮಾರ್ಗದರ್ಶನ ಮತ್ತು ಸಾಫ್ಟ್​​ವೇರ್​​ ಇಲ್ಲ ಎಂದು ನೌಕರರು ಹೇಳಿದ್ದಾರೆ.

OPS vs NPS: ಹಳೆ ಪಿಂಚಣಿ ಪರ ಕೂಗೆದ್ದಿರುವುದೇಕೆ? ಒಪಿಎಸ್, ಎನ್​ಪಿಎಸ್​ ವ್ಯತ್ಯಾಸದ ಬಗ್ಗೆ ಇಲ್ಲಿದೆ ಸಮಗ್ರ ಮಾಹಿತಿ

ಹಳೆ ಪಿಂಚಣಿ ಮತ್ತು ವೇತನ ಹೆಚ್ಚಳಕ್ಕೆ ಆಗ್ರಹಿಸಿ ಇತ್ತೀಚೆಗಷ್ಟೇ ಕರ್ನಾಟಕದಲ್ಲಿ ರಾಜ್ಯ ಸರ್ಕಾರಿ ನೌಕರರು ಮುಷ್ಕರಕ್ಕೆ ಮುಂದಾಗಿದ್ದರು. ತಕ್ಷಣವೇ ಮಧ್ಯ ಪ್ರವೇಶಿಸಿದ್ದ ಸರ್ಕಾರ, ನೌಕರರ ಸಂಘಗಳ ಜತೆ ಮಾತುಕತೆ ನಡೆಸಿ ಶೇ 17ರಷ್ಟು ವೇತನ ಹೆಚ್ಚಳ ಘೋಷಣೆ ಮಾಡಿತ್ತು. ಜತೆಗೆ ಹಳೆ ಪಿಂಚಣಿ ವ್ಯವಸ್ಥೆ ಜಾರಿಗೆ ಕ್ರಮ ಕೈಗೊಳ್ಳಲಾಗುವುದು. ತಕ್ಷಣಕ್ಕೆ ಆ ಕುರಿತು ಅಧ್ಯಯನ ನಡೆಸಲು ಸಮಿತಿ ರಚನೆ ಮಾಡಲಾಗುವುದು ಎಂದು ಹೇಳಿತ್ತು. ನಂತರ ನೌಕರರು ಮುಷ್ಕರ ವಾಪಸ್ ಪಡೆದಿದ್ದರು. ಬಳಿಕ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿತ್ತು.

ಹಳೆ ಪಿಂಚಣಿ ಅಥವಾ ಒಪಿಎಸ್​ ಎಂದರೇನು?

ಹಳೆಯ ಪಿಂಚಣಿ ಯೋಜನೆಯಡಿಯಲ್ಲಿ ನೌಕರರು ನಿವೃತ್ತಿಯ ಸಂದರ್ಭದಲ್ಲಿ ಹೊಂದಿದ್ದ ಮೂಲ ವೇತನದ ಶೇಕಡಾ 50ರಷ್ಟು ಮತ್ತು ಇದರ ಜತೆಗೆ ತುಟ್ಟಿಭತ್ಯೆ ಅಥವಾ ಸೇವಾ ಅವಧಿಯ ಕೊನೆಯ 10 ತಿಂಗಳ ಸರಾಸರಿ ಗಳಿಕೆ, ಈ ಎರಡರಲ್ಲಿ ಯಾವುದು ಹೆಚ್ಚೋ ಅದನ್ನು ಪಡೆಯಲು ಅರ್ಹರಾಗಿರುತ್ತಾರೆ. ಈ ಯೋಜನೆಗೆ ಮಾನ್ಯರಾಗಲು ನೌಕರರು ಕನಿಷ್ಠ 10 ವರ್ಷ ಸೇವೆ ಸಲ್ಲಿಸಿರಬೇಕು. ಹಳೆ ಪಿಂಚಣಿ ಯೋಜನೆಯಲ್ಲಿ ಉದ್ಯೋಗಿಗಳು ಪಿಂಚಣಿಗೆ ಕೊಡುಗೆ ನೀಡಬೇಕಾಗಿಲ್ಲ. ಇದು ಸರ್ಕಾರಿ ಉದ್ಯೋಗಿಗಳಿಗೆ ಬಹುದೊಡ್ಡ ಪ್ರಯೋಜನ ಮಾಡಿಕೊಟ್ಟಿದ್ದಲ್ಲದೆ, ನಿವೃತ್ತಿಯ ಬಳಿಕ ಕುಟುಂಬಕ್ಕೆ ಪಿಂಚಣಿಯ ಖಾತರಿ ದೊರೆಯುತ್ತಿತ್ತು. ಒಂದು ವೇಳೆ ನಿವೃತ್ತ ನೌಕರರು ಮೃತಪಟ್ಟರೂ ಅವರ ಅವಲಂಬಿತರಿಗೆ ಪಿಂಚಣಿ ಮುಂದುವರಿಯುತ್ತದೆ. ಆದರೆ, ಸರ್ಕಾರದ ಬೊಕ್ಕಸಕ್ಕೆ ಮಾತ್ರ ಈ ಯೋಜನೆ ಹೊರೆಯಾಗಿ ಪರಿಣಮಿಸಿತ್ತು. ಹೀಗಾಗಿ ಬಹುತೇಕ ಎಲ್ಲ ರಾಜ್ಯ ಸರ್ಕಾರಗಳೂ ಎನ್​ಪಿಎಸ್ ಜಾರಿಗೊಳಿಸಿದ್ದವು. ಇದು ರಾಷ್ಟ್ರೀಯ ಅಥವಾ ಹೊಸ ಪಿಂಚಣಿ ಯೋಜನೆಯಾಗಿದ್ದು, ಪಿಂಚಣಿ ಮತ್ತು ಹೂಡಿಕೆಗಳ ಸಂಯೋಜನೆಯಾಗಿದೆ.

ಯಾವೆಲ್ಲ ರಾಜ್ಯಗಳಲ್ಲಿ ಒಪಿಎಸ್ ಜಾರಿ?

ಕಾಂಗ್ರೆಸ್ ಹಾಗೂ ಪ್ರತಿಪಕ್ಷಗಳ ಆಡಳಿತ ಇರುವ ಕೆಲವು ರಾಜ್ಯಗಳು ಇತ್ತೀಚೆಗೆ ಮತ್ತೆ ಒಪಿಎಸ್ ಜಾರಿಗೊಳಿಸಿವೆ. ರಾಜಸ್ಥಾನ, ಛತ್ತೀಸ್​ಗಢ, ಜಾರ್ಖಂಡ್, ಪಂಜಾಬ್ ಹಾಗೂ ಹಿಮಾಚಲ ಪ್ರದೇಶಗಳಲ್ಲಿ ಒಪಿಎಸ್ ಮರಳಿ ಜಾರಿಗೊಳಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಮಾಡಿ

Disclaimer

Disclaimer

This story is auto-aggregated by a computer program and has not been created or edited by Dailyhunt Publisher: TV9 Kannada

#Hashtags