ಈ ಸಂಜೆ

803k Followers

ಬಿಗ್ ಬ್ರೇಕಿಂಗ್ : ಸೆ.21ರಿಂದ ಶಾಲೆ-ಕಾಲೇಜುಗಳು ಆರಂಭ..!

14 Sep 2020.12:35 PM

ಬೆಂಗಳೂರು, ಸೆ.14- ಕೊರೊನಾ ಆತಂಕದ ನಡುವೆ ಶಾಲಾ-ಕಾಲೇಜುಗಳ ಆರಂಭಕ್ಕೆ ಸಿದ್ಧತೆ ನಡೆಯುತ್ತಿದೆ. ಸೆ.21ರಿಂದ 9 ರಿಂದ 12ನೆ ತರಗತಿ ವರೆಗಿನ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ತೆರಳಲು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಶಾಲೆಗಳನ್ನು ಆರಂಭಿಸಲು ಸಿದ್ಧತೆ ನಡೆದಿದೆ.

ಖಾಸಗಿ ಹಾಗೂ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಶಾಲೆಗಳ ಆರಂಭಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರದ ಅನುಮತಿ ಮೇಲೆ ಶಾಲಾ-ಕಾಲೇಜು ಪ್ರಾರಂಭಕ್ಕೆ ಶಿಕ್ಷಣ ಇಲಾಖೆ ನಿರ್ಧರಿಸಿದ್ದು, ಆರೋಗ್ಯ ಇಲಾಖೆ ಶಾಲಾ-ಕಾಲೇಜುಗಳನ್ನು ಪ್ರಾರಂಭಿಸಲು ಮಾರ್ಗಸೂಚಿ ಸಿದ್ಧಪಡಿಸಿದೆ.

ಮಕ್ಕಳು ಶಾಲೆಗೆ ಕಡ್ಡಾಯವಾಗಿ ಬರುವಂತೆ ಒತ್ತಾಯ ಮಾಡುವಂತಿಲ್ಲ.

ಶಾಲೆಗೆ ಬರುವ ಪ್ರತಿ ವಿದ್ಯಾರ್ಥಿಯೂ ಪೋಷಕರಿಂದ ಒಪ್ಪಿಗೆ ಪತ್ರ ತರಬೇಕು. ವಿದ್ಯಾರ್ಥಿಗಳು ಸಾಮಾಜಿಕ ಅಂತರದಲ್ಲಿ ಕುಳಿತುಕೊಳ್ಳಲು ಡೆಸ್ಕ್ ವ್ಯವಸ್ಥೆ ಮಾಡಬೇಕು.

ಪ್ರತಿದಿನ ಮಕ್ಕಳಿಗೆ ಥರ್ಮಲ್ ಸ್ಕ್ಯಾನಿಂಗ್ ನಡೆಸಬೇಕು. ಮಕ್ಕಳು ಹಾಗೂ ಸಿಬ್ಬಂದಿ ಮಾಸ್ಕ್, ಸ್ಯಾನಿಟೈಸರ್ ಬಳಸುವುದು ಕಡ್ಡಾಯ. ಪ್ರತಿ ಕೊಠಡಿಗಳನ್ನೂ ನಿತ್ಯ ಸ್ಯಾನಿಟೈಜ್ ಮಾಡಬೇಕು. ಮಕ್ಕಳು ಶಾಲಾ ಆವರಣದಲ್ಲಿ ಗುಂಪು ಕಟ್ಟದಂತೆ ಎಚ್ಚರ ವಹಿಸಬೇಕು.

ಶೌಚಾಲಯಗಳು ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆ, ಆಟ, ಊಟ, ಪ್ರಾರ್ಥನೆ ವೇಳೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಬೇಕು.

ಲೈಬ್ರರಿಯಲ್ಲಿ ಹೆಚ್ಚು ಮಕ್ಕಳು ಸೇರುವಂತಿಲ್ಲ. ಗುಂಪು ಕ್ರೀಡೆಗೆ ಅವಕಾಶವಿಲ್ಲ. ಮಕ್ಕಳು ಶಾಲೆಗೆ ಬರುವಾಗ, ಹೋಗುವಾಗ ಸಾಮಾಜಿಕ ಅಂತರದಲ್ಲಿರುವಂತೆ ಕ್ರಮ ವಹಿಸುವುದು, ಶಾಲಾ ಸಿಬ್ಬಂದಿ ಮಾಸ್ಕ್, ಗ್ಲೌಸ್ ಹಾಕಿಕೊಳ್ಳುವುದು ಕಡ್ಡಾಯ ಎಂದು ಆರೋಗ್ಯ ಇಲಾಖೆ ಮಾರ್ಗಸೂಚಿ ಸಿದ್ಧಪಡಿಸಿದ್ದು, ಇನ್ನೆರಡು-ಮೂರು ದಿನಗಳಲ್ಲಿ ಮಾರ್ಗಸೂಚಿ ಬಿಡುಗಡೆಯಾಗುವ ಸಾಧ್ಯತೆ ಇದೆ.

ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಪಾಲಿಸಿ ಶಾಲೆಗಳನ್ನು ಪ್ರಾರಂಭಿಸಲು ಶಿಕ್ಷಣ ಇಲಾಖೆ ತೀರ್ಮಾನ ಮಾಡಿದ್ದು, ಸೆ.21 ರಿಂದ 9 ರಿಂದ 12ನೆ ತರಗತಿ ವಿದ್ಯಾರ್ಥಿಗಳು ಮಾತ್ರ ಶಾಲೆಗಳಿಗೆ ತೆರಳಬಹುದು ಹಾಗೂ ಈವರೆಗೆ ಆನ್‍ಲೈನ್ ಶಿಕ್ಷಣದಲ್ಲಿ ಆದ ಗೊಂದಲಗಳನ್ನು ನಿವಾರಿಸಿಕೊಳ್ಳಬಹುದಾಗಿದೆ. ಹಂತ ಹಂತವಾಗಿ ಉಳಿದ ತರಗತಿಗಳ ಪ್ರಾರಂಭಕ್ಕೂ ಕೂಡ ಸರ್ಕಾರ ಚಿಂತನೆ ನಡೆಸಿದೆ.

ಕೊರೊನಾ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‍ಡೌನ್ ಆದ ದಿನದಿಂದ ಈವರೆಗೆ ಅಂದರೆ ಸುಮಾರು 6 ತಿಂಗಳಿಗೂ ಹೆಚ್ಚು ಕಾಲ ಶಾಲಾ-ಕಾಲೇಜುಗಳು ತೆರೆದಿಲ್ಲ. 6 ತಿಂಗಳ ನಂತರ ಶಾಲಾ-ಕಾಲೇಜುಗಳು ತೆರೆಯುತ್ತಿದ್ದು, ಎಲ್ಲ ಸಿದ್ಧತೆಗಳನ್ನೂ ಶಾಲೆಗಳವರು ಮಾಡಿಕೊಳ್ಳಬೇಕಿದೆ.

ಸೆ.21 ರಿಂದ 30ರ ವರೆಗೆ ಶಾಲಾ ಆವರಣಗಳಿಗೆ ವಿದ್ಯಾರ್ಥಿಗಳು ತೆರಳಿ ಶಿಕ್ಷಕರೊಂದಿಗೆ ಚರ್ಚೆ ನಡೆಸಬಹುದು. ತಮಗಿರುವ ಗೊಂದಲ, ಅನುಮಾನಗಳನ್ನು ಬಗೆಹರಿಸಿಕೊಳ್ಳಬಹುದು. ಅಕ್ಟೋಬರ್ ತಿಂಗಳಲ್ಲಿ ಎಂದಿನಂತೆ ತರಗತಿಗಳು ಪ್ರಾರಂಭವಾಗುವ ಸಾಧ್ಯತೆ ಇದೆ.

ಸರ್ಕಾರದ ಈ ಮಾರ್ಗಸೂಚಿ ಪಾಲಿಸಲು ಖಾಸಗಿ ಶಾಲೆಗಳವರೇನೋ ಸಿದ್ಧರಾಗಿದ್ದಾರೆ. ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಜ್, ಮಾಸ್ಕ್ ಇದಕ್ಕೆ ವೆಚ್ಚವಾಗುವ ಎಲ್ಲ ಹಣವನ್ನೂ ಪೋಷಕರಿಂದ ಪಡೆದು ಶಾಲೆಗಳನ್ನು ಪ್ರಾರಂಭಿಸುತ್ತಾರೆ.

ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸಿಕೊಡಲು ಬಹುತೇಕ ಪೆÇೀಷಕರು ಕೂಡ ಸಮ್ಮತಿ ಸೂಚಿಸಿದ್ದಾರೆ. ಆದರೆ, ಸರ್ಕಾರಿ ಶಾಲೆಗಳ ಗತಿ ಏನು? ರಾಜ್ಯದಲ್ಲಿ ಸುಮಾರು 40 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿವೆ. ಇಲ್ಲಿಗೆ ಬರುವ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಜ್ ಮಾಡುವುದು, ಶೌಚಾಲಯಗಳ ಶುಚಿತ್ವ, ಶಾಲಾ ನೈರ್ಮಲ್ಯೀಕರಣ ಮಾಡುವ ಮೂಲಕ ಕೊರೊನಾ ಸೋಂಕು ಹರಡದಂತೆ ನೋಡಿಕೊಳ್ಳಬೇಕು.

ಸರ್ಕಾರಿ ಶಾಲೆಗಳಲ್ಲಿ ಈ ಜವಾಬ್ದಾರಿ ನಿರ್ವಹಿಸುವವರು ಯಾರು? ಪ್ರತಿ ಶಾಲೆಗಳಿಗೂ ಥರ್ಮಲ್ ಸ್ಕ್ಯಾನರ್, ಸ್ಯಾನಿಟೈಸರ್ ಮುಂತಾದ ವಸ್ತುಗಳನ್ನು ಕೊಳ್ಳಲು ಸಾಕಷ್ಟು ಹಣ ಬೇಕಾಗುತ್ತದೆ. ಇವೆಲ್ಲದಕ್ಕೂ ಸರ್ಕಾರ ಕ್ರಮ ಕೈಗೊಂಡಿದೆಯೇ?

# ನಾವು ಸಿದ್ಧ:
ಸರ್ಕಾರ ಶಾಲೆಗಳನ್ನು ಪ್ರಾರಂಭಿಸಲು ಅನುಮತಿ ನೀಡಿ ಅಗತ್ಯ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದರೆ ಅದರಂತೆ ನಾವು ಶಾಲೆಗಳನ್ನು ಪ್ರಾರಂಭಿಸಲು ಸಿದ್ಧರಿರುವುದಾಗಿ ಖಾಸಗಿ ಶಾಲೆಗಳ ಒಕ್ಕೂಟದ ಮುಖಂಡರು ತಿಳಿಸಿದ್ದಾರೆ.

ಕಳೆದ ಆರು ತಿಂಗಳಿನಿಂದ ಶಾಲೆಗಳು ಪ್ರಾರಂಭವಾಗಿಲ್ಲ. ಮಕ್ಕಳ ಶುಲ್ಕ ಕಟ್ಟಲು ಯಾರೂ ಮುಂದೆ ಬರುತ್ತಿಲ್ಲ. ನಿರ್ವಹಣೆ ಕಷ್ಟವಾಗಿದೆ. ಶಾಲೆಗಳನ್ನು ಪ್ರಾರಂಭಿಸಲು ಸರ್ಕಾರ ಮುಂದಾದರೆ ನಾವು ಸಿದ್ಧ ಎಂದು ಕರ್ನಾಟಕ ಇಂಗ್ಲಿಷ್ ಮಾಧ್ಯಮ ಶಾಲೆಗಳ ಒಕ್ಕೂಟದ ಅಧ್ಯಕ್ಷ ಶಶಿಕುಮಾರ್ ತಿಳಿಸಿದ್ದಾರೆ.

ಸೆ.21ರಂದು ಮಕ್ಕಳು ಶಾಲೆಗಳಿಗೆ ಬರಲು ಅನುಮತಿ ನೀಡಲಾಗಿದೆ. ಇದಕ್ಕೆ ನಾವು ಸಿದ್ಧರಿದ್ದೇವೆ. ಸರ್ಕಾರ ಯಾವ ರೀತಿ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದೆ ಎಂಬುದು ಈವರೆಗೂ ನಮಗೆ ಯಾವುದೇ ಮಾಹಿತಿ ಬಂದಿಲ್ಲ. ಶಿಕ್ಷಣ ಇಲಾಖೆಯಿಂದ ನಮಗೆ ನಿರ್ದೇಶನ ಬಂದರೆ ಅದನ್ನು ಪಾಲಿಸುತ್ತೇವೆ ಎಂದರು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: eesanje

#Hashtags