ಕನ್ನಡ ಪ್ರಭ

1.2M Followers

1 ರಿಂದ 10ನೆ ತರಗತಿವರೆಗೆ ಆನ್ ಲೈನ್ ಶಿಕ್ಷಣ ವೇಳಾಪಟ್ಟಿ ನೀಡಿದ ತಜ್ಞರ ಸಮಿತಿ!

07 Jul 2020.6:36 PM

ಬೆಂಗಳೂರು: ಕೋವಿಡ್ ಸಂಕಷ್ಟ ಸಂದರ್ಭದಲ್ಲಿ ರಾಜ್ಯದಲ್ಲಿ ತಂತ್ರಜ್ಞಾನ ಆಧರಿತ ಶಾಲಾ ಶಿಕ್ಷಣ ಮುಂದುವರೆಸುವ ಸಂಬಂಧ ಪ್ರೊ. ಎಂ.ಕೆ. ಶ್ರೀಧರ್ ಅಧ್ಯಕ್ಷತೆಯ ತಜ್ಞರ ಸಮಿತಿ ಮಂಗಳವಾರ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ವರದಿ ಸ್ವೀಕರಿಸಿ ಸಕಾರಾತ್ಮಕ ಅಂಶಗಳನ್ನು ತಕ್ಷಣದಿಂದಲೇ ಜಾರಿಗೆ ತರುವುದಾಗಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸುರೇಶ್ ಕುಮಾರ್, 3 ರಿಂದ 6 ವರ್ಷ ವಯೋಮಾನದ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಗೆ ಆಟ, ಕಥೆ, ಪ್ರಾಸ ಸೇರಿದ ನವೀನ ಚಟುವಟಿಕೆಗಳನ್ನು ಮಾತ್ರ ಪಾಲಕರ ಕಡ್ಡಾಯ ಉಪಸ್ಥಿತಿಯಲ್ಲಿ ನೇರ ಅಥವಾ ಮುದ್ರಿತ ಬೋಧನಾ ವಿಧಾನಗಳನ್ನು ವಾರಕ್ಕೆ ಮೂರು ದಿನ ಪ್ರತಿದಿನ ಒಂದು ಗಂಟೆ ಅವಧಿಯಂತೆ ಕಲಿಸಬಹುದು ಎಂದು ವರದಿ ಹೇಳಿದೆ.

ಅದೇ ರೀತಿ 1ರಿಂದ 2ನೇ ತರಗತಿಯ ವಿದ್ಯಾರ್ಥಿಗಳಲ್ಲಿ ಆಟ, ಕಥೆಯ ರೂಪದ ನವೀನ ಚಟುವಟಿಕೆಗಳನ್ನು ಮಾತ್ರ ವಾರಕ್ಕೆ ಮೂರು ದಿನ ಪ್ರತಿದಿನ ಎರಡು ಅವಧಿಯ ಕಲಿಕೆಗೆ ಅವಕಾಶ ನೀಡಬಹುದು. 3ರಿಂದ 5ನೇ ತರಗತಿಗಳಿಗೆ ವಾರಕ್ಕೆ 5ದಿನ ಪ್ರತಿದಿನ 30 ನಿಮಿಷದ 2 ಅವಧಿಗಳನ್ನು ಆನ್ ಲೈನ್ ಬೋಧನೆ ಮಾಡಬಹುದೆಂದು ಸಮಿತಿ ಸಲಹೆ ಮಾಡಿದೆ.

ಪಠ್ಯಕ್ಕೆ ಪೂರಕ ಬೋಧನೆಯನ್ನು ಅಳವಡಿಸಿಕೊಳ್ಳಬಹುದು. 6ರಿಂದ 8ನೇ ತರಗತಿಗೆ 30ರಿಂದ 45 ನಿಮಿಷಗಳ ಗರಿಷ್ಠ 3 ಅವಧಿ ಹಾಗೂ 9-10ನೇ ತರಗತಿಗೆ 30-45 ನಿಮಿಷಗಳ ಪ್ರತಿದಿನದ ಗರಿಷ್ಠ 4 ಅವಧಿಗೆ ಪರ್ಯಾಯ ಕಲಿಕೆಯನ್ನು ಶಿಫಾರಸು ಮಾಡಿದೆ ಎಂದು ಸಚಿವರು ತಿಳಿಸಿದರು.

ಪ್ರೊ. ಎಂ.ಕೆ. ಶ್ರೀಧರ್, ಗುರುರಾಜ ಕರ್ಜಗಿ, ಪ್ರೊ. ವಿ.ಪಿ. ನಿರಂಜನಾರಾಧ್ಯ ಅವರಂತಹ ಹಿರಿಯ ಶಿಕ್ಷಣ ತಜ್ಞರ ನೇತೃತ್ವದ ಸಮಿತಿ ರಚನಾತ್ಮಕ ವರದಿ ನೀಡಿರುವುದು ನಮಗೆಲ್ಲ ಹೆಮ್ಮೆಯ ಸಂಗತಿಯಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗ ಪ್ರಸರಣದ ಹಿನ್ನೆಲೆಯಲ್ಲಿ ಶಾಲೆಗಳು ಸಕಾಲದಲ್ಲಿ ಆರಂಭವಾಗದಿರುವಾಗ ಕೆಲ ಶಿಕ್ಷಣ ಸಂಸ್ಥೆಗಳು ಆನ್ಲೈನ್ ಶಿಕ್ಷಣ ನೀಡಲು ಮುಂದಾದವು. ಇನ್ನೂ ಕೆಲ ಸಂಸ್ಥೆಗಳು ಅದರ ಹೆಸರಲ್ಲಿ ಪ್ರತ್ಯೇಕ ಶುಲ್ಕ ವಸೂಲು ಮಾಡಲು ಶುರು ಮಾಡಿದವು. ಹಾಗೆಯೇ ಅವೈಜ್ಞಾನಿಕವಾಗಿ ಆನ್ಲೈನ್ ಬೋಧನೆ ಅನುಸರಿಸುತ್ತಿದ್ದ ಕೆಲ ಶಿಕ್ಷಣ ಸಂಸ್ಥೆಗಳಿಗೆ ಕಡಿವಾಣ ಹಾಕಬೇಕೆಂಬ ಹಿನ್ನೆಲೆಯಲ್ಲಿ ಮಕ್ಕಳ ಆರೋಗ್ಯ ಮತ್ತು ಹಿತವನ್ನು ಗಮನದಲ್ಲಿಟ್ಟುಕೊಂಡು ವಿಸ್ತೃತ ವರದಿ ಪಡೆಯಲಾಗಿದೆ ಎಂದರು.

ವರದಿಯ ಪೂರ್ಣಪಾಠವನ್ನು ಅಧ್ಯಯನ ಮಾಡಿ ಅದು ಸೂಚಿಸಿರುವ ಮಾರ್ಗಸೂಚಿಗಳನ್ನು ಗಮನದಲ್ಲಿಟ್ಟುಕೊಂಡು, ರಾಜ್ಯದಲ್ಲಿ ಆನ್ಲೈನ್ ಶಿಕ್ಷಣ ಕುರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್ ನೀಡುವ ತೀರ್ಪಿಗನುಗುಣವಾಗಿ ನಿಯಮಗಳನ್ನು ಸಿದ್ಧಪಡಿಸಲಾಗುವುದೆಂದು ಸಚಿವರು ಹೇಳಿದರು.

ಸರ್ಕಾರಿ ಶಾಲೆಗಳಲ್ಲಿ ಕಲಿಯುವ ಮಕ್ಕಳಿಗೆ ಇರುವ ಸೌಲಭ್ಯಗಳು, ಮಕ್ಕಳ ಶಿಕ್ಷಣದ ಹಕ್ಕು, ವಿಭಿನ್ನ ವಯೋಮಾನದವರಿಗೆ ವಿಭಿನ್ನ ಕಲಿಕೆಯ ತಂತ್ರಗಳು ಸೇರಿದಂತೆ ಸಮಗ್ರ ಚಿತ್ರಣ ಕಲ್ಪಿಸಲಾಗಿದೆ. ನಮ್ಮ ಸರ್ಕಾರಿ ಶಾಲಾ ಮಕ್ಕಳು ತಂತ್ರಜ್ಞಾನ ಆಧಾರಿತ ಶಿಕ್ಷಣದಿಂದ ವಂಚಿತರಾಗದಂತೆ ಯಾವ ಯಾವ ಉಪಕ್ರಮಗಳನ್ನು ಉಪಯೋಗಿಸಿಕೊಂಡು ಕಲಿಕೆ ಮುಂದುವರೆಬಹುದು ಎಂಬುದನ್ನು ಸಹ ಪರಿಶೀಲಿಸಲಾಗುವುದು ಎಂದು ಸುರೇಶ್ ಕುಮಾರ್ ಹೇಳಿದರು.

ಸರ್ಕಾರಿ ಶಾಲೆಗಳಲ್ಲಿ ಪರ್ಯಾಯ ಬೋಧನಾ ಕ್ರಮಗಳ ಕುರಿತಂತೆ ಇಷ್ಟರಲ್ಲಿಯೇ ದೂರದರ್ಶನ, ಆಕಾಶವಾಣಿ ಮೂಲಕ ಸೇತುಬಂಧ ಕಾರ್ಯಕ್ರಮವನ್ನು ಪ್ರಾರಂಭಿಸಲಾಗುತ್ತಿದೆ. ಪ್ರತಿ ಶಿಕ್ಷಕರನ್ನು ಪ್ರತಿ ವಿದ್ಯಾರ್ಥಿಯೊಂದಿಗೆ ಮ್ಯಾಪಿಂಗ್ ಮಾಡಿ ಕಲಿಕೆಯನ್ನು ಅನುಪಾಲಿಸುವ ಸಮರ್ಥ ವ್ಯವಸ್ಥೆ ರೂಪಿಸಲಾಗುತ್ತಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಸಮಿತಿ ಅಧ್ಯಕ್ಷ ಹಾಗೂ ಹಿರಿಯ ಶಿಕ್ಷಣ ತಜ್ಞ ಪ್ರೊ. ಎಂ.ಕೆ. ಶ್ರೀಧರ್ ಮಾತನಾಡಿ, ಸಮಿತಿಯ ಎಲ್ಲರ ಉದ್ದೇಶವೂ ಮಕ್ಕಳ ಹಿತವನ್ನು ಕಾಪಾಡುವುದಾಗಿತ್ತು. ಹೀಗಾಗಿ ಒಂದು ಉತ್ತಮವಾದ ವರದಿಯನ್ನು ತಯಾರು ಮಾಡಿ ಸರ್ಕಾರಕ್ಕೆ ಸಲ್ಲಿಸಲು ಸಾಧ್ಯವಾಯಿತು ಎಂದು ಹೇಳಿದರು.

ಸಮಿತಿ ಸದಸ್ಯರಾದ ಹಿರಿಯ ಶಿಕ್ಷಣ ತಜ್ಞ ಡಾ. ವಿ.ಪಿ. ನಿರಂಜನಾರಾಧ್ಯ, ಅಜೀಂ ಪ್ರೇಂಜಿ ಪ್ರತಿಷ್ಠಾನದ ಪ್ರತಿನಿಧಿ ಬಿ.ಎಸ್. ಹೃಷಿಕೇಶ್, ಅನುದಾನ ರಹಿತ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್, ಅರ್ಲಿ ಚೈಲ್ಡ್ಹುಡ್ ಅಸೋಷಿಯೇಷನ್ ರಾಜ್ಯ ಸಮಿತಿ ಸದಸ್ಯೆ ಶ್ರೀಮತಿ ಪ್ರೀತಿವಿಕ್ರಂ, ಎಚ್.ಎನ್.ಗೋಪಾಲಕೃಷ್ಣ, ಎಂ.ಆರ್. ಮಾರುತಿ, ಸತ್ಯಮೂರ್ತಿ, ಕೃಷ್ಣಾಜಿ, ಮಮತಾ ಪುರಸ್ಥಿತರಿದ್ದರು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Prabha

#Hashtags