Saaksha TV

76k Followers

ನಾನು ವಿಧಿಯಾಟವನ್ನು ನಂಬುತ್ತೇನೆ. ಹಣೆಬರೆಹದಲ್ಲಿ ಏನಾಗುತ್ತೋ ಅದೇ ಆಗುತ್ತೆ -ಮಹಮ್ಮದ್ ಅಜರುದ್ದೀನ್

30 Jul 2020.09:48 AM

ನಾನು ವಿಧಿಯಾಟವನ್ನು ನಂಬುತ್ತೇನೆ. ಹಣೆಬರೆಹದಲ್ಲಿ ಏನಾಗುತ್ತೋ ಅದೇ ಆಗುತ್ತೆ -ಮಹಮ್ಮದ್ ಅಜರುದ್ದೀನ್

 ಮಹಮ್ಮದ್ ಅಜರುದ್ದೀನ್.. ಭಾರತ ಕ್ರಿಕೆಟ್ ತಂಡವನ್ನು ಸುಮಾರು ಒಂದು ದಶಕಗಳ ಕಾಲ ಮುನ್ನಡೆಸಿದ್ದ ನಾಯಕ. ಅಷ್ಟೇ ಅಲ್ಲ, ಮೂರು ವಿಶ್ವಕಪ್ ಟೂರ್ನಿಗಳಿಗೆ ಭಾರತ ಕ್ರಿಕೆಟ್ ತಂಡದ ಸಾರಥಿಯಾಗಿದ್ದರು. ಸ್ಟೈಲೀಶ್ ಆಟದ ಮೂಲಕ ಗಮನ ಸೆಳೆದಿರುವ ಮಹಮ್ಮದ್ ಅಜರುದ್ದೀನ್ ಅದ್ಭುತ ಬ್ಯಾಟ್ಸ್ ಮೆನ್ ಹಾಗೂ ಚುರುಕಿನ ಫೀಲ್ಡರ್ ಕೂಡ ಹೌದು.

ಆದ್ರೆ ಮ್ಯಾಚ್ ಫಿಕ್ಸಿಂಗ್ ಕಳಂಕ ಮಹಮ್ಮದ್ ಅಜರುದ್ದೀನ್ ಅವರ ಕ್ರಿಕೆಟ್ ಬದುಕಿಗೆ ಕಪ್ಪುಚುಕ್ಕೆಯಾಗಿ ಪರಿಣಮಿಸಿತ್ತು.
ಮ್ಯಾಚ್ ಫಿಕ್ಸಿಂಗ್ ಆರೋಪದ ಬಳಿಕ ಕ್ರಿಕೆಟ್ ನಿಂದ ದೂರ ಉಳಿದಿದ್ದ ಮಹಮ್ಮದ್ ಅಜರುದ್ದೀನ್ ಸಂಸದರಾಗಿದ್ದರು. ಸದ್ಯ ಹೈದ್ರಬಾದ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ತನ್ನ ಮೇಲಿನ ಆರೋಪದ ವಿರುದ್ಧ ಕಾನೂನು ಹೋರಾಟ ನಡೆಸಿದ್ದ ಅಜರುದ್ದೀನ್‍ಗೆ 2012ರಲ್ಲಿ ನ್ಯಾಯ ಸಿಕ್ಕಿದ್ರೂ ಆ ಕಳಂಕ ಮಾತ್ರ ಇನ್ನೂ ಹೋಗಿಲ್ಲ.
ಈ ಬಗ್ಗೆ ಮಾತನಾಡಿರುವ ಮಹಮ್ಮದ್ ಅಜರುದ್ದೀನ್, ನಾನು ಯಾರನ್ನು ದೂಷಣೆ ಮಾಡುವುದಿಲ್ಲ. ನನಗೆ  ಯಾಕೆ ನಿಷೇಧ ಹೇರಿದ್ರೂ ಎಂಬುದು ಸಹ ನನಗೆ ಗೊತ್ತಿಲ್ಲ. ನಾನು ವಿಧಿಯಾಟವನ್ನು ನಂಬುತ್ತೇನೆ. ಹಣೆಬರೆಹದಲ್ಲಿ ಏನು ಆಗಬೇಕೋ ಅದೇ ಆಗುತ್ತೆ ಎಂದು ಬೇಸರದಿಂದಲೇ ಹೇಳಿಕೊಂಡಿದ್ದಾರೆ.
ಆದ್ರೆ ನಾನು ನನ್ನ ಆರೋಪ ಮೇಲೆ ಕಾನೂನು ಹೋರಾಟ ನಡೆಸಲು ನಿರ್ಧರಿಸಿದ್ದೆ. 12ವರ್ಷಗಳ ಬಳಿಕ ನನಗೆ ನ್ಯಾಯ ಸಿಕ್ಕಿದೆ. ನಾನು ಆರೋಪದಿಂದ ಮುಕ್ತನಾಗಿದ್ದೇನೆ. ನನಗೆ ಈ ಬಗ್ಗೆ ಸಮಾಧಾನವಿದೆ. ನಾನು ಹೈದ್ರಬಾದ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷನಾದ ಬಳಿಕ ನಾನು ಬಿಸಿಸಿಐ ಸಭೆಯಲ್ಲಿ ಭಾಗವಹಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಇದಕ್ಕು ಮೊದಲು ಮಹಮ್ಮದ್ ಅಜರುದ್ದೀನ್ ಅವರಿಗೆ ಬಿಸಿಸಿಐ ನಿಷೇಧ ಹೇರಿತ್ತು. ಬಿಸಿಸಿಐ ಮಹಮ್ಮದ್ ಅಜರುದ್ದೀನ್ ಅವರನ್ನು ಲೆಕ್ಕಕ್ಕೆ ತೆಗೆದುಕೊಂಡಿರಲಿಲ್ಲ. ಯಾವುದೇ ಕಾರ್ಯಕ್ರಮ, ಸಭೆಗೂ ಆಹ್ವಾನಿಸಿರಲಿಲ್ಲ.
 ನಾನು ಭಾರತದ ಪರ ಸುಮಾರು 16ರಿಂದ 17 ವರ್ಷ ಆಡಿದ್ದೇನೆ. ಹತ್ತು ವರ್ಷಗಳ ಕಾಲ ನಾಯಕನಾಗಿದ್ದೆ. ಇದಕ್ಕಿಂತ ಹೆಚ್ಚು ನಾನು ಏನು ಕೇಳಲಿ ? ಎಂದು ಮಹಮ್ಮದ್ ಅಜರುದ್ದೀನ್ ಹೇಳ್ತಾರೆ. ಮಹಮ್ಮದ್ ಅಜರುದ್ದೀನ್ ಅವರು 99 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 6125 ರನ್ ಗಳಿಸಿದ್ದಾರೆ. ಹಾಗೇ 334 ಏಕದಿನ ಪಂದ್ಯಗಳಲ್ಲಿ 9378 ರನ್ ಪೇರಿಸಿದ್ದಾರೆ. ಕ್ರಿಕೆಟ್ ಬದುಕಿನ ಆರಂಭದಲ್ಲೇ ಮೂರು ಶತಕಗಳನ್ನು ಸಿಡಿಸಿ ಮಿಂಚು ಹರಿಸಿದ್ರು.
ಇದೇ ವೇಳೆ, ಮಹಮ್ಮದ್ ಅಜರುದ್ದೀನ್ ಅವರು ಪಾಕಿಸ್ತಾನದ ಜಹೀರ್ ಅಬ್ಬಾಸ್ ಅವರನ್ನು ನೆನಪು ಮಾಡಿಕೊಂಡಿದ್ದಾರೆ. ನಾನು 1989ರಲ್ಲಿ ಪಾಕ್ ಸರಣಿಗೆ ಆಯ್ಕೆಯಾಗುತ್ತೇನೆ ಎಂದು ಅಂದುಕೊಂಡಿರಲಿಲ್ಲ. ಆಗ ನಾನು ಕೆಟ್ಟ ಫಾರ್ಮ್‍ನಲ್ಲಿದ್ದೆ. ನನಗೆ ಇನ್ನೂ ನೆನಪಿದೆ. ಕರಾಚಿಯಲ್ಲಿ ಜಹೀರ್ ಅಬ್ಬಾಸ್ ಅವರು ನಾವು ಅಭ್ಯಾಸ ಮಾಡುವುದನ್ನು ನೋಡುತ್ತಿದ್ದರು.  ಆಗ ಅವರು ನನ್ನ ಬಳಿ ಕೇಳಿದ್ದರು .. ನೀನು ಯಾಕೆ ಬೇಗ ಔಟಾಗುತ್ತಿದ್ದೀಯಾ ಅಂತ. ಆಗ ಅವರ ಬಳಿ ನನ್ನ ಸಮಸ್ಯೆಯನ್ನು ಹೇಳಿಕೊಂಡಿದ್ದೆ. ಆಗ ಅವರು ನನಗೆ ಸಲಹೆ ಕೊಟ್ರು. ಬ್ಯಾಟ್ ಹಿಡಿತವನ್ನು ಬದಲಾವಣೆ ಮಾಡಿಕೊ ಎಂದು ಹೇಳಿದ್ದರು. ಅವರು ಹೇಳಿದ್ದ ಹಾಗೇ ನಾನು ನನ್ನ ಬ್ಯಾಟಿಂಗ್ ನಲ್ಲಿ ಬದಲಾವಣೆ ಮಾಡಿಕೊಂಡೆ. ಇದು ನನಗೆ ವರದಾನವಾಯ್ತು. ಆಕ್ರಮಣಕಾರಿ ಆಡಲು ಸಾಧ್ಯವಾಯ್ತು ಎಂದು ಹೇಳಿದ್ದಾರೆ.
ಇನ್ನು ಭಾರತ ಮತ್ತು ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿಯ ಬಗ್ಗೆ ಮಾತನಾಡಿದ ಅಜರು, ನಾನು ಈ ಬಗ್ಗೆ ಏನು ಮಾತನಾಡುವುದಿಲ್ಲ. ಯಾಕಂದ್ರೆ ಅದು ನಮ್ಮ ಕೈಯಲ್ಲಿ ಇಲ್ಲ. ಕೇಂದ್ರ ಸರ್ಕಾರ ನಿರ್ಧಾರ ಮಾಡಬೇಕು. ರಾಜಕೀಯ ಬಿಕ್ಕಟ್ಟು ಮುಗಿದ ನಂತರ ಕ್ರಿಕೆಟ್ ಆಟ ಶುರುವಾಗಬಹುದು ಎಂದು ಹೇಳಿದ್ರು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Saaksha TV