Saaksha TV

76k Followers

ಹತ್ತು ತಿಂಗಳಿಂದ ಟೀಮ್ ಇಂಡಿಯಾ ಆಟಗಾರರಿಗೆ ಸಂಬಳ ನೀಡದ ಕುಬೇರ ಬಿಸಿಸಿಐ.!

02 Aug 2020.4:51 PM

ಹತ್ತು ತಿಂಗಳಿಂದ ಟೀಮ್ ಇಂಡಿಯಾ ಆಟಗಾರರಿಗೆ ಸಂಬಳ ನೀಡದ ಕುಬೇರ ಬಿಸಿಸಿಐ.!

 ಬಿಸಿಸಿಐ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ. ಹೇಳಿಕೊಳ್ಳಲು ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿ. ವಿಶ್ವ ಕ್ರಿಕೆಟ್ ರಂಗವನ್ನು ಕೈಬೆರಳಿನಲ್ಲಿ ಆಟವಾಡಿಸುವ ತಾಕತ್ತು ಬಿಸಿಸಿಐಗಿದೆ. ಕೇವಲ ಹಣ ಬಲದಿಂದಲೇ ಕ್ರಿಕೆಟ್ ಜಗತ್ತನ್ನು ಆಳುತ್ತಿರುವ ಬಿಸಿಸಿಐಗೆ ಬಡತನವೆಂಬುದೇ ಗೊತ್ತಿಲ್ಲ.

ಆದ್ರೆ ಈಗ ಕೋವಿಡ್-19 ಸೋಂಕು, ಅಂತಾರಾಷ್ಟ್ರೀಯ ಟೂರ್ನಿಗಳು ರದ್ದುಗೊಂಡಿರುವುದನ್ನು ಮುಂದಿಟ್ಟುಕೊಂಡು ಆಟಗಾರರಿಗೆ ವೇತನ ನೀಡದಿರುವುದು ಎಷ್ಟರ ಮಟ್ಟಿಗೆ ಸರಿ ಅನ್ನೋ ಪ್ರಶ್ನೆ ಎದುರಾಗಿದೆ.
ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸುತ್ತಿರುವ ಬಿಸಿಸಿಐಗೆ ಆಟಗಾರರಿಗೆ ವೇತನ ನೀಡದಷ್ಟು ದಾರಿದ್ರ್ಯ ಬಂದಿದೆಯಾ ಅನ್ನೋ ಪ್ರಶ್ನೆಗೆ ಸದ್ಯಕ್ಕಂತೂ ಉತ್ತರವಿಲ್ಲ. ಈ ಬಗ್ಗೆ ಆಟಗಾರರು ಕೂಡ ಬಿಸಿಸಿಐನಲ್ಲಿ ಪ್ರಶ್ನೆ ಮಾಡುವ ಧೈರ್ಯ ಮಾಡುತ್ತಿಲ್ಲ. ಬಿಸಿಸಿಐ ಅನ್ನು ಎದುರು ಹಾಕಿಕೊಂಡ್ರೆ ಕ್ರಿಕೆಟ್ ಬದುಕಿಗೆ ತೊಂದರೆಯಾಗಬಹುದು ಅನ್ನೋ ಆತಂಕ -ಭಯವೂ ಇದೆ. ಹೀಗಾಗಿ ಬಿಸಿಸಿಐ ಹೇಳಿದ್ದನ್ನೇಲ್ಲಾ ಕೇಳಲೇಬೇಕು.
ಹೌದು, ಟೀಮ್ ಇಂಡಿಯಾದ 27 ಆಟಗಾರರಿಗೆ ಕಳೆದ ಹತ್ತು ತಿಂಗಳಿಂದ ವೇತನವನ್ನೇ ನೀಡಿಲ್ಲ. 2019ರ ಡಿಸೆಂಬರ್ ನಿಂದ ಟೀಮ್ ಇಂಡಿಯಾ ಆಡಿದ ಎರಡು ಟೆಸ್ಟ್ ಪಂದ್ಯ, 9 ಏಕದಿನ ಪಂದ್ಯ ಮತ್ತು ಎಂಟು ಟಿ-ಟ್ವೆಂಟಿ ಪಂದ್ಯಗಳ ಶುಲ್ಕವನ್ನೇ ನೀಡಿಲ್ಲ. ತ್ರೈ ಮಾಸಿಕ ಕಂತುಗಳಲ್ಲಿ ವೇತನ ನೀಡಬೇಕಿದ್ದ ಬಿಸಿಸಿಐ ಇನ್ನೂ ಆಟಗಾರರಿಗೆ ನೀಡಿಲ್ಲ.

 ರಾಷ್ಟ್ರೀಯ ಗುತ್ತಿಗೆ ಪಡೆದ ಆಟಗಾರರಿಗೆ ವಾರ್ಷಿಕವಾಗಿ ಒಟ್ಟು 99 ಕೋಟಿ ರೂಪಾಯಿ ನೀಡಬೇಕು. ಅಲ್ಲದೆ ಆಟಗಾರರ ವೇತನವನ್ನು ಗ್ರೇಡ್ ಮಾನದಂಡದಲ್ಲಿ ನೀಡಲಾಗುತ್ತದೆ. ಗ್ರೇಡ್ ಎ+ ಲೀಸ್ಟ್ ನಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಜಸ್ಪ್ರಿತ್ ಬೂಮ್ರಾ ಮೊದಲಾದವರಿದ್ದಾರೆ. ಇವರು ವಾರ್ಷಿಕವಾಗಿ ಏಳು ಕೋಟಿ ರೂಪಾಯಿ ಪಡೆಯುತ್ತಾರೆ.
ಇನ್ನು ಗ್ರೇಡ್ ಎ ಲೀಸ್ಟ್ ನಲ್ಲಿರುವ ಆಟಗಾರರು ಐದು ಕೋಟಿ, ಗ್ರೇಡ್ ಬಿ ಲೀಸ್ಟ್ ನಲ್ಲಿರುವ ಆಟಗಾರರು ಮೂರು ಕೋಟಿ ಮತ್ತು ಗ್ರೇಡ್ ಸಿ ಲೀಸ್ಟ್ ನಲ್ಲಿರುವ ಆಟಗಾರರು ಒಂದು ಕೋಟಿ ರೂಪಾಯಿ ಪಡೆದುಕೊಳ್ಳುತ್ತಾರೆ.
ಇನ್ನು ಪ್ರತಿ ಟೆಸ್ಟ್ ಪಂದ್ಯಕ್ಕೆ 15 ಲಕ್ಷ ರೂಪಾಯಿ, ಪ್ರತಿ ಏಕದಿನ ಪಂದ್ಯಕ್ಕೆ ಆರು ಲಕ್ಷ ರೂಪಾಯಿ ಹಾಗೂ ಪ್ರತಿ ಟಿ-ಟ್ವೆಂಟಿ ಏಕದಿನ ಪಂದ್ಯಕ್ಕೆ ಮೂರು ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಗುತ್ತಿಗೆಯಲ್ಲಿರುವ 27 ಕ್ರಿಕೆಟಿಗರಲ್ಲಿ ಎಂಟು ಕ್ರಿಕೆಟಿಗರು ಹಣ ಪಾವತಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಬಿಸಿಸಿಐನಿಂದ ಯಾವುದೇ ಉತ್ತರವೂ ಬಂದಿಲ್ಲ.
 2018ರಲ್ಲಿ ಬಿಸಿಸಿಐ ಸಾರ್ವಜನಿಕವಾಗಿ ಪ್ರಕಟಿಸಿದ ಬ್ಯಾಲೆನ್ಸ್ ಶೀಟ್ ನಲ್ಲಿ ಮಾರ್ಚ್ ವೇಳೆಗೆ ಸ್ಥಿರ ಠೇವಣಿಗಳಲ್ಲಿ 2992 ಕೋಟಿ ರೂಪಾಯಿ ಸೇರಿದಂತೆ ನಗದು ಮತ್ತು ಬ್ಯಾಂಕ್ ಬ್ಯಾಲೆನ್ಸ್ 5526 ಕೋಟಿ ರೂಪಾಯಿ ಇತ್ತು. ಹಾಗೇ ಪಂದ್ಯಗಳ ನೇರ ಪ್ರಸಾರದ ಹಕ್ಕನ್ನು 2018ರಲ್ಲಿ ಬಿಸಿಸಿಐ 6138.1 ಕೋಟಿ ರೂಪಾಯಿಗೆ ಸ್ಟಾರ್ ವಾಹಿನಿಯ ಜೊತೆ ಐದು ವರ್ಷಗಳ ಒಪ್ಪಂದಕ್ಕೆ ಸಹಿ ಮಾಡಿಕೊಂಡಿತ್ತು.
ಹಾಗಂತ ಬಿಸಿಸಿಐ ಬಳಿ ದುಡ್ಡಿಲ್ಲ ಅಂತ ಕ್ರಿಕೆಟ್ ಆಟಗಾರರಿಗೆ ವೇತನ ನೀಡಿಲ್ಲ. ಬದಲಾಗಿ ಕಳೆದ ಡಿಸೆಂಬರ್ ನಲ್ಲಿ ಬಿಸಿಸಿಐ ಆಡಳಿತದಲ್ಲಿ ಕೆಲವೊಂದು ಬದಲಾವಣೆಗಳಾಗಿದ್ದವು. ಡಿಸೆಂಬರ್‍ನಿಂದ ಮಂಡಳಿಯ ಮುಖ್ಯ ಹಣಕಾಸು ಅಧಿಕಾರಿ ಹಾಗೂ ಕಳೆದ ತಿಂಗಳಿಂದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ಜನರಲ್ ಮ್ಯಾನೇಜರ್ ಇರಲಿಲ್ಲ. ಖಾಲಿಯಾಗಿದ್ದ ಹುದ್ದೆಗಳನ್ನು ಇನ್ನೂ ಭರ್ತಿ ಮಾಡಿಲ್ಲ. ಹೀಗಾಗಿ ತಾಂತ್ರಿಕ ತೊಂದರೆಯಿಂದಾಗಿ ಆಟಗಾರರಿಗೆ ವೇತನ ಸಿಕ್ಕಿಲ್ಲ.
ಒಟ್ಟಿನಲ್ಲಿ ವೃತ್ತಿಪರತೆ ಮತ್ತು ಪಾರದರ್ಶಕವಾಗಿ ಆಡಳಿತ ನಡೆಸುತ್ತಿರುವ ಬಿಸಿಸಿಐನಲ್ಲೇ ಈ ರೀತಿಯಾದ್ರೆ, ಇನ್ನುಳಿದ ಕ್ರೀಡಾ ಸಂಸ್ಥೆಗಳಲ್ಲಿ ಏನು ನಿರೀಕ್ಷೆ ಮಾಡಬಹುದು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Saaksha TV

#Hashtags