News18 ಕನ್ನಡ

399k Followers

ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಶಿಕ್ಷಕರ ವರ್ಗಾವಣೆ ಆರಂಭ; ಸಚಿವ ಸುರೇಶ್ ಕುಮಾರ್

04 Nov 2020.1:19 PM

ಬೆಂಗಳೂರು(ನ.04): ಶಾಲೆ ಆರಂಭಿಸುವ ಬಗ್ಗೆ ಇಂದು ನಡೆದ ಶಿಕ್ಷಣ ಇಲಾಖೆಯ ಸಭೆಯಲ್ಲಿ ಸಚಿವ ಸುರೇಶ್​ ಕುಮಾರ್​ ಶಿಕ್ಷಕರ ವರ್ಗಾವಣೆ ವಿಚಾರವಾಗಿಯೂ ಚರ್ಚೆ ನಡೆಸಿದ್ದಾರೆ. ಸಭೆ ಮುಗಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್, ಶಿಕ್ಷಣ ಇಲಾಖೆ ಅಧಿಕಾರಿಗಳು, ಪಿಯು ಬೋರ್ಡ್ ನಿರ್ದೇಶಕರು ಇತರೆ ಅಧಿಕಾರಿಗಳ ಜೊತೆ ಸಮಾಲೋಚನಾ ನಡೆದಿದೆ. ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಪದಾಧಿಕಾರಿಗಳು ಭಾಗಿಯಾಗಿದ್ದರು. ಎರಡು‌ ವಿಚಾರಗಳ ಬಗ್ಗೆ ಇಂದು ವಿಸ್ತೃತವಾದ ಸಭೆ ನಡೆಸಲಾಯಿತು. ಮೊದಲನೆಯದು ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಬಗ್ಗೆ, ಎರಡನೆಯದು ಶಾಲೆ ಆರಂಭಿಸುವ ಬಗ್ಗೆ. ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಬೇರೆ ಬೇರೆ ಕಾರಣಗಳಿಂದ ವರ್ಗಾವಣೆ ಮುಂದೆ ಹೋಗ್ತಿತ್ತು. ಚುನಾವಣಾ ನೀತಿ ಸಂಹಿತಿಯಿಂದ ವರ್ಗಾವಣೆ ಆಗಲಿಲ್ಲ. ಈ ಕುರಿತು ಇಂದು ಚರ್ಚೆ ನಡೆಸಿದ್ದೇವೆ. ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭವಾಗುತ್ತದೆ. ವರ್ಗಾವಣೆ ದಿನಾಂಕ ಶೀಘ್ರದಲ್ಲೇ ತಿಳಿಸಲಾಗುತ್ತೆ ಎಂದು ಹೇಳಿದರು.

ಇನ್ನು, ಇದೇ ವೇಳೆ ಶಾಲೆಗಳ ಪ್ರಾರಂಭದ ಬಗ್ಗೆ ಇಲಾಖೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂಬುದಾಗಿ ಸಚಿವರು ತಿಳಿಸಿದರು. ಶಾಲೆ ಆರಂಭದ ಬಗ್ಗೆ ಮಾಹಿತಿ ಸಂಗ್ರಹ ಮಾಡಿದ್ದೇವೆ ಬೇರೆ ರಾಜ್ಯಗಳಲ್ಲಿ ಹೇಗೆ ಆರಂಭವಾಗಿದೆ..? ಜೊತೆಗೆ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ಅವಲೋಕನ ಮಾಡಿದ್ದೇವೆ. ಮುಂದಿನ‌ ಎರಡು ದಿನಗಳ ಕಾಲ ಸಮಾಜ ಕಲ್ಯಾಣ ಇಲಾಖೆ, ಬಿಬಿಎಂಪಿ, ಆರೋಗ್ಯ ಇಲಾಖೆ, ಎಲ್ಲಾ ತಾಲೂಕುಗಳ ಎಸ್ ಡಿಎಂಸಿ ಪ್ರತಿನಿಧಿಗಳ ಜೊತೆ ಚರ್ಚೆ ನಡೆಸಲಾಗುತ್ತದೆ. ಚರ್ಚೆಯ ಆಧಾರದ ಮೇಲೆ ಅಭಿಪ್ರಾಯ ಕ್ರೂಢಿಕರಿಸಲಾಗುತ್ತೆ. ನಂತರ ವರದಿಯನ್ನ ಸರ್ಕಾರಕ್ಕೆ ಸಲ್ಲಿಸುತ್ತೇವೆ ಎಂದರು. Hasanamba Temple: ನಾಳೆಯಿಂದ ಹಾಸನಾಂಬೆ ದೇವಾಲಯ ಓಪನ್; ಭಕ್ತರ ಪ್ರವೇಶಕ್ಕೆ ನಿಷೇಧ

ಮುಂದುವರೆದ ಸಚಿವ ಸುರೇಶ್ ಕುಮಾರ್, ಕಿತ್ತೂರು ರಾಣಿ ಚೆನ್ನಮ್ಮ, ಆಶ್ರಮ ಶಾಲೆಗಳ ಬಗ್ಗೆ ಸಂಬಂಧಪಟ್ಟವರ ಬಳಿ ಚರ್ಚೆ ಮಾಡಲಾಗುತ್ತಿದೆ. ನಿನ್ನೆ ಡಿಡಿಪಿಐ, ಬಿಇಓಗಳ ಜೊತೆ ಚರ್ಚೆ ಆಗಿದೆ. ಶಿಕ್ಷಕರ ಸಂಘದ ಅಧ್ಯಕ್ಷರ ಜೊತೆ ಚರ್ಚೆ ನಡೆಸಿದ್ದೇವೆ. ಮೈಸೂರು, ಚಾಮರಾಜನಗರ, ಕೊಡಗು, ಮಂಡ್ಯ ಜಿಲ್ಲೆಯ ಪ್ರತಿನಿಧಿಗಳೂ ಕೂಡ ಅಲ್ಲಿ ಚರ್ಚೆ ನಡೆಸುತ್ತಿದ್ದಾರೆ. ಅವರ ಅಭಿಪ್ರಾಯವನ್ನು ಕೂಡ ನಾವು ಸ್ವೀಕರಿಸುತ್ತೇವೆ. ಈ ಎಲ್ಲಾ ವರದಿ ಶಿಕ್ಷಣ ಇಲಾಖೆ ತಲುಪಿದ ಬಳಿಕ ಸರ್ಕಾರಕ್ಕೆ ಮಾಹಿತಿ ನೀಡುತ್ತೇವೆ. ನಂತರ ಶಾಲೆ ತೆರೆಯೋ ಬಗ್ಗೆ ಸರ್ಕಾರ ನಿರ್ಧರಿಸಲಿದೆ ಎಂದು ಹೇಳಿದರು.

ಇನ್ನು, ಮಳೆ ಹಾನಿಯಾದ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ. ಆ ವರದಿ ಆಯುಕ್ತರ ಬಳಿ ತಲುಪಲಿದೆ. ಯೂಟ್ಯೂಬ್, ಚಂದನ ವಾಹಿನಿ, ರೆಕಾರ್ಟಿಂಗ್ ಮೂಲಕ ಸರ್ಕಾರಿ‌ ಶಾಲಾ-ಕಾಲೇಜು ಮಕ್ಕಳಿಗೆ ಪಾಠ ಮಾಡುತ್ತಿದ್ದೇವೆ. ಸಂವೇದನಾ ಮೂಲಕ ಮಕ್ಕಳಿಗೆ ಪಾಠ ನಡೆಯುತ್ತಿದೆ. ಡಿಸೆಂಬರ್ ವೇಳೆಗೆ ಪಾಠ ಮುಗಿಸುವ ಕಾರ್ಯ ನಡೆಯಲಿದೆ. ಸದ್ಯಕ್ಕೆ ತಾತ್ಕಾಲಿಕವಾಗಿರುವ ವಿದ್ಯಾಗಮ ಯೋಜನೆಯನ್ನು ಮುಂದುವರೆಸುವ ಬಗ್ಗೆ ಚಿಂತನೆ ನಡೆಸಲಾಗುತ್ತದೆ. ಪೋಷಕರ ಆತಂಕ, ಮಕ್ಕಳ ಹಿತರಕ್ಷಣೆ, ಯೋಗಕ್ಷೇಮ- ಎಲ್ಲಾ ರೀತಿಯ ಸಮಾಲೋಚನೆ ಬಳಿಕ ಶಾಲೆ ಆರಂಭಿಸುವ ಬಗ್ಗೆ ಒಮ್ಮತಕ್ಕೆ ಬರಲಾಗುತ್ತದೆ ಎಂದರು.
Disclaimer

Disclaimer

This story is auto-aggregated by a computer program and has not been created or edited by Dailyhunt Publisher: News18 Kannada

#Hashtags