ಪ್ರಜಾವಾಣಿ

1.5M Followers

ಡಿಜಿಟಲ್ ವೋಟರ್ ಐಡಿ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ?

25 Jan 2021.4:55 PM

ನವದೆಹಲಿ: ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಮತದಾರರ ಗುರುತಿನ ಚೀಟಿಯ ಡಿಜಿಟಲ್ ಆವೃತ್ತಿಯನ್ನು ಸೋಮವಾರ ಬಿಡುಗಡೆ ಮಾಡಿದರು.

ಇಂದಿನಿಂದ (ಸೋಮವಾರ) ಹೊಸ ಹಾಗೂ ಈಗಾಗಲೇ ನೋಂದಾಯಿತ ಮತದಾರರು, ತಮ್ಮ ಮತದಾರರ ಫೋಟೊ ಗುರುತಿನ ಚೀಟಿಯ ಡಿಜಿಟಲ್ ಆವೃತ್ತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಹಳೆಯ ಹಾಗೂ ಹೊಸ ಮತದಾರರಿಗೆ e-EPIC (Elector Photo Identity Card) ಎರಡು ಹಂತಗಳಲ್ಲಿ ಮತದಾರರ ಗುರುತಿನ ಚೀಟಿ ಲಭ್ಯವಾಗಲಿದೆ. ಮೊದಲ ಹಂತದಲ್ಲಿ ಜನವರಿ 25ರಿಂದ 31ರ ವರೆಗೆ ಹೊಸದಾಗಿ ನೋಂದಾಯಿತ ಮತದಾರರು, ಅಂದರೆ ಈ ಹಿಂದೆ ಯಾವುದೇ ನಿರ್ದಿಷ್ಟ ಮತದಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳದವರಿಗೆ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಎರಡನೇ ಹಂತದಲ್ಲಿ ಫೆಬ್ರವರಿ 1ರಿಂದ ಈ ಹಿಂದೆ ಮತ ಚಲಾವಣೆ ಮಾಡಿದವರಿಗೂ ಡಿಜಿಟಲ್ ಆವೃತ್ತಿಯು ಲಭ್ಯವಾಗಲಿದೆ.

: ಮತದಾನದ ಹಕ್ಕು ಗೌರವಿಸಬೇಕು: ರಾಷ್ಟ್ರಪತಿ ಕೋವಿಂದ್‌

ಡೌನ್‌ಲೋಡ್ ಮಾಡುವುದು ಹೇಗೆ?
ಮತದಾರರು voterportal.eci.gov.in ಅಥವಾ www.nvsp.in ವೆಬ್‌ಸೈಟ್‌ಗೆ ಲಾಗಿನ್ ಆಗುವ ಮೂಲಕ ಮತದಾರರ ಗುರುತಿನ ಚೀಟಿಯ ಡಿಜಿಟಲ್ ಆವೃತ್ತಿಯನ್ನು ಪಡೆಯಬಹುದಾಗಿದೆ. ಗೂಗಲ್ ಹಾಗೂ ಆಯಪಲ್ ಪ್ಲೇ ಸ್ಟೋರ್‌ಗಳಲ್ಲಿ ಲಭ್ಯವಿರುವ Voter Helpline ಆಯಪ್‌ನಿಂದಲೂ ಡಿಜಿಟಲ್ ವೋಟರ್ ಐಡಿ ಕಾರ್ಡ್ ಪಡಯಬಹುದಾಗಿದೆ.

ಇದುವರೆಗೆ ಮತದಾರರ ಗುರುತಿನ ಚೀಟಿ ಪಡೆಯದ ಹೊಸತಾಗಿ ನೋಂದಾಯಿತ ಮತದಾರರು, ಫಾರ್ಮ್ 6ರಲ್ಲಿ ಉಲ್ಲೇಖಿಸಿರುವ ನೊಂದಾಯಿತ ಮೊಬೈಲ್ ಸಂಖ್ಯೆಯನ್ನು ಹೊಂದಿರಬೇಕು. ಅದೇ ಹೊತ್ತಿಗೆ ನೋಂದಾಯಿತ ಮತದಾರರು ಡಿಜಿಟಲ್ ವೋಟರ್ ಐಡಿ ಕಾರ್ಡ್ ಪಡೆಯುವುದಕ್ಕಾಗಿ ಮೊಬೈಲ್ ಸಂಖ್ಯೆಯ ಜೊತೆಗೆ ಮತದಾರರ ಗುರುತಿನ ಚೀಟಿಯ ಸಂಖ್ಯೆಯನ್ನು ನಮೂದಿಸಬೇಕಾಗುತ್ತದೆ.

ಇ-ಎಲೆಕ್ಟರ್ ಫೋಟೊ ಗುರುತಿನ ಚೀಟಿಯು ಎಡಿಟ್ ಮಾಡಲಾಗದ ಮತದಾರರ ಡಿಜಿಟಲ್ ಗುರುತಿನ ಚೀಟಿಯಾಗಿದೆ. ಇದನ್ನು ಮೊಬೈಲ್ ಫೋನ್ ಅಥವಾ ವೈಯಕ್ತಿಕ ಕಂಪ್ಯೂಟರ್‌ಗಳಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಅಲ್ಲದೆ ಡಿಜಿಟಲ್ ಲಾಕರ್‌ನಂತಹ ಸೌಲಭ್ಯಗಳಲ್ಲಿ ಸೇವ್ ಮಾಡಿಡಬಹುದಾಗಿದೆ. ಹಾಗೆಯೇ ಪಿಡಿಆಫ್ ರೂಪದಲ್ಲಿ ಮುದ್ರಿಸಲು ಸಾಧ್ಯವಾಗಲಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

ಸಾಮಾನ್ಯ ಮತದಾರರ ಗುರುತಿನ ಚೀಟಿಯನ್ನು ವಿತರಿಸಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ವೇಗವಾಗಿ ತಲುಪಿಸಲು ಹಾಗೂ ಸುಲಭವಾಗಿ ದಾಖಲೆಗಳನ್ನು ಒದಗಿಸಲು ಡಿಜಿಟಲ್ ಆವೃತ್ತಿಯು ಹೆಚ್ಚು ಅನುಕೂಲವಾಗಲಿದೆ. ಇನ್ನು ಮುಂದೆ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಡ್ರೈವಿಂಗ್ ಲೈಸನ್ಸ್‌ನಂತೆಯೇ ಮತದಾರರ ಗುರುತಿನ ಚೀಟಿ ಡಿಜಿಟಲ್ ಆವೃತ್ತಿಗಳಲ್ಲಿ ಡೌನ್‌ಲೋಡ್ ಮಾಡಲು ಲಭ್ಯವಿರುತ್ತದೆ.

1993ನೇ ಇಸವಿಯಲ್ಲಿ ಪರಿಚಯಿಸಲಾದ ಮತದಾರರ ಫೋಟೊ ಗುರುತಿನ ಚೀಟಿಯು ವ್ಯಕ್ತಿಯ ಗುರುತು ಹಾಗೂ ವಿಳಾಸದ ಪುರಾವೆಯಾಗಿ ಪರಿಗಣಿಸಲಾಗುತ್ತದೆ. ಚುನಾವಣಾ ಆಯೋಗದ ವಾರ್ಷಿಕೋತ್ಸವದ ಅಂಗವಾಗಿ ಡಿಜಿಟಲ್ ಆವೃತ್ತಿಯನ್ನು ಬಿಡುಗಡೆಗೊಳಿಸಲಾಗಿದೆ. ಚುನಾವಣಾ ಆಯೋಗವು 1950ನೇ ಇಸವಿಯ ಜನವರಿ 25ರಂದು ಅಸ್ತಿತ್ವಕ್ಕೆ ಬಂದಿತ್ತು. ಕಳೆದ ಕೆಲವು ವರ್ಷಗಳಿಂದ ಇದೇ ದಿನವನ್ನು ರಾಷ್ಟ್ರೀಯ ಮತದಾರರ ದಿನವಾಗಿಯೂ ಆಚರಿಸಲಾಗುತ್ತದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Prajavani