ಪ್ರಜಾವಾಣಿ

1.5M Followers

ಹೈಕೋರ್ಟ್‌ಗೆ 'ಶಿಕ್ಷಕರ ವರ್ಗಾವಣೆ'!

08 Feb 2021.06:07 AM

ಬೆಂಗಳೂರು: ಕಳೆದ ಸಾಲಿನಲ್ಲಿ ಕಡ್ಡಾಯ ಮತ್ತು ಹೆಚ್ಚುವರಿ ವರ್ಗಾವಣೆ 'ಶಿಕ್ಷೆ'ಗೆ ಒಳಗಾದ ಶಿಕ್ಷಕರಿಗೆ ಪ್ರಸಕ್ತ ಸಾಲಿನಲ್ಲಿ ವಿಶೇಷ ಆದ್ಯತೆ ನೀಡುವ ತನ್ನ ಅಧಿಸೂಚನೆಯನ್ನು ರದ್ದುಪಡಿಸಿದ ಕರ್ನಾಟಕ ಆಡಳಿತ ನ್ಯಾಯಮಂಡಳಿಯ (ಕೆಎಟಿ) ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಹೈಕೋರ್ಟ್‌ ಮೆಟ್ಟಿಲೇರಿದೆ.

2019-20ರಲ್ಲಿ ಕಡ್ಡಾಯ ಮತ್ತು ಹೆಚ್ಚುವರಿ ವರ್ಗಾವಣೆಗೆ ಒಳಗಾದವರಿಗೆ ಮೊದಲು ಕೌನ್ಸೆಲಿಂಗ್‌ ನಡೆಸಿ ವರ್ಗಾವಣೆಯಲ್ಲಿ ಆದ್ಯತೆ ನೀಡುವ ನಿಯಮ 'ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಕಾಯ್ದೆ-2020'ಯಲ್ಲಿ ಇಲ್ಲ. ಆದರೆ, ನ. 11
ರಂದು ಹೊರಡಿಸಿರುವ ವರ್ಗಾವಣೆ ಅಧಿಸೂಚನೆಯಲ್ಲಿ ರಾಜ್ಯ ಸರ್ಕಾರ ಈ ಅವಕಾಶ ಕಲ್ಪಿಸಿತ್ತು.

'ಕಾಯ್ದೆಯಲ್ಲಿ ಇಲ್ಲದಿದ್ದರೂ 2019-20ರ ಸಾಲಿನವರಿಗೆ ಆದ್ಯತೆ ನೀಡುವುದಾದರೆ ನಮಗೂ ಆದ್ಯತೆ ನೀಡಬೇಕು' ಎಂದು 2016-17ರಲ್ಲಿ ಹೆಚ್ಚುವರಿ ವರ್ಗಾವಣೆಗೆ ಒಳಗಾಗಿರುವ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಹಾಲೇಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಬಿ.ಎನ್‌.

ಮಹೇಶ್ವರಪ್ಪ ಸೇರಿ ಎಂಟು ಶಿಕ್ಷಕರು ಕೆಎಟಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಕೆಎಟಿ, ವರ್ಗಾವಣೆ ಅಧಿಸೂಚನೆಯನ್ನೇ ಡಿ. 31ರಂದು ರದ್ದುಪಡಿಸಿತ್ತು.

ಆದರೆ, ವಿಶೇಷ ಆದ್ಯತೆ ನೀಡುವ ತನ್ನ ನಿಲುವನ್ನು ಸಮರ್ಥಿಸಿ ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿದೆ. 'ವಿಶೇಷ ಪ್ರಕರಣವೆಂದು ಭಾವಿಸಿ 2019-20ರ ಸಾಲಿನ ಕಡ್ಡಾಯ ಮತ್ತು ಹೆಚ್ಚುವರಿ ವರ್ಗಾವಣೆಗೊಂಡವರಿಗೆ ಈ ಬಾರಿ ಆದ್ಯತೆ ನೀಡಲಾಗಿದೆ. ವರ್ಗಾವಣೆ ಕೋರಿ 70 ಸಾವಿರಕ್ಕೂ ಹೆಚ್ಚು ಶಿಕ್ಷಕರು ಅರ್ಜಿ ಸಲ್ಲಿಸಿದ್ದಾರೆ. ವರ್ಗಾವಣೆ ವಿಚಾರದಲ್ಲಿ ಸರ್ಕಾರದ ತೀರ್ಮಾನ ತೆಗೆದುಕೊಂಡಿದೆ. ಹೀಗಾಗಿ ಈಗಾಗಲೇ ಹೊರಡಿಸಿರುವ ಅಧಿಸೂಚನೆಯಂತೆ ಪ್ರಕ್ರಿಯೆ ಮುಂದುವರಿಸಲು ಅನುಮತಿ ನೀಡಬೇಕು' ಎಂದು ಮೇಲ್ಮನವಿಯಲ್ಲಿ ಸರ್ಕಾರ ಪ್ರತಿಪಾದಿಸಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ಕುಮಾರ್‌, 'ಕಳೆದ ಸಾಲಿನಲ್ಲಿ ಕಡ್ಡಾಯ ವರ್ಗಾವಣೆಯಿಂದ ಯಾರು ಸಂಕಷ್ಟಕ್ಕೆ ಒಳಗಾಗಿದ್ದರೋ ಆ ಸಂಕಷ್ಟ ಮನಗಂಡು ಈ ವರ್ಷ ಒಂದು ಅವಕಾಶಕ್ಕೋಸ್ಕರ ಈ ವಿಶೇಷ ಆದೇಶ ಮಾಡಿದ್ದೇವೆ. ಅದನ್ನು ಎಲ್ಲ ಶಿಕ್ಷಕರು ಅರ್ಥ ಮಾಡಿಕೊಳ್ಳಬೇಕು' ಎಂದರು.

'50 ರಿಂದ 55 ವಯಸ್ಸಿನ ಶಿಕ್ಷಕಿಯರ ಪೈಕಿ ಅನೇಕರು ಕಡ್ಡಾಯ, ಹೆಚ್ಚುವರಿ ವರ್ಗಾವಣೆಯಿಂದಾಗಿ ಮನೆಯಿಂದ 350ರಿಂದ 400 ಕಿ.ಮೀ ದೂರ ಇದ್ದಾರೆ. ಅನೇಕರಿಗೆ ತೀವ್ರ ಅನಾರೋಗ್ಯಕ್ಕೆ ಒಳಗಾದ ಮಕ್ಕಳಿದ್ದಾರೆ. ಆ ಕಷ್ಟ ಕಂಡು ಸದುದ್ದೇಶದಿಂದ ಈ ಕೆಲಸಕ್ಕೆ ಮುಂದಾಗಿದ್ದೇವೆ' ಎಂದು ಹೇಳಿದರು.

'ವಿಧಾನಸಭೆ ಮತ್ತು ವಿಧಾನಪರಿಷತ್‌ನಲ್ಲಿ ವರ್ಗಾವಣೆಯ ಕಾಯ್ದೆಯ ಮಸೂದೆ ಮಂಡಿಸುವ ಸಂದರ್ಭದಲ್ಲಿಯೇ ಈ ವಿಷಯವನ್ನು ಪ್ರಸ್ತಾಪಿಸಿದ್ದೆ. ಎರಡೂ ಸದನ ಅದನ್ನು ಸ್ವಾಗತಿಸಿತ್ತು. ಆದರೆ ಕೆಲವರು ಅದನ್ನು
ಪ್ರಶ್ನಿಸಿದ್ದಾರೆ. ಹೀಗಾಗಿ, ಹೈಕೋರ್ಟ್‌ಗೆ ನಾವು ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತಿದ್ದೇವೆ' ಎಂದೂ ವಿವರಿಸಿದರು.

2016- 17ರಲ್ಲಿ ಹೆಚ್ಚುವರಿ ಕಾರಣಕ್ಕೆ ಹೊರ ತಾಲ್ಲೂಕಿಗೆ ವರ್ಗಾವಣೆಯಾದ ಇತರ ಶೈಕ್ಷಣಿಕ ವಿಭಾಗಗಳಲ್ಲಿರುವ ಶಿಕ್ಷಕರು ಕೂಡಾ, ವಿಶೇಷ ಆದ್ಯತೆ ನೀಡಿರುವ ಕ್ರಮವನ್ನು ಪ್ರಶ್ನಿಸಿ ಆಯಾ ವಿಭಾಗದ ಕೆಎಟಿ ಮೊರೆ ಹೋಗಿದ್ದಾರೆ. 'ಯಥಾಸ್ಥಿತಿ' ಕಾಪಾಡುವಂತೆ ಡಿ. 26 ಕ್ಕೆ ಆದೇಶ ನೀಡಿದ್ದ ಕಲಬುರ್ಗಿ ಪೀಠ, ವಿಚಾರಣೆಯನ್ನು ಫೆ. 17ಕ್ಕೆ ಮುಂದೂಡಿದೆ.

***

ಸಂಕಷ್ಟದಲ್ಲಿರುವ ಶಿಕ್ಷಕರಿಗೆ ಒಂದು ಬಾರಿಗೆ ಮಾತ್ರ ಅವಕಾಶ. ಮೇಲ್ಮನವಿಯನ್ನು ಹೈಕೋರ್ಟ್‌ ಆಲಿಸಿ, ಸ್ವೀಕರಿಸಬಹುದೆಂಬ ಆಶಾಭಾವನೆ ನಮ್ಮದು

- ಎಸ್‌. ಸುರೇಶ್‌ಕುಮಾರ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Prajavani