ಈ ಸಂಜೆ

802k Followers

ಶಾಲೆಗಳ ಆರಂಭದ ಕುರಿತು ಮತ್ತೊಮ್ಮೆ ಸ್ಪಷ್ಟನೆ ನೀಡಿದ ಸುರೇಶ್ ಕುಮಾರ್

23 Dec 2020.11:42 AM

ಬೆಂಗಳೂರು,ಡಿ.23- ಈಗಾಗಲೇ ನಿರ್ಧಾರವಾಗಿರುವಂತೆ ಜ.1ರಿಂದಲೇ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ರಾಜ್ಯಾದ್ಯಂತ ಆರಂಭವಾಗಲಿವೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್‍ಕುಮಾರ್ ಮತ್ತೊಮ್ಮೆ ಪುನರುಚ್ಚಿರಿಸಿದ್ದಾರೆ.
ಶಾಲಾಕಾಲೇಜುಗಳನ್ನು ತೆರೆಯುವ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಕ್ಷೇತ್ರ ಶಿಕ್ಷಣಾಕಾರಿ(ಬಿಇಒ)ಗಳ ಜೊತೆ ವಿಡಿಯೋ ಕಾನರೆನ್ಸ್ ಆರಂಭಕ್ಕೂ ಮುನ್ನ ಅವರು ಸುದ್ದಿಗಾರರ ಜೊತೆ ಮಾತನಾಡಿದರು.

ಕೊರೊನಾ ರೂಪಾಂತರ ವೈರಸ್ ಬಗ್ಗೆ ತಾಂತ್ರಿಕ ಸಲಹಾ ಸಮಿತಿ ಹಾಗೂ ತಜ್ಞರ ಜೊತೆ ಚರ್ಚೆ ಮಾಡಲಾಗಿದೆ. ಹೀಗಾಗಿ ಈಗಾಗಲೇ ನಿಗದಿಯಾಗಿರುವಂತೆ ಜನವರಿ 1ರಿಂದಲೇ 10 ಮತ್ತು ದ್ವಿತೀಯ ಪಿಯುಸಿ ತರಗತಿಗಳು ಪ್ರಾರಂಭವಾಗಲಿವೆ.

ಹೊಸ ವೈರಸ್ ಬಗ್ಗೆ ಜನತೆ ಆತಂಕಕ್ಕೆ ಒಳಗಾಗಬೇಕಾದ ಅವಶ್ಯಕತೆಯಿಲ್ಲ. ಸರ್ಕಾರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಏನೇನು ಕ್ರಮ ಕೈಗೊಳ್ಳಬೇಕೊ ಎಲ್ಲವನ್ನೂ ತೆಗೆದುಕೊಂಡಿದ್ದೇವೆ. ಸರ್ಕಾರದ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.

ಕೋವಿಡ್‍ನ ಹೊಸ ಸೋಂಕು ಹಬ್ಬುತ್ತಿರುವ ಬಗ್ಗೆ ಸ್ವತಃ ನಾನೇ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಹರ್ಷವರ್ಧನ್ ಅವರಿಂದ ಮಾಹಿತಿ ಪಡೆದಿದ್ದೇನೆ. ಅವರು ಕೂಡ ಆತಂಕಕ್ಕೆ ಒಳಗಾಗಬಾರದೆಂದು ತಿಳಿಸಿದ್ದಾರೆ. ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕೆಂದು ಸಲಹೆ ಮಾಡಿದ್ದಾರೆ. ಅದರಂತೆ ನಾವು ಕ್ರಮ ಕೈಗೊಳ್ಳಲಿದ್ದೇವೆ ಎಂದರು.

ವೈರಸ್ ಬಗ್ಗೆ ಪ್ರತಿದಿನ ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಅಭಿಪ್ರಾಯವನ್ನು ಪಡೆಯುತ್ತಿದ್ದೇವೆ. ತಜ್ಞರು ಯಾವ ಯಾವ ಕ್ರಮಗಳನ್ನು ಅನುಸರಿಸಬೇಕೆಂದು ಸೂಚನೆ ನೀಡುತ್ತಾರೋ ಅವೆಲ್ಲವನ್ನೂ ಪಾಲನೆ ಮಾಡುತ್ತೇವೆ. ಗಾಳಿ ಸುದ್ದಿ ಅಥವಾ ವದಂತಿಗಳ ಬಗ್ಗೆ ಪೋಷಕರು ಕಿವಿಗೊಡಬಾರದೆಂದು ಸುರೇಶ್‍ಕುಮಾರ್ ಮನವಿ ಮಾಡಿದರು.

ವಿದ್ಯಾರ್ಥಿಗಳ ಆರೋಗ್ಯ ಮತ್ತು ಅವರ ರಕ್ಷಣೆ ಸರ್ಕಾರದ ಮೊದಲ ಆದ್ಯತೆಯಾಗಿದೆ. ನಾವು ಬಲವಂತವಾಗಿ ವಿದ್ಯಾರ್ಥಿಗಳು ಶಾಲಾಕಾಲೇಜುಗಳಿಗೆ ಬರಲೇಬೇಕೆಂದು ಸೂಚನೆ ಕೊಟ್ಟಿಲ್ಲ. ಯಾವುದೇ ವಿದ್ಯಾರ್ಥಿ ತರಗತಿಗೆ ಬರಬೇಕಾದರೆ ಪೋಷಕರ ಅನುಮತಿ ಕಡ್ಡಾಯಗೊಳಿಸಿದ್ದೇವೆ. ಸರ್ಕಾರದ ನಿಯಮಗಳನ್ನು ಚಾಚುತಪ್ಪದೆ ಪಾಲನೆ ಮಾಡಲೇಬೇಕಾಗುತ್ತದೆ ಎಂದರು.
ಶಾಲೆ ಆರಮಭದ 72 ಗಂಟೆಗೂ ಮುನ್ನ ಶಿಕ್ಷಕರು, ವಿದ್ಯಾರ್ಥಿಗಳ ಕೋವಿಡ್ ಮತ್ತು ಆರ್‍ಟಿಪಿಸಿಆರ್ ಪರೀಕ್ಷೆ ಮಾಡಿಸಲು ಸೂಚಿಸಿದೆ.

55 ವರ್ಷ ಮೇಲ್ಪಟ್ಟ ಶಿಕ್ಷಕರು ಫೇಸ್‍ಶೀಲ್ಡ್ ಧರಿಸಿಯೇ ಕೆಲಸಕ್ಕೆ ಹಾಜರಾಗಬೇಕು. ಶಾಲೆಗಳಲ್ಲಿ ಬಿಸಿಯೂಟ, ಕ್ಷೀರಭಾಗ್ಯ ವ್ಯವಸ್ಥೆ ಇರುವುದಿಲ್ಲ. ಶಾಲೆಗಳಿಗೆ ಬರಲು ಆಗದಿರುವ ಮಕ್ಕಳು ಮನೆಯಲ್ಲಿಯೇ ಓದಬಹುದು ಎಂದು ಮಾಹಿತಿ ನೀಡಿದರು.
ನಾಳೆ ಡಿಡಿಪಿಐ ಮತ್ತು ಡಿಡಿಪಿಯು ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಾಲಾ ಕಾಲೇಜುಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲಾಗುತ್ತಿದ್ದು ಸರ್ಕಾರದ ಮಾರ್ಗಸೂಚಿ ಬಗ್ಗೆ ತಿಳಿಸಿಕೊಡಲಾಗುವುದು. ಶಾಲೆಗಳಲ್ಲಿ ಐಸೋಲೇಷನ್ ಕೊಠಡಿ ವ್ಯವಸ್ಥೆಯೂ ಇರಲಿದೆ ಎಂದರು.

ಈಗಾಗಲೇ ರಾಜ್ಯ ಸರ್ಕಾರ ಕೋವಿಡ್ ಹಿನ್ನೆಲೆಯಲ್ಲಿ ಮುಚ್ಚಲ್ಪಟ್ಟಿದ್ದ ಶಾಲಾಕಾಲೇಜುಗಳ ಪೈಕಿ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳನ್ನು ಜ.1ರಿಂದ ಆರಂಭಿಸಲು ತೀರ್ಮಾನಿಸಿದೆ. ಇದರ ನಡುವೆ ಕೊರೊನಾ ವೈರಸ್ ಮತ್ತೆ ಹೊಸ ಸ್ವರೂಪದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆ ಎಚ್ಚರಿಕೆ ನೀಡಿದೆ.

ಬ್ರಿಟನ್‍ನಲ್ಲಿ ಈಗ ಅಲ್ಲೋಲಕಲ್ಲೋಲವೇ ಸೃಷ್ಟಿಯಾಗಿದೆ. ಹೀಗಾಗಿ ಶಾಲಾಕಾಲೇಜುಗಳ ಆರಂಭಕ್ಕೂ ಮುನ್ನ ತೆಗೆದುಕೊಳ್ಳುವ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸಚಿವ ಸುರೇಶ್‍ಕುಮಾರ್ ಅವರು ಕ್ಷೇತ್ರ ಶಿಕ್ಷಣಾಕಾರಿಗಳ ಜೊತೆ ವಿಡಿಯೋ ಕಾನರೆನ್ಸ್ ನಡೆಸಿದರು.

ಶಾಲಾಕಾಲೇಜುಗಳನ್ನು ಆರಂಭಕ್ಕೂ ಮುನ್ನ ಕಡ್ಡಾಯವಾಗಿ ಸ್ಯಾನಿಟೈಸ್ ಮಾಡುವುದು, ಶಾಲಾಕಾಲೇಜುಗಳವರು ಸೇರಿದಂತೆ ವಿದ್ಯಾರ್ಥಿಗಳು ಥರ್ಮಲ್ ಸ್ಕ್ಯಾನಿಂಗ್ ಮಾಡಿಸುವುದು, ಒಂದು ಡೆಸ್ಕ್‍ನಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಕೂರಿಸುವುದು, ಸಾಮಾಜಿಕ ಅಂತರ, ಶಾಲಾ ಕಾಲೇಜು ಆವರಣದಲ್ಲಿ ಯಾವುದೇ ರೀತಿಯ ತಿಂಡಿ ಪದಾರ್ಥಗಳ ಮಾರಾಟಕ್ಕೆ ಅವಕಾಶ ನೀಡದಿರುವುದು, ಶೀತ, ಕೆಮ್ಮು, ಜ್ವರ ಇತ್ಯಾದಿ ರೋಗ ಲಕ್ಷಣಗಳು ಕಂಡುಬಂದ ವಿದ್ಯಾರ್ಥಿಗಳಿಗೆ ತಕ್ಷಣವೇ ಪೋಷಕರಿಗೆ ಸೂಚನೆ ಸೇರಿದಂತೆ ಹಲವು ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಕೈಗೊಳ್ಳುವಂತೆ ಸೂಚನೆ ನೀಡಿದರು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: eesanje

#Hashtags