TV9 ಕನ್ನಡ

371k Followers

Tax on EPF Interest: ಪಿಎಫ್ ಮೇಲಿನ ಬಡ್ಡಿಗೆ ವರ್ಷಕ್ಕೆ 5 ಲಕ್ಷ ರೂ. ತನಕ ತೆರಿಗೆ ವಿನಾಯಿತಿ ಘೋಷಿಸಿದ ಕೇಂದ್ರ

24 Mar 2021.5:57 PM

ನವದೆಹಲಿ: ಉದ್ಯೋಗಿಗಳು ಜಮೆ ಮಾಡಿದ ಭವಿಷ್ಯ ನಿಧಿ (ಪ್ರಾವಿಡೆಂಟ್ ಫಂಡ್) ಮೊತ್ತದ ಮೇಲಿನ ವಾರ್ಷಿಕ ಬಡ್ಡಿ ಗಳಿಕೆಗೆ ಇರುವ ತೆರಿಗೆ ವಿನಾಯಿತಿ ಮೊತ್ತದ ಮಿತಿಯನ್ನು ನಿರ್ದಿಷ್ಟ ಪ್ರಕರಣಗಳಲ್ಲಿ 5 ಲಕ್ಷ ರೂಪಾಯಿ ತನಕ ಏರಿಕೆ ಮಾಡುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರದಂದು ಲೋಕಸಭೆಯಲ್ಲಿ ಹೇಳಿದ್ದಾರೆ. ಕೇಂದ್ರ ಬಜೆಟ್ ಮಂಡಿಸುವ ವೇಳೆಯಲ್ಲಿ, ಪಿಎಫ್ ಮೇಲಿನ ಬಡ್ಡಿಗೆ ತೆರಿಗೆ ವಿನಾಯಿತಿ ಮೊತ್ತವನ್ನು ರೂ. 2.5 ಲಕ್ಷ ರೂಪಾಯಿಗೆ ಮಿತಿಗೊಳಿಸುವ ಪ್ರಸ್ತಾವ ಮಾಡಿದ್ದರು. ಉದ್ಯೋಗಿ ಮತ್ತು ಉದ್ಯೋಗದಾತ ಇಬ್ಬರದೂ ಸೇರಿ ಪ್ರಾವಿಡೆಂಟ್ ಫಂಡ್​ಗೆ ಜಮೆ ಮಾಡಿದ ಮೊತ್ತದ ಮೇಲಿನ ಬಡ್ಡಿಯು ವಾರ್ಷಿಕವಾಗಿ ಗರಿಷ್ಠ ತೆರಿಗೆ ವಿನಾಯಿತಿ 2.5 ಲಕ್ಷ ರೂಪಾಯಿ ಎಂದು ನಿಗದಿ ಮಾಡಿದ್ದರು.

ಹೆಚ್ಚಿನ ಅದಾಯ ಬರುವಂಥವರು ತಮ್ಮ ಹೆಚ್ಚುವರಿ ಹಣವನ್ನು ಜನಸಾಮಾನ್ಯರ ನಿವೃತ್ತಿ ನಿಧಿಯಲ್ಲಿ ತೊಡಗಿಸುವುದನ್ನು ತಪ್ಪಿಸಬೇಕು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ.

ಲೋಕಸಭೆಯಲ್ಲಿ ಹಣಕಾಸು ಮಸೂದೆ 2021ರ ಬಗ್ಗೆ ಚರ್ಚೆ ನಡೆಯುವಾಗ ಅವರು ಪ್ರತಿಕ್ರಿಯೆ ನೀಡಿದ್ದಾರೆ. ತೆರಿಗೆರಹಿತ ಮೊತ್ತದ ಮಿತಿಯನ್ನು ವರ್ಷಕ್ಕೆ ಗರಿಷ್ಠ 5 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಆದರೆ ಈ ವಿನಾಯಿತಿಗೆ ಷರತ್ತು ಹಾಕಲಾಗಿದೆ. 5 ಲಕ್ಷ ರೂಪಾಯಿ ತನಕದ ಕೊಡುಗೆಯಲ್ಲಿ ಉದ್ಯೋಗದಾತರ ಜಮೆಯು ಕಾನೂನುಬದ್ಧ ಮಿತಿಯಾದ ಮೂಲವೇತನದ (ಬೇಸಿಕ್ ಪೇ) ಶೇಕಡಾ 12ರ ಆಚೆಗೆ ಇರುವಂತಿಲ್ಲ. "ಯಾವ ಪ್ರಕರಣದಲ್ಲಿ ಪಿಎಫ್​ಗೆ ಉದ್ಯೋಗದಾತರ ಕೊಡುಗೆ ಇರುವುದಿಲ್ಲವೋ ಅಂಥ ಪ್ರಕರಣಗಳಲ್ಲಿ ಮಾತ್ರ ತೆರಿಗೆ ವಿನಾಯಿತಿ ಮಿತಿಯನ್ನು 5 ಲಕ್ಷ ರೂಪಾಯಿಗೆ ಏರಿಸಲಾಗುವುದು," ಎಂದಿದ್ದಾರೆ.

ಬಹುತೇಕ ಸಂದರ್ಭಗಳಲ್ಲಿ ಇದು ಉದ್ಯೋಗಿ ಮತ್ತು ಉದ್ಯೋಗದಾತರ ಕೊಡುಗೆ ಆಗಿರುತ್ತದೆ. ಆದರೆ ಉದ್ಯೋಗಿ ಮಾತ್ರ ಜಮೆ ಮಾಡಿದಂಥ ಹಾಗೂ ಉದ್ಯೋಗದಾತರ ಹಣ ಹಾಕದ ಸನ್ನಿವೇಶಗಳಲ್ಲಿ ಮೊತ್ತವನ್ನು 5 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ ಎಂದಿದ್ದಾರೆ. ಹೊಸ ನಿಯಮಚು ಏಪ್ರಿಲ್ 1ನೇ ತಾರೀಕಿನಿಂದ ಜಾರಿಗೆ ಬರಲಿದೆ. ಶೇ 92ರಿಂದ ಶೇ 93ರಷ್ಟು ಮಂದಿ ರೂ. 2.5 ಲಕ್ಷದ ಮಿತಿಗೆ ಬರುತ್ತಾರೆ. ಅಂಥವರಿಗೆ ಭರವಸೆ ನೀಡಿದ ಬಡ್ಡಿಗೆ ಯೋಜನೆ ಅಡಿ ತೆರಿಗೆಮುಕ್ತವಾಗಿರುತ್ತದೆ. ಈ ನಡೆಯಿಂದ ಸಣ್ಣ ಮತ್ತು ಮಧ್ಯಮ ಪ್ರಮಾಣದ ತೆರಿಗೆ ಪಾವತಿದಾರರ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ ಎಂದು ನಿರ್ಮಲಾ ತಿಳಿಸಿದ್ದಾರೆ.

ಕಾರ್ಮಿಕರ ಭವಿಷ್ಯ ನಿಧಿ ಒಕ್ಕೂಟಕ್ಕೆ (ಇಪಿಎಫ್​ಒ) ಆರು ಕೋಟಿ ಚಂದಾದಾರರಿದ್ದಾರೆ. ಹಣಕಾಸು ಮಸೂದೆಯು ಆ ನಂತರ 127 ಅಧಿಕೃತ ತಿದ್ದುಪಡಿಯೊಂದಿಗೆ ಕೆಳಮನೆಯಲ್ಲಿ ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.

ಇದನ್ನೂ ಓದಿ: ಇಪಿಎಫ್, ಕ್ರೆಡಿಟ್ ಕಾರ್ಡ್, ಎಲ್​ಪಿಜಿ, ಬ್ಯಾಂಕ್ ಡೆಪಾಸಿಟ್ ಇನ್ಷೂರೆನ್ಸ್ ಬಗ್ಗೆ ನಿಮಗೆಷ್ಟು ಗೊತ್ತು?

The post Tax on EPF Interest: ಪಿಎಫ್ ಮೇಲಿನ ಬಡ್ಡಿಗೆ ವರ್ಷಕ್ಕೆ 5 ಲಕ್ಷ ರೂ. ತನಕ ತೆರಿಗೆ ವಿನಾಯಿತಿ ಘೋಷಿಸಿದ ಕೇಂದ್ರ appeared first on TV9 Kannada.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: TV9 Kannada

#Hashtags