ಕನ್ನಡದುನಿಯಾ

1.6M Followers

SSLC ಪಾಸಾದವರಿಗೆ ಗುಡ್ ನ್ಯೂಸ್: ಗ್ರಾಮ ಕಾಯಕ ಮಿತ್ರ ಹುದ್ದೆಗೆ ಅರ್ಜಿ ಆಹ್ವಾನ

27 Mar 2021.05:34 AM

ಧಾರವಾಡ: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮ ಕಾಯಕ ಮಿತ್ರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಯೋಜನೆಯಡಿಯಲ್ಲಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕುಟುಂಬಗಳ ನೋಂದಣಿ, ಕೆಲಸದ ಬೇಡಿಕೆ ಸ್ವೀಕರಿಸುವುದು ಮತ್ತು ಸ್ವೀಕೃತಿ ನೀಡುವುದು, ಗ್ರಾಮ ಸಭೆ ಮತ್ತು ಸಾಮಾಜಿಕ ಪರಿಶೋಧನಾ ಗ್ರಾಮ ಸಭೆಗಳನ್ನು ಆಯೋಜಿಸಲು ನೆರವು ನೀಡುವುದು ಮತ್ತು ಕಾಯಕ ಬಂಧುಗಳ ಮೇಲ್ವಿಚಾರಣೆ ಮಾಡಲು ಧಾರವಾಡ ಜಿಲ್ಲೆಯ ಕ್ಷೇತ್ರ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸಲು ಒಟ್ಟು 32 "ಗ್ರಾಮ ಕಾಯಕ ಮಿತ್ರ" ರನ್ನು ನಿಯೋಜಿಸಲು ಉದ್ದೇಶಿಸಲಾಗಿದೆ.

ಗ್ರಾಮ ಕಾಯಕ ಮಿತ್ರ ಅರ್ಹತೆಗಳು:

ಗ್ರಾಮ ಕಾಯಕ ಮಿತ್ರ ಹುದ್ದೆಗಳಿಗೆ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಯು ಕನಿಷ್ಠ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

ಜನವರಿ 1, 2021 ಕ್ಕೆ ಅನ್ವಯಿಸುವಂತೆ ತಾನು ಅರ್ಜಿ ಸಲ್ಲಿಸುವ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಚಾಲ್ತಿಯಲ್ಲಿರುವ (ಆಯಕ್ಟಿವ್) ಜಾಬ್‍ಕಾರ್ಡ್ ಹೊಂದಿರಬೇಕು. ಕಳೆದ ಮೂರು ವರ್ಷಗಳಲ್ಲಿ (2018-19, 2019-20 ಮತ್ತು 2020-21) ಕನಿಷ್ಠ ಎರಡು ವರ್ಷ ಯೋಜನೆಯಡಿ ಅಕುಶಲ ಕೂಲಿಕಾರರಾಗಿ ಕೆಲಸ ನಿರ್ವಹಿಸಿರಬೇಕು.

ಜನವರಿ 1, 2021 ಕ್ಕೆ ಅನ್ವಯಿಸುವಂತೆ 45 ವರ್ಷ ಮೀರಿರಬಾರದು. ಓದು ಮತ್ತು ಬರಹ ಚೆನ್ನಾಗಿ ತಿಳಿದಿರಬೇಕು. ಗ್ರಾಮ ಕಾಯಕ ಮಿತ್ರ ಹುದ್ದೆಗೆ ಅರ್ಜಿ ಸಲ್ಲಿಸುವಾಗ ಆಯಾ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿ ವಾಸಿಸುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸತಕ್ಕದ್ದು. ಅಭ್ಯರ್ಥಿಯು ಪರಿಣಾಮಕಾರಿ ಸಂವಹನ ಕೌಶಲ್ಯ, ಉತ್ತಮ ನಾಯಕತ್ವ ಗುಣ ಹಾಗೂ ಸಮುದಾಯದೊಂದಿಗೆ ಸ್ಪಂದಿಸುವ ಗುಣಲಕ್ಷಗಳನ್ನು ಹೊಂದಿರಬೇಕು. ಗ್ರಾಮ ಕಾಯಕ ಮಿತ್ರರು ಸಮುದಾಯ ಕಾರ್ಯನಿರ್ವಹಣೆ ಮಾಡಲು ನಿರ್ಧಿಷ್ಟ ಸಮಯವನ್ನು ನೀಡಬೇಕಾಗಿದ್ದು, ಇದಕ್ಕೆ ಗ್ರಾಮ ಕಾಯಕ ಮಿತ್ರರ ಕುಟುಂಬ ಮತ್ತು ಸಮಾಜ ಬೆಂಬಲವಾಗಿರಬೇಕು.

ಗ್ರಾಮ ಕಾಯಕ ಮಿತ್ರರ ಆಯ್ಕೆಯ ವೇಳಾಪಟ್ಟಿ:

ಗ್ರಾಮ ಕಾಯಕ ಮಿತ್ರ ಹುದ್ದೆಗೆ ಅಧಿಸೂಚನೆಯನ್ನು ಮಾರ್ಚ್ 25 ರಂದು ಹೊರಡಿಸಲಾಗಿದ್ದು, ಅರ್ಜಿ ಸಲ್ಲಿಸಲು ಏಪ್ರೀಲ್ 10, 2021 ಕೊನೆಯ ದಿನಾಂಕವಾಗಿದೆ. ಗ್ರಾಮ ಪಂಚಾಯತಿಯಲ್ಲಿ ಏಪ್ರಿಲ್ 15 ರಂದು ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಲಾಗುತ್ತದೆ. ಮತ್ತು ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಎಪ್ರೀಲ್ 20 ಕೊನೆಯ ದಿನವಾಗಿದೆ. ಗ್ರಾಮ ಕಾಯಕ ಮಿತ್ರರ ಆಯ್ಕೆ ಪ್ರಕ್ರಿಯೆಯು ಜೂನ್ 24, 2021 ರಂದು ಪೂರ್ಣಗೊಳ್ಳುತ್ತದೆ.

ಅರ್ಜಿ ನಮೂನೆಯನ್ನು ಸಂಬಂಧಿಸಿದ ಗ್ರಾಮ ಪಂಚಾಯತಿಯ ಹಾಗೂ ತಾಲೂಕ ಪಂಚಾಯತಗಳಿಂದ ಪಡೆಯಬಹುದಾಗಿದೆ. ಅಥವಾ ಧಾರವಾಡ ಜಿಲ್ಲಾ ಪಂಚಾಯತನ ವೆಬ್‍ಸೈಟ್ ವಿಳಾಸ https://zpdharwad.kar.nic.in ನಲ್ಲಿ ಪಡೆಯಬಹುದಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ. ಬಿ. ತಿಳಿಸಿದ್ದಾರೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags