ಈ ಸಂಜೆ

802k Followers

ಇಂದು ಅಧಿಕಾರಿಗಳ ಜೊತೆ ಸಿಎಂ ಸಭೆ, ನಿರ್ಧಾದರವಾಗಲಿದೆ ಲಾಕ್‍ಡೌನ್ ಭವಿಷ್ಯ

29 Mar 2021.12:10 PM

ಬೆಂಗಳೂರು,ಮಾ.29-ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ಸಂಜೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ರಾಜ್ಯದಲ್ಲಿ ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದು ನಡೆಯುವ ಸಭೆಯಲ್ಲಿ ಕೈಗೊಳ್ಳುವ ನಿರ್ಧಾರದ ಮೇಲೆ ಲಾಕ್‍ಡೌನ್ ಭವಿಷ್ಯ ತೀರ್ಮಾನವಾಗಲಿದೆ.

ಸಂಜೆ 5 ಗಂಟೆಗೆ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಭಾದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಕಂದಾಯ, ಗೃಹ ಹಾಗೂ ಬಿಬಿಎಂಪಿ ಅಧಿಕಾರಿಗಳ ಸಭೆಯಲ್ಲಿ , ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರಕಾರ ಕೆಲವು ಕಠಿಣ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಯಡಿಯೂರಪ್ಪ , ಸಚಿವರಾದ ಬಸವರಾಜ್ ಬೊಮ್ಮಯಿ, ಆರ್.ಅಶೋಕ್, ಡಾ.ಕೆ.ಸುಧಾಕರ್, ಬಿಬಿಎಂಪಿ ಅಧಿಕಾರಿಗಳು ಹಾಗೂ ಕೋವಿಡ್ ತಾಂತ್ರಿಕ ಸಲಹೆಗಾರರ ಸಮಿತಿ ಸದಸ್ಯರು ಸಭೆಯಲ್ಲಿ ಭಾಗವಹಿಸಲಿದ್ದಾರೆ.

ದೇಶದಲ್ಲೇ ಅತಿ ಹೆಚ್ಚು ಸೋಂಕು ಹಬ್ಬುತ್ತಿರುವ ರಾಜ್ಯಗಳ ಪೈಕಿ ಕರ್ನಾಟಕ 4ನೇ ಸ್ಥಾನದಲ್ಲಿದ್ದು, ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹಬ್ಬದಂತೆ ಸರಕಾರ ಕೆಲವು ಕಠಿಣ ಕ್ರಮಗಳನ್ನುತೆಗೆದುಕೊಳ್ಳುವಂತೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು ಮಾಡಿದೆ. ಕಳೆದ 15 ದಿನಗಳಿಂದ ರಾಜ್ಯದಲ್ಲಿ ನಿರಂತರವಾಗಿ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದು ಸರ್ಕಾರಕ್ಕೂ ಆತಂಕ ತಂದಿದೆ. ಈಗಷ್ಟೇ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತಿದ್ದು, ಪುನಃ ಲಾಕ್‍ಡೌನ್ ಮಾಡಿದರೆ ಎಲ್ಲ ವಹಿವಾಟುಗಳು ಸ್ತಬ್ದವಾಗಲಿದೆ.

ಆದರೆ ತಜ್ಞರ ಸಮಿತಿ ನೀಡಿರುವ ಸಲಹೆಯಂತೆ ರಾಜ್ಯದಲ್ಲಿ ಕೆಲವು ದಿನಗಳ ಮಟ್ಟಿಗೆ ಕಡಿವಾಣ ಹಾಕಲೇಬೇಕಾಗುತ್ತದೆ. ಸರ್ಕಾರ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿ ಮಾಡಬೇಕೆಂದು ಸೂಚನೆ ಕೊಟ್ಟಿದೆ. ಲಾಕ್‍ಡೌನ್ ವಿಧಿಸಲು ಆಗದೆ, ಸಡಿಲಗೊಳಿಸಲು ಆಗದೆ ಸರ್ಕಾರ ಅಡಕತ್ತರಿಯಲ್ಲಿ ಸಿಲುಕಿದೆ.

ಕೆಲವು ನಿರ್ಬಂಧ:
ಮೂಲಗಳ ಪ್ರಕಾರ ಮುಖ್ಯಮಂತ್ರಿ ಯಡಿಯೂರಪ್ಪ ಇಂದು ಕೆಲವು ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ. 1ರಿಂದ 9ನೇ ತರಗತಿವರೆಗೆ ಕಳೆದ ಬಾರಿಯಂತೆ ಪರೀಕ್ಷೆ ನಡೆಸದೆ ಎಲ್ಲಾ ವಿದ್ಯಾರ್ಥಿಗಳನ್ನು ಉತ್ತೀರ್ಣ ಮಾಡುವ ತೀರ್ಮಾನವನ್ನು ಪ್ರಕಟಿಸಲಿದ್ದಾರೆ. ಉಳಿದಂತೆ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಪ್ರೇಕ್ಷಕರಿಗೆ ಚಿತ್ರ ವೀಕ್ಷಿಸುವ ಅವಕಾಶ ಕಲ್ಪಿಸುವ ಸಂಭವವಿದೆ. ಉದ್ಯಾನವನ, ಮಾರುಕಟ್ಟೆ, ಮಾಲುಗಳು, ಜನನಿಬಿಡ ಪ್ರದೇಶ, ರೈಲ್ವೆ, ಬಸ್ ನಿಲ್ದಾಣಗಳಲ್ಲಿ ಸೀಮಿತ ಸಂಖ್ಯೆಯಲ್ಲಿ ಜನಸಂದಣಿ ಇರುವಂತೆ ನೋಡಿಕೊಳ್ಳಬೇಕೆಂಬ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮದುವೆ, ಧಾರ್ಮಿಕ ಕಾರ್ಯಕ್ರಮಗಳು, ಸಮಾರಂಭ ಸೇರಿದಂತೆ ಮತ್ತಿತರ ಕಡೆ ಮಾರ್ಷಲ್‍ಗಳನ್ನು ನೇಮಿಸಿ ನಿಯಂತ್ರಣ ಹಾಕುವುದು, ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಸೇರಿದಂತೆ ಕೆಲವು ಕಠಿಣ ನಿಯಮಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. ನಾಲ್ಕು ತಿಂಗಳ ನಂತರ ರಾಜ್ಯದಲ್ಲಿ ಭಾನುವಾರ ಒಂದೇ ದಿನ 12 ಸಾವು, 3 ಸಾವಿರದ 82 ಹೊಸ ಕೋವಿಡ್ -19 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೇ ಪಾಸಿಟಿವ್ ಕೇಸ್ ಗಳ ಸಂಖ್ಯೆ 9, 87,012ಕ್ಕೆ ಏರಿಕೆಯಾಗಿದೆ. ಸಾವಿನ ಸಂಖ್ಯೆ 12, 504 ಆಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ 23, 037ಕ್ಕೆ ಏರಿಕೆಯಾಗಿದೆ.

ರಾಜ್ಯದಲ್ಲಿ ಸೋಂಕು ಹರಡುತ್ತಿರುವುದಕ್ಕೆ ರೂಪಾಂತರಗೊಂಡ ಸಾರ್ಸ್ ಕೋವ್-2 ವೈರಸ್ ಕಾರಣವಾಗಿದೆ. ದೈನಂದಿನ ಪ್ರಕರಣಗಳ ಸಂಖ್ಯೆ 300ರಿಂದ 3 ಸಾವಿರಕ್ಕೆ ಅಂದರೆ ಹತ್ತು ಪಟ್ಟು ಹೆಚ್ಚಾಗಿದೆ. ಗಡಿ ಜಿಲ್ಲೆಗಳು ಮತ್ತು ಬೆಂಗಳೂರಿಗೆ ಬರುವವರಿಗೆ ಕಟ್ಟುನಿಟ್ಟಿನ ನಿರ್ಬಂಧ ಹೇರಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.

ಮುಂದಿನ 4ರಿಂದ 8 ವಾರಗಳ ಕಾಲ ಕಠಿಣ ಕ್ರಮ ಕೈಗೊಳ್ಳುವಂತೆ ಕೋವಿಡ್-19 ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ. ಇಂದು ನಡೆಯಲಿರುವ ಸಭೆಯಲ್ಲಿ ಮುಖ್ಯಮಂತ್ರಿ, ಸಚಿವರಿಗೆ ಈ ವಿಷಯವನ್ನು ತಿಳಿಸಲಾಗುವುದು ಎಂದು ಹೇಳಿದ್ದಾರೆ. ಮಹಾರಾಷ್ಟ್ರದಂತೆ ರಾಜ್ಯದಲ್ಲಿಯೂ ನಿರ್ಬಂಧ ಹಾಕಲಾಗುತ್ತದೆಯೇ ಎಂಬ ಯಕ್ಷ ಪ್ರಶ್ನೆ ಈಗ ಎದುರಾಗಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: eesanje

#Hashtags