ಉದಯವಾಣಿ

1.4M Followers

ಕಲಬುರಗಿಯಲ್ಲಿ ಕಳೆದ ಹತ್ತು ವರ್ಷದಲ್ಲಿ ಮೂರನೇ ಬಾರಿ ದಾಖಲೆ ಬಿಸಿಲು !

28 Mar 2021.8:15 PM

ಬೆಂಗಳೂರು: ರಾಜ್ಯದಲ್ಲಿ ಬಿಸಿಲು ದಿನೇ ದಿನೆ ಹೆಚ್ಚಾಗುತ್ತಿದ್ದು, ಉತ್ತರ ಒಳನಾಡಿನ ಕಲಬುರಗಿಯಲ್ಲಿ ಭಾನುವಾರ ರಾಜ್ಯದಲ್ಲೇ ಗರಿಷ್ಠ ತಾಪಮಾನ 40.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ರಾಜ್ಯದ ಉತ್ತರ ಒಳನಾಡಿನ ಹಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಗರಿಷ್ಠ ತಾಪಮಾನ ದಾಖಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬಿಸಿಲಿನ ಪ್ರಮಾಣ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೆ.

ಭಾನುವಾರ (ಮಾ.28ಕ್ಕೆೆ) ಕಲಬುರಗಿಯಲ್ಲಿ ಕಳೆದ ಹತ್ತು ವರ್ಷದಲ್ಲಿ ಮೂರನೇ ಬಾರಿ ಈ ಪ್ರಮಾಣದ ತಾಪಮಾನ ದಾಖಲಾಗಿದ್ದು, ರಾಜ್ಯದಲ್ಲಿ ಮಾರ್ಚ್‌ನಲ್ಲಿ ದಾಖಲಾದ ಅತೀ ಗರಿಷ್ಠ ತಾಪಮಾನ ಸಹ ಇದಾಗಿದೆ.

ಕಲಬುರಗಿಯಲ್ಲಿ 40 ಡಿ.ಸೆ. ತಾಪಮಾನ ಎರಡು ಬಾರಿ ದಾಖಲಾಗಿತ್ತು. 2013ರ ಮಾ.30ರಂದು 40.9 ಡಿ.ಸೆ ಹಾಗೂ 2014ರ ಮಾ.31ರಂದು 40.9 ಡಿ.ಸೆ ದಾಖಲಾಗಿತ್ತು. ಇದನ್ನು ಹೊರತುಪಡಿಸಿ ( ಮಾ.28ಕ್ಕೆೆ) ಭಾನುವಾರ ಗರಿಷ್ಠ (40.6) ಉಷ್ಣಾಂಶವಾಗಿದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

ಇದನ್ನೂ ಓದಿ : ಮಹಿಳೆಯರ ಅರೆಬೆತ್ತಲೆ ಫೋಟೋ ಕುರಿತು ನಟಿ ತಾಪ್ಸಿ ಪನ್ನು ಹೇಳಿದ್ದೇನು?

ಕಳೆದ 24 ಗಂಟೆಗಳಲ್ಲಿ ವಿಜಯಪುರ, ದಾವಣಗೆರೆ ಮತ್ತು ರಾಯಚೂರ ಜಿಲ್ಲೆಗಳಲ್ಲಿ ತಲಾ 38ಡಿ.ಸೆ., ಶಿವಮೊಗ್ಗ ಮತ್ತು ಕೊಪ್ಪಳ ತಲಾ 37.5, ಬೀದರ 37.4, ಗದಗ 37.3, ಚಿತ್ರದುರ್ಗ 36.9, ಬೆಳಗಾವಿ ವಿಮಾನ ನಿಲ್ದಾಣ, ಧಾರವಾಡ ಮತ್ತು ಹಾವೇರಿಯಲ್ಲಿ ಗರಿಷ್ಠ ತಲಾ 36.6, ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ. ದಾವಣಗೆರೆಯಲ್ಲಿ 18ಡಿ.ಸೆ.

ಕನಿಷ್ಠ ತಾಪಮಾನ ದಾಖಲಾಗಿದೆ.

ಉಳಿದಂತೆ ರಾಜ್ಯದಲ್ಲಿ ಮುಂದಿನ ಎರಡು ದಿನಗಳ ಕಾಲ ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚೆ ನೀಡಿದೆ.

ರಾಜ್ಯದ ಜಿಲ್ಲೆಗಳಲ್ಲಿ ತುಂತುರು ಮಳೆ ಸಾಧ್ಯತೆ: ರಾಜ್ಯದಲ್ಲಿ ಗರಿಷ್ಠ ತಾಪಮಾನ ಹೆಚ್ಚಾಗುತ್ತಿರುವ ಹಿನ್ನೆೆಲೆಯಲ್ಲಿ ವಿವಿಧ ಜಿಲ್ಲೆಗಳಲ್ಲಿ ಮಾ.31ರ ವರೆಗೆ ಮಳೆ ಆಗುವ ಸಾಧ್ಯತೆ ಇದೆ. ಕರಾವಳಿಯ ದಕ್ಷಿಣಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ, ಉತ್ತರ ಒಳನಾಡಿನ ಬೆಳಗಾವಿ, ಧಾರವಾಡ, ಹಾವೇರಿ ಹಾಗೂ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಮೈಸೂರು, ಶಿವಮೊಗ್ಗ ಹಾಗೂ ತುಮಕೂರು ಸೇರಿದಂತೆ ರಾಜ್ಯದ ವಿವಿಧೆಡೆ ತುಂತುರು ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Udayavani

#Hashtags