ಪ್ರಜಾವಾಣಿ

1.5M Followers

1,500 ಬಸ್ ಗುತ್ತಿಗೆ ಪಡೆಯಲು ಮುಂದಾದ ಬಿಎಂಟಿಸಿ

31 Mar 2021.06:08 AM

ಬೆಂಗಳೂರು: 1,500 ಖಾಸಗಿ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದುಕೊಳ್ಳಲು ಬಿಎಂಟಿಸಿ ಮುಂದಾಗಿದ್ದು, ಇದು ಸಂಸ್ಥೆಯನ್ನು ಖಾಸಗೀಕರಣಗೊಳಿಸುವ ನಿಟ್ಟಿನಲ್ಲಿ ಇಟ್ಟಿರುವ ಮೊದಲ ಹೆಜ್ಜೆ ಎಂದು ಸಾರಿಗೆ ನೌಕರರ ಫೆಡರೇಷನ್ ಆರೋಪಿಸಿದೆ.

'ಗ್ರಾಸ್ ಕಾಸ್ಟ್ ಕಂಟ್ರ್ಯಾಕ್ಟ್ (ಜಿಸಿಸಿ) ಮಾದರಿಯಲ್ಲಿ ಡೀಸೆಲ್ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಕಾರ್ಯಾಚರಣೆಗೆ ಬಳಸಲು ಆಸಕ್ತ ಮತ್ತು ಅರ್ಹ ಬಿಡ್ಡುದಾರರಿಂದ ಅಥವಾ ಒಕ್ಕೂಟದಿಂದ ಟೆಂಡರ್ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಏ.12 ಕೊನೆಯ ದಿನವಾಗಿದ್ದು, ಏ. 23ರಂದು ಬೆಳಗ್ಗೆ 11.30ಕ್ಕೆ ಆರ್ಥಿಕ ಬಿಡ್ ತೆರೆಯಲಾಗುವುದು' ಎಂದು ಟೆಂಡರ್ ಅಧಿಸೂಚನೆಯಲ್ಲಿ ಬಿಎಂಟಿಸಿ ಸ್ಪಷ್ಟಪಡಿಸಿದೆ.

ಇದರ ಪ್ರಕಾರ, ಖಾಸಗಿಯವರಿಂದ ಬಸ್‌ಗಳನ್ನು ಪಡೆದು ಪ್ರತಿ ಕಿಲೋ ಮೀಟರ್‌ಗೆ ಇಂತಿಷ್ಟು ಹಣ ನಿಗದಿ ಮಾಡಲಾಗುತ್ತದೆ.

ಖಾಸಗಿ ಸಂಸ್ಥೆಗಳು ಸಲ್ಲಿಸುವ ಬಿಡ್ ಆಧರಿಸಿ ದರ ನಿರ್ಧಾರ ಆಗಲಿದೆ. ಬಸ್ ಪೂರೈಸುವ ಸಂಸ್ಥೆಯೇ ಅವುಗಳ ನಿರ್ವಹಣೆ ಮಾಡಲಿದ್ದು, ಬಸ್ ಸೇವೆಯಲ್ಲಿ ಸಂಗ್ರಹವಾಗುವ ಪ್ರಯಾಣ ಶುಲ್ಕವನ್ನು ಬಿಎಂಟಿಸಿ ಪಡೆಯುತ್ತದೆ.

ಒಂದೂವರೆ ದಶಕದ ಹಿಂದೆ ಈ ಪ್ರಯೋಗ ನಡೆದಿತ್ತು. ಸಾವಿರಕ್ಕೂ ಹೆಚ್ಚು ಖಾಸಗಿ ಬಸ್‌ಗಳನ್ನು ಗುತ್ತಿಗೆ ಆಧಾರದಲ್ಲಿ ಪಡೆದು, ಸೇವೆ ನೀಡಲಾಗಿತ್ತು. ಆದರೆ, ಈ ಕ್ರಮದಿಂದ ಬಿಎಂಟಿಸಿ ಮತ್ತು ಖಾಸಗಿ ಸಂಸ್ಥೆಗಳಿಗೆ ಯಾವುದೇ ಲಾಭವಾಗದ ಕಾರಣ ರದ್ದುಗೊಳಿಸಲಾಗಿತ್ತು. ಈಗ ಮತ್ತದೇ ಮಾದರಿಯನ್ನು ಕೆಲವು ಮಾರ್ಪಾಡುಗಳೊಂದಿಗೆ ಪರಿಚಯಿಸಲಾಗುತ್ತಿದೆ.

ಈ ನಡುವೆ ಕೇಂದ್ರ ಸರ್ಕಾರದ ಫೇಮ್-2 ಯೋಜನೆ ಅನುದಾನದಡಿ ಗುತ್ತಿಗೆ ಆಧಾರದಲ್ಲಿ 300 ವಿದ್ಯುತ್ ಚಾಲಿತ ಬಸ್‌ಗಳನ್ನು ಪರಿಚಯಿಸಲು ಉದ್ದೇಶಿಸಿದ್ದು, ಇದರ ಟೆಂಡರ್ ಪ್ರಕ್ರಿಯೆಯೂ ಚಾಲ್ತಿಯಲ್ಲಿದೆ. ಮುಷ್ಕರದ ಸಂದರ್ಭದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ತಾತ್ಕಲಿಕ ಪರ್ಮಿಟ್‌ ನೀಡಲು ಮ್ಯಾಕ್ಸಿ ಕ್ಯಾಬ್‌, ಬಸ್ ಮತ್ತು ಮಿನಿ ಬಸ್‌ಗಳ ಮಾಲೀಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಈ ಎಲ್ಲಾ ಬೆಳವಣಿಗೆಗಳು ಸಾರಿಗೆ ನೌಕರರಲ್ಲಿ ಆತಂಕ ಸೃಷ್ಟಿಸಿದ್ದು, ಸಾರ್ವಜನಿಕ ವಲಯದಲ್ಲೂ ವಿರೋಧ ವ್ಯಕ್ತವಾಗಿದೆ.

ನಿರ್ಧಾರ ವಾಪಸ್ ಪಡೆಯದಿದ್ದರೆ ಹೋರಾಟ

'ಬಿಎಂಟಿಸಿಯನ್ನು ಕ್ರಮೇಣ ಖಾಸಗೀಕರಣ ಮಾಡುವ ಹುನ್ನಾರದಂತಿರುವ ಈ ನಿರ್ಧಾರವನ್ನು ಸರ್ಕಾರ ಕೂಡಲೇ ವಾಪಸ್ ಪಡೆಯಬೇಕು' ಎಂದು ಸಾರಿಗೆ ನೌಕರರ ಫೆಡರೇಷನ್ (ಸಿಐಟಿಯು) ಒತ್ತಾಯಿಸಿದೆ.

ಲಕ್ಷಾಂತರ ವಿದ್ಯಾರ್ಥಿಗಳಿಗೆ ರಿಯಾಯಿತಿ ಪಾಸುಗಳನ್ನು ಬಿಎಂಟಿಸಿ ನೀಡಿದೆ. ವಿವಿಧ ಜನ ವಿಭಾಗಗಳಿಗೆ ಹಲವು ರೀತಿಯ ರಿಯಾಯಿತಿ ಪಾಸುಗಳನ್ನು ನೀಡಲಾಗಿದೆ. ಇದರ ಬಾಕಿ ₹3,400 ಕೋಟಿಯನ್ನು ಸರ್ಕಾರ ನೀಡಿಲ್ಲ ಎಂದು ಹೇಳಿದೆ.

'ನಗರದಲ್ಲಿ 1,250 ಎಕರೆ ಜಾಗವನ್ನು ಬಿಎಂಟಿಸಿ ಹೊಂದಿದೆ. ಹತ್ತಾರು ಟಿಟಿಎಂಸಿ ಕಟ್ಟಡಗಳು, ಬಸ್ ನಿಲ್ದಾಣಗಳು, 50 ಡಿಪೊಗಳು, 6,500 ಬಸ್‌ಗಳು, 35 ಸಾವಿರ ಕಾರ್ಮಿಕರನ್ನು ಸಂಸ್ಥೆ ಹೊಂದಿದೆ. ಇಷ್ಟು ದೊಡ್ಡ ಸಂಸ್ಥೆಯನ್ನು ಖಾಸಗೀಕರಣ ಮಾಡಲು ಹೊರಟಿರುವುದು ಜನರಿಗೆ ಬಿಜೆಪಿ ಸರ್ಕಾರ ಮಾಡುತ್ತಿರುವ ದ್ರೋಹ' ಎಂದು ಒಕ್ಕೂಟವು ಆರೋಪಿಸಿದೆ.

'ಈ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯದಿದ್ದಲ್ಲಿ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು. ಬೆಂಗಳೂರಿನ ದುಡಿಯುವ ಜನ, ವಿದ್ಯಾರ್ಥಿಗಳು ಈ ಹೋರಾಟಕ್ಕೆ ಕೈಜೋಡಿಸಬೇಕು' ಎಂದು ಮನವಿ ಮಾಡಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Prajavani