ಉದಯವಾಣಿ

1.4M Followers

ರಾಜ್ಯಗಳಿಗೆ 45 ಸಾವಿರ ಕೋ. ರೂ. ಹೆಚ್ಚುವರಿ ತೆರಿಗೆ ಹಣ ಹಂಚಿಕೆ

02 Apr 2021.07:25 AM

ಹೊಸದಿಲ್ಲಿ: ಕಳೆದ ತಿಂಗಳ 31ಕ್ಕೆ ಅಂತ್ಯವಾದ 2020-21ರ ಹಣ ಕಾಸು ವರ್ಷದಲ್ಲಿ ಕರ್ನಾಟಕಕ್ಕೆ 1,641 ಕೋಟಿ ರೂ. ಸಹಿತ ರಾಜ್ಯಗಳಿಗೆ ಒಟ್ಟಾರೆ 45 ಸಾವಿರ ಕೋಟಿ ರೂ.ಗಳ ತೆರಿಗೆ ಆದಾಯವನ್ನು ಹೆಚ್ಚುವರಿಯಾಗಿ ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ವಿತ್ತ ಸಚಿವಾಲಯ ಗುರುವಾರ ಮಾಹಿತಿ ನೀಡಿದೆ.

ಪರಿಷ್ಕೃತ ಅಂದಾಜಿಗಿಂತ ಈ ಮೊತ್ತವು ಶೇ. 8.2ರಷ್ಟು ಹೆಚ್ಚು ಎಂದೂ ಹಣಕಾಸು ಇಲಾಖೆ ಹೇಳಿದೆ. 2020-21ರ ಪರಿಷ್ಕೃತ ಅಂದಾಜಿನ ಪ್ರಕಾರ, ಹಂಚಿಕೊಳ್ಳಬೇಕಾದ ತೆರಿಗೆಗಳು ಹಾಗೂ ಸುಂಕಗಳ ಪೈಕಿ ಶೇ.41ರಷ್ಟು ಅಂದರೆ 5,49,959 ಕೋಟಿ ರೂ.ಗಳನ್ನು ರಾಜ್ಯಗಳಿಗೆ ಬಿಡುಗಡೆ ಮಾಡಬೇಕಾಗಿತ್ತು. ಆದರೆ ವಿತ್ತ ಸಚಿವಾಲಯವು 5,94,996 ಕೋಟಿ ರೂ.ಗಳನ್ನು ಹಂಚಿಕೆ ಮಾಡಲು ನಿರ್ಧರಿಸಿತು. ಅಂದರೆ ಹೆಚ್ಚುವರಿ ತೆರಿಗೆ ಆದಾಯದ ಮೊತ್ತ(45 ಸಾವಿರ ಕೋಟಿ ರೂ.)ವನ್ನು 14,500 ಕೋಟಿ ರೂ.

ಮತ್ತು 30,500 ಕೋಟಿ ರೂ.ಗಳ ಎರಡು ಕಂತುಗಳಲ್ಲಿ ಪಾವತಿಸಿದೆ ಎಂದು ಮಾಹಿತಿ ನೀಡಿದೆ.

ಇದರಿಂದಾಗಿ ಕರ್ನಾಟಕಕ್ಕೆ ಪರಿಷ್ಕೃತ ಅಂದಾಜಿನ ಪ್ರಕಾರ, 20,053 ಕೋಟಿ ರೂ. ಮತ್ತು ಹೆಚ್ಚುವರಿ ತೆರಿಗೆ ಆದಾಯದ ರೂಪದಲ್ಲಿ 1,641 ಕೋಟಿ ರೂ. ಸೇರಿ ಒಟ್ಟಾರೆಯಾಗಿ 21,694 ಕೋಟಿ ರೂ.ಗಳು ಹಂಚಿಕೆಯಾದಂತಾಗಿದೆ.

ರಾಜ್ಯಗಳಿಗೆ 11,830 ಕೋಟಿ ರೂ. ವಿಶೇಷ ಅನುದಾನ :

“ಬಂಡವಾಳ ವೆಚ್ಚಕ್ಕಾಗಿ ರಾಜ್ಯಗಳಿಗೆ ವಿಶೇಷ ಅನುದಾನ’ ಯೋಜನೆಯಡಿ 11,830 ಕೋಟಿ ರೂ.ಗಳನ್ನು ವಿತ್ತ ಸಚಿವಾ ಲಯದ ವೆಚ್ಚ ಇಲಾಖೆ ಬಿಡುಗಡೆ ಮಾಡಿದೆ. 20201ರ ಅ.12ರಂದು ಸಚಿವೆ ನಿರ್ಮಲಾ ಅವರು ಆತ್ಮನಿರ್ಭರ ಭಾರತ ಪ್ಯಾಕೇಜ್‌ ನಲ್ಲಿ ಈ ಯೋಜನೆ ಪ್ರಕಟಿಸಿದ್ದರು. ಕೊರೊನಾದಿಂದ ತೆರಿಗೆ ಆದಾಯ ಕೊರತೆಯಾದ ಹಿನ್ನೆಲೆಯಲ್ಲಿ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದ ರಾಜ್ಯಗಳಿಗೆ ನೆರವಾಗುವ ನಿಟ್ಟಿನಲ್ಲಿ ಇದನ್ನು ಘೋಷಿಸಲಾಗಿತ್ತು. ಅದರಂತೆ, 27 ರಾಜ್ಯಗಳಿಂದ 11,912 ಕೋಟಿ ರೂ.ಗಳ ಬಂಡವಾಳ ವೆಚ್ಚದ ಪ್ರಸ್ತಾವ ಬಂದಿದ್ದು, 11,830 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Udayavani

#Hashtags