ವಾರ್ತಾಭಾರತಿ

554k Followers

ಉಳಿತಾಯ ಯೋಜನೆಗಳ ಬಡ್ಡಿ ದರ ಇಳಿಕೆ ಆದೇಶ ವಾಪಸ್: ವಿಪಕ್ಷ ನಾಯಕರಿಂದ ವ್ಯಂಗ್ಯ ಟ್ವೀಟ್‍ ಗಳು

01 Apr 2021.1:52 PM

ಹೊಸದಿಲ್ಲಿ: ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು ಇಳಿಸಿ ಬುಧವಾರ ಸಂಜೆ ಆದೇಶ ಹೊರಡಿಸಿದ್ದ ಕೇಂದ್ರ ಸರಕಾರ ಗುರುವಾರ ಬೆಳಿಗ್ಗೆ ತನ್ನ ಆದೇಶದಿಂದ ಹಿಂದೆ ಸರಿದಿರುವುದು ಹಾಗೂ ಇದು ʼಕಣ್ತಪ್ಪಿನಿಂದ' ಆಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ನೀಡಿರುವ ಸ್ಪಷ್ಟೀಕರಣವನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ವ್ಯಂಗ್ಯವಾಡಿದ್ದಾರೆ.

ವಿತ್ತ ಸಚಿವೆ ಟ್ವಿಟ್ಟರ್ ಮೂಲಕ ಸ್ಪಷ್ಟೀಕರಣ ನೀಡಿದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಪ್ರಿಯಾಂಕ ``ಭಾರತ ಸರಕಾರ ಪ್ರಾಯೋಜಿತ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರಗಳನ್ನು ಇಳಿಸಿ ಹೊರಡಿಸಲಾದ ಆದೇಶ ನಿಜವಾಗಿಯೂ ʼಕಣ್ತಪ್ಪಿನಿಂದ' ನಡೆದಿದೆಯೇ ಅಥವಾ ಚುನಾವಣೆ ಮೇಲೆ ದೃಷ್ಟಿ ನೆಟ್ಟು ಅದನ್ನು ವಾಪಸ್ ಪಡೆಯಲಾಗಿದೆಯೇ?'' ಎಂದು ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ನಾಯಕ ಹಾಗೂ ವಕ್ತಾರರಾಗಿರುವ ರಣದೀಪ್ ಸಿಂಗ್ ಸುರ್ಜೇವಾಲ ಕೂಡ ಪ್ರತಿಕ್ರಿಯಿಸಿ ನಿರ್ಮಲಾ ಸೀತಾರಾಮನ್ ಸರಕಾರ ನಡೆಸುತ್ತಿದ್ದಾರೆಯೇ ಅಥವಾ ಸರ್ಕಸ್ ನಡೆಸುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

"ಮೇಡಂ ವಿತ್ತ ಸಚಿವೆ, ನೀವು ನಡೆಸುತ್ತಿರುವುದು ʼಸರ್ಕಸ್ʼ ಅಥವಾ ʼಸರಕಾರವೇ?ʼ ಕೋಟ್ಯಂತರ ಜನರನ್ನು ಬಾಧಿಸುವ ಈ ರೀತಿಯ ಸೂಕ್ತ ಅನುಮೋದಿತ ಆದೇಶವನ್ನು ʼಕಣ್ತಪ್ಪಿನಿಂದʼ ನೀಡಿರಬಹುದಾದರೆ ದೇಶದ ಆರ್ಥಿಕತೆಯನ್ನು ಹೇಗೆ ನಿಭಾಯಿಸಲಾಗುತ್ತಿದೆ ಎಂಬುದನ್ನು ಊಹಿಸಬಹುದು. ಆದೇಶದಲ್ಲಿ ಉಲ್ಲೇಖಿಸಲಾದ ಸಂಬಂಧಿತ ಪ್ರಾಧಿಕಾರ ಯಾವುದು? ನಿಮಗೆ ವಿತ್ತ ಸಚಿವೆಯಾಗಿ ಮುಂದುವರಿಯಲು ನೈತಿಕ ಹಕ್ಕಿಲ್ಲ" ಎಂದು ಬರೆದಿದ್ದಾರೆ.

ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಒ'ಬ್ರಿಯೆನ್ ಪ್ರತಿಕ್ರಿಯಿಸಿ "ಮುಖದ ಮೇಲೆ ಮತ್ತೆ ಮೊಟ್ಟೆ??? ಏಕೆಂದರೆ ಮೋ-ಶಾ ಚುನಾವಣಾ ರ್ಯಾಲಿಗಳಲ್ಲಿ ಟ್ರಕ್‍ಗಳಿಂದ ಹೂವಿನ ಎಸಳುಗಳನ್ನು ಎಸೆಯುವುದರಲ್ಲಿ ಹಾಗೂ ಸುಳ್ಳು ಭರವಸೆಗಳ ಎಪ್ರಿಲ್ ಫೂಲ್ ಜೋಕ್‍ಗಳನ್ನು ಹೇಳುವುದರಲ್ಲಿಯೇ ಬಹಳಷ್ಟು ವ್ಯಸ್ತರಾಗಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗೆ ಟಿಎಂಸಿ ಸೇರಿರುವ ಮಾಜಿ ಬಿಜೆಪಿ ನಾಯಕ ಹಾಗೂ ಮಾಜಿ ವಿತ್ತ ಸಚಿವ ಯಶವಂತ್ ಸಿನ್ಹಾ ಅವರು ಕೂಡ ಪ್ರತಿಕ್ರಿಯಿಸಿ "ನನಗೆ ಇಂದು ಬಹಳ ದುಃಖವಾಗಿದೆ. ವಾಪಸ್ ಪಡೆಯುವುದರಲ್ಲಿ (ರೋಲ್ ಬ್ಯಾಕ್) ನನಗೇ ಏಕಸ್ವಾಮ್ಯವಿದೆಯೆಂದು ನಾನಂದುಕೊಂಡಿದ್ದೆ. ಆದರೆ ಸರಕಾರ ನನ್ನನ್ನೂ ಮೀರಿಸಿದೆ. ಕಾರ್ಮಿಕ ಕಾನೂನುಗಳು, ಸಣ್ಣ ಉಳಿತಾಯ ಬಡ್ಡಿ ದರಗಳು ಕೆಲವು ಉದಾಹರಣೆಗಳಾಗಿವೆ. ರೋಲ್ ಬ್ಯಾಕ್ ಮೋದಿ" ಎಂದು ಅವರು ಬರೆದಿದ್ದಾರೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Varthabharathi

#Hashtags