ಕನ್ನಡ ಪ್ರಭ

1.2M Followers

ಚುನಾವಣಾ ನೀತಿ ಸಂಹಿತೆ ಮುಗಿದ ಕೂಡಲೆ ವೇತನ ಹೆಚ್ಚಳ ಮಾಡುತ್ತೇವೆ, ಮುಷ್ಕರ ಕೈಬಿಡಿ: ಸಾರಿಗೆ ನೌಕರರಿಗೆ ಸರ್ಕಾರ ಮನವಿ

06 Apr 2021.1:18 PM

ಬೆಂಗಳೂರು: ರಾಜ್ಯದಲ್ಲಿ ಉಪಚುನಾವಣೆ ನಡೆಯುವುದರಿಂದ ವೇತನ ಹೆಚ್ಚಳದಂತಹ ಘೋಷಣೆ ಮಾಡಲು ಸಾಧ್ಯವಿಲ್ಲ. ಚುನಾವಣಾ ನೀತಿ ಸಂಹಿತೆ ಪೂರ್ಣಗೊಳ್ಳುತ್ತಿದ್ದಂತೆ ವೇತನ ಹೆಚ್ಚಳ ಮಾಡುತ್ತೇವೆ ಎಂದು ರಾಜ್ಯ ಸರ್ಕಾರ ಹೇಳಿದ್ದು, ಮುಷ್ಕರ ಕೈಬಿಡುವಂತೆ ಸಾರಿಗೆ ನೌಕರರಿಗೆ ಮನವಿ ಮಾಡಿಕೊಂಡಿದೆ.

ಸಾರಿಗೆ ನೌಕರರು ನೀಡಿದ್ದ ಗಡುವಿನೊಳಗೆ ಬೇಡಿಕೆ ಈಡೇರಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ಆರೋಪಿಸಿದ್ದು. ಏ.7 ರಂದು ಸಾರಿಗೆ ಮುಷ್ಕರ ನಡೆಸಲು ನಿರ್ಧರಿಸಿದೆ.

ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಾರಿಗೆ ಸಚಿವ ಲಕ್ಷ್ಮಣ ಸವದಿಯವರು, ಸಾರಿಗೆ ನೌಕರರ ವೇತನ ಹೆಚ್ಚಳ ಮಾಡುವ ಬಗ್ಗೆ ಚುನಾವಣಾ ಆಯೋಗದ ಅನುಮತಿ ಕೋರಲಾಗಿದೆ. ಆಯೋಗ ಮುಕ್ತ ಅನುಮತಿ ನೀಡಿದರೆ ಕೂಡಲೇ ವೇತನ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಇದೀಗ ಉಪಚುನಾವಣೆಗಳು ಇರುವುದರಿಂದ ವೇತನ ಹೆಚ್ಚಳದಂತಹ ಘೋಷಣೆಗಳನ್ನು ಮಾಡಲು ಚುನಾವಣಾ ಆಯೋಗದ ಅನುಮತಿಯ ಅಗತ್ಯವಿದೆ. ಅನುಮತಿ ದೊರೆತರೆ ಕೂಡಲೇ ವೇತನ ಹೆಚ್ಚಳ ಮಾಡುತ್ತೇವೆ. ಇಲ್ಲವಾದಲ್ಲಿ ಚುನಾವಣಾ ನೀತಿ ಸಂಹಿತೆ ಮುಗಿದ ಬಳಿಕ ವೇತನ ಹೆಚ್ಚಳ ಮಾಡುತ್ತೇವೆ. ಅಲ್ಲಿಯವರೆಗೆ ನೌಕರರು ಮುಷ್ಕರ ಕೈಬಿಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ನೌಕರರ ನಾಲ್ಕು ದಿನಗಳ ಮುಷ್ಕರದಿಂದ ಈಗಾಗಲೇ ಸರ್ಕಾರಕ್ಕೆ ರೂ. 7 ಕೋಟಿ ನಷ್ಟವಾಗಿದೆ. ಮತ್ತೆ ಮುಷ್ಕರ ನಡೆಸಿದರೆ ರೂ.2 ಕೋಟಿ ನಷ್ಟವಾಗಲಿದೆ. ಮುಷ್ಕರದಿಂದ ಸಾರ್ವಜನಿಕರಿಗೆ ಪ್ರಮುಖವಾಗಿ ವಿದ್ಯಾರ್ಥಿಗಳಿಗೆ ಭಾರೀ ಸಂಕಷ್ಟ ಎದುರಾಗಲಿದೆ. ನೌಕರರ ಆಗ್ರಹವನ್ನು ಈಡೇರಿಸಲಾಗುತ್ತದೆ. ಆದರೆ, ಈ ಸಮಯದಲ್ಲಿ ಈಡೇರಿಸಲು ಸಾಧ್ಯವಿಲ್ಲ. ಕೊರೋನಾದಿಂದ ಎದುರಾಗಿರುವ ಪರಿಸ್ಥಿತಿಯನ್ನು ನೌಕರರು ಅರ್ಥ ಮಾಡಿಕೊಂಡು ಸಹಕಾರ ನೀಡಬೇಕು. ಆದಾಯ ಅತ್ಯಂತ ಕಡಿಮೆಯಾಗಿರುವುದರಿಂದ ಯಾವುದೇ ವರ್ಷದಲ್ಲೂ ತೆಗೆದುಕೊಳ್ಳದಷ್ಟು ಸಾಲವನ್ನು ಪಡೆದುಕೊಳ್ಳಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

6ನೇ ವೇತನ ಆಯೋಗದ ಶಿಫಾರಸಿನಂತೆ ವೇತನ ಹೆಚ್ಚಳ ಮಾಡಿದರೆ ರೂ.3,800 ಕೋಟಿ ಹೊರೆ ಬೀಳಲಿದೆ. ಇದಕ್ಕೆ ಎಲ್ಲಿಂದ ಹಣ ಪಡೆದುಕೊಳ್ಳಬೇಕು ಎಂಬ ಬಗ್ಗೆ ಚರ್ಚಿಸಬೇಕಲ್ಲವೇ? ಇದಕ್ಕೆ ಸಮಯಾವಕಾಶ ನೀಡಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Prabha

#Hashtags