TV9 ಕನ್ನಡ

371k Followers

Karnataka 2nd PUC Exam 2021 Timetable: ದ್ವಿತೀಯ ಪಿಯುಸಿ ಪರೀಕ್ಷಾ ದಿನಾಂಕ ಪ್ರಕಟ

06 Apr 2021.5:17 PM

Karnataka 2nd PUC Exam 2021 Timetable: ಧಾರವಾಡ: ದ್ವಿತೀಯ ಪಿಯುಸಿ ಪರೀಕ್ಷಾ ದಿನಾಂಕಗಳನ್ನು ಶಿಕ್ಷಣ ಸಚಿವ ಎಸ್.ಸುರೇಶ್​ಕುಮಾರ್ ಮಂಗಳವಾರ ಪ್ರಕಟಿಸಿದರು. ಮೇ 24ರಿಂದ ಜೂ.16ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿವೆ ಎಂದು ಸಚಿವರು ತಿಳಿಸಿದ್ದಾರೆ. ಈ ವರ್ಷ ಒಟ್ಟು 6,72,000 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳಲು ನೋಂದಾಯಿಸಿಕೊಂಡಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆ ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ. ಈ ವರ್ಷ ಆಫ್‌ಲೈನ್ ತರಗತಿಗೆ ಸಮಸ್ಯೆ ಎದುರಾಯ್ತು. ಆದರೂ ಪಠ್ಯಕ್ರಮವನ್ನು ಸಂಪೂರ್ಣವಾಗಿ ಪೂರ್ಣಗೊಳಿಸಲಾಗಿದೆ ಎಂದು ಸಚಿವರು ಹೇಳಿದರು. ಪಿಯುಸಿ ಪರೀಕ್ಷಾ ಕೇಂದ್ರಗಳು ಈ ಬಾರಿ ಕೇವಲ ಪರೀಕ್ಷಾ ಕೇಂದ್ರಗಳಾಗಿರಲ್ಲ; ಅವು ಸುರಕ್ಷಾ ಕೇಂದ್ರಗಳೂ ಆಗಿರುತ್ತವೆ. ಸುಲಲಿತವಾಗಿ ಪರೀಕ್ಷೆ ನಡೆಸಲು ಅಗತ್ಯ ಕ್ರಮಕೈಗೊಳ್ಳುತ್ತೇವೆ.

ಮಕ್ಕಳ ಬಗ್ಗೆ ಹೆಚ್ಚು ಎಚ್ಚರಿಕೆ ಮತ್ತು ಕಾಳಜಿ ವಹಿಸುತ್ತೇವೆ ಎಂದು ತಿಳಿಸಿದರು.

ಮೇ 24ರಂದು ಇತಿಹಾಸ, 29ಕ್ಕೆ ಕನ್ನಡ, 31ಕ್ಕೆ ಗಣಿತ, ಲೆಕ್ಕಶಾಸ್ತ್ರ, ಜೂನ್ 2ಕ್ಕೆ ರಾಜ್ಯಶಾಸ್ತ್ರ, ಕಂಪ್ಯೂಟರ್​ ಸೈನ್ಸ್​, 3ಕ್ಕೆ ಜೀವಶಾಸ್ತ್ರ, 4ಕ್ಕೆ ಅರ್ಥಶಾಸ್ತ್ರ, 7ಕ್ಕೆ ವ್ಯವಹಾರ ಅಧ್ಯಯನ, ಭೌತಶಾಸ್ತ್ರ, 8ಕ್ಕೆ ಭೂಗರ್ಭಶಾಸ್ತ್ರ, 10ಕ್ಕೆ ಸಮಾಜಶಾಸ್ತ್ರ, ರಸಾಯನಶಾಸ್ತ್ರ, 11ಕ್ಕೆ ಉರ್ದು, ಸಂಸ್ಕೃತ, 12ಕ್ಕೆ ಸಂಖ್ಯಾಶಾಸ್ತ್ರ, 14ಕ್ಕೆ ಐಚ್ಛಿಕ ಕನ್ನಡ, 15ಕ್ಕೆ ಹಿಂದಿ, 16ಕ್ಕೆ ಇಂಗ್ಲಿಷ್.

ದ್ವಿತೀಯ ಪಿಯುಸಿ ವೇಳಾಪಟ್ಟಿ

ಕೊರೊನಾ ವೈರಸ್​ ಸೋಂಕು ವ್ಯಾಪಕವಾಗಿ ಹರಡುವುದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ದೇಶವ್ಯಾಪಿ ಲಾಕ್​ಡೌನ್ ಜಾರಿಗೊಳಿಸಲಾಗಿತ್ತು. ಪಠ್ಯಕ್ರಮ ಮುಗಿಸುವುದೇ ಕಷ್ಟ ಎಂಬ ಪರಿಸ್ಥಿತಿಯನ್ನು ಶಿಕ್ಷಕರು ಸವಾಲಾಗಿ ಸ್ವೀಕರಿಸಿದ್ದರು. ಆನ್​ಲೈನ್​ ಕ್ಲಾಸ್​ಗಳು ನಿತ್ಯದ ವಿದ್ಯಮಾನಗಳಾದವು. ಆನ್​ಲೈನ್​ ತರಗತಿ ನಡೆಸಲು ಬೇಕಾದ ಅಗತ್ಯ ಮೂಲಸೌಕರ್ಯಗಳನ್ನು ಸರ್ಕಾರವೂ ಆದ್ಯತೆಯ ಮೇರೆಗೆ ಕಾಲೇಜುಗಳಿಗೆ ಒದಗಿಸಿತು. ಉಪನ್ಯಾಸಕರೂ ಬಹುಬೇಗ ಹೊಸಕಾಲಕ್ಕೆ ಒಗ್ಗಿಕೊಂಡು ತರಗತಿಗಳನ್ನು ಆರಂಭಿಸಿದರು. ಮೊಬೈಲ್ ನೋಡಿ ಸಮಯ ಹಾಳು ಮಾಡ್ತೀರಿ ಎಂದು ಪೋಷಕರಿಂದ ಬೈಸಿಕೊಳ್ಳುತ್ತಿದ್ದ ಮಕ್ಕಳಿಗೆ ಮೊಬೈಲ್ ಈಗ ಪಾಠ ಕಲಿಸುವ ಆಕರವೂ ಆಯಿತು.

ಕಳೆದ ವರ್ಷ ಅಂದರೆ 2020ರ ಮಾರ್ಚ್ 4ರಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿತ್ತು. ಲಾಕ್​ಡೌನ್ ಜಾರಿ ಕಾರಣದಿಂದ ಮುಂದೂಡಲಾಗಿದ್ದ ಇಂಗ್ಲಿಷ್ ಪರೀಕ್ಷೆಯನ್ನು ಜೂನ್ 18ರಂದು ನಡೆಸಲಾಗಿತ್ತು. ಒಟ್ಟು 6.75 ಲಕ್ಷ ಮಂದಿ ಪರೀಕ್ಷೆ ಬರೆದಿದ್ದರು. ಈ ಪೈಕಿ 4,17,297 ಮಕ್ಕಳು ಉತ್ತೀರ್ಣರಾಗಿದ್ದರು. ಸರಾಸರಿ ಫಲಿತಾಂಶ ಶೇ 61.80 ಇತ್ತು. ಎಂದಿನಂತೆ ಕಳೆದ ವರ್ಷವೂ ಬಾಲಕಿಯರದೇ ಮೇಲುಗೈ. ಬಾಲಕಿಯರು ಶೇ 68.73, ಬಾಲಕರು ಶೇ 54.77ರ ಪ್ರಮಾಣದಲ್ಲಿ ಉತ್ತೀರ್ಣರಾಗಿದ್ದರು.

ಶೇ 90.71ರಷ್ಟು ಫಲಿತಾಂಶ ಪಡೆದಿದ್ದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಪ್ರಥಮ ಸ್ಥಾನದಲ್ಲಿದ್ದವು. ಶೇ 54.22 ಫಲಿತಾಂಶ ಪಡೆದ ವಿಜಯಪುರ ಕೊನೆಯ ಸ್ಥಾನದಲ್ಲಿತ್ತು. ಒಟ್ಟು 68,866 ಮಂದಿ ಉನ್ನತ ಶ್ರೇಣಿ (ಡಿಸ್ಟಿಂಕ್ಷನ್), 2,21,866 ಮಂದಿ ಪ್ರಥಮ ದರ್ಜೆ, 77,455 ಮಂದಿ ದ್ವಿತೀಯ ದರ್ಜೆ, 49,110 ಮಂದಿ ಶೇ 50ಕ್ಕಿಂತ ಕಡಿಮೆ ಅಂಕ ಪಡೆದು ಉತ್ತೀರ್ಣರಾಗಿದ್ದರು.

(KSEB Karnataka 2nd PUC Exam 2021 Timetable announced by Karnataka Education Department Second PUC Exam 2021 from 24th May)

The post Karnataka 2nd PUC Exam 2021 Timetable: ದ್ವಿತೀಯ ಪಿಯುಸಿ ಪರೀಕ್ಷಾ ದಿನಾಂಕ ಪ್ರಕಟ appeared first on TV9 Kannada.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: TV9 Kannada

#Hashtags