ಕನ್ನಡದುನಿಯಾ

1.6M Followers

ನೌಕರರಿಗೆ ಭರ್ಜರಿ ಗುಡ್ ನ್ಯೂಸ್: ವೇತನ, ಪಿಂಚಣಿ ವಿಳಂಬವಾದ್ರೆ ಬಡ್ಡಿ ಸೇರಿಸಿ ಕೊಡಲು ʼಸುಪ್ರೀಂʼ ಆದೇಶ

26 Feb 2021.06:29 AM

ನವದೆಹಲಿ: ವೇತನ, ಪಿಂಚಣಿ ಸಮಯಕ್ಕೆ ಸರಿಯಾಗಿ ಪಡೆಯುವುದು ಸರ್ಕಾರಿ ನೌಕರರ ಹಕ್ಕು. ವೇತನ, ಪಿಂಚಣಿ ಪಾವತಿ ವಿಳಂಬವಾದರೆ ಅದಕ್ಕೆ ಸಮಂಜಸವಾದ ಬಡ್ಡಿಯನ್ನು ಕೂಡ ಪಾವತಿಸಬೇಕು ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.

ಸ್ವಲ್ಪ ಕಾಲದವರೆಗೆ ಸರ್ಕಾರದಿಂದ ಪಿಂಚಣಿ ಮತ್ತು ವೇತನ ಮುಂದೂಡಿದ್ದ ಪ್ರಕರಣದಲ್ಲಿ ಶೇಕಡ 6 ರಷ್ಟು ಬಡ್ಡಿ ನೀಡುವಂತೆ ಸುಪ್ರೀಂ ಕೋರ್ಟ್ ಆಂಧ್ರಪ್ರದೇಶ ಸರ್ಕಾರಕ್ಕೆ ಆದೇಶಿಸಿದೆ. ಇದೇ ಪ್ರಕರಣದಲ್ಲಿ ಹೈಕೋರ್ಟ್ ಶೇಕಡ 12 ರಷ್ಟು ಬಡ್ಡಿ ನಿಗದಿಪಡಿಸಿತ್ತು.

ಕೊರೋನಾ ಸಾಂಕ್ರಮಿಕ ರೋಗದ ಕಾರಣದಿಂದಾಗಿ ಆರ್ಥಿಕ ಬಿಕ್ಕಟ್ಟು ಉಂಟಾದ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಸರ್ಕಾರ ಸರ್ಕಾರಿ ನೌಕರರ ವೇತನ ಮತ್ತು ಪಿಂಚಣಿಯನ್ನು 2020 ರ ಮಾರ್ಚ್, ಏಪ್ರಿಲ್ ನಲ್ಲಿ ಸ್ವಲ್ಪ ಸಮಯದವರೆಗೆ ಮುಂದೂಡಿತ್ತು.

ಈ ಬಗ್ಗೆ ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದು ತಡೆಹಿಡಿಯಲಾಗಿದ್ದ ವೇತನ ಮತ್ತು ಪಿಂಚಣಿ ಪಾವತಿಸಬೇಕು ಎಂದು ಒತ್ತಾಯಿಸಿದ್ದರು. ಸಮಯಕ್ಕೆ ಸರಿಯಾಗಿ ವೇತನ, ಪಿಂಚಣಿ ಪಡೆಯುವುದು ನೌಕರರ ಹಕ್ಕು ಎಂದು ಹೈಕೋರ್ಟ್ ಗೆ ಮನವಿ ಮಾಡಿದ್ದರು.

ಹೈಕೋರ್ಟ್ ನಲ್ಲಿ ವಿಚಾರಣೆ ನಡೆದು ಸರ್ಕಾರ ಪ್ರತಿ ತಿಂಗಳು ಕೊನೆಯ ದಿನಾಂಕದಂದು ನೌಕರರಿಗೆ ವೇತನ, ಪಿಂಚಣಿ ಪಾವತಿಸಬೇಕೆಂದು ಹೈಕೋರ್ಟ್ ಆದೇಶ ನೀಡಿದೆ. ಇಲಾಖೆ ವಿಚಾರಣೆ, ನ್ಯಾಯಾಂಗ ಪ್ರಕ್ರಿಯೆಯಲ್ಲಿ ನೌಕರ ತಪ್ಪಿತಸ್ಥನಾಗಿದ್ದರೆ ಇಂತಹ ಪಿಂಚಣಿ ನಿಲ್ಲಿಸಬಹುದಾಗಿದೆ ಎಂದು ತಿಳಿಸಿದೆ. ಅಲ್ಲದೆ, ತಡೆ ಹಿಡಿಯಲಾದ ವೇತನ ಮತ್ತು ಪಿಂಚಣಿಗೆ ಶೇಕಡ 12ರಷ್ಟು ಬಡ್ಡಿಯೊಂದಿಗೆ ಪಾವತಿಸಬೇಕೆಂದು ಆಂಧ್ರಪ್ರದೇಶ ಸರ್ಕಾರಕ್ಕೆ ಹೈಕೋರ್ಟ್ ಆದೆಶಿಸಿದೆ.

ಈ ನಿರ್ಧಾರವನ್ನು ಸುಪ್ರೀಂಕೋರ್ಟ್ನಲ್ಲಿ ಆಂಧ್ರ ಸರ್ಕಾರ ಪ್ರಶ್ನಿಸಿದ್ದು, ಕೊರೋನಾ ಸಂಕಷ್ಟದಿಂದ ನೌಕರರ ವೇತನ ಪಿಂಚಣಿ ಮುಂದೂಡಲಾಗಿದೆ ಎಂದು ತಿಳಿಸಿದೆ. ಉತ್ತಮ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಬಡ್ಡಿ ಪಾವತಿಸುವಂತೆ ಕೋರ್ಟ್ ಆದೇಶಿಸಿರುವುದು ಸರಿಯಲ್ಲವೆಂದು ಆಂಧ್ರ ಸರ್ಕಾರ ಹೇಳಿದ್ದು, ಆದರೆ ಇದನ್ನು ಒಪ್ಪದ ಸುಪ್ರೀಂ ಕೋರ್ಟ್ ವೇತನ ಮತ್ತು ಪಿಂಚಣಿ ವಿಳಂಬವಾದ ಕಾರಣ ಶೇಕಡ 6 ರಷ್ಟು ಬಡ್ಡಿ ಪಾವತಿಸುವಂತೆ ಆಂಧ್ರ ಸರ್ಕಾರಕ್ಕೆ ಆದೇಶಿಸಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Dunia

#Hashtags