ಕನ್ನಡ ಪ್ರಭ

1.2M Followers

ಸರ್ಕಾರಿ ಮಹಿಳಾ ಉದ್ಯೋಗಿಗಳಿಗೆ ಬಂಪರ್ ಗಿಫ್ಟ್, 6 ತಿಂಗಳು ಶಿಶು ಆರೈಕೆ ರಜೆ; ಉದ್ಯಮಿಗಳಿಗೆ 'ಎಲಿವೇಟ್ ವುಮನ್' ಯೋಜನೆ!

08 Mar 2021.4:37 PM

ಬೆಂಗಳೂರು: ಈ ಬಾರಿ ವಿಶ್ವ ಮಹಿಳಾ ದಿನದಂದೇ 2021-22ನೇ ಸಾಲಿನ ಬಜೆಟ್ ಮಂಡಿಸಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮಹಿಳೆಯರ ಅಭಿವೃದ್ಧಿಗಾಗಿ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ.

ರಾಜ್ಯ ಸರ್ಕಾರಿ ಮಹಿಳಾ ನೌಕರರಿಗೆ ಬಂಪರ್ ಗಿಫ್ಟ್ ನೀಡಿರುವ ಸಿಎಂ ಯಡಿಯೂರಪ್ಪ ಅವರು, ಆರು ತಿಂಗಳು ಶಿಶು ಆರೈಕೆ ರಜೆ ನೀಡುವುದಾಗಿ ಘೋಷಿಸಿದ್ದಾರೆ.

ರಾಜ್ಯ ಸರ್ಕಾರದ ಮಹಿಳಾ ಉದ್ಯೋಗಿಗಳಿಗೆ ಈಗಾಗಲೇ ಅಸ್ತಿತ್ವದಲ್ಲಿರುವ 6 ತಿಂಗಳ ಹೆರಿಗೆ ರಜೆಯೊಂದಿಗೆ ಆರು ತಿಂಗಳು ಮಕ್ಕಳ ಆರೈಕೆ ರಜೆ ನೀಡಲಾಗುವುದು. ಆಡಳಿತದಲ್ಲಿ ಬಹುಮುಖ್ಯ ಭಾಗವಾಗಿರುವ ಮಹಿಳೆಯರ ಕಲ್ಯಾಣಕ್ಕೆ ಪೂರಕವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸಿಎಂ ಹೇಳಿದರು.

ರಾಜ್ಯಾದ್ಯಂತ 60 ಸಾವಿರ ಮಹಿಳೆಯರಿಗೆ ಉದ್ಯೋಗ, ಶೇ.4 ರಷ್ಟು ಬಡ್ಡಿದರದಲ್ಲಿ ಮಹಿಳಾ ಉದ್ಯಮಿಗಳಿಗೆ ಸಾಲ ನೀಡಲಾಗುತ್ತದೆ.

ಹಪ್ಪಳ, ಉಪ್ಪಿನಕಾಯಿ ತಯಾರಕರಿಗೆ ಆನ್‌ಲೈನ್ ಮಾರುಕಟ್ಟೆ ಸೌಲಭ್ಯ, ಮಹಿಳಾ ಉದ್ಯಮಿಗಳನ್ನು ಪ್ರೋತ್ಸಾಹಿಸಲು 'ಎಲಿವೇಟ್ ವುವನ್' ಎಂಬ ಕಾರ್ಯಕ್ರಮವನ್ನು ಜಾರಿಗೊಳಿಸುವುದಾಗಿ ಹೇಳಿದ್ದಾರೆ.

ಈ ಯೋಜನೆಯಡಿ ಹಣಕಾಸು ಸೌಲಭ್ಯ, ಆಪ್ತ ಸಲಹೆಯನ್ನು ನೀಡಲಾಗುತ್ತದೆ. ಮಹಿಳಾ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ವಾರ್ಷಿಕ ಮೇಳವನ್ನು ಆಯೋಜನೆ ಮಾಡಲಾಗುತ್ತದೆ.

ಮಹಿಳೆಯರಿಗೆ 2 ಕೋಟಿ ರೂ. ವರೆಗೆ ಸಾಲ
ಮಹಿಳೆಯರಿಗೆ 2 ಕೋಟಿ ರೂಪಾಯಿಯವರೆಗೆ ಸಾಲ, ಎಪಿಎಂಸಿಗಳಲ್ಲಿ ಮಹಿಳೆಯರಿಗೆ ಶೇ.10ರಷ್ಟು ರಿಯಾಯಿತಿ ಮೀಸಲಾತಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

ಸಣ್ಣ ಉದ್ಯಮ ನಡೆಸುವ ಮಹಿಳೆಯರಿಗೆ ಆಹಾರ ಸುರಕ್ಷತೆ ಬ್ರ್ಯಾಂಡಿಂಗ್ ಮುಂತಾದ ತಾಂತ್ರಿಕ ನೆರವು ನೀಡಲಾಗುತ್ತದೆ. ಜಿಲ್ಲಾ ಕೇಂದ್ರಗಳಲ್ಲಿ ಶಿಶುಪಾಲನಾ ಕೇಂದ್ರ ಸ್ಥಾಪನೆ, ಬಿಎಂಟಿಸಿ ಬಸ್‌ಪಾಸ್‌ನಲ್ಲಿ ಮಹಿಳೆಯರಿಗೆ ವನಿತಾ ಸಂಗಾತಿ ಹೆಸರಿನಲ್ಲಿ ರಿಯಾಯಿತಿಯನ್ನು ಕೂಡ ಸರ್ಕಾರ ಘೋಷಿಸಿದೆ.

ಕೊಪ್ಪಳದಲ್ಲಿ ನಾರಿ ಸುವರ್ಣ ಕುರಿ ಸಂವರ್ಧನ ಕೇಂದ್ರ, ಚಾಮರಾಜನಗರದಲ್ಲಿ ಅರಿಶಿಣ ಮಾರುಕಟ್ಟೆ, ಸಾವಯವ ಮತ್ತು ಸಿರಿಧಾನ್ಯ ಮಾರಾಟಕ್ಕೆ ಇ-ಮಾರುಕಟ್ಟೆಯನ್ನು ಸ್ಥಾಪನೆ ಮಾಡಲಾಗುತ್ತದೆ.

ಉತ್ಕೃಷ್ಟತಾ ಕೇಂದ್ರ
ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಸೂಕ್ತ ನೆರವು ಹಾಗೂ ಮಾರ್ಗದರ್ಶನ ನೀಡಲು ನಿಮ್ಹಾನ್ಸ್ ಮತ್ತು ರಾಷ್ಟ್ರೀಯ ಕಾನೂನು ಶಾಲೆಯ ಸಹಯೋಗದೊಂದಿಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ ಮಾಡಲಾಗುತ್ತದೆ. ರಾಜ್ಯದ ಸ್ವ-ಸಹಾಯ ಗುಂಪುಗಳು ಮತ್ತು ಅವುಗಳ ಒಕ್ಕೂಟವನ್ನು ಬಲಪಡಿಸಲು ಸ್ವಸಹಾಯ ಗುಂಪುಗಳ ನೀತಿ ಜಾರಿ, ಎಲ್ಲಾ ಸ್ವಸಹಾಯ ಗುಂಪುಗಳನ್ನು ಜೀವನೋಪಾಯ ಅಭಿಯಾನದ ವ್ಯಾಪ್ತಿಗೆ ತರಲು ಕ್ರಮ ಸೇರಿದಂತೆ ಮಹಿಳಾ ಪ್ರಗತಿ ಉದ್ದೇಶಿತ ಯೋಜನೆಗಳಿಗೆ ಒಟ್ಟು 37,188 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Prabha

#Hashtags