ವಾರ್ತಾಭಾರತಿ

554k Followers

ಆರೋಗ್ಯ ಇಲಾಖೆ ಸಿಬ್ಬಂದಿಗೆ ಮುಂದಿನ 50 ದಿನಗಳವರೆಗೆ ರಜೆ ಇಲ್ಲ: ಸಚಿವ ಸುಧಾಕರ್

18 Mar 2021.4:03 PM

ಬೆಂಗಳೂರು, ಮಾ.18: ರಾಜ್ಯದಲ್ಲಿ ಕೋವಿಡ್ 19 ಸೋಂಕಿನ ಎರಡನೆ ಅಲೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಕೋವಿಡ್ ಸೇವೆಯಲ್ಲಿ ತೊಡಗಿಕೊಂಡಿರುವ ಆರೋಗ್ಯ ಇಲಾಖೆಯ ಸಿಬ್ಬಂದಿ, ಅಧಿಕಾರಿಗಳು ಸೇರಿದಂತೆ ನನ್ನನ್ನು ಒಳಗೊಂಡಂತೆ ಇಂದಿನಿಂದ 50 ದಿನ ಯಾರಿಗೂ ರಜೆ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಕೋವಿಡ್ 19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ಗುರುವಾರ ವಿಧಾನಸೌಧದಲ್ಲಿ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೋವಿಡ್ ಮೊದಲನೆ ಅಲೆ ಹಾಗೂ ಎರಡನೆ ಅಲೆ ನಡುವೆ ಸಾಕಷ್ಟು ವ್ಯತ್ಯಾಸ ಇದೆ. ಎರಡನೆ ಅಲೆ ತಡೆಗಟ್ಟಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ನಾವೆಲ್ಲರೂ ಸೇರಿ ನಮ್ಮ ರಾಜ್ಯವನ್ನು ಕೊರೋನ ಮುಕ್ತ ರಾಜ್ಯವನ್ನಾಗಿ ಮಾಡಬೇಕಿದೆ ಎಂದರು.

ಬೆಂಗಳೂರಿನಲ್ಲಿರುವ ಸರಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಲು 1000 ಹಾಸಿಗೆಗಳನ್ನು ಮೀಸಲಿಡಲಾಗುವುದು. ಕೋವಿಡ್ ಕೇರ್ ಸೆಂಟರ್ ಗಳು ಸೋಮವಾರದಿಂದ ಆರಂಭವಾಗಲಿವೆ. ಬೆಂಗಳೂರಿನಲ್ಲಿ ಆಂಬ್ಯುಲೆನ್ಸ್ ಗಳಿಗೆ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಪ್ರತಿಯೊಂದು ವಾರ್ಡ್ ಗೂ ಒಂದು ಆಂಬ್ಯುಲೆನ್ಸ್ ಇರುವಂತೆ ಒಟ್ಟು 200 ಆಂಬ್ಯುಲೆನ್ಸ್ ಗಳ ವ್ಯವಸ್ಥೆ ಮಾಡಲಾಗುತ್ತದೆ ಎಂದು ಸುಧಾಕರ್ ತಿಳಿಸಿದರು.

ಕೋವಿಡ್ ವಾರ್ ರೂಂ ಈ ಹಿಂದೆ ಇದ್ದಂತೆ ಮುಂದುವರಿಯುತ್ತದೆ. ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಹಾಗೂ ವಾರ್ಡ್ ಗಳನ್ನು ಮೀಸಲಿಡುವ ಸಂಬಂಧ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಚರ್ಚೆ ಮಾಡಲಿದ್ದಾರೆ. ಕೋವಿಡ್ ಸೇವೆಗಾಗಿ ಲಭ್ಯವಿರುವ ವೈದ್ಯರು ಹಾಗೂ ನರ್ಸ್ ಗಳ ಸೇವೆಯನ್ನು ಇನ್ನು ಮೂರು ತಿಂಗಳು ತಾತ್ಕಾಲಿಕವಾಗಿ ಮುಂದುವರಿಸುತ್ತೇವೆ. ಗೃಹ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿಯನ್ನು ಕೋವಿಡ್ ಸೇವೆಗಾಗಿ ಬಳಕೆ ಮಾಡಿಕೊಳ್ಳಲಾಗುವುದು ಎಂದು ಅವರು ಹೇಳಿದರು.

ಇದೇ ವಾರದಲ್ಲಿ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲಾಗುವುದು. ಎರಡನೇ ಅಲೆಯ ವೇಳೆ ರೋಗಿಗಳ ಸಂಖ್ಯೆ ಹೆಚ್ಚಾದರೆ ಖಾಸಗಿ ಆಸ್ಪತ್ರೆಗಳ ವ್ಯವಸ್ಥೆ ಬೇಕಾಗುತ್ತದೆ. ಯಾವುದೇ ಸಂಸ್ಥೆಯಲ್ಲಿ ಲೋಪ ಕಂಡುಬಂದರೆ ಆಯಾ ಮುಖ್ಯಸ್ಥರನ್ನೇ ಹೊಣೆ ಮಾಡಲಾಗುವುದು. ಮೊದಲ ಬಾರಿ ಕೊರೋನ ಬಂದಾಗ ಸರಿಯಾದ ಮಾಹಿತಿ, ಜ್ಞಾನ ಇರಲಿಲ್ಲ. ಅದನ್ನು ಯಶಸ್ವಿಯಾಗಿ ನಿಯಂತ್ರಣಕ್ಕೆ ತರಲಾಗಿದೆ. ಎರಡನೇ ಅಲೆ ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಈಗ ನಮ್ಮ ಬಳಿ ಲಸಿಕೆಯೂ ಇದೆ. ಹಾಗಾಗಿ ಹೆಚ್ಚು ಜನರು ಲಸಿಕೆ ಹಾಕಿಸಿಕೊಳ್ಳಬೇಕು ಹಾಗೂ ತಪ್ಪದೇ ಸುರಕ್ಷತಾ ಕ್ರಮ ಪಾಲಿಸಬೇಕು. ಈ ಸಮಯದಲ್ಲಿ ಲಸಿಕೆ ಮುಖ್ಯ. ಕೆಲ ದಿನಗಳ ಹಿಂದೆ ಒಂದೇ ದಿನ ಎರಡೂವರೆ ಲಕ್ಷ ಲಸಿಕೆ ನೀಡಲಾಗಿದೆ. ಪ್ರತಿ ದಿನ ಮೂರು ಲಕ್ಷ ಮಂದಿಗೆ ಲಸಿಕೆ ನೀಡುವ ಗುರಿ ನಿಗದಿಪಡಿಸಲಾಗಿದೆ. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ, 45 ವರ್ಷ ಮೇಲ್ಪಟ್ಟು ಆಹಾ-ಅಸ್ವಸ್ಥತೆ ಹೊಂದಿರುವವರಿಗೆ ಲಸಿಕೆ ಹಾಕಿಸಬೇಕು. ಈ ಮೂಲಕ 2 ನೇ ಅಲೆ ತಡೆಯಬೇಕು ಎಂದು ಸುಧಾಕರ್ ಹೇಳಿದರು.

ಸರಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿಯೂ ಸಭೆ ಮಾಡಲಾಗಿದೆ. ಕೋವಿಡ್ ಸೇವೆಗಾಗಿ ಕಂದಾಯ ಇಲಾಖೆಯವರನ್ನು ಬಳಕೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಆರೋಗ್ಯ ಸೇತು ಆಯಪ್ ಬಳಕೆಯನ್ನು ಮುಂದುವರಿಸುತ್ತೇವೆ. ತಾಂತ್ರಿಕ ಸೌಲಭ್ಯವನ್ನು ಬಳಕೆ ಮಾಡಲಾಗುವುದು. ವ್ಯವಸ್ಥೆಯನ್ನು ಪಾರದರ್ಶಕವಾಗಿರಿಸಲು ಹಾಗೂ ಎಲ್ಲ ಮಾಹಿತಿ ತಕ್ಷಣ ದೊರೆಯಲು ರಿಯಲ್ ಟೈಮ್ ವ್ಯವಸ್ಥೆ ಬಳಸಲಾಗುವುದು. ಎರಡನೆ ಅಲೆಯ ಗಂಭೀರತೆಯನ್ನು ಅರಿತು ಜನರಿಗೆ ಅಗತ್ಯ ಮಾರ್ಗದರ್ಶನ ಮಾಡಬೇಕು. ಯಾವುದೆ ಕಾರಣಕ್ಕೂ ಸುಳ್ಳು ಅಥವಾ ಆಧಾರ ರಹಿತವಾದ ಸುದ್ದಿಗಳನ್ನು ಬಿತ್ತರಿಸದಂತೆ ಮಾಧ್ಯಮಗಳಿಗೆ ಸುಧಾಕರ್ ಮನವಿ ಮಾಡಿದರು.

ಇಡೀ ದೇಶದಲ್ಲಿ ನಮ್ಮ ರಾಜ್ಯದಲ್ಲಿ ಕೋವಿಡ್‍ನಿಂದ ಮರಣ ಹೊಂದಿದ ಪ್ರಮಾಣ ಸರಾಸರಿ ಕಡಿಮೆ ಇದೆ. ಅಲ್ಲದೆ, ಪಾಸಿಟಿವಿಟಿ ಪ್ರಮಾಣವು ಕಡಿಮೆ ಇದೆ. ಸೋಂಕಿತರು ಚಿಕಿತ್ಸೆ ಪಡೆದು ಗುಣಮುಖರಾದವರ ಸಂಖ್ಯೆ ಶೇ.97ರಷ್ಟಿದೆ. ಮನೆಯಲ್ಲಿರುವ 60 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆಯನ್ನು ಕೊಡಿಸಬೇಕು. ಈ ಸಂಬಂಧ ಮನೆಯಲ್ಲಿರುವರು ಹಿರಿಯ ನಾಗರಿಕರ ಮನವೊಲಿಸಿ ಕರೆ ತರಬೇಕು ಎಂದು ಸುಧಾಕರ್ ಹೇಳಿದರು.

ಲಸಿಕೆ ಹಾಕಿಸಿಕೊಂಡ ಬಳಿಕ ಸೋಂಕು ಬರೋದಿಲ್ಲ ಅಂತ ಮಾಸ್ಕ್ ಧರಿಸುವುದನ್ನು ಯಾವುದೆ ಕಾರಣಕ್ಕೂ ಮರೆಯಬಾರದು. ಕಡ್ಡಾಯವಾಗಿ ಮಾಸ್ಕ್ ಬಳಸಬೇಕು, ಸುರಕ್ಷಿತ ಅಂತರವನ್ನು ಕಾಪಾಡಿಕೊಳ್ಳಬೇಕು. ಗುಂಪು ಸೇರಲು ಹೋಗಬಾರದು. ಪತ್ರಕರ್ತರಿಗೂ ಇಂದಿನಿಂದ ಲಸಿಕೆ ಹಾಕಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಸಣ್ಣಪುಟ್ಟ ಲೋಪಗಳಿದ್ದರೆ ಅದನ್ನು ನಮ್ಮ ಗಮನಕ್ಕೆ ತನ್ನಿ. ಅದನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ. ಎಲ್ಲರೂ ಸೇರಿ ಸೋಂಕು ನಿಯಂತ್ರಿಸೋಣ ಎಂದು ಅವರು ಮನವಿ ಮಾಡಿದರು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Varthabharathi

#Hashtags