ಕನ್ನಡ ಪ್ರಭ

1.2M Followers

7ನೇ ದಿನಕ್ಕೆ ಕಾಲಿಟ್ಟ ರಸ್ತೆ ಸಾರಿಗೆ ನೌಕರರ ಮುಷ್ಕರ, ಕೆಲವೆಡೆ ಬಸ್ ಮೇಲೆ ಕಲ್ಲು ತೂರಾಟ!

13 Apr 2021.9:36 PM

ಬೆಂಗಳೂರು: 6ನೇ ವೇತನ ಆಯೋಗದ ವರದಿಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ರಾಜ್ಯ ರಸ್ತೆ ಸಾರಿಗೆ ನಿಗಮ(ಕೆಎಸ್ ಆರ್ ಟಿಸಿ)ದ ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಏಳನೇ ದಿನ ಕಾಲಿಟ್ಟಿದ್ದು, ಮಂಗಳವಾರ ಕೆಲವೇ ಕಾರ್ಮಿಕರು ಕರ್ತವ್ಯಕ್ಕೆ ಹಾಜರಾಗಿದ್ದರು.

ಸುಮಾರು 1.37 ಲಕ್ಷ ಕಾರ್ಮಿಕರ ಪೈಕಿ ಬಹುತೇಕರು ಕೆಲಸದಿಂದ ದೂರ ಉಳಿದಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಕೆಲ ನೌಕರರು ಕೆಲಸವಿಲ್ಲದೇ ವೇತನವಿಲ್ಲ ಎಂಬ ಬೆದರಿಕೆ ನಡುವೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಆರನೇ ವೇತನ ಆಯೋಗದ ವರದಿಯನ್ನು ಸರ್ಕಾರಿ ನೌಕರರಿಗೆ ಸಮನಾಗಿ ಜಾರಿಗೆ ತರುವ ವಿಷಯದ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ,ಈ ವಿಷಯವಾಗಿ ನೌಕರರೊಂದಿಗೆ ಯಾವುದೇ ಮಾತುಕತೆ ನಡೆಸುವುದಿಲ್ಲ. ಕರ್ತವ್ಯಕ್ಕೆ ಹಾಜರಾಗದಿದ್ದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.

ಸಂಸ್ಥೆ ರಾಜ್ಯಾದ್ಯಂತ ಕೆಲ ಕಾರ್ಮಿಕರು ಕರ್ತವ್ಯವಕ್ಕೆ ಹಾಜರಾಗುವುದರೊಂದಿಗೆ ಸೋಮವಾರ ರಾಜ್ಯದೊಳಗೆ ಮತ್ತು ಅಂತರ-ರಾಜ್ಯ ಮಾರ್ಗಗಳಲ್ಲಿ 3000 ಬಸ್ ಗಳು ಸಂಚರಿಸಿವೆ ಎಂದು ಕೆಎಸ್ ಆರ್ ಟಿಸಿ ಪ್ರಕಟಣೆ ತಿಳಿಸಿದೆ.

ಮುಷ್ಕರ ನಡೆಸುತ್ತಿರುವ ಸಹೋದ್ಯೋಗಿಗಳ ಬೆದರಿಕೆ ನಡುವೆಯೂ ಕೆಲಸಕ್ಕೆ ಮರಳಿದ ನೌಕರರಿಗೆ ಸೋಮವಾರ ಮಾರ್ಚ್ ವೇತನವನ್ನು ನೀಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ರಾಜ್ಯ ಸರ್ಕಾರಿ ನೌಕರರಿಗೆ ಸಮನಾಗಿ ಸಂಬಳ ಕೋರಿ ರಾಜ್ಯ ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಗಳಾದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ ಆರ್ ಟಿಸಿ), ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಎನ್ ಇಕೆಆರ್ ಟಿಸಿ), ವಾಯವ್ಯ ರಸ್ತೆ ಸಾರಿಗೆ ನಿಗಮ (ಎನ್ ಡಬ್ಲ್ಯುಆರ್ ಟಿಸಿ) ) ಮತ್ತು ಬೆಂಗಳೂರು ಮಹಾನಗರ ಸಾರಿಗೆ ನಿಗಮ (ಬಿಎಂಟಿಸಿ)ದ ನೌಕರರು ಮುಷ್ಕರ ನಡೆಸುತ್ತಿದ್ದು. ಈ ನಾಲ್ಕೂ ನಿಗಮಗಳು 26,000 ಬಸ್ ಗಳನ್ನು ಹೊಂದಿವೆ. 6,000 ಬಸ್ ಗಳನ್ನು ಹೊಂದಿರುವ ಬಿಎಂಟಿಸಿಯನ್ನು ಬೆಂಗಳೂರು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಜೀವನಾಡಿ ಎಂದು ಪರಿಗಣಿಸಲಾಗಿದೆ.

ನಿಗಮಗಳು ಮತ್ತು ಸರ್ಕಾರದ ನಡುವಿನ ಬಿಕ್ಕಟ್ಟು ಬಗೆಹರಿಯದಿರುವುದರಿಂದ ಪ್ರಯಾಣಿಕರು ತೀವ್ರ ತೊಂದರೆ ಎದುರಿಸುತ್ತಿದ್ದಾರೆ. ಮುಖ್ಯವಾಗಿ ಮಂಗಳವಾರ ಯುಗಾದಿ ಆಚರಿಸಲು ತಮ್ಮ ಸ್ವಂತ ಸ್ಥಳಗಳಿಗೆ ಪ್ರಯಾಣಿಸಲು ಜನರು ಅನಾನುಕೂಲತೆ ಎದುರಿಸಿದ್ದಾರೆ. ಅಧಿಕಾರಿಗಳು ಮ್ಯಾಕ್ಸಿ ಕ್ಯಾಬ್ ಗಳು, ಖಾಸಗಿ ಬಸ್ ಗಳು, ಮಿನಿ ಬಸ್ ಗಳು ಮತ್ತು ಇತರ ಪ್ರಯಾಣಿಕರ ಸಾರಿಗೆ ವಾಹನಗಳಿಗೆ ಅವಕಾಶ ನೀಡಿದ್ದಾರೆ.

ಹಾಸನ ಡಿಪೋ ಚಾಲಕ ಫಾಲಾಕ್ಷ ಪ್ರತಿಭಟನೆ ವೇಳೆ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಆತನನ್ನು ಹಾಸನ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ತನೆಗೆ ಸಾವಿನ ಬಗ್ಗೆ ಭಯವಿಲ್ಲ. ಆದರೆ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಸ್ಪತ್ರೆಗೆ ಸಾಗಿಸುವ ವೇಳೆ ಮಾಧ್ಯಮಗಳಿಗೆ ಆತ ತಿಳಿಸಿದ್ದಾನೆ. ಹಾಸನದಲ್ಲಿ ಪ್ರತಿಭಟನೆ ನಡೆಸಿದ ಮೂವರು ನೌಕರರ ವಿರುದ್ಧ ಕೆಎಸ್ ಆರ್ ಟಿಸಿ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ. ನಿಗಮದ ವಿರುದ್ಧ ಪ್ರತಿಭಟನೆಗಳನ್ನು ಪ್ರಚೋದಿಸಿದ ಆರೋಪ ಅವರ ಮೇಲಿದೆ.

ಈ ಮಧ್ಯೆ, ಕೆಎಸ್ ಆರ್ ಟಿಸಿ ಕಾರ್ಮಿಕರ ಒಕ್ಕೂಟದ ಗೌರವಾಧ್ಯಕ್ಷ ಕೊಡಿಹಳ್ಳಿ ಚಂದ್ರಶೇಖರ್ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ನೌಕರರು ಕಾನೂನಿನಡಿಯಲ್ಲಿ ನಿಷೇಧಿಸಲ್ಪಟ್ಟಿದ್ದರೂ ಸಹ ಯುಗಾದಿ ಹಬ್ಬದ ದಿನದಂದು ವಿನೂತನ ಪ್ರತಿಭಟನೆ ನಡೆಸಿದ್ದಾರೆ. ಹಬ್ಬದ ಮುನ್ನಾದಿನದಂದು ವೇತನ ಪಾವತಿಸದೆ ನೌಕರರಿಗೆ ಅನ್ಯಾಯ ಮಾಡಲಾಗಿದೆ. ಸರ್ಕಾರ, ನೌಕರರ ಪ್ರತಿಭಟನೆಯನ್ನು ಹತ್ತಿಕ್ಕಲು ಯತ್ನಿಸುತ್ತಿದೆ. ಸರ್ಕಾರ, ತನ್ನ ನಿಲುವು ಸಡಿಲಿಸಿ, ಸೂಕ್ತ ನಿರ್ಧಾರ ತೆಗೆದುಕೊಳ್ಳದಿದ್ದಲ್ಲಿ ಮುಷ್ಕರ ತೀವ್ರ ಸ್ವರೂಪ ಪಡೆಯಲಿದೆ ಎಂದು ಹೇಳಿದ್ದಾರೆ.

ಮಾರ್ಚ್ ವೇತನವನ್ನು ತಡೆಹಿಡಿದಿರುವ ಕಾರಣಕ್ಕಾಗಿ ಡಿಪೋ ವ್ಯವಸ್ಥಾಪಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಒಕ್ಕೂಟ ಯೋಜಿಸಿದೆ ಎಂದು ಅವರು ಹೇಳಿದ್ದಾರೆ. ಸರ್ಕಾರ ನೌಕರರ ವಿರುದ್ಧ ಪ್ರಕರಣಗಳನ್ನು ದಾಖಲಿಸುತ್ತಿದೆ ಆದರೆ ನೌಕರರು ಈ ರೀತಿಯ ಬೆದರಿಕೆಗಳಿಗೆ ಹೆದರುವುದಿಲ್ಲ ಎಂದು ಅವರು ಹೇಳಿದ್ದಾರೆ.

ಮೈಸೂರು ಜಿಲ್ಲೆ ಮತ್ತು ಇತರ ಭಾಗಗಳಲ್ಲಿನ ಕೆಎಸ್ ಆರ್ ಟಿಸಿ ಬಸ್ ಗಳ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿದ್ದಾರೆ ಎಂಬ ವರದಿಗಳು ನಿರಾಧಾರ. ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸದ ಹೊರತು ಮುಷ್ಕರ ವಾಪಸ್ ಪಡೆಯುವುದಿಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದ್ದಾರೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Prabha

#Hashtags