Oneindia

1.1M Followers

ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿ ಪರೀಕ್ಷೆ ಬಗ್ಗೆ ಸಚಿವ ಸುರೇಶ್ ಕುಮಾರ್ ಹೇಳಿದ್ದೇನು?

16 Apr 2021.5:38 PM

ಚಾಮರಾಜನಗರ, ಏಪ್ರಿಲ್ 16: ವಿದ್ಯಾರ್ಥಿಗಳಿಗೆ ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಗಳು ನಿರ್ಣಾಯಕವಾಗಿದ್ದು, ಹೀಗಾಗಿ ಯಾವುದೇ ಕಾರಣಕ್ಕೂ ಈ ಎರಡು ಪರೀಕ್ಷೆಗಳನ್ನು ಮುಂದೂಡುವುದಿಲ್ಲ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಭವಿಷ್ಯದ ಹಿತದೃಷ್ಟಿಯಿಂದ ಈ ಪರೀಕ್ಷೆಗಳನ್ನು ರದ್ದು ಮಾಡುವ ಚಿಂತನೆ ಸದ್ಯಕ್ಕೆ ಸರ್ಕಾರದ ಮುಂದಿಲ್ಲ ಎಂದಿದ್ದಾರೆ. ಏಪ್ರಿಲ್ 18 ರಂದು ಮುಖ್ಯಮಂತ್ರಿಗಳು ಭಾನುವಾರ ಕರೆದಿರುವ ಸರ್ವಪಕ್ಷ ಸಭೆಯಲ್ಲಿ ಕಾಂಗ್ರೆಸ್ ಭಾಗವಹಿಸದೇ ಇರಲು ತೀರ್ಮಾನ ಕೈಗೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಕೊರೊನಾ ಒಂದು ದೊಡ್ಡ ವಿಪತ್ತು ಇದನ್ನು ಎಲ್ಲರೂ ಒಟ್ಟಿಗೆ ಸೇರಿ ಎದುರಿಸಬೇಕು.

1ರಿಂದ 9ನೇ ತರಗತಿ ವಾರ್ಷಿಕ ಪರೀಕ್ಷೆ ಕುರಿತು ಸಚಿವ ಸುರೇಶ್ ಕುಮಾರ್ ಮಾಹಿತಿ

ಇದರಲ್ಲಿ ಯಾರೂ ರಾಜಕೀಯ ಮಾಡುವುದು ಸರಿಯಲ್ಲ ಎಂದ ಅವರು ಬಿಜೆಪಿ ಮತ್ತು ಕಾಂಗ್ರೆಸ್ ವಿರೋಧಿಗಳಾಗಿದ್ದರೂ ನಮಗೆಲ್ಲ ಕೊರೊನಾವೇ ದೊಡ್ಡ ಶತ್ರುವಾಗಿದೆ.

ಹಾಗಾಗಿ ನಮ್ಮ ನಮ್ಮಲ್ಲಿನ ವಿರೋಧಗಳನ್ನು ಬದಿಗೊತ್ತಿ ಭಾಗವಹಿಸಬೇಕು ಎನ್ನುವ ಮೂಲಕ ಸರ್ವಪಕ್ಷ ಸಭೆಯಲ್ಲಿ ಭಾಗವಹಿಸಲು ಕಾಂಗ್ರೆಸ್ ನಾಯಕರಿಗೆ ಸಚಿವ ಸುರೇಶ್ ಕುಮಾರ್ ಮನವಿ ಮಾಡಿದರು.

ಚಾಮರಾಜನಗರ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರಿಗೆ ನೀಡುವ ರೆಮ್‌ಡೆಸಿವಿರ್ ಚುಚ್ಚುಮದ್ದು ಕೊರತೆ ಇದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ಸುರೇಶ್ ಕುಮಾರ್, ಇನ್ನು ಮೂರ್ನಾಲ್ಕು ದಿನಗಳಿಗಾಗುವಷ್ಟು ಮಾತ್ರ ರೆಮ್‌ಡೆಸಿವಿರ್ ಚುಚ್ಚುಮದ್ದು ನಮ್ಮಲ್ಲಿ ದಾಸ್ತಾನಿದೆ.

ಹಾಗಾಗಿ ಅಗತ್ಯ ಸಂಖ್ಯೆಯ ರೆಮ್‌ಡೆಸಿವಿರ್ ಚುಚ್ಚು ಮದ್ದು ಕಳಿಸಿಕೊಡುವಂತೆ ಆರೋಗ್ಯ ಇಲಾಖೆಯ ಕಾರ್ಯದರ್ಶಿಗಳನ್ನು ಕೇಳಿದ್ದೇನೆ. ರೆಮ್‌ಡೆಸಿವಿರ್ ಪರ್ಯಾಯವಾಗಿ ಮತ್ತೊಂದು ಚುಚ್ಚುಮದ್ದು ಬಂದಿದೆ ಎಂಬ ಮಾಹಿತಿ ಇದೆ. ಆದಷ್ಟು ಬೇಗ ಪೂರೈಸುವಂತೆ ಆರೋಗ್ಯ ಇಲಾಖೆಗೆ ಮನವಿ ಮಾಡಿದ್ದೇನೆ ಎಂದರು.

ಪರೀಕ್ಷೆಗೆ ಇನ್ನೂ ಎರಡು ತಿಂಗಳು ಕಾಲಾವಕಾಶವಿದೆ. ವಿದ್ಯಾರ್ಥಿಗಳು ಯಾವುದೇ ಊಹಾಪೋಹಗಳಿಗೆ ಕಿವಿಗೊಡದೆ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದತ್ತ ಗಮನಹರಿಸಬೇಕೆಂದು ಅವರು ಹೇಳಿದ್ದಾರೆ.

ಪರೀಕ್ಷೆ ನಡೆಸದಿದ್ದರೆ ಶೈಕ್ಷಣಿಕ ಗುಣಮಟ್ಟ ಕುಸಿಯಲಿದೆ. ಹೀಗಾಗಿ ಪರೀಕ್ಷೆ ನಡೆಸುವುದು ಅನಿವಾರ್ಯವಾಗಿದೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.


ಪರೀಕ್ಷೆಗಳು ನಡೆಯುತ್ತವೆ

ಈಗಿನ ಪರಿಸ್ಥಿತಿಯ ಪ್ರಕಾರ ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳು ನಡೆಯುತ್ತವೆ ಎಂದು ಪ್ರಾಥಮಿಕ ಹಾಗು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಚಾಮರಾಜನಗರ ಜಿಲ್ಲೆ ಹನೂರು ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನೆ ನೆರವೇರಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಜೂನ್ 21 ಕ್ಕೆ ಎಸ್.ಎಸ್.ಎಲ್.ಸಿ ಪರೀಕ್ಷೆ ನಿಗದಿಯಾಗಿದೆ. ಅಂದರೆ ಇನ್ನೂ ಎರಡು ತಿಂಗಳ ಮೇಲೆ ಒಂದು ವಾರ ಇದೆ.

ಪರೀಕ್ಷೆ ನಡೆಸುವಂತೆ ಎಲ್ಲಡೆಯಿಂದ ಒತ್ತಡ

ಪರೀಕ್ಷೆ ನಡೆಸುವಂತೆ ಎಲ್ಲಾ ಕಡೆಯಿಂದ ಒತ್ತಾಯ ಬರುತ್ತಿದೆ. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಸಹ ಪರೀಕ್ಷೆಗಳನ್ನು ನಡೆಸುವಂತೆ ಪತ್ರ ಬರೆದಿದ್ದಾರೆ. ಪರೀಕ್ಷೆಗಳು ಇನ್ನೂ ಎರಡು ತಿಂಗಳಿರುವುದರಿಂದ, ಆಗಿನ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಸುರೇಶ್ ಕುಮಾರ್ ಅವರು ತಿಳಿಸಿದರು.

ಎಸ್‌ಒಪಿ ನೀಡುವಂತೆ ಆರೋಗ್ಯ ಇಲಾಖೆಯನ್ನು ಕೇಳಿದ್ದೇವೆ

ಪರೀಕ್ಷೆ ನಡೆಸಲು ಕಳೆದ ವರ್ಷ ಆರೋಗ್ಯ ಇಲಾಖೆ ಎಸ್‌ಒಪಿ ನೀಡಿತ್ತು. ಅದನ್ನೇ ಅಳವಡಿಸಿಕೊಳ್ಳಬಹುದೇ ಅಥವಾ ಇನ್ನೂ ಏನಾದರು ಸುಧಾರಣೆ ಮಾಡಬೇಕೆ ಎಂಬ ಬಗ್ಗೆ ಪರಿಶೀಲಿಸಿ ಎಸ್‌ಒಪಿ ನೀಡುವಂತೆ ಆರೋಗ್ಯ ಇಲಾಖೆಯನ್ನು ಕೇಳಿದ್ದೇವೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಕಾರ್ಯೋನ್ಮುಖವಾಗಿದೆ ಎಂದರು.

ಉಳಿದ ತರಗತಿಗಳ ಪರೀಕ್ಷೆ ಏನು ಮಾಡಬೇಕು

1 ರಿಂದ 9 ನೇ ತರಗತಿಗಳಿಗೆ ಪರೀಕ್ಷೆ ನಡೆಸಬೇಕೆ ಬೇಡವೇ ಎಂಬ ಬಗ್ಗೆ ನಿನ್ನೆ ಚರ್ಚೆ ನಡೆಸಲಾಗಿದೆ. 1 ರಿಂದ 5 ನೇ ತರಗತಿಗಳಿಗೆ ಏನು ಮಾಡಬೇಕು, 6 ರಿಂದ 9 ನೇ ತರಗತಿಗಳಿಗೆ ಏನು ಮಾಡಬೇಕು ಎಂಬ ಬಗ್ಗೆ ಒಂದು ಸ್ಥೂಲ ರೂಪ ಬಂದಿದ್ದು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.

source: oneindia.com

Disclaimer

Disclaimer

This story is auto-aggregated by a computer program and has not been created or edited by Dailyhunt Publisher: OneIndia Kannada

#Hashtags