ಈ ಸಂಜೆ

803k Followers

ಲಾಕ್‍ಡೌನ್‍ ಬದಲು ಪರ್ಯಾಯ ಮಾರ್ಗಗಳಿದ್ದರೆ ತಿಳಿಸಿ : ಸಿಎಂ

17 Apr 2021.3:58 PM

ಬೆಂಗಳೂರು,ಏ.17- ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಿದ್ದರೂ ಲಾಕ್‍ಡೌನ್ ಅಥವಾ ವಾರಾಂತ್ಯದ ಲಾಕ್‍ಡೌನ್‍ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುತಾರಾಂ ಒಪ್ಪುತ್ತಿಲ್ಲ. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಲಾಕ್‍ಡೌನ್ ಅಥವಾ ವೀಕೆಂಡ್ ಲಾಕ್‍ಡೌನ್ ಜಾರಿ ಮಾಡುವುದನ್ನು ಬಿಟ್ಟು ಕೊರೊನಾ ನಿಯಂತ್ರಣಕ್ಕೆ ಪರ್ಯಾಯ ಮಾರ್ಗಗಳಿದ್ದರೆ ಸೂಚನೆ ಕೊಡಿ ಎಂದು ಸಚಿವರು ಮತ್ತು ತಜ್ಞರ ಸಮಿತಿಗೆ ಸೂಚಿಸಿದ್ದಾರೆ. ಈಗಾಗಲೇ ಲಾಕ್ ಡೌನ್ ಜಾರಿ ಮಾಡಿದ ಪರಿಣಾಮ ರಾಜ್ಯದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಇಳಿದಿದೆ.

ಸರ್ಕಾರಿ ನೌಕರರಿಗೆ ವೇತನ ಕೊಡಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥ ಸಂದರ್ಭದಲ್ಲಿ ಮತ್ತೆ ಲಾಕ್‍ಡೌನ್ ಜಾರಿ ಮಾಡಿದರೆ ಸರ್ಕಾರ ನಿರ್ವಹಣೆ ಮಾಡುವುದೇ ದುಸ್ತರವಾಗಲಿದೆ ಎಂದು ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ.

ಹೀಗಾಗಿ ಮುಖ್ಯಮಂತ್ರಿಗೆ ಸಚಿವರು ಹಾಗೂ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಮನವೊಲಿಸುವುದೇ ದೊಡ್ಡ ಸವಾಲಾಗಿದೆ ಎಂದು ತಿಳಿದುಬಂದಿದೆ.

ನಿನ್ನೆ ನಡೆದ ಸಭೆಯಲ್ಲೂ ಸಿಎಂ ಅವರು ರಾಜ್ಯದಲ್ಲಿ ಲಾಕ್‍ಡೌನ್ ಜಾರಿ ಹೊರತುಪಡಿಸಿ ಪರ್ಯಾಯ ಮಾರ್ಗಗಳನ್ನು ನೀಡಿದರೆ ಅನುಷ್ಠಾನ ಮಾಡುತ್ತೇವೆ. ಎಲ್ಲಾ ಆರ್ಥಿಕ ಚಟುವಟಿಕೆಗಳಿಗೆ ಸಂಪೂರ್ಣವಾಗಿ ದಿಗ್ಭಂಧನ ಹಾಕಿದರೆ ಸರ್ಕಾರಿ ನೌಕರರಿಗೆ ವೇತನ, ಪಿಂಚಣಿ ಹಾಗೂ ಕೋವಿಡ್‍ಗೆ ಅಗತ್ಯವಿರುವ ಮಾಸ್ಕ್, ಲಸಿಕೆ, ಸ್ಯಾನಿಟೈಸರ್ ಖರೀದಿ ಮಾಡಲು ಹಣ ಎಲ್ಲಿಂದ ತರುತ್ತೀರಿ ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.

ಸರ್ಕಾರದ ಬೊಕ್ಕಸಕ್ಕೆ ಆದಾಯ ತರುತ್ತಿದ್ದ ಸಾರಿಗೆ ಇಲಾಖೆಯಿಂದ ಪ್ರತಿ ದಿನ ನಾಲ್ಕು ಕೋಟಿ ನಷ್ಟವಾಗುತ್ತಿದೆ. ಕೋವಿಡ್ ಸಂಖ್ಯೆ ಹೆಚ್ಚಳವಾಗಿರುವುದರಿಂದ ಪ್ರಯಾಣಿಕರು ಮೊದಲೇ ಬಸ್ ಹತ್ತುತ್ತಿಲ್ಲ. ಇಂಥ ಸಂದರ್ಭದಲ್ಲಿ ಮುಷ್ಕರ ಬೇರೆ ನಡೆಯುತ್ತ್ತಿದೆ. ನೋಂದಣಿ ಮತ್ತು ಮುದ್ರಾಂಕದಿಂದಲೂ ಬೊಕ್ಕಸಕ್ಕೆ ಆದಾಯ ಬರುತ್ತಿಲ್ಲ. ಸದ್ಯಕ್ಕೆ ನಮಗೆ ಆಧಾರವಾಗಿರುವುದು ಅಬಕಾರಿ ಇಲಾಖೆ ಮಾತ್ರ. ಕನಿಷ್ಠ ಪಕ್ಷ 50ಕ್ಕಿಂತಲೂ ಹೆಚ್ಚು ಬೊಕ್ಕಸದ ವರಮಾನ ನಿಂತುಹೋಗಿದೆ. ಹೀಗೆ ಎಲ್ಲ ಮೂಲಗಳಿಂದಲೂ ವರಮಾನ ಸ್ಥಗಿತಗೊಂಡಿರುವುದರಿಂದ ಮತ್ತೆ ಲಾಕ್‍ಡೌನ್ ಜಾರಿ ಮಾಡಿದರೆ ಸರ್ಕಾರ ಮುನ್ನೆಡೆಸಲು ಸಾಧ್ಯವಾಗುವುದಿಲ್ಲ ಎಂದು ಸಿಎಂ ಕಡ್ಡಿ ಮುರಿದಂತೆ ಹೇಳಿದ್ದಾರೆ.

ಆದರೆ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಕನಿಷ್ಠ ಪಕ್ಷ ಬೆಂಗಳೂರು ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ವಾರದ ಎರಡು ದಿನಗಳಲ್ಲಿ ಲಾಕ್‍ಡೌನ್ ಜಾರಿ ಮಾಡಿದರೆ ಮಾತ್ರ ಒಬ್ಬರಿಂದ ಒಬ್ಬರಿಗೆ ಸೋಂಕು ಹಬ್ಬುವುದನ್ನು ತಡೆಗಟ್ಟಲು ಸಾಧ್ಯ ಎಂದು ಸಲಹೆ ಮಾಡಿದ್ದಾರೆ. ಬೆಂಗಳೂರು, ಮೈಸೂರು, ದಕ್ಷಿಣ ಕನ್ನಡ, ಉಡುಪಿ, ಕಲಬುರಗಿ, ಬೀದರ್, ಬಳ್ಳಾರಿ, ಬೆಳಗಾವಿ, ವಿಜಾಪುರ ಜಿಲ್ಲೆಗಳಲ್ಲಿ ಶನಿವಾರ ಮತ್ತು ಭಾನುವಾರ ಲಾಕ್‍ಡೌನ್ ಜಾರಿ ಮಾಡಲೇಬೇಕು. ಸಾಧ್ಯವಾದರೆ ಈಗಿರುವ ಕೊರೊನಾ ಕಫ್ರ್ಯೂವನ್ನು ರಾತ್ರಿ 8ರಿಂದ ಮುಂಜಾನೆ 6 ಗಂಟೆವರೆಗೆ ವಿಸ್ತರಣೆ ಮಾಡಲು ಸಲಹೆ ಮಾಡಿದ್ದಾರೆ.

ತಾಂತ್ರಿಕ ಸಲಹಾ ಸಮಿತಿಯ ಶಿಫಾರಸ್ಸನ್ನು ಒಪ್ಪಲು ಹಿಂದೇಟು ಹಾಕಿರುವ ಸಿಎಂ ಯಡಿಯೂರಪ್ಪನವರು ಪ್ರಧಾನಿ ನರೇಂದ್ರ ಮೋದಿ ಅವರೇ ಲಾಕ್‍ಡೌನ್ ಜಾರಿ ಮಾಡಬಾರದೆಂದು ಹೇಳಿದ್ದಾರೆ. ಒಂದಿಷ್ಟು ಕಠಿಣ ನಿಯಮಗಳನ್ನು ಜಾರಿ ಮಾಡುವ ಮೂಲಕ ನಿಯಂತ್ರಿಸಬಹುದು.

ಲಾಕ್‍ಡೌನ್ ಎಲ್ಲದಕ್ಕೂ ಪರಿಹಾರವಲ್ಲ. ಜನರು ಗುಂಪುಗೂಡುವುದನ್ನು ತಡೆಗಟ್ಟಬೇಕು, ಪ್ರತಿಯೊಬ್ಬರನ್ನು ಕಡ್ಡಾಯವಾಗಿ ಕೋವಿಡ್ ಟೆಸ್ಟ್‍ಗೆ ಒಳಪಡಿಸೇಕು, ಅರ್ಹತೆ ಇರುವವರು ಕೋವಿಡ್ ಲಸಿಕೆ ಪಡೆಯಬೇಕು, ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಕಡ್ಡಾಯ ಸೇರಿದಂತೆ ಹೆಚ್ಚು ಜನಜಾಗೃತಿ ಅಭಿಯಾನ ಕೈಗೊಳ್ಳೋಣ ಎಂದು ಸಿಎಂ ಸೂಚಿಸಿದ್ದಾರೆ.

# ಸಚಿವರ ಮನವರಿಕೆ:
ರಾಜ್ಯದಲ್ಲಿ ಕನಿಷ್ಠಪಕ್ಷ ಎರಡು ದಿನಗಳಾದರೂ ಲಾಕ್‍ಡೌನ್ ಜಾರಿ ಮಾಡುವ ಅಗತ್ಯತೆಯನ್ನು ಇದೀಗ ಸಚಿವರು ಸಿಎಂಗೆ ಮನವರಿಕೆ ಮಾಡಿಕೊಡಲು ಮುಂದಾಗಿದ್ದಾರೆ. ಸಚಿವರಾದ ಬಸವರಾಜ್ ಬೊಮ್ಮಾಯಿ, ಆರ್.ಅಶೋಕ್, ಡಾ.ಕೆ.ಸುಧಾಕರ್, ಜೆ.ಸಿ.ಮಾಧುಸ್ವಾಮಿ ಸೇರಿದಂತೆ ಮತ್ತಿತರರು ಯಡಿಯೂರಪ್ಪನವರಿಗೆ ಮೂರ್ನಾಲ್ಕು ದಿನದ ನಂತರ ಲಾಕ್‍ಡೌನ್ ಅಗತ್ಯತೆಯ ಮನವರಿಕೆ ಮಾಡಿಕೊಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: eesanje

#Hashtags