Oneindia

1.1M Followers

18-45 ವಯಸ್ಸಿನವರಿಗೆ ಉಚಿತ ಕೊರೊನಾ ಲಸಿಕೆ ಘೋಷಿಸಿದ ಕರ್ನಾಟಕ ಸರ್ಕಾರ

26 Apr 2021.3:24 PM

ಬೆಂಗಳೂರು, ಏಪ್ರಿಲ್ 26: ರಾಜ್ಯದಲ್ಲಿ 18 ವರ್ಷದಿಂದ 45 ವರ್ಷದವರೆಗಿನ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವುದಾಗಿ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದಾರೆ.

ಸೋಮವಾರ ಕೊರೊನಾ ಸೋಂಕು ತಡೆಗಟ್ಟುವ ಸಂಬಂಧ ಸಚಿವ ಸಂಪುಟ ಸಭೆ ನಡೆಸಿದ ಯಡಿಯೂರಪ್ಪನವರು ಈ ನಿರ್ಧಾರ ಪ್ರಕಟಿಸಿದ್ದಾರೆ. ಕೋವಿಡ್ ಹರಡುವಿಕೆ ತಡೆಯಲು 14 ದಿನ ಇಡೀ ರಾಜ್ಯದಲ್ಲಿ ಕೋವಿಡ್ ಕರ್ಫ್ಯೂ ಜಾರಿಯಲ್ಲಿರಲಿದೆ. ಮೇ 1ರಿಂದ 18 ರಿಂದ 45 ವರ್ಷದೊಳಗಿನವರಿಗೆ ಕೊರೊನಾ ಲಸಿಕೆಯನ್ನು ಉಚಿತ ನೀಡಲಾಗುವುದು. ಜೊತೆಗೆ ಕೇಂದ್ರ ಸರ್ಕಾರದ ಸೂಚನೆಯಂತೆ 65 ವರ್ಷ ಮೇಲ್ಪಟ್ಟವರಿಗೆ ಉಚಿತವಾಗಿ ಲಸಿಕೆ ಸಿಗಲಿದೆ ಎಂದು ತಿಳಿಸಿದ್ದಾರೆ.

ಏಪ್ರಿಲ್ 28ರಿಂದ ನೋಂದಣಿ ಆರಂಭವಾಗಲಿದ್ದು, ಎಲ್ಲರೂ ಲಸಿಕೆ ಪಡೆಯುವಂತೆ ಯಡಿಯೂರಪ್ಪ ಮನವಿ ಮಾಡಿದ್ದಾರೆ.

ಕರ್ನಾಟಕದಲ್ಲಿ ಏಪ್ರಿಲ್ 27 ರಾತ್ರಿಯಿಂದ 14 ದಿನಗಳ ಕಾಲ ಲಾಕ್‌ಡೌನ್

ಜನವರಿ 16ರಿಂದ ದೇಶಾದ್ಯಂತ ಬೃಹತ್ ಲಸಿಕಾ ಅಭಿಯಾನ ಆರಂಭಗೊಂಡಿದ್ದು, ಅಭಿಯಾನದ ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ಹಾಗೂ ಕೊರೊನಾ ವಿರುದ್ಧ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಿಬ್ಬಂದಿಗೆ ಲಸಿಕೆ ನೀಡಲಾಗಿತ್ತು.

ಅಭಿಯಾನದ ಎರಡನೇ ಹಂತದ ಮೊದಲ ಭಾಗದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಹಾಗೂ ಎರಡನೇ ಭಾಗದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗಿತ್ತು.

ಮೂರನೇ ಹಂತದ ಅಭಿಯಾನದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಬಹುದು ಎಂದು ಪ್ರಧಾನಿ ಘೋಷಿಸಿದ್ದರು. ಈ ಬೆನ್ನಲ್ಲೇ ಹಲವು ರಾಜ್ಯ ಸರ್ಕಾರಗಳು ತಮ್ಮ ರಾಜ್ಯದ ಜನರಿಗೆ ಉಚಿತವಾಗಿ ಕೊರೊನಾ ಲಸಿಕೆ ನೀಡುವ ಘೋಷಣೆ ಮಾಡಿದ್ದವು. ಇದೀಗ ಕರ್ನಾಟಕ ಸರ್ಕಾರವೂ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿದೆ.

ಭಾರತದಲ್ಲಿ ಸದ್ಯಕ್ಕೆ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್‌ ಲಸಿಕೆ ನೀಡಲಾಗುತ್ತಿದ್ದು, ರಷ್ಯಾದ ಸ್ಫುಟ್ನಿಕ್ ವಿ ಲಸಿಕೆಗೂ ಅನುಮೋದನೆ ದೊರೆತಿದೆ. ಶೀಘ್ರವೇ ಸ್ಫುಟ್ನಿಕ್ ವಿ ಲಸಿಕೆ ಭಾರತದಲ್ಲಿ ನೀಡಲಾಗುವುದು ಎಂದು ಕೇಂದ್ರ ತಿಳಿಸಿದೆ.

ಕೊರೋನ ತಡಿಯೋಕೆ 14 ದಿನಗಳ ಕಾಲ Lock Down! | Oneindia Kannada

ಉಚಿತ ಲಸಿಕೆ ನೀಡುತ್ತಿರುವ ರಾಜ್ಯಗಳು: ದೇಶದ ಹದಿನೇಳು ರಾಜ್ಯಗಳು ತಮ್ಮ ಜನರಿಗೆ ಉಚಿತವಾಗಿ ಲಸಿಕೆ ನೀಡುವುದಾಗಿ ಘೋಷಿಸಿದ್ದವು. ಮಧ್ಯಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಗೋವಾ, ಕೇರಳ, ಛತ್ತೀಸ್‌ಗಡ, ಜಾರ್ಖಂಡ್, ಸಿಕ್ಕಿಂ, ಪಶ್ಚಿಮ ಬಂಗಾಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಹರಿಯಾಣ, ಅಸ್ಸಾಂ, ಉತ್ತರ ಪ್ರದೇಶ, ಬಿಹಾರ ರಾಜ್ಯಗಳು ಘೋಷಿಸಿದ್ದವು. ಇದೀಗ ಕರ್ನಾಟಕವೂ ಈ ಪಟ್ಟಿಯಲ್ಲಿ ಸೇರಿಕೊಂಡಿದೆ.

source: oneindia.com

Disclaimer

Disclaimer

This story is auto-aggregated by a computer program and has not been created or edited by Dailyhunt Publisher: OneIndia Kannada

#Hashtags