News18 ಕನ್ನಡ

400k Followers

Karnataka Lockdown: ಸಚಿವರು-ಶಾಸಕರು, ಸರ್ಕಾರಿ ನೌಕರರ 1 ತಿಂಗಳ ವೇತನ ಕಡಿತ; ಕೋವಿಡ್ ನಿರ್ವಹಣೆಗೆ ಹಣ ಬಳಕೆ!

26 Apr 2021.4:10 PM

ಬೆಂಗಳೂರು : ಕೊರೋನಾ ಬೇಗೆಯಲ್ಲಿ ಬೇಯುತ್ತಿರುವ ಕರ್ನಾಟಕವನ್ನು ಪಾರು ಮಾಡಲು ರಾಜ್ಯ ಸರ್ಕಾರ ಮತ್ತೆ ಲಾಕ್​​ಡೌನ್​ ಮೊರೆ ಹೋಗಿದೆ. ನಾಳೆಯಿಂದ 14 ದಿನಗಳ ಕಾಲ ಇಡೀ ರಾಜ್ಯ ಬಹುತೇಕ ಸ್ತಬ್ಧವಾಗಲಿದೆ. ಲಾಕ್​ಡೌನ್​ನಿಂದ ಆರ್ಥಿಕತೆಗೆ ಹೊಡೆತ ಬೀಳಲಿದ್ದು, ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟವಾಗಲಿದೆ. ರಾಜ್ಯದ ಮೇಲೆ ಲಾಕ್​​ಡೌನ್​​ ಹೇರಿ ಕೋವಿಡ್​ ಪರಿಸ್ಥಿತಿಯನ್ನು ನಿರ್ವಹಿಸುವ ಒತ್ತಡದಲ್ಲಿ ಸರ್ಕಾರವಿದೆ. ಈ ಹಿನ್ನೆಲೆಯಲ್ಲಿ ಲಾಕ್​ಡೌನ್​ ನಷ್ಟವನ್ನು ಸರಿದೂಗಿಸಲು ಪೊಲೀಸ್​​, ಆರೋಗ್ಯ ಇಲಾಖೆಯನ್ನು ಹೊರತುಪಡಿಸಿದ ಸಚಿವರು, ಶಾಸಕರು, ಪರಿಷತ್​ ಸದಸ್ಯರು, ಸರ್ಕಾರಿ ನೌಕರರ​​ ಒಂದು ತಿಂಗಳ ವೇತನ ಕಡಿತಗೊಳಿಸಲು ಸರ್ಕಾರ ಮುಂದಾಗಿದೆ.

ಪೊಲೀಸ್ ಮತ್ತು ಆರೋಗ್ಯ ಸಿಬ್ಬಂದಿ ಹೊರತುಪಡಿಸಿ ಸರ್ಕಾರಿ ಸಿಬ್ಬಂದಿಯ ವೇತನ ಕಡಿತ ನಿರ್ಧಾರಕ್ಕೆ ಸಂಪುಟ ಸಭೆಯಲ್ಲಿ ಮಹತ್ವದ ಚರ್ಚೆ ನಡೆದಿದೆ. ಸಚಿವರು, ಶಾಸಕರು, ಪರಿಷತ್​ ಸದಸ್ಯರು, ಸರ್ಕಾರಿ ನೌಕರರ​​ ಒಂದು ತಿಂಗಳ ವೇತನ ಕಡಿತದಿಂದ 500 ಕೋಟಿಗೂ ಹೆಚ್ಚು ಹಣ ಸರ್ಕಾರಕ್ಕೆ ಉಳಿಯಲಿದೆ. ಈ ಹಣವನ್ನು ಕೋವಿಡ್​ ನಿರ್ವಹಣೆಗೆ ಬಳಸಲು ರಾಜ್ಯ ಸರ್ಕಾರ ಮುಂದಾಗಿದೆ. ಸಂಪುಟ ಸಭೆಯಲ್ಲಿ ಬಹುತೇಕ ಸಚಿವರು ತಮ್ಮ 1 ತಿಂಗಳ ವೇತನ ಕಡಿತಕ್ಕೆ ಸಮ್ಮತಿ ಸೂಚಿಸಿದ್ದಾರೆ ಎನ್ನಲಾಗಿದೆ. ಕೋವಿಡ್​ ಸಮಯದಲ್ಲಿ ಹಗಲಿರುಳು ದುಡಿಯುತ್ತಿರುವ ಆರೋಗ್ಯ ಇಲಾಖೆ, ಪೊಲೀಸ್​ ಇಲಾಖೆಯನ್ನು ವೇತನ ಕಡಿತದಿಂದ ಹೊರಗಿಡುವ ಬಗ್ಗೆ ಸರ್ವಾನುಮತದಿಂದ ನಿರ್ಧರಿಸಲಾಗಿದೆ. ಆದರೆ ಇತರೆ ಸರ್ಕಾರಿ ಇಲಾಖೆಗಳ ನೌಕರರ ವೇತನ ಕಡಿತದ ನಿರ್ಧಾರದಿಂದ ಅಸಮಾಧಾನ ಭುಗಿಲೇಳುವ ಸಾಧ್ಯತೆಗಳಿವೆ ಎನ್ನಲಾಗ್ತಿದೆ. ಸಾಧಕ-ಬಾಧಕಗಳ ಬಗ್ಗೆ ಸಮಾಲೋಚನೆ ನಡೆಸಿ ಸದ್ಯದಲ್ಲೇ ಅಧಿಕೃತ ಪ್ರಕಟಣೆ ಹೊರಡಿಸಲಿದ್ದಾರೆ.

ಇನ್ನು ರಾಜ್ಯದಲ್ಲಿ ಕೊರೋನಾ 2ನೇ ಅಲೆ ಭೀಕರತೆಗೆ ಕಡಿವಾಣ ಹಾಕಲು ಸರ್ಕಾರ ರಾಜ್ಯಾದ್ಯಂತ 14 ದಿನಗಳ ಕಾಲ ಲಾಕ್​ಡೌನ್​ ಮಾಡಿ ಆದೇಶ ಹೊರಡಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ವೀಕೆಂಡ್​​ ಕರ್ಫ್ಯೂ ಯಶಸ್ಸಿನ ಬೆನ್ನಲ್ಲೇ ನಾಳೆ ರಾತ್ರಿಯಿಂದ 14 ದಿನಗಳ ಕಾಲ ಲಾಕ್​ಡೌನ್​ ಹೇರಲು ಸರ್ಕಾರ ನಿರ್ಧರಿಸಿದೆ.

ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿಎಂ ಬಿ.ಎಸ್​.ಯಡಿಯೂರಪ್ಪ 14 ದಿನಗಳ ಕಾಲ ರಾಜ್ಯದಲ್ಲಿ ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗಿದೆ. 2 ವಾರಗಳ ಕಾಲ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸಬೇಕು ಎಂದು ಜನರಲ್ಲಿ ಮನವಿ ಮಾಡಿಕೊಂಡರು. 2 ವಾರದಲ್ಲಿ ಕೊರೋನಾ ಕಂಟ್ರೋಲ್​ಗೆ ಬರದಿದ್ದರೆ ಲಾಕ್​​​​ಡೌನ್​ ಮುಂದುವರೆಯುವ ಸುಳಿವನ್ನು ಕೊಟ್ಟಿದ್ದಾರೆ.
Disclaimer

Disclaimer

This story is auto-aggregated by a computer program and has not been created or edited by Dailyhunt Publisher: News18 Kannada

#Hashtags