TV9 ಕನ್ನಡ

371k Followers

ದ್ವಿತೀಯ ಪಿಯುಸಿ ಪರೀಕ್ಷೆಗೆ ಸಿದ್ಧವಾಗುತ್ತಿದೆ ಎರಡು ಪರ್ಯಾಯ ಮಾರ್ಗ; ಕಾಲೇಜು ಹಂತದಲ್ಲೇ ಬಹು ಆಯ್ಕೆ ಪ್ರಶ್ನೆಗಳನ್ನು ನೀಡಿ ಪರೀಕ್ಷೆ ನಡೆಸಲು ಸಲಹೆ

03 Jun 2021.09:31 AM

ಬೆಂಗಳೂರು: ಕೊರೊನಾ ಎರಡನೇ ಅಲೆಯ ಉಪಟಳ ಮತ್ತು ಮೂರನೇ ಅಲೆ ಭೀತಿಯ ನಡುವೆ ಎಸ್​ಎಸ್​ಎಲ್​ಸಿ, ದ್ವಿತೀಯ ಪಿಯುಸಿ ಪರೀಕ್ಷೆ ಆಯೋಜಿಸುವ ವಿಚಾರದಲ್ಲಿ ರಾಜ್ಯ ಶಿಕ್ಷಣ ಇಲಾಖೆ ಅಡಕತ್ತರಿಯಲ್ಲಿ ಸಿಲುಕಿದಂತಾಗಿದೆ. ಕೇಂದ್ರ ಸರ್ಕಾರ ಸಿಬಿಎಸ್​ಇ 12ನೇ ತರಗತಿ ಪರೀಕ್ಷೆ ರದ್ದು ಮಾಡಿದ್ದು, ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಇದು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತೆಗೆದುಕೊಂಡಿರುವ ನಿರ್ಧಾರ ಎಂದು ಹೇಳಿರುವುದು ರಾಜ್ಯ ಶಿಕ್ಷಣ ಇಲಾಖೆಗೆ ಮತ್ತಷ್ಟು ಸಂಕಟ ತಂದೊಡ್ಡಿದೆ. ಈ ಆಯಾಮದಲ್ಲಿ ಯೋಚಿಸಿದಾಗ ಪರೀಕ್ಷೆ ನಡೆಸುವುದು ಬಹುತೇಕ ಅನುಮಾನವೇ ಆಗಿದೆಯಾದರೂ ಶಿಕ್ಷಣ ಸಚಿವರು ಪರೀಕ್ಷೆ ಆಯೋಜನೆಗೆ ಪೂರಕವಾಗಿ ಯೋಚಿಸುತ್ತಿರುವುದರಿಂದ ಜುಲೈ ಎರಡನೇ ವಾರದಲ್ಲಿ ಪರ್ಯಾಯ ಮಾದರಿಯಲ್ಲಿ ಪರೀಕ್ಷೆ ನಡೆಸುವ ಯೋಜನೆ ರೂಪಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.


ಕೋವಿಡ್‌ ಕುರಿತ ಎಲ್ಲಾ ಲೇಟೆಸ್ಟ್‌ ಅಪ್‌ಡೇಟ್ಸ್‌ ಓದಿ

ಜುಲೈ ಎರಡನೇ ವಾರದಲ್ಲಿ ಪರ್ಯಾಯ ಮಾದರಿಯಲ್ಲಿ ಪರೀಕ್ಷೆ ಏರ್ಪಡಿಸುವ ಚಿಂತನೆಯಲ್ಲಿರುವ ಶಿಕ್ಷಣ ಇಲಾಖೆ ಈಗಾಗಲೇ ಅದಕ್ಕೆ ಬೇಕಾದ ಯೋಜನೆ ರೂಪಿಸುತ್ತಿದೆ. ಶಿಕ್ಷಣ ತಜ್ಞರು ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಯ ಮೊರೆ ಹೋಗಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೂಕ್ತ ರೀತಿಯಲ್ಲಿ ಪರೀಕ್ಷೆ ಆಯೋಜನೆ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ಸದ್ಯ ಶಿಕ್ಷಣ ಇಲಾಖೆಗೆ ತಜ್ಞರು ನೀಡಿರುವ ವಿಸ್ತೃತ ಮಾಹಿತಿ ಟಿವಿ9ಗೆ ಲಭ್ಯವಾಗಿದ್ದು, ಪರೀಕ್ಷೆ ನಡೆಸಲು ಪ್ರಮುಖ ಎರಡು ಮಾದರಿಯಲ್ಲಿ ಶಿಕ್ಷಣ ತಜ್ಞರು ಸಲಹೆ ನೀಡಿರುವುದು ಗೊತ್ತಾಗಿದೆ.

ಸಲಹೆ 1

ಶಿಕ್ಷಣ ಇಲಾಖೆ ತಜ್ಞರು ಸೂಚಿಸಿರುವ ಪ್ಲಾನ್-ಎ ಅಡಿಯಲ್ಲಿ, ಐಚ್ಚಿಕ ಮತ್ತು ಪ್ರಮುಖ ವಿಷಯಗಳಿಗೆ ಮಾತ್ರ ಪರೀಕ್ಷೆ ನಡೆಸಲು ಸೂಚಿಸಲಾಗಿದೆ. ಪಿಯು ನಂತರದ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗದಂತೆ ಪರೀಕ್ಷೆ ಆಯೋಜಿಸಬೇಕಿದ್ದು, ಪದವಿ ಹಾಗೂ ವೃತ್ತಿಪರ ಕೋರ್ಸ್​ಗಳಿಗೆ ಅನಕೂಲವಾಗುವ ವಿಷಯಗಳಿಗೆ ಮಾತ್ರ ಪರೀಕ್ಷೆ ನಡೆಸಲು ತಿಳಿಸಲಾಗಿದೆ. ಪಿಯು ವಿಭಾಗದಲ್ಲಿ ವಿದ್ಯಾರ್ಥಿ ತಗೆದುಕೊಂಡ ಪ್ರಮುಖ ಮೂರು ಐಚ್ಚಿಕ ವಿಷಯಗಳಿಗೆ ಮಾತ್ರ ಪರೀಕ್ಷೆ ನಡೆಸುವುದು ಸೂಕ್ತ ಎಂಬ ಅಭಿಪ್ರಾಯ ಇದರಲ್ಲಿದೆ.

ಕಲಾ ವಿಭಾಗದಲ್ಲಿ ಇತಿಹಾಸ, ರಾಜಕೀಯ ಶಾಸ್ತ್ರ, ಅರ್ಥಶಾಸ್ತ್ರ, ಮನಶಾಸ್ತ್ರ ವಿಷಯಗಳಿಗೆ ಮಾತ್ರ ಪರೀಕ್ಷೆ ನಡೆಸಬೇಕು. ವಾಣಿಜ್ಯ ವಿಭಾಗದಲ್ಲಿ ಲೆಕ್ಕಶಾಸ್ತ್ರ, ಭೊಗೋಳಶಾಸ್ತ್ರ, ವ್ಯವಹಾರ ಅಧ್ಯಯನ ವಿಷಯಗಳಿಗೆ ಪರೀಕ್ಷೆ ಆಯೋಜಿಸಬೇಕು ಹಾಗೂ ವಿಜ್ಞಾನ ವಿಭಾಗದಲ್ಲಿ ಗಣಿತ, ರಸಾಯನಶಾಸ್ತ್ರ, ಜೀವಶಾಸ್ತ್ರ, ಭೌತಶಾಸ್ತ್ರ ವಿಷಯಗಳಿಗೆ ಪರೀಕ್ಷೆ ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಲಾಗಿದೆ. ಬೋರ್ಡ್ ಪರೀಕ್ಷೆ ಕೈ ಬಿಟ್ಟು ಕಾಲೇಜು ಮಟ್ಟದಲ್ಲಿಯೇ ಸರಳಿಕೃತ ಮಾದರಿಯಲ್ಲಿ ಪರೀಕ್ಷೆ ನಡೆಸುವುದು ಉತ್ತಮ. ಬೋಧನೆಯಾಗಿರುವ ಪಠ್ಯಕ್ಕೆ ಅನೂಗುಣವಾಗಿ ಕಾಲೇಜು ಹಂತದಲ್ಲಿ ಪರೀಕ್ಷೆ ನಡೆಸಿ ಫಲಿತಾಂಶ ಪ್ರಕಟಿಸುವುದು ಸೂಕ್ತ ಎನ್ನುವ ಸಲಹೆ ವ್ಯಕ್ತವಾಗಿದೆ.

ಸಲಹೆ 2

ಶಿಕ್ಷಣ ಇಲಾಖೆ ತಜ್ಞರು ಸೂಚಿಸಿರುವ ಪ್ಲಾನ್-ಬಿ ಅಡಿಯಲ್ಲಿ, ಕಲಾ, ವಾಣಿಜ್ಯ, ವಿಜ್ಞಾನ ವಿಭಾಗಕ್ಕೆ ಪ್ರತ್ಯೇಕ ಮಾದರಿಯಲ್ಲಿ ಪರೀಕ್ಷೆ ನಡೆಸಲು ಸಲಹೆ ನೀಡಲಾಗಿದೆ. ಮೂರು ವಿಭಾಗಗಳಿಗೆ ಪ್ರತ್ಯೇಕ ರೀತಿಯ ಬಹು ಆಯ್ಕೆಯ ಪ್ರಶ್ನೆ ಪತ್ರಿಕೆ ಸಿದ್ದಪಡಿಸಬೇಕು. ಸಾಮಾನ್ಯ, ಬುದ್ದಿವಂತ, ಅತಿ ಬುದ್ದಿವಂತ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಪ್ರಶ್ನೆ ಪತ್ರಿಕೆ ಸಿದ್ದಪಡಿಸಬೇಕು ಎಂದು ತಿಳಿಸಲಾಗಿದೆ. ಸಾಮಾನ್ಯ ವಿದ್ಯಾರ್ಥಿ ತೇರ್ಗಡೆಯಾಗುವಂತೆ, ಬುದ್ದಿವಂತ ವಿದ್ಯಾರ್ಥಿ ಶೈಕ್ಷಣಿಕ ಪ್ರಗತಿ ಸಾಧಿಸುವಂತೆ, ಅತಿಬುದ್ದಿವಂತ ವಿದ್ಯಾರ್ಥಿಯ ಶೈಕ್ಷಣಿಕ ಸಾಧನೆಗೆ ಅವಕಾಶ ನೀಡುವಂತೆ ಪ್ರಶ್ನೆ ಪತ್ರಿಕೆ ಸಿದ್ದಪಡಿಸುವುದು ಉತ್ತಮ. ಸಿಇಟಿ ಹಾಗೂ ನೀಟ್ ಮಾದರಿಯಲ್ಲೇ ಪಿಯು ಪರೀಕ್ಷೆ ನಡೆಸುವುದು ಸೂಕ್ತ ಎನ್ನಲಾಗಿದೆ.

ಬಹು ಆಯ್ಕೆ ಮಾದರಿಯಲ್ಲಿ ಒಂದೇ ದಿನದಲ್ಲಿ ಪಿಯು ಪರೀಕ್ಷೆ ನಡೆಸಲು ತಜ್ಞರು ಸಲಹೆ ನೀಡಿದ್ದು, ಪರೀಕ್ಷಾ ಅವಧಿಯನ್ನು 3 ಗಂಟೆಯಿಂದ 1:30 ಗಂಟೆಗೆ ಇಳಿಕೆ ಮಾಡಿ ಎಂದು ತಿಳಿಸಿದ್ದಾರೆ. ಸರಳೀಕೃತ ವ್ಯವಸ್ಥೆಯಲ್ಲಿ ಪಿಯು ಪರೀಕ್ಷೆ ನಡೆಸಲು ಸಲಹೆ ನೀಡಿರುವ ತಜ್ಞರು ಕಾಲೇಜು ಮಟ್ಟದಲ್ಲಿಯೇ ಆಯೋಜಿಸಲು ಸೂಚನೆ ನೀಡಿದ್ದಾರೆ. ಇತ್ತ ಎಸ್​ಎಸ್​​ಎಲ್​ಸಿ ಪರೀಕ್ಷೆ ಬಗ್ಗೆ ಯಾವುದೇ ನಿರ್ದಿಷ್ಟ ಸೂಚನೆ ಲಭ್ಯವಾಗಿಲ್ಲ.

ಈಗಾಗಲೇ ಹಲವು ರಾಜ್ಯಗಳು ಪರೀಕ್ಷೆಯಿಂದ ದೂರ ಉಳಿದಿದ್ದು, ಕೊರೊನಾ ಏರುತ್ತಿರುವ ಸಮಯದಲ್ಲಿ ಪರೀಕ್ಷೆ ಬೇಡ ಎಂದು ನಿರ್ಧರಿಸಿವೆ. ಆದರೆ, ರಾಜ್ಯ ಸರ್ಕಾರ ಇನ್ನೂ ಗೊಂದಲದಲ್ಲಿದ್ದು ವಿದ್ಯಾರ್ಥಿಗಳಲ್ಲೂ ಗೊಂದಲ ಸೃಷ್ಟಿಸುತ್ತಿದೆ. ಕೇಂದ್ರವೇ ಸಿಬಿಎಸ್​ಸಿ ಪರೀಕ್ಷೆ ರದ್ದು ಮಾಡಿರುವಾಗ ರಾಜ್ಯದಲ್ಲಿ ನಿರ್ಧಾರ ಕೈಗೊಳ್ಳಲು ಯಾಕಿಷ್ಟು ತಡ ಎಂದು ಪೋಷಕರು ಹಾಗೂ ವಿವಿಧ ಸಂಘಟನೆಗಳು ಪ್ರಶ್ನಿಸುತ್ತಿವೆ.

ಸದ್ಯ ಕೊನೆಯ ಹಂತದ ಕಸರತ್ತು ನಡೆಸುತ್ತಿರುವ ಶಿಕ್ಷಣ ಸಚಿವ ಸುರೇಶ್ ಕುಮಾರ್, ಶಿಕ್ಷಣ ಇಲಾಖೆ ಆಯುಕ್ತ ಅನ್ಬು ಕುಮಾರ್ ಹಾಗೂ ಅಧಿಕಾರಿಗಳಿಗೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಯಾವ ಯಾವ ರಾಜ್ಯಗಳು ಪರೀಕ್ಷೆ ನಡೆಸುತ್ತಿವೆ? ಒಂದು ವೇಳೆ ನಡೆಸುತ್ತಿದ್ದರೆ ಏನೆಲ್ಲಾ ಮುಂಜಾಗ್ರತಾ ಕ್ರಮ ವಹಿಸುತ್ತಿದ್ದಾರೆಂಬ ಮಾಹಿತಿ ಕಲೆ ಹಾಕಲು ತಿಳಿಸಿದ್ದಾರೆ.

ತಮಿಳುನಾಡು, ಮಹಾರಾಷ್ಟ್ರ, ಗೋವಾ, ರಾಜ್ಯಸ್ಥಾನದಲ್ಲಿ ಎಸ್​ಎಸ್​​ಎಲ್​ಸಿ ಪರೀಕ್ಷೆಗಳು ರದ್ದಾಗಿದ್ದು, ಗುಜರಾತ್, ಮಧ್ಯಪ್ರದೇಶ, ಹರಿಯಾಣ, ರಾಜ್ಯಸ್ಥಾನ, ಗೋವಾ, ಉತ್ತರಾಖಂಡ ರಾಜ್ಯಗಳಲ್ಲಿ 12ನೇ ತರಗತಿ ಪರೀಕ್ಷೆ ರದ್ದಾಗಿದೆ. ಪಶ್ಚಿಮ ಬಂಗಾಳ, ಕೇರಳ ಸೇರಿದಂತೆ ಕೆಲ ರಾಜ್ಯಗಳು ಇದುವರೆಗೆ ಯಾವುದೇ ನಿರ್ಧಾರ ಕೈಗೊಂಡಿಲ್ಲ.

ಇದನ್ನೂ ಓದಿ:
ರಾಜ್ಯದಲ್ಲಿ ಎಸ್​ಎಸ್​ಎಲ್​ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಪಡಿಸಿ: ಸರ್ಕಾರಕ್ಕೆ ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ಸಲಹೆ

ಸ್ಟೇಟ್ ಬೋರ್ಡ್ 12ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆಯ ಬಗ್ಗೆ ಶೀಘ್ರವೇ ತೀರ್ಮಾನ: ಸುರೇಶ್ ಕುಮಾರ್

The post ದ್ವಿತೀಯ ಪಿಯುಸಿ ಪರೀಕ್ಷೆಗೆ ಸಿದ್ಧವಾಗುತ್ತಿದೆ ಎರಡು ಪರ್ಯಾಯ ಮಾರ್ಗ; ಕಾಲೇಜು ಹಂತದಲ್ಲೇ ಬಹು ಆಯ್ಕೆ ಪ್ರಶ್ನೆಗಳನ್ನು ನೀಡಿ ಪರೀಕ್ಷೆ ನಡೆಸಲು ಸಲಹೆ appeared first on TV9 Kannada.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: TV9 Kannada

#Hashtags