ಕನ್ನಡ ಪ್ರಭ

1.2M Followers

ಜುಲೈ 1 ರಿಂದ ರಾಜ್ಯದಲ್ಲಿ ಶಾಲೆಗಳು ಪುನರಾರಂಭ

04 Jun 2021.12:44 PM

ಬೆಂಗಳೂರು: ರಾಜ್ಯ ಶಿಕ್ಷಣ ಇಲಾಖೆಯ ಚಿಂತನೆಗಳು ಎಸ್‌ಎಸ್‌ಎಲ್'ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳ ಮೇಲಿದ್ದು, ಈ ನಡುವಲ್ಲೇ ಅಧಿಕಾರಿಗಳು ಮುಂದಿನ ಶೈಕ್ಷಣಿಕ ವರ್ಷ ಪ್ರಾರಂಭಿಸಲು ಚಿಂತನೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಈ ಹಿಂದೆ ಹೇಳಿಕೆ ನೀಡಿದ್ದ ಸಚಿವ ಸುರೇಶ್ ಕುಮಾರ್ ಅವವರು ಜೂನ್.15ರಿಂದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಆರಂಭಗೊಳ್ಳಲಿವೆ ಎಂದು ಹೇಳಿದ್ದರು. ಆದರೆ, ಲಾಕ್ಡೌನ್ ಜಾರಿಯಲ್ಲಿರುವುದರಿಂದ ಈ ಸಮಯದಲ್ಲಿ ಶಾಲೆಗಳು ಆರಂಭಗೊಳ್ಳುವ ಸಾಧ್ಯತೆಗಳು ಕಂಡು ಬರುತ್ತಿಲ್ಲ.

ಶಿಕ್ಷಣ ಇಲಾಖೆಯ ಮೂಲಗಳು ನೀಡಿರುವ ಪ್ರಕಾರ ಜುಲೈ 1 ರಿಂದ ಶಾಲೆಗಳು ಪುನರಾರಂಭಗೊಳ್ಳುವ ಸಾಧ್ಯತೆಗಳಿವೆ ಎಂದು ತಿಳಿಸಿವೆ.

ಈಗಾಗಲೇ ಸರ್ಕಾರಕ್ಕೆ ಜೂನ್ 15 ಹಾಗೂ ಜುಲೈ 1 ದಿನಾಂಕವನ್ನು ಶಿಫಾರಸು ಮಾಡಲಾಗಿದೆ.

ಸರ್ಕಾರದ ಆದೇಶಕ್ಕಾಗಿ ಕಾಯಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ ವರ್ಷ ನಡೆದಿದ್ದ ವಿದ್ಯಾಗಮ ಕಾರ್ಯಕ್ರಮ ಸೋಂಕು ಹೆಚ್ಚಳದಿಂದಾಗಿ ಈ ವರ್ಷ ನಡೆಸಲು ಸಾಧ್ಯವಾಗಲಿಲ್ಲ. ವಿದ್ಯಾಗಮ ಕಾರ್ಯಕ್ರಮವನ್ನು ಅವೈಜ್ಞಾನಿಕ ರೀತಿಯಲ್ಲಿ ಜಾರಿಗೆ ತಂದ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗಿದ್ದವು.

ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಹೊರಾಂಗಣದಲ್ಲಿ ಕುಳಿತುಗೊಳ್ಳುವುದರಿಂದ ದಾರಿಯಲ್ಲಿ ಹೋಗುವವರಿಂದ ಸಮಸ್ಯೆಗಳಾಗುತ್ತದೆ. ಇದು ಉತ್ತಮ ವಾತಾವರಣವಲ್ಲ ಎಂದು ಟೀಕೆಗಳು ವ್ಯಕ್ತವಾಗಿದ್ದವು. ಅಲ್ಲದೆ, ಕೆಲವೆಡೆ ಒಮ್ಮೆಲೆ ಭಾರೀ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರಿದ ಘಟನೆಗಳೂ ಬೆಳಕಿಗೆ ಬಂದಿದ್ದವು. ಹೀಗಾಗಿ ಈ ವರ್ಷ ವಿದ್ಯಾಗಮ ಕಾರ್ಯಕ್ರವನ್ನು ಸರ್ಕಾರ ನಡೆಸಲಿಲ್ಲ.

ಈ ನಡುವೆ ಶಿಕ್ಷಣ ತಜ್ಞ ನಿರಂಜನಾರಾಧ್ಯ ವಿಪಿಯವರು ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಹೆಚ್ಚೆಚ್ಚು ಜನರು ಲಸಿಕೆ ಪಡೆದುಕೊಳ್ಳುತ್ತಿದ್ದು, ವಿದ್ಯಾಗಮ ಕಾರ್ಯಕ್ರಮದ ಅಗತ್ಯತೆ ಈ ಬಾರಿ ಬೀಳುವುದಿಲ್ಲ. ಪ್ರಸಕ್ತ ಸಾಲಿನಲ್ಲಿ ಶಾಲೆಗಳನ್ನು ಕೆಲವು ವಿಧಾನಗಳನ್ನು ಅನುಸರಿಸಿ ಪುನರಾರಂಭಿಸಬೇಕಿದೆ. ಪರ್ಯಾಯ ದಿನಗಳಲ್ಲಿ ತರಗತಿಗಳನ್ನು ನಡೆಸಬೇಕು ಎಂದು ಹೇಳಿದ್ದಾರೆ.

ಜೂನ್ 15 ರಿಂದ ಶಾಲೆಗಳು ಆರಂಭವಾಗಿದ್ದೇ ಆದರೆ, ಆನ್'ಲೈನ್ ತರಗತಿಗಳು, ಯೂಟ್ಯೂಬ್ ಹಾಗೂ ದೂರದರ್ಶನ ಕಾರ್ಯಕ್ರಮಗಳ ಮೂಲಕ ತರಗತಿ ನಡೆಸಲು ಇಲಾಖೆ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಈ ಕುರಿತು ತಜ್ಞರೊಂದಿಗೆ ಒಂದು ಸುತ್ತಿನ ಸಭೆ ನಡೆಸಿದ ಬಳಿಕ ಸರ್ಕಾರ ಅಂತಿಮ ನಿರ್ಧಾರಕ್ಕೆ ಬರಲಿದೆ ಎಂದು ಹೇಳಲಾಗುತ್ತಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada Prabha

#Hashtags