ವಿಜಯವಾಣಿ

505k Followers

ಆನ್​ಲೈನ್ ಪಿಯುಸಿ ಪರೀಕ್ಷೆ, ಶಿಕ್ಷಣ ಇಲಾಖೆ ಚಿಂತನೆ: 2 ವರ್ಷದ ಹಿಂದೆ ಪೂರಕ ಪರೀಕ್ಷೆ ನಡೆಸಿ ಯಶಸ್ವಿ; ಬಹು ಆಯ್ಕೆ ಮಾದರಿ ಪ್ರಶ್ನೆಪತ್ರಿಕೆಗೆ ತಜ್ಞರ ಒಲವು

29 May 2021.02:12 AM

| ದೇವರಾಜ್ ಕನಕಪುರ ಬೆಂಗಳೂರು

ಕೋವಿಡ್-19 ಸಂಕಷ್ಟ ಕಾಲದಲ್ಲೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದ್ವಿತೀಯ ಪಿಯು ಪರೀಕ್ಷೆ ನಡೆಸುವ ಸಲುವಾಗಿ ಶಿಕ್ಷಣ ಇಲಾಖೆ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದು, ಆನ್​ಲೈನ್ ಮೂಲಕ ಪರೀಕ್ಷೆ ನಡೆಸುವ ಬಗ್ಗೆಯೂ ಹೆಚ್ಚು ಒಲವು ವ್ಯಕ್ತವಾಗಿದೆ. ಬಹುತೇಕ ಕೇಂದ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಗಳು ಇದೀಗ ಆನ್​ಲೈನ್​ನಲ್ಲೇ ನಡೆಯುತ್ತಿವೆ. ಇದೇ ಮಾದರಿಯಲ್ಲಿ ಪಿಯು ಪರೀಕ್ಷೆ ನಡೆಸುವುದರಿಂದ ವಿದ್ಯಾರ್ಥಿಗಳ ದಟ್ಟಣೆ ಕಡಿಮೆ ಮಾಡಬಹುದು. ಜತೆಗೆ ನಕಲು ಮಾಡುವುದನ್ನು ತಡೆಯಬಹುದು. ಈ ಎರಡು ಅಂಶಗಳನ್ನು ಮುಂದಿಟ್ಟುಕೊಂಡು ಪದವಿಪೂರ್ವ ಶಿಕ್ಷಣ ಇಲಾಖೆಯು ಶಿಕ್ಷಣ ತಜ್ಞರು ಹಾಗೂ ಈ ಹಿಂದೆ ಪಿಯು ನಿರ್ದೇಶಕರಾಗಿ ಸೇವೆ ಸಲ್ಲಿಸಿದವರನ್ನು ಸಂರ್ಪಸಿ ಸಲಹೆ ಪಡೆಯುತ್ತಿದೆ ಎಂದು ತಿಳಿದು ಬಂದಿದೆ.

ದ್ವಿತೀಯ ಪಿಯು ಪರೀಕ್ಷೆಯನ್ನು 6 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ತೆಗೆದುಕೊಳ್ಳುತ್ತಾರೆ. ಈ ಎಲ್ಲ ವಿದ್ಯಾರ್ಥಿಗಳಿಗೆ ಆನ್​ಲೈನ್​ನಲ್ಲಿ ವ್ಯವಸ್ಥೆ ಮಾಡುವುದಾದರೆ, ಎಷ್ಟು ಪರೀಕ್ಷಾ ಕೇಂದ್ರಗಳು ಮತ್ತು ಕಂಪ್ಯೂಟರ್ ಅವಶ್ಯಕತೆ ಇದೆ ಎಂಬುದನ್ನು ಇಲಾಖೆ ಅವಲೋಕಿಸುತ್ತಿದೆ.

ವಿದ್ಯುತ್, ಇಂಟರ್​ನೆಟ್ ಸಂಕಷ್ಟ: ಪೂರಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಸಂಖ್ಯೆ 2 ಲಕ್ಷ ಮೀರಿರಲಿಲ್ಲ. ಆದರೆ, 6 ಲಕ್ಷ ವಿದ್ಯಾರ್ಥಿಗಳಿಗೆ ಆನ್​ಲೈನ್ ಮೂಲಕ ಪರೀಕ್ಷೆ ನಡೆಸುವುದು ಕಷ್ಟದ ಕೆಲಸ ಎಂದು ಶಿಕ್ಷಣ ಇಲಾಖೆಯ ಉನ್ನತಾಧಿಕಾರಿಗಳು ಈ ಪರೀಕ್ಷೆಯ ಅನುಷ್ಠಾನಕ್ಕೆ ಸಹಮತ ನೀಡಿರಲಿಲ್ಲ. ಗ್ರಾಮೀಣ ಭಾಗದಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿರುವುದರಿಂದ ಹಾಗೂ ಇಂಟರ್​ನೆಟ್ ಲಭ್ಯತೆ ಕಡಿಮೆ ಇರುವುದರಿಂದ ಆನ್​ಲೈನ್ ಪರೀಕ್ಷೆ ಕಷ್ಟ ಎನ್ನುವುದು ಕೆಲ ತಜ್ಞರ ಅಭಿಪ್ರಾಯವಾಗಿದೆ.

ಪೂರಕ ಪರೀಕ್ಷೆ ಸಕ್ಸಸ್: ಈ ಹಿಂದೆ ಇಲಾಖೆಯ ನಿರ್ದೇಶಕಿಯಾಗಿ ಸೇವೆ ಸಲ್ಲಿಸಿದ್ದ ಸಿ. ಶಿಖಾ ಅವರು ಪೂರಕ ಪರೀಕ್ಷೆಯನ್ನು ಆನ್​ಲೈನ್​ನಲ್ಲಿ ನಡೆಸಿ ಯಶಸ್ವಿಯಾಗಿದ್ದರು. ಇದನ್ನು ಪೂರ್ಣ ಪ್ರಮಾಣದಲ್ಲಿ ನಡೆಸಲು ಶಿಕ್ಷಣ ಇಲಾಖೆ ಅನುಮತಿ ನೀಡದ ಕಾರಣ ಅಲ್ಲಿಗೆ ಕೈ ಬಿಡಲಾಯಿತು.

ಬಹು ಆಯ್ಕೆ?: ದ್ವಿತೀಯ ಪಿಯು ಪರೀಕ್ಷೆಗಳನ್ನು ಸರಳವಾಗಿ ನಡೆಸುವುದಾಗಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಶ್ನೆ ಪತ್ರಿಕೆ ಯಾವ ರೀತಿ ರೂಪಿಸಬೇಕೆಂಬ ಬಗ್ಗೆ ಪಿಯು ಇಲಾಖೆ ಚರ್ಚೆ ನಡೆಸುತ್ತಿದೆ. ವಿವರಣಾತ್ಮಕ ಪ್ರಶ್ನೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುವ ಬದಲು ಬಹುಮಾದರಿ ಆಯ್ಕೆ ಪ್ರಶ್ನೆಗಳನ್ನೇ ಹೆಚ್ಚಾಗಿ ಕೇಳುವುದರಿಂದ ವಿದ್ಯಾರ್ಥಿಗಳು ಉತ್ತರಿಸಲು ಅನುಕೂಲವಾಗಲಿದೆ ಎಂಬುದು ಕೆಲವು ಶಿಕ್ಷಣ ತಜ್ಞರ ಅಭಿಪ್ರಾಯವಾಗಿದೆ.

ಪಿಯು ಪಠ್ಯದಲ್ಲಿ 38 ವಿಷಯಗಳು ಇರುವುದರಿಂದ ಆನ್​ಲೈನ್ ಮಾಡುವುದು ಕಷ್ಟ. ಎಲ್ಲ ತಜ್ಞರ ಅಭಿಪ್ರಾಯ ಕೇಳಿದ್ದು, ಬಂದ ಮೇಲೆ ನಿರ್ಧಾರ ಮಾಡುತ್ತೇವೆ. ಸದ್ಯಕ್ಕೆ ಏನೂ ಹೇಳುವುದಕ್ಕೆ ಸಾಧ್ಯವಿಲ್ಲ.

| ಆರ್. ಸ್ನೇಹಲ್ ಪಿಯು ನಿರ್ದೇಶಕಿ

ಪರೀಕ್ಷೆ ನಡೆಸುವುದು ಉತ್ತಮವಾದ ನಿರ್ಧಾರ. ವಿದ್ಯಾರ್ಥಿಗಳಿಗೆ ಬಹುಆಯ್ಕೆ ಮಾದರಿಯಲ್ಲಿ ಪ್ರಶ್ನೆಪತ್ರಿಕೆ ರೂಪಿಸುವು ದರಿಂದ ಮೌಲ್ಯಮಾಪನಕ್ಕೆ ಅನುಕೂಲವಾಗಲಿದೆ.

| ಎ.ಎಚ್.ನಿಂಗೇಗೌಡ ಅಧ್ಯಕ್ಷ, ರಾಜ್ಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ

ಮದ್ವೆಯಾಗಿ ನಾಲ್ಕೇ ದಿನಗಳಲ್ಲಿ ಕರೊನಾಗೆ ಬಲಿಯಾದ ಯುವತಿ; ಸೋಂಕಿರುವುದು ಆಕೆಯ ಮರಣದ ಬಳಿಕ ಗೊತ್ತಾಯಿತು..!

ಆತ್ಮಹತ್ಯೆಯಿಂದ ಪತ್ನಿ ಸತ್ತ ಬೆನ್ನಿಗೇ ನೇಣು ಹಾಕಿಕೊಂಡ ಪತಿ; 4 ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ಪ್ರೇಮಿಗಳು..

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vijayvani

#Hashtags