ಉದಯವಾಣಿ

1.4M Followers

ಪರೀಕ್ಷೆ ಬೇಡ ಎನ್ನುವವರಿಲ್ಲ ! ಪರೀಕ್ಷೆ ಬೇಕು: ಮಕ್ಕಳು, ಶಿಕ್ಷಕ, ಹೆತ್ತವರ ಆಗ್ರಹ

31 May 2021.07:30 AM

ಬೆಂಗಳೂರು : ಪರೀಕ್ಷೆ ಮಾಡುವುದಾದರೆ ಮಾಡಿಬಿಡಿ. ಗೊಂದಲ ಸೃಷ್ಟಿಸಬೇಡಿ. ನಾವು ಉತ್ತರಿಸಲು ಸಿದ್ಧರಿದ್ದೇವೆ, ಶಿಕ್ಷಕರು ಪರೀಕ್ಷೆ ನಡೆಸಲು ಸಿದ್ಧರಿದ್ದಾರೆ. ಹೆತ್ತವರು ನಮ್ಮನ್ನು ಕಳುಹಿಸಲು ಸನ್ನದ್ಧರಾಗಿದ್ದಾರೆ…!

ಇದು “ಉದಯವಾಣಿ’ ನಡೆಸಿದ ಸಮೀಕ್ಷೆಯಲ್ಲಿ ವ್ಯಕ್ತಗೊಂಡ ಅಭಿಪ್ರಾಯ. ಕೊರೊನಾ ಹಿನ್ನೆಲೆಯಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಬಹುತೇಕ ಶಾಲಾ-ಕಾಲೇಜುಗಳು ನಡೆದಿಲ್ಲ. 1ರಿಂದ 9ನೇ ತರಗತಿ ವರೆಗಿನ ವಿದ್ಯಾರ್ಥಿಗಳನ್ನು ಸರಕಾರ ತೇರ್ಗಡೆಗೊಳಿಸಿದೆ. ಪ್ರಥಮ ಪಿಯುಸಿ ಮಕ್ಕಳೂ ಪರೀಕ್ಷೆ ಇಲ್ಲದೇ ಉತ್ತೀರ್ಣರಾಗಿದ್ದಾರೆ. ಆದರೆ ವಿದ್ಯಾರ್ಥಿಗಳ ಬದುಕಿನ ಮಹತ್ವದ ಘಟ್ಟ ಎಂದೇ ಗುರುತಿಸಿಕೊಂಡಿರುವ ಎಸೆಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ವಿಚಾರದಲ್ಲಿ ಮಾತ್ರ ಇಂಥ ದೃಢ ನಿರ್ಧಾರ ತೆಗೆದುಕೊಳ್ಳಲು ಆಗಿಲ್ಲ.

ಕೇಂದ್ರ ಮತ್ತು ರಾಜ್ಯ ಸರಕಾರಗಳ ಪರೀಕ್ಷೆ ಗೊಂದಲದ ಮಧ್ಯೆ “ಉದಯವಾಣಿ’ ರಾಜ್ಯಾದ್ಯಂತ ಮಕ್ಕಳು, ಶಿಕ್ಷಕರು ಮತ್ತು ಹೆತ್ತವರ ಅಭಿಪ್ರಾಯ ಸಂಗ್ರಹಿಸಿತು. ಸಮೀಕ್ಷೆಯಲ್ಲಿ ಸುಮಾರು 15 ಸಾವಿರ ಮಂದಿ ಪಾಲ್ಗೊಂಡಿದ್ದು, ಪರೀಕ್ಷೆ ನಡೆಸುವುದರ ಬಗ್ಗೆ ಸಹಮತ ವ್ಯಕ್ತಪಡಿಸಿದ್ದಾರೆ.

ವಿದ್ಯಾರ್ಥಿಗಳು ಹೇಳುವುದೇನು?
ಸಮೀಕ್ಷೆಯಲ್ಲಿ ಸುಮಾರು 3,311 ವಿದ್ಯಾರ್ಥಿಗಳು ಭಾಗಿಯಾಗಿದ್ದಾರೆ. ಎಸೆಸೆಲ್ಸಿ ವಿದ್ಯಾರ್ಥಿಗಳಲ್ಲಿ ಶೇ. 32ರಷ್ಟು ಮಂದಿ ಈ ವರ್ಷ ಪರೀಕ್ಷೆ ಬೇಡ ಎಂದಿದ್ದಾರೆ. 49.2ರಷ್ಟು ಮಂದಿ ಪರೀಕ್ಷೆ ನಡೆಯಲಿ ಎಂದಿದ್ದಾರೆ. ಇವರಲ್ಲಿ ಶೇ. 23ರಷ್ಟು ಮಂದಿ ಕೊರೊನಾ ಕಡಿಮೆಯಾದ ಮೇಲೆ ನಡೆಯಲಿ ಎಂದಿದ್ದರೆ, ಆಗಸ್ಟ್‌ ನಲ್ಲಿ ನಡೆಸಿ ಎಂದವರು ಶೇ. 13.2, ಜುಲೈನಲ್ಲಿ ನಡೆಸಿ ಎಂದವರು ಶೇ. 13.1.

ಪಿಯುಸಿ ಮಕ್ಕಳು ಪರೀಕ್ಷೆ ವಿಚಾರದಲ್ಲಿ ಸ್ವಲ್ಪ ಮುಂದಿದ್ದಾರೆ. ಶೇ. 49.76 ರಷ್ಟು ಪಿಯುಸಿ ಮಕ್ಕಳು ಪರೀಕ್ಷೆ ನಡೆಸಿ ಎಂದಿದ್ದಾರೆ. ಇವರಲ್ಲಿ ಕೊರೊನಾ ಕಡಿಮೆಯಾದ ಬಳಿಕ ಎಂದವರು ಶೇ. 22, ಜುಲೈಯಲ್ಲಿ ಮಾಡಿ ಎಂದವರು ಶೇ. 17.26, ಆಗಸ್ಟ್‌ ನಲ್ಲಿ ನಡೆಸಿ ಎಂದ ವರು ಶೇ. 10.05 ಮಂದಿ. ಈ ವರ್ಷ ಪರೀಕ್ಷೆ ಬೇಡ ಎಂದ ವಿದ್ಯಾರ್ಥಿಗಳು ಶೇ. 21.81. ಲಸಿಕೆ ಸಿಗುವ ತನಕ ಪರೀಕ್ಷೆ ಬೇಡ ಎಂದು ಶೇ.5.7ರಷ್ಟು ಮಂದಿ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

ಸಮಿಕ್ಷೆಯಲ್ಲಿ ಕಂಡದ್ದು
– ಆಫ್ ಲೈನ್‌ ಪರೀಕ್ಷೆ ಬಗ್ಗೆ ಮಕ್ಕಳಿಗೆ ಒಲವು
– ಪ್ರಮುಖ ವಿಷಯಗಳ ಪರೀಕ್ಷೆ ನಡೆಸಿ: ವಿದ್ಯಾರ್ಥಿಗಳ ಮನವಿ
– ಶಾಲಾ ಕಾಲೇಜು ಮಟ್ಟದಲ್ಲೇ ಪರೀಕ್ಷೆ ನಡೆಯಲಿ ಅನ್ನುತ್ತಿದ್ದಾರೆ ಹೆತ್ತವರು
– ಆಫ್ ಲೈನ್‌ ನಲ್ಲೇ ಪರೀಕ್ಷೆ ನಡೆಯಲಿ: ಶಿಕ್ಷಕರು
– ಜಿಲ್ಲಾ ಮಟ್ಟದ ಪರೀಕ್ಷೆಗಳು ಬೇಡ : ಶಿಕ್ಷಕರು
– ಪರೀಕ್ಷೆ ನಡೆಸಲು ನಾವು ಸಿದ್ಧರಿದ್ದೇವೆ: ಶಿಕ್ಷಕರು

ಹೆತ್ತವರು ಹೇಳಿದ್ದೇನು?
ವಿದ್ಯಾರ್ಥಿಗಳಿಗಿಂತ ಹೆತ್ತವರು ಒಂದು ಹೆಜ್ಜೆ ಮುಂದಿದ್ದಾರೆ. ಶೇ. 52.9 ಹೆತ್ತವರು ಎಸೆಸೆಲ್ಸಿ ಪರೀಕ್ಷೆ ನಡೆಸಲಿ ಎಂದಿದ್ದಾರೆ. ಈ ವರ್ಷ ಬೇಡ ಎಂದವರು ಶೇ. 29, ಸರಕಾರಕ್ಕೆ ಬಿಟ್ಟದ್ದು ಎಂದವರು ಶೇ. 9.8 ಮತ್ತು ಲಸಿಕೆ ಸಿಗುವ ವರೆಗೆ ಬೇಡ ಎಂದವರು ಶೇ. 8.3ರಷ್ಟು ಮಂದಿ. ಪಿಯುಸಿ ವಿದ್ಯಾರ್ಥಿಗಳ ಹೆತ್ತವರಲ್ಲೂ ಪರೀಕ್ಷೆ ನಡೆಯಲಿ ಎಂದವರೇ ಅಧಿಕ. ಈ ವರ್ಷ ಬೇಡ ಎಂದವರು ಶೇ. 23.5, ಸರಕಾರಕ್ಕೆ ಬಿಟ್ಟದ್ದು ಎಂದವರು ಶೇ. 10.9 ಮತ್ತು ಲಸಿಕೆ ಸಿಗುವ ವರೆಗೆ ಬೇಡ ಎಂದವರು ಶೇ. 8.6ರಷ್ಟು ಮಂದಿ.

ಹೆತ್ತವರಲ್ಲೂ ಬಹುತೇಕರು ಆಫ್ ಲೈನ್‌ ಪರೀಕ್ಷೆಯತ್ತ ಒಲವು ತೋರಿದ್ದಾರೆ. ಶೇ.38.9ರಷ್ಟು ಮಂದಿ ಆಫ್ ಲೈನ್‌ ಬಗ್ಗೆ, ಶೇ. 26.7 ಮಂದಿ ಆನ್‌ ಲೈನ್‌ ಬಗ್ಗೆ ಮತ್ತು ಶೇ. 34.3ರಷ್ಟು ಹೆತ್ತವರು ತರಗತಿ ಪರೀಕ್ಷೆ ಅಂಕ ಪರಿಗಣಿಸಲಿ ಎಂದಿದ್ದಾರೆ.

ಪ್ರಮುಖ ವಿಷಯ ಅಥವಾ ಅರ್ಧ ಪಠ್ಯಕ್ರಮದ ಮೇಲಷ್ಟೇ ಪರೀಕ್ಷೆ ನಡೆಯಲಿ ಎಂದು ಹೆತ್ತವರು ಹೇಳುವ ಮೂಲಕ ಮಕ್ಕಳಿಗೆ ಕೊಂಚ ಸಮಾಧಾನ ತಂದಿದ್ದಾರೆ. ಶೇ. 41.3ರಷ್ಟು ಮಂದಿ ಪ್ರಮುಖ ವಿಷಯಗಳ ಮೇಲೆ ಪರೀಕ್ಷೆ ಸಾಕು ಎಂದಿದ್ದರೆ, ಪಠ್ಯ ಕ್ರಮದ ಶೇ. 50ರ ಮೇಲಷ್ಟೇ ಪರೀಕ್ಷೆ ನಡೆಯಲಿ ಎಂದು ಶೇ. 34.3ರಷ್ಟು ಮಂದಿ ಹೇಳಿದ್ದಾರೆ. ಎಲ್ಲ ವಿಷಯಗಳ ಮೇಲೆ ಪರೀಕ್ಷೆ ನಡೆಯಲಿ ಎಂದವರು ಶೇ. 24.4ರಷ್ಟು ಮಂದಿ ಮಾತ್ರ.

ಶಿಕ್ಷಕರ ಅಭಿಪ್ರಾಯವೇನು?
ಶಿಕ್ಷಕರು ಎಸೆಸೆಲ್ಸಿ ಪರೀಕ್ಷೆ ರದ್ದು ಬೇಡ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಶೇ. 17.6ರಷ್ಟು ಶಿಕ್ಷಕರು ಮಾತ್ರ ಪರೀಕ್ಷೆ ಬೇಡ ಎಂದಿದ್ದಾರೆ. ಶೇ.66.6ರಷ್ಟು ಶಿಕ್ಷಕರು ಪರೀಕ್ಷೆ ನಡೆಸಲೇಬೇಕು ಎಂದಿದ್ದಾರೆ. ಈ ಶೇ. 66.6ರಲ್ಲಿ ಶೇ. 29.4 ಮಂದಿ ಕೊರೊನಾ ಕಡಿಮೆಯಾಗಲಿ ಎಂದಿದ್ದರೆ, ಶೇ. 21.3ರಷ್ಟು ಶಿಕ್ಷಕರು ಜುಲೈಯಲ್ಲಿ, ಶೇ. 15.9ರಷ್ಟು ಮಂದಿ ಆಗಸ್ಟ್‌ ನಲ್ಲಿ ಪರೀಕ್ಷೆ ನಡೆಸಲಿ ಎಂದಿದ್ದಾರೆ. ಲಸಿಕೆ ಸಿಗುವ ತನಕ ಪರೀಕ್ಷೆ ಬೇಡ ಎಂದು ಶೇ.9.7ರಷ್ಟು ಶಿಕ್ಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಶೇ. 73.8ರಷ್ಟು ಶಿಕ್ಷಕರು ಪಿಯುಸಿ ಪರೀಕ್ಷೆ ಬೇಕೇಬೇಕು ಎಂದಿದ್ದಾರೆ. ಲಸಿಕೆ ಸಿಗುವ ವರೆಗೆ ಪರೀಕ್ಷೆ ಬೇಡ ಎಂದವರು ಶೇ. 9.4 ಮಂದಿ.
ಎಲ್ಲ ವಿಷಯಗಳ ಮೇಲೆ ಪರೀಕ್ಷೆ ನಡೆಯಲಿ ಎಂದು ಶೇ. 44.1ರಷ್ಟು ಶಿಕ್ಷಕರು ಹೇಳಿದ್ದರೆ, ಪ್ರಮುಖ ವಿಷಯಗಳ ಮೇಲಷ್ಟೇ ಪರೀಕ್ಷೆ ನಡೆಯಲಿ ಎಂದು ಶೇ. 25ರಷ್ಟು ಮತ್ತು ಪಠ್ಯ ಕ್ರಮದ ಶೇ. 50ರ ಮೇಲೆ ಪರೀಕ್ಷೆ ನಡೆಯಲಿ ಎಂದು ಶೇ. 31ರಷ್ಟು ಶಿಕ್ಷಕರು ಹೇಳಿದ್ದಾರೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Udayavani

#Hashtags