News18 ಕನ್ನಡ

400k Followers

Explained: ಯಾರು 2ನೇ ಡೋಸ್ ಪಡೆಯಬಾರದು? ವ್ಯಾಕ್ಸಿನ್ ಕುರಿತ ಎಲ್ಲಾ ಪ್ರಶ್ನೆಗಳಿಗೂ ವೈದ್ಯರ ಉತ್ತರ ಇಲ್ಲಿದೆ

11 Jun 2021.9:15 PM

ಕಳೆದ ವರ್ಷದಿಂದ ಇಡೀ ವಿಶ್ವ ಕೊರೊನಾ ಸೋಂಕಿನಿಂದ ನಲುಗುತ್ತಿದೆ. ಮನುಕುಲವೇ ಸೋಂಕಿನಿಂದ ದೈಹಿಕವಾಗಿ, ಮಾನಸಿಕವಾಗಿ, ಆರ್ಥಿಕವಾಗಿ ಭರ್ಜರಿತಗೊಂಡಿದೆ. ಸೋಂಕನ್ನು ಮಟ್ಟ ಹಾಕಲು ನಡೆದ ಸಂಶೋಧನೆಗಳು ಅದೆಷ್ಟೋ. ಕೊನೆಗೆ ಲಸಿಕೆಯೊಂದೇ ವೈರಸ್​​ ವಿರುದ್ಧ ಹೋರಾಡಲು ನಮಗಿರುವ ಅಸ್ತ್ರ ಎಂಬ ತೀರ್ಮಾನಕ್ಕೆ ಬರಲಾಗಿದೆ. ಈ ಹಿನ್ನೆಲೆಯಲ್ಲಿ ಲಸಿಕಾ ಅಭಿಯಾನ ಭಾರತದಲ್ಲಿ ಸಮರೋಪಾದಿಯಲ್ಲಿ ನಡೆಯುತ್ತಿದೆ. ಲಸಿಕೆಯ ಅಗತ್ಯತೆ, ಮಾಹಿತಿ ಬಗ್ಗೆ ಸಾಕಷ್ಟು ಗೊಂದಲಗಳು ಮನೆ ಮಾಡಿವೆ. ಎಲ್ಲಾ ಅನುಮಾನಗಳನ್ನು ದೆಹಲಿಯ ಮೌಲಾನ ಆಜಾದ್​ ಕಾಲೇಜಿನ ಡಾ. ನಿಕೇತ್​ ರಾಯ್​​ ಬಗೆಹರಿಸಿದ್ದಾರೆ. ಲಸಿಕೆಯ ಸಂಪೂರ್ಣ ಮಾಹಿತಿಯನ್ನು ನ್ಯೂಸ್​​18 ಜೊತೆ ಹಂಚಿಕೊಂಡಿದ್ದಾರೆ.

ಕೊರೊನಾ ವೈರಸ್​ಗೆ ತನ್ನದೇ ಆದ ಜೀವಕೋಶವಿಲ್ಲ ಹೀಗಾಗಿ ಸೋಂಕು ತನ್ನ ನಕಲುಗಳನ್ನು ದ್ವಿಗುಣಗೊಳಿಸುತ್ತಾ ಹೋಗುತ್ತದೆ. ಲಸಿಕೆ ದೇಹದಲ್ಲಿ ಇಂತಹ ಸೋಂಕಿನ ನಕಲನ್ನು ಹುಡುಕಿ ನಾಶ ಮಾಡುತ್ತದೆ. ಅಗತ್ಯವಿರುವ ಕೆಮಿಕಲ್​​ ಅನ್ನು ಸೃಷ್ಟಿಸಿ ಸೋಂಕನ್ನು ಕೊನೆಗಾಣಿಸಿ ಇತರರಿಗೆ ಹರಡದಂತೆ ವ್ಯಾಕ್ಸಿನ್​ ತಡೆಯುತ್ತದೆ. ಸದ್ಯ ದೇಶದಲ್ಲಿ ವ್ಯಾಪಕವಾಗಿ ಕೋವಿಶೀಲ್ಡ್​​​ ಹಾಗೂ ಕೋವ್ಯಾಕ್ಸಿನ್​ ಲಸಿಕೆಯನ್ನು ನೀಡಲಾಗುತ್ತಿದೆ. ಆ ಬಗೆಗಿನ ಗೊಂದಲಗಳಿಗೆ ಉತ್ತರ ಇಲ್ಲಿದೆ. 1.ಲಸಿಕೆ ಪಡೆಯುವುದು ಕಡ್ಡಾಯವೇ?

ಲಸಿಕೆ ಪಡೆಯುವುದು ಕಡ್ಡಾಯವಲ್ಲ. ಆದರೆ ಕೊರೊನಾ ಸೋಂಕಿಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲದ ಕಾರಣ ಲಸಿಕೆಯೊಂದೇ ನಮಗಿರುವ ಮಾರ್ಗ. ಹೆಚ್ಚಿನ ಜನ ಲಸಿಕೆ ಪಡೆದಷ್ಟೂ ಸೋಂಕು ಹರಡುವುದನ್ನು ತಡೆಯಬಹುದು. ಹೀಗಾಗಿ ಲಸಿಕೆ ಪಡೆಯುವಂತೆ ಸಲಹೆ ನೀಡುತ್ತೇನೆ.

2. ಯಾರು ವ್ಯಾಕ್ಸಿನ್​ ತೆಗೆದುಕೊಳ್ಳಬೇಕು?

ಸದ್ಯ ದೇಶದಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರೂ ಲಸಿಕೆ ಪಡೆಯಲು ಅರ್ಹರು. ಆದಷ್ಟು ಶೀಘ್ರವೇ 2 ವರ್ಷ ಮೇಲ್ಪಟ್ಟ ಮಕ್ಕಳಿಗೂ ಲಸಿಕೆ ಬರಲಿದೆ. ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಲಸಿಕೆ ಪಡೆಯಬಹುದು. ಮಧುಮೇಹ, ಕ್ಯಾನ್ಸರ್​​, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರು, ಥೈರಾಯಿಡ್​ ಸಮಸ್ಯೆ ಇರುವವರು ಆದಷ್ಟು ಬೇಗನೆ ಲಸಿಕೆ ಪಡೆಯಬೇಕು. ಆದರೆ ಲಸಿಕೆ ಪಡೆಯುವಾಗ ತಮ್ಮ ಆರೋಗ್ಯದ ಇತಿಹಾಸವನ್ನು ತಿಳಿಸುವುದು ಸೂಕ್ತ.

3. ಯಾರು ವ್ಯಾಕ್ಸಿನ್​ ಪಡೆಯಬಾರದು?ಔಷಧಗಳಿಂದ ಅಲರ್ಜಿ ಇರುವವರು ಲಸಿಕೆ ನೀಡುವ ಸಿಬ್ಬಂದಿಗೆ ಮೊದಲೇ ತಿಳಿಸಬೇಕು. ಮೊದಲ ಡೋಸ್​ ಪಡೆದ ಬಳಿಕ ಅಲರ್ಜಿ ಸಮಸ್ಯೆ ಎದುರಿಸಿದವರು 2ನೇ ಡೋಸ್​ ಲಸಿಕೆ ಪಡೆಯಬಾರದು. ಜ್ವರ, ನೆಗಡಿ-ಕಫ ಸಮಸ್ಯೆಯನ್ನು ಎದುರಿಸುತ್ತಿರುವವರು ತಾತ್ಕಾಲಿಕವಾಗಿ ಲಸಿಕೆ ಪಡೆಯುವುದನ್ನು ಮುಂದೂಡುವುದು ಒಳಿತು. ಗುಣಮುಖರಾದ ಬಳಿಕ ಲಸಿಕೆ ಪಡೆಯಬಹುದು. ಕಡಿಮೆ ರಕ್ತಕಣಗಳಿರುವವರು, ರಕ್ತ ಸಂಬಂಧಿ ಕಾಯಿಲೆ ಇರುವವರು ಲಸಿಕೆ ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ನೀಡಬೇಕು.

4. ಕೋವಿಶೀಲ್ಡ್​, ಕೋವ್ಯಾಕ್ಸಿನ್​ನಲ್ಲಿ ಯಾವುದು ಉತ್ತಮ?

ಯಾವುದು ಉತ್ತಮ, ಯಾವುದು ಕಳಪೆ ಎನ್ನುವ ಪ್ರಶ್ನೆ ಉದ್ಭವಿಸಲ್ಲ. ಎರಡು ಲಸಿಕೆಗಳಿಗೆ ಅನುಮತಿ ಸಿಕ್ಕಿದ್ದು, ಎರಡು ಲಸಿಕೆಗಳೂ ಸುರಕ್ಷಿತವಾಗಿವೆ.

5. ಎರಡು ಬೇರೆ ಬೇರೆ ಲಸಿಕೆ ಪಡೆಯಬಹುದಾ?

ಇಲ್ಲ ಯಾರೂ ಬೇರೆ ಬೇರೆ ಲಸಿಕೆ ಪಡೆಯಬಾರದು. ಒಂದೇ ಲಸಿಕೆಯನ್ನು 2 ಡೋಸ್​ ಪಡೆಯಬೇಕು.

6. ಲಸಿಕೆ ಪಡೆದು ವಾಹನ ಚಲಾಯಿಸಬಹುದಾ? ಕೆಲಸ ಮಾಡಬಹುದಾ?

ಖಂಡಿತ ಮಾಡಬಹುದು. ಸುಸ್ತು-ಜ್ವರ ಕಾಣಿಸಿಕೊಂಡರೆ ವಿಶ್ರಾಂತಿ ಪಡೆಯಬೇಕು.

7. 2 ಡೋಸ್​​ ಲಸಿಕೆ ಪಡೆಯಲೇಬೇಕಾ?

ಹೌದು ಒಂದಕ್ಕಿಂತ 2 ಡೋಸ್​ ಲಸಿಕೆ ಹೆಚ್ಚು ಪರಿಣಾಮಕಾರಿ.

8. ಡೋಸ್​​ಗಳ ನಡುವೆ ಎಷ್ಟು ದಿನ ಅಂತರವಿರಬೇಕು?


  • COVISHIELD - 12 weeks to 16 weeks

  • COVAXIN - 28 days


9. ಲಸಿಕೆ ಬಳಿಕ ಮಾಸ್ಕ್​​ ಅಗತ್ಯವಿಲ್ಲವೇ?

ಯಾವ ಲಸಿಕೆಯೂ ಶೇ.100ರಷ್ಟು ಸುರಕ್ಷತೆಯನ್ನು ಒದಗಿಸುವುದಿಲ್ಲ. ಹಾಗಾಗಿ ವ್ಯಾಕ್ಸಿನೇಷನ್​ ಬಳಿಕವೂ ಮಾಸ್ಕ್​​ ಧರಿಸುವುದು ಕಡ್ಡಾಯ.

10. ಮದ್ಯಪಾನಿಗಳು, ಧೂಮಪಾನಿಗಳು ಲಸಿಕೆ ಪಡೆದರೆ ಸಮಸ್ಯೆಯಾಗುತ್ತದೆಯೇ?

ಮದ್ಯಪಾನಿಗಳು, ಧೂಮಪಾನಿಗಳು ಲಸಿಕೆ ಪಡೆಯಲು ಯಾವುದೇ ಅಭ್ಯಂತರವಿಲ್ಲ. ಯಾವುದೇ ಅಡ್ಡ ಪರಿಣಾಮಗಳು ಎದುರಾಗಲ್ಲ. ಆದರೆ ರೋಗನಿರೋಧಕ ಶಕ್ತಿಯನ್ನು ಕುಂಠಿತಗೊಳಿಸುವ ಮದ್ಯಪಾನ, ಧೂಮಪಾನದಿಂದ ದೂರವಿರುವುದೇ ಲೇಸು. ಕೊರೊನಾ ಕಾಲದಲ್ಲಿ ಕನಿಷ್ಠ ಇವುಗಳನ್ನು ಕಡಿಮೆಯಾದರೂ ಮಾಡುವುದು ಒಳಿತು.
Disclaimer

Disclaimer

This story is auto-aggregated by a computer program and has not been created or edited by Dailyhunt Publisher: News18 Kannada

#Hashtags