News18 ಕನ್ನಡ

400k Followers

2nd PU Repeaters: ಪಿಯು ರಿಪೀಟರ್ಸ್​ಗೆ ಗುಡ್​ ನ್ಯೂಸ್; ಪರೀಕ್ಷೆ ಇಲ್ಲದೇ ಪಾಸ್​ ಮಾಡಲು ನಿರ್ಧರಿಸಿದ ಸರ್ಕಾರ

04 Jul 2021.12:48 PM

ಬೆಂಗಳೂರು(ಜು.04): ಕೊರೋನಾ ಕಾರಣದಿಂದಾಗಿ ದ್ವಿತೀಯ ಪಿಯು ವಿದ್ಯಾರ್ಥಿಗಳನ್ನು ಪಾಸ್ ಮಾಡಿದ್ದ ಸರ್ಕಾರಕ್ಕೆ ರಿಪೀಟರ್ಸ್​ಗಳದ್ದೇ ತಲೆನೋವಾಗಿತ್ತು. ನಮ್ಮನ್ನು ಯಾಕೆ ಪಾಸ್​ ಮಾಡಿಲ್ಲ ಎಂದು ರಿಪೀಟರ್ಸ್​ ವಿದ್ಯಾರ್ಥಿಗಳು ಕೋರ್ಟ್​ ಮೊರೆ ಹೋಗಿದ್ದರು. ಬಳಿಕ ಕೋರ್ಟ್​ ಸೆಕೆಂಡ್​ ಪಿಯು ಫಲಿತಾಂಶ ಪ್ರಕಟಕ್ಕೆ ತಡೆ ನೀಡಿತ್ತು. ಈ ಎಲ್ಲಾ ಬೆಳವಣಿಗೆಗಳ ಬಳಿಕ ಸರ್ಕಾರ ಒಂದು ನಿರ್ಣಯ ಕೈಗೊಂಡಿದ್ದು, ರಿಪೀರ್ಟರ್ಸ್​​ನ್ನು ಪಾಸ್​ ಮಾಡಲು ಮುಂದಾಗಿದೆ. ಈ ಬಾರಿ ದ್ವಿತೀಯ ಪಿಯು ಫ್ರೆಶರ್ಸ್​​ ವಿದ್ಯಾರ್ಥಿಗಳಂತೆ, ರಿಪೀಟರ್ಸ್​​ಗಳನ್ನು ಪರೀಕ್ಷೆ ಇಲ್ಲದೇ ಪಾಸ್ ಮಾಡಲು ನಿರ್ಧರಿಸಿದೆ. ಈ ಬಗ್ಗೆ ನ್ಯೂಸ್​ 18ಗೆ ಪಿಯು ಬೋರ್ಡ್​​ನಿಂದ ಖಚಿತ ಮಾಹಿತಿ ಲಭ್ಯವಾಗಿದೆ.

ರಿಪೀಟರ್ಸ್​​ಗೆ ಗ್ರೇಸ್ ಮಾರ್ಕ್ಸ್ ಕೊಟ್ಟು ಪಾಸ್ ಮಾಡಲು ಪಿಯು ಮಂಡಳಿ ನಿರ್ಧಾರ ಮಾಡಿದೆ. ಈ ಮೊದಲು ಸರ್ಕಾರವು ಫ್ರೆಶರ್ಸ್ ವಿದ್ಯಾರ್ಥಿಗಳನ್ನ ಮಾತ್ರ ಪರೀಕ್ಷೆ ಇಲ್ಲದೆಯೇ ಪಾಸ್ ಮಾಡಿತ್ತು. ರಿಪೀಟರ್ಸ್ ಇದನ್ನ ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಚಾಟಿ ಬೀಸಿದ ಬಳಿಕ ಪಿಯು ಬೋರ್ಡ್​​ ಸಮಿತಿ ರಚಿಸಿತ್ತು. ರಿಪೀಟರ್ಸ್​​ಗಳನ್ನು ಪಾಸ್​ ಮಾಡಬೇಕಾ ಅಥವಾ ಪರೀಕ್ಷೆ ನಡೆಸಬೇಕಾ ಎಂಬ ಗೊಂದಲದಲ್ಲಿ ಸರ್ಕಾರ ಇತ್ತು.

ರಿಪೀಟರ್ಸ್ ಗೆ ಯಾವ ಕ್ರೈಟೀರಿಯಗಳು ಇಲ್ಲದ ಕಾರಣ, ರಿಪೀಟರ್ಸ್ ವಿದ್ಯಾರ್ಥಿಗಳಿಗೆ ಪಾಸ್ ಭಾಗ್ಯ ಸಿಕ್ಕಿದೆ. ಫ್ರೆಶರ್ಸ್ ವಿದ್ಯಾರ್ಥಿಗಳಿಗೆ ಹಿಂದಿನ ತರಗತಿಯ ಅಂಕಗಳನ್ನ ಆಧರಿಸಿ ಪ್ರೊಮೋಟ್ ಮಾಡಲಾಗಿತ್ತು. ರಿಪೀಟರ್ಸ್ ಅಭ್ಯರ್ಥಿಗಳಿಗೆ ಗ್ರೇಸ್ ಮಾರ್ಕ್ಸ್ ಕೊಟ್ಟು ಪಾಸ್ ಮಾಡಲು ನಿರ್ಧರಿಸಿದೆ. ಆದರೆ ಖಾಸಗಿ‌ ವಿದ್ಯಾರ್ಥಿಗಳಿಗೆ ಪರೀಕ್ಷೆಯ ವಿನಾಯ್ತಿ ಇಲ್ಲ. ಪರೀಕ್ಷೆಗೆ ನೊಂದಾಯಿಸಿಕೊಂಡ ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲೇಬೇಕಿದೆ.

ಸೋಂಕಿನ ತೀವ್ರತೆ ಕಡಿಮೆಯಾದ ಬಳಿಕ ಖಾಸಗಿ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಪದವಿ ಪೂರ್ವ ಶಿಕ್ಷಣ ಇಲಾಖೆ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಪ್ರತೀ ರಿಪೀಟರ್ ವಿದ್ಯಾರ್ಥಿಗೆ 35 ಕನಿಷ್ಠ ಅಂಕದ ಜೊತೆಗೆ 5 ಅಂಕ ಗ್ರೇಸ್​ ನೀಡಿ ಪಾಸ್ ಮಾಡಲು ಪಿಯು ಬೋರ್ಡ್​ ಮುಂದಾಗಿದೆ. 40 ಅಂಕ ಕೊಟ್ಟು ರಿಪೀಟರ್ಸ್ ಅಭ್ಯರ್ಥಿಗಳನ್ನು ಪ್ರೊಮೋಟ್ ಮಾಡಲು ನಿರ್ಧರಿಸಿದೆ. 12 ಜನ ಸಮಿತಿ ನೀಡಿರುವ ಈ ವರದಿಯನ್ನ ಸರ್ಕಾರ ಹೈಕೋರ್ಟ್​​ಗೆ ಸಲ್ಲಿಸಲಿದೆ.
ರಿಪೀಟರ್ಸ್ ಅಭ್ಯರ್ಥಿಗಳನ್ನ ಪಾಸ್ ಮಾಡುವ ವರದಿಯನ್ನು ಸರ್ಕಾರ ಕೋರ್ಟ್​​ಗೆ ನೀಡಿದೆ. ನಾಳೆ ಕೋರ್ಟ್ ನಲ್ಲಿ ಈ ಬಗ್ಗೆ ಪ್ರಸ್ತಾಪವಾಗಲಿದೆ. 2020-21ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಗೆ ಒಟ್ಟು 6,86,816 ವಿದ್ಯಾರ್ಥಿಗಳು ಪರೀಕ್ಷೆ ನೊಂದಣಿ ಮಾಡಿಸಿಕೊಂಡಿದ್ದರು. ಈ ಪೈಕಿ 76,387 ರಿಪೀಟರ್ಸ್ ವಿದ್ಯಾರ್ಥಿಗಳು, 17,477 ಖಾಸಗಿ ವಿದ್ಯಾರ್ಥಿಗಳಿಂದ ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದಾರೆ. ಸೋಂಕು ಕಡಿಮೆಯಾದ ಬಳಿಕ ಖಾಸಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುತ್ತದೆ. ಈ ಬಗ್ಗೆ ನ್ಯೂಸ್ 18ಗೆ ಪಿಯು ಬೋರ್ಡ್​​ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
Disclaimer

Disclaimer

This story is auto-aggregated by a computer program and has not been created or edited by Dailyhunt Publisher: News18 Kannada

#Hashtags