ವಿಜಯವಾಣಿ

505k Followers

ಕೆಲಸಕ್ಕೆ ತೆರಳುವಾಗ ಮೃತಪಟ್ಟರೂ ಪರಿಹಾರ; ಹೈಕೋರ್ಟ್ ಮಹತ್ವದ ಆದೇಶ

21 Aug 2021.01:34 AM

ಬೆಂಗಳೂರು: ಕೆಲಸಕ್ಕೆ ತೆರಳುವ ಸಂದರ್ಭದಲ್ಲಿ ಕಾರ್ವಿುಕ ಮೃತಪಟ್ಟರೂ ಅದನ್ನು ಕೆಲಸದ ಅವಧಿಯಲ್ಲಿ ಸಂಭವಿಸಿದ ಸಾವು ಎಂದೇ ಪರಿಗಣಿಸಿ, ಆತನ ವಾರಸುದಾರರಿಗೆ ಪರಿಹಾರ ಪಾವತಿಸಬೇಕಾಗುತ್ತದೆ ಎಂದು ಹೈಕೋರ್ಟ್ ಆದೇಶಿಸಿದೆ.

ಕಾಫಿ ತೋಟದ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಕಾಲು ಜಾರಿ ಮೃತಪಟ್ಟಿದ್ದ ಕೂಲಿಯೊಬ್ಬನ ಕುಟುಂಬಕ್ಕೆ ಪರಿಹಾರ ಪಾವತಿಸುವಂತೆ ಚಿಕ್ಕಮಗಳೂರಿನ ಕಾರ್ವಿುಕ ಆಯುಕ್ತರು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕಾಫಿ ಎಸ್ಟೇಟ್ ಮಾಲೀಕ ಎನ್.ಎಲ್.

ಪುಣ್ಯಮೂರ್ತಿ ಹಾಗೂ ನ್ಯಾಷನಲ್ ಇನ್ಶೂರೆನ್ಸ್ ಕಂಪನಿ ಹೈಕೋರ್ಟ್​ಗೆ ಮೇಲ್ಮನವಿ ಸಲ್ಲಿಸಿತ್ತು. ಮೇಲ್ಮನವಿ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ತೀರ್ಪನ್ನು ಇತ್ತೀಚೆಗೆ ಪ್ರಕಟಿಸಿರುವ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ಅವರಿದ್ದ ಪೀಠ, ಕೆಲಸಕ್ಕೆ ತೆರಳುವ ವೇಳೆ ಕಾರ್ವಿುಕ ಮೃತಪಟ್ಟರೂ ಆತನ ವಾರಸುದಾರರು ಪರಿಹಾರಕ್ಕೆ ಅರ್ಹರಾಗಿರುತ್ತಾರೆ ಎಂದು ಆದೇಶಿಸಿದೆ.

ಪ್ರಕರಣವೇನು?: ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಸುಭಾಷನಗರದ ನಿವಾಸಿ ಸ್ವಾಮಿಗೌಡ, 2006ರ ಜು. 12ರಂದು ಕೊಳ್ಳಿಬೈಲು ಗ್ರಾಮದಲ್ಲಿದ್ದ ಪುಣ್ಯಮೂರ್ತಿಯ ಕಾಫಿ ತೋಟಕ್ಕೆ ಕೂಲಿ ಕೆಲಸಕ್ಕಾಗಿ ತೆರಳುತ್ತಿದ್ದಾಗ ಕಾಲು ಜಾರಿ ಬಿದ್ದು ಮೃತಪಟ್ಟಿದ್ದ. ಮೃತನ ಕುಟುಂಬ ಪರಿಹಾರ ಕೋರಿ ಕಾರ್ವಿುಕ ಆಯುಕ್ತರಿಗೆ ಅರ್ಜಿ ಸಲ್ಲಿಸಿತ್ತು. ಆಯುಕ್ತರು, ಸ್ವಾಮಿಗೌಡ ಕುಟುಂಬಕ್ಕೆ ಕಾಫಿ ತೋಟದ ಮಾಲೀಕ 75,032 ರೂ. ಹಾಗೂ ವಿಮಾ ಸಂಸ್ಥೆ 1,01,196 ರೂ. ಸೇರಿ ಒಟ್ಟು 1,76,328 ರೂ. ಪರಿಹಾರ ಕೊಡಬೇಕೆಂದು ಘೊಷಿಸಿ 2010ರ ಅ.28ರಂದು ಆದೇಶಿಸಿ ದ್ದರು. ಪರಿಹಾರದ ಮೊತ್ತಕ್ಕೆ 2006ರ ಆ.13ರಿಂದ ವಾರ್ಷಿಕ ಶೇ.7.5 ಬಡ್ಡಿದರ ಪಾವತಿಸುವಂತೆ ಆದೇಶಿಸಿತ್ತು. ಇದನ್ನು ಹೈಕೋರ್ಟ್​ನಲ್ಲಿ ಪ್ರಶ್ನಿಸಲಾಗಿತ್ತು.

ವಿಮಾ ಸಂಸ್ಥೆ ವಾದವೇನು?: ಸ್ವಾಮಿಗೌಡನ ಸಾವು ಕೆಲಸದ ಅವಧಿಯಲ್ಲಿ ನಡೆದ ಅಪಘಾತವಲ್ಲ. ಮಳೆಯಿಂದ ತೋಯ್ದಿದ್ದ ಹಸಿ ನೆಲದ ಮೇಲೆ ಕಾಲಿಟ್ಟು ಜಾರಿ ಬಿದ್ದು ಸಾವಿಗೀಡಾಗಿದ್ದಾನೆ. ಸಾವು ಸಂಭವಿಸಿದ ವೇಳೆ ಅವನು ಕೆಲಸ ಮಾಡುತ್ತಿರಲಿಲ್ಲ. ಘಟನೆಯ ದಿನ ಅವನು ಕೆಲಸಕ್ಕೆ ಹಾಜರಾಗಿಯೇ ಇಲ್ಲ. ಕೆಳಗೆ ಬಿದ್ದಾಗ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದು, ಅದನ್ನು ಕೆಲಸ ಅವಧಿಯಲ್ಲಿ ಸಂಭವಿಸಿದ ಸಾವು ಎಂಬುದಾಗಿ ಪರಿಗಣಿಸಲು ಸಾಧ್ಯವಿಲ್ಲ. ಆದ್ದರಿಂದ, ಮೃತ ಕುಟುಂಬಕ್ಕೆ ಪರಿಹಾರ ನೀಡಲಾಗದು ಎಂದು ವಾದಿಸಿತ್ತು.

ಮಾಲೀಕನ ವಾದ: ಎಸ್ಟೇಟ್​ನಲ್ಲಿ ಬೆಳಗ್ಗೆ 8ರಿಂದ ಸಂಜೆ 4.30ರವರೆಗೆ ಕೆಲಸ ಅವಧಿಯಾಗಿರುತ್ತದೆ. ಆದರೆ, ಸ್ವಾಮಿಗೌಡ ಬೆಳಗ್ಗೆ 7 ಗಂಟೆಗೆ ಮೃತಪಟ್ಟಿದ್ದಾನೆ. ಅದನ್ನು ಕೆಲಸದ ವೇಳೆ ಸಂಭವಿಸಿದ ಸಾವು ಎನ್ನಲಾಗುವುದಿಲ್ಲ. ಮೇಲಾಗಿ, ತೋಟದಲ್ಲಿ ಕೆಲಸ ಮಾಡುತ್ತಿದ್ದ ಎಲ್ಲ ಕಾರ್ವಿುಕರಿಗೂ ನ್ಯಾಷನಲ್ ಇನ್ಶೂರೆನ್ಸ್ ಕಂಪನಿಯಲ್ಲಿ ವಿಮೆ ಮಾಡಿಸಲಾಗಿದೆ. ಸ್ವಾಮಿಗೌಡ ಮೃತಪಟ್ಟ ಸಂದರ್ಭದಲ್ಲಿ ಆತನ ವಿಮೆ ಚಾಲ್ತಿಯಲ್ಲಿತ್ತು. ಆದ್ದರಿಂದ, ಮೃತನಿಗೆ ಪರಿಹಾರ ಪಾವತಿಸುವ ಹೊಣೆ ತನ್ನದಲ್ಲ ಎಂಬುದು ತೋಟದ ಮಾಲೀಕನ ವಾದವಾಗಿತ್ತು.

ಹೈಕೋರ್ಟ್ ಹೇಳಿದ್ದೇನು?: ಸ್ವಾಮಿಗೌಡ ಕೆಲಸಕ್ಕೆ ತೆರಳಲೆಂದೇ ಮನೆಯಿಂದ ಹೊರಟಿದ್ದಾನೆ. ಹೀಗಿರುವಾಗ ಆತನ ಸಾವು ಕೆಲಸದ ಅವಧಿಯಲ್ಲಿ ಸಂಭವಿಸಿರುವುದಲ್ಲ ಎಂಬ ವಾದ ಒಪ್ಪಲು ಸಾಧ್ಯವಿಲ್ಲ. ಸ್ವಾಮಿಗೌಡ ಮಾಲೀಕನಿಗೆ ಸೇರಿದ ಜಾಗದಲ್ಲಿ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾನೆ. ಆದ್ದರಿಂದ, ಮಾಲೀಕರು ಹಾಗೂ ಮತ್ತು ವಿಮಾ ಕಂಪನಿಯೇ ಪರಿಹಾರ ಪಾವತಿಸಬೇಕು. ಆ ಸಂಬಂಧ ಕಾರ್ವಿುಕ ಆಯುಕ್ತರು ಹೊರಡಿಸಿರುವ ಆದೇಶ ನ್ಯಾಯಸಮ್ಮತವಾಗಿದೆ. ಆಯುಕ್ತರ ಆದೇಶದಂತೆ ಮೃತನ ಕುಟುಂಬಕ್ಕೆ ವಿಮಾ ಕಂಪನಿ ಮತ್ತು ಎಸ್ಟೇಟ್ ಮಾಲೀಕ ಪರಿಹಾರ ಪಾವತಿಸಬೇಕು.

ಟೇಬಲ್ ಮೇಲಿತ್ತು ಮೂರು ಟೀ ಕಪ್​; ದಂಪತಿಯನ್ನು ಪರಿಚಿತರೇ ಕೊಂದರಾ?

ನೆಲದೊಳಗಿನಿಂದ ಒಂದೇ ದಿನ 3 ಸಲ ಕೇಳಿಬಂತು ಭಾರಿ ಸದ್ದು, ಭೂಕಂಪನದ ಅನುಭವ; ಗಡಿಕೇಶ್ವರ ಗ್ರಾಮದಲ್ಲಿ ಗಡಗಡ

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vijayvani

#Hashtags