TV9 ಕನ್ನಡ

368k Followers

NEET 2021 Entrance Exam: ನೀಟ್ ಪರೀಕ್ಷಾ ಕೇಂದ್ರಗಳ ಪಟ್ಟಿ ಬಿಡುಗಡೆ; ಈ ಬಾರಿ ಎಕ್ಸಾಂ ಬರೆಯಲಿದ್ದಾರೆ 16 ಲಕ್ಷ ವಿದ್ಯಾರ್ಥಿಗಳು

21 Aug 2021.12:49 PM

NTA NEET 2021 Exam Center | ಸೆ. 12ರಂದು ನೀಟ್ ಬರೆಯಲಿರುವ ಅಭ್ಯರ್ಥಿಗಳ ಪರೀಕ್ಷಾ ಕೇಂದ್ರಗಳ ಬಗ್ಗೆ ಮಾಹಿತಿಯನ್ನು ವೆಬ್​ಸೈಟ್​ನಲ್ಲಿ ಡೌನ್​ಲೋಡ್ ಮಾಡಿಕೊಳ್ಳುವುದು ಹೇಗೆಂಬ ಬಗ್ಗೆ ಮಾಹಿತಿ ಇಲ್ಲಿದೆ.

ನವದೆಹಲಿ: ಎನ್​ಟಿಎ (NTA) ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET UG Exam 2021) ಸೆ.

12ರಂದು ನಡೆಯಲಿದೆ. ಈ ವರ್ಷ ಬರೋಬ್ಬರಿ 16 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆ ಬರೆಯಲಿದ್ದಾರೆ. ನೀಟ್-2021ರ ಪರೀಕ್ಷಾ ಕೇಂದ್ರಗಳ ಪಟ್ಟಿಯನ್ನು ಈಗಾಗಲೇ NTA ಬಿಡುಗಡೆ ಮಾಡಿದೆ. ನೀವೇನಾದರೂ ನೀಟ್ ಪರೀಕ್ಷೆ ಬರೆಯಲು ಹೆಸರು ನೋಂದಾಯಿಸಿಕೊಂಡಿದ್ದರೆ ನಿಮ್ಮ ಪರೀಕ್ಷಾ ಕೇಂದ್ರದ (NEET Exam Centre) ಬಗ್ಗೆ ಮಾಹಿತಿ ಪಡೆಯಲು ನೀಟ್‌ನ ಅಧಿಕೃತ ವೆಬ್‌ಸೈಟ್ neet.nta.nic.inಗೆ ಭೇಟಿ ನೀಡಬಹುದು.

ಸೆ. 12ರಂದು ನೀಟ್ ಬರೆಯಲಿರುವ ಅಭ್ಯರ್ಥಿಗಳ ಪರೀಕ್ಷಾ ಕೇಂದ್ರಗಳ ಬಗ್ಗೆ ಮಾಹಿತಿಯನ್ನು ವೆಬ್​ಸೈಟ್​ನಲ್ಲಿ ಡೌನ್​ಲೋಡ್ ಮಾಡಿಕೊಳ್ಳುವುದು ಹೇಗೆಂಬುದರ ಬಗ್ಗೆ ಮಾಹಿತಿ ಇಲ್ಲಿದೆ.

1. ನೀಟ್‌ನ ಅಧಿಕೃತ ವೆಬ್‌ಸೈಟ್ ಆಗಿರುವ neet.nta.nic.inಗೆ ಭೇಟಿ ನೀಡಿ.

2. ಆ ವೆಬ್​ಸೈಟ್​ನ ಹೋಂ ಪೇಜಿನಲ್ಲಿ View advance information for allotment of Centre City- Link 1 ಅಥವಾ View advance information for allotment of Centre City- Link 2 ಎಂಬುದರ ಮೇಲೆ ಕ್ಲಿಕ್ ಮಾಡಿ.

3. ಆಗ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್​ನ ಸ್ಕ್ರೀನ್ ಮೇಲೆ ಹೊಸ ಪೇಜ್ ಓಪನ್ ಆಗುತ್ತದೆ.

4. ಆ ಪೇಜಿನಲ್ಲಿ ಕೇಳಲಾಗಿರುವ ನಿಮ್ಮ ಮಾಹಿತಿಗಳನ್ನು ಭರ್ತಿ ಮಾಡಿ ಸಬ್ಮಿಟ್ ಎಂದು ಕ್ಲಿಕ್ ಮಾಡಿ.

5. ಆಗ ನೀವು ನೀಡಿರುವ ನಿಮ್ಮ ಮಾಹಿತಿಗಳನ್ನು ಆಧರಿಸಿ ನಿಮ್ಮ ಪರೀಕ್ಷಾ ಕೇಂದ್ರವಿರುವ ಸಿಟಿಯ ಮಾಹಿತಿ ಅಲ್ಲಿ ಡಿಸ್​ಪ್ಲೇ ಆಗುತ್ತದೆ.

6. ನಿಮ್ಮ ಪರೀಕ್ಷಾ ಕೇಂದ್ರದ ಮಾಹಿತಿ ಇರುವ ಆ ಪೇಜನ್ನು ಡೌನ್​ಲೋಡ್ ಮಾಡಿಕೊಂಡು, ಪ್ರಿಂಟ್​ಔಟ್ ತೆಗೆದಿಟ್ಟುಕೊಳ್ಳಿ.

ಈ ಬಾರಿ ಇಂಗ್ಲಿಷ್, ಕನ್ನಡ, ಹಿಂದಿ, ಅಸ್ಸಾಮೀಸ್, ಬೆಂಗಾಲಿ, ಗುಜರಾತಿ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಉರ್ದು ಈ 13 ಭಾಷೆಗಳಲ್ಲಿ ನೀಟ್ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದೆ. ಈ ಬಾರಿ ನೀಟ್ ಪರೀಕ್ಷೆ ಪೇಪರ್ ಮತ್ತು ಪೆನ್​ ಮೋಡ್​ನಲ್ಲಿರಲಿದೆ. ನೀಟ್ ಪರೀಕ್ಷಾ ಕೇಂದ್ರಗಳ ಜೊತೆಗೆ ಮೆಡಿಕಲ್ ಪ್ರವೇಶ ಪರೀಕ್ಷೆಯ ಸ್ಯಾಂಪಲ್ ಓಎಂಆರ್ ಶೀಟ್ ಹಾಗೂ ಓಎಂಆರ್ ಶೀಟ್ ಅನ್ನು ಹೇಗೆ ಭರ್ತಿ ಮಾಡುವುದೆಂಬ ಮಾಹಿತಿಯನ್ನು ಕೂಡ ಬಿಡುಗಡೆ ಮಾಡಲಾಗಿದೆ. ಇದು ಕೂಡ ನೀಟ್ ಅಧಿಕೃತ ವೆಬ್​ಸೈಟ್​ನಲ್ಲಿ ಲಭ್ಯವಿದೆ.

ಎಂಬಿಬಿಎಸ್. ಬಿಡಿಎಸ್, ಬಿಎಎಂಎಸ್, ಬಿಯುಎಂಎಸ್, ಬಿಎಚ್​ಎಂಎಸ್ ಕೋರ್ಸ್​ಗಳ ಪ್ರವೇಶಾತಿಗೆ ನೀಟ್ ಪರೀಕ್ಷೆಯ ಫಲಿತಾಂಶವನ್ನು ಬಳಸಬಹುದು. ಭಾರತದಲ್ಲಿ ಮಾತ್ರವಲ್ಲದೆ ಮಧ್ಯಪ್ರಾಚ್ಯದಲ್ಲಿರುವ ಭಾರತೀಯ ಸಮುದಾಯಗಳಲ್ಲಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಈ ಬಾರಿ ಕುವೈತ್​ ಹಾಗೂ ದುಬೈನಲ್ಲಿ ಕೂಡ ನೀಟ್ ಯುಜಿ ಪರೀಕ್ಷೆ ನಡೆಯಲಿದೆ. ಒಟ್ಟು 198 ಕೇಂದ್ರಗಳಲ್ಲಿ ಈ ಬಾರಿ ನೀಟ್ ಪರೀಕ್ಷೆಗಳು ನಡೆಯಲಿದೆ.

ಬಿಎಸ್​ಸಿ ನರ್ಸಿಂಗ್ ಕೋರ್ಸ್​ಗಳಿಗೆ ನೀಟ್ ಪರೀಕ್ಷೆಯ ಮೂಲಕ ಸೇರಲಿಚ್ಛಿಸುವ ಅಭ್ಯರ್ಥಿಗಳಿಗೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಬಿಎಸ್​ಸಿ ನರ್ಸಿಂಗ್ ಕೋರ್ಸ್​ಗೆ ಸೇರಲು ಬಯಸುವ ಅಭ್ಯರ್ಥಿಗಳಿಗೆ ಡಿಸೆಂಬರ್ 31ರ ವೇಳೆಗೆ ಕನಿಷ್ಠ 17 ವರ್ಷ ಪೂರ್ತಿಯಾಗಬೇಕು. ದೇಶದ ನಾನಾ ಕಾಲೇಜುಗಳಲ್ಲಿ ಅಥವಾ ಶಿಕ್ಷಣ ಸಂಸ್ಥೆಗಳಲ್ಲಿ ಬಿಎಸ್​ಸಿ ನರ್ಸಿಂಗ್ ಕೋರ್ಸ್​ಗೆ ದಾಖಲಾತಿ ಪಡೆಯುವ ವಿದ್ಯಾರ್ಥಿಗಳು ಆ ಕಾಲೇಜು/ ವಿಶ್ವವಿದ್ಯಾಲಯ/ ಶಿಕ್ಷಣ ಸಂಸ್ಥೆಗಳಲ್ಲಿನ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿಕೊಳ್ಳಬೇಕು. ಬಿಎಸ್​ಸಿ ನರ್ಸಿಂಗ್​ಗೆ ಸೇರಲಿಚ್ಛಿಸುವ ಅಭ್ಯರ್ಥಿಗಳು ಪಿಸಿಬಿ (ಫಿಸಿಕ್ಸ್, ಕೆಮಿಸ್ಟ್ರಿ, ಬಯಾಲಜಿ) ಹಾಗೂ ಇಂಗ್ಲಿಷ್​ನಲ್ಲಿ ಶೇ. 45 ಅಂಕಗಳನ್ನಾದರೂ ಪಡೆದಿರಬೇಕು. ಪಿಯುಸಿಯಲ್ಲಿ ಪಿಸಿಬಿ ಕಾಂಬಿನೇಷನ್ ಪಡೆದಿರಬೇಕು ಎಂದು ಶೈಕ್ಷಣಿಕ ಅರ್ಹತೆಯ ಬಗ್ಗೆ ಎನ್​ಟಿಎ ತಿಳಿಸಿದೆ.

ಹಾಗೇ, ಎಸ್​ಸಿ/ ಎಸ್​ಟಿ ಅಥವಾ ಒಬಿಸಿ ಸಮುದಾಯಕ್ಕೆ ಸೇರಿರುವ ಅಭ್ಯರ್ಥಿಗಳು ಪಿಯುಸಿಯಲ್ಲಿ ಪಿಸಿಬಿ ಕಾಂಬಿನೇಷನ್ ಪಡೆದು ಶೇ. 40ರಷ್ಟು ಅಂಕವನ್ನು ಗಳಿಸಿರಬೇಕು. ಜನರಲ್ ಕೆಟಗರಿಯವರಾದರೆ ಶೇ. 45ರಷ್ಟು ಅಂಕ ಪಡೆದಿರಬೇಕು. ಹಾಗೇ. ದಿವ್ಯಾಂಗರಿಗೆ ಶೇ. 3ರಷ್ಟು ಮೀಸಲಾತಿ ನೀಡಲಾಗುವುದು. ಅವರಿಗೂ ಶೈಕ್ಷಣಿಕ ಅರ್ಹತೆ ಹಾಗೂ ವಯಸ್ಸಿನ ನಿಯಮಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಎನ್​ಟಿಎ ಮಾಹಿತಿ ನೀಡಿದೆ. ನೀಟ್ ಪರೀಕ್ಷೆಯ ಬಗ್ಗೆ ಮಾಹಿತಿಗಳು ಬೇಕಾಗಿದ್ದರೆ 011-40759000 ಸಂಖ್ಯೆಗೆ ಕರೆ ಮಾಡಬಹುದು.

ಇದನ್ನೂ ಓದಿ: NEET 2021: ನೀಟ್ ಪರೀಕ್ಷೆ ಅರ್ಜಿ ಶುಲ್ಕ ಸಲ್ಲಿಸಲು ಇಂದೇ ಕೊನೆಯ ದಿನಾಂಕ; ವಿವರಗಳನ್ನು ಇಲ್ಲಿ ಪರಿಶೀಲಿಸಿ

NEET 2021: ನೀಟ್ ಮೂಲಕ BSc ನರ್ಸಿಂಗ್ ಕೋರ್ಸ್​ ಸೇರಲಿಚ್ಛಿಸುವವರ ವಯಸ್ಸು, ಅರ್ಹತೆಯ ಮಾಹಿತಿ ಹೀಗಿದೆ

(NEET 2021 Entrance Exam NTA released NEET UG Exam City Centre List and Admit Card NEET Website)

Disclaimer

Disclaimer

This story is auto-aggregated by a computer program and has not been created or edited by Dailyhunt Publisher: TV9 Kannada

#Hashtags