News18 ಕನ್ನಡ

398k Followers

Dasara Holidays for Schools: ಶಾಲಾ ಮಕ್ಕಳಿಗೆ ದಸರಾ ರಜೆ ಘೋಷಣೆ; 2021-22 ಸಾಲಿನ ರಜೆಗಳ ಸಂಪೂರ್ಣ ವಿವರ ಇಲ್ಲಿದೆ

07 Sep 2021.4:00 PM

Dasara holidays for schools in karnataka 2021: ರಾಜ್ಯ ಶಿಕ್ಷಣ ಇಲಾಖೆ 2021-22ನೇ ಸಾಲಿನ‌ ಶೈಕ್ಷಣಿಕ ವರ್ಷದ ದಸರಾ ರಜೆ(Dussehra holiday) ಹಾಗೂ ಬೇಸಿಗೆ ರಜೆ(summer holiday)ಯನ್ನು ಘೋಷಿಸಿ ಆದೇಶ ಹೊರಡಿಸಿದೆ. ಆಕ್ಟೋಬರ್ 10 ರಿಂದ 20 ರವರೆಗೆ ಒಟ್ಟು 10 ದಿನಗಳ ಕಾಲ ರಾಜ್ಯದ ಶಾಲಾ ಮಕ್ಕಳಿಗೆ ದಸರಾ ರಜೆ ನೀಡಲಾಗಿದೆ.

10 ದಿನಗಳ ರಜೆ ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ, ಅನುದಾನಿತ ಶಾಲೆ, ಅನುದಾನ ರಹಿತ ಶಾಲೆಗಳಿಗೆ ಅನ್ವಯಿಸಲಿದೆ. ಇನ್ನು ಇದೇ ಸಮಯದಲ್ಲಿ 2021-2022 ಶೈಕ್ಷಣಿಕ ವರ್ಷದ ಬೇಸಗಿಗೆ ರಜೆಯ ಬಗ್ಗೆಯೂ ಮಾಹಿತಿ ನೀಡಿದೆ. ಶಾಲಾ ಮಕ್ಕಳಿಗೆ 2022ರ ಮೇ 1 ರಿಂದ ಮೇ 28 ರವರೆಗೆ ಬೇಸಿಗೆ ರಜೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶ ಅನ್ವಯಿಸಲಿದೆ.

ಒಟ್ಟು 2021-22ರಲ್ಲಿ 66 ದಿನ ರಜೆ

ಕರ್ನಾಟಕದ ಎಲ್ಲಾ ಶಾಲೆಗಳ 1ನೇ ತರಗತಿಯಿಂದ 10ನೇ ತರಗತಿವರೆಗಿನ ಮಕ್ಕಳಿಗೆ ಆಕ್ಟೋಬರ್ 10 ರಿಂದ 20 ರವರೆಗೆ ದಸರಾ ರಜೆ ಇರಲಿದೆ. ಮುಂದಿನ ವರ್ಷ ಮೇ ತಿಂಗಳ 1ನೇ ತಾರೀಖಿನಿಂದ 28ನೇ ತಾರೀಖಿನವರೆಗೆ ಬೇಸಿಗೆ ರಜೆ ಇರಲಿದೆ. 2021-22ನೇ ಸಾಲಿನ‌ ಶೈಕ್ಷಣಿಕ ವರ್ಷದಲ್ಲಿ ಒಟ್ಟು ಮಕ್ಕಳಿಗೆ 66 ದಿನಗಳ ಕಾಲ ರಜೆಗಳನ್ನು ನೀಡಲಾಗಿದೆ. ಒಟ್ಟು 223 ದಿನಗಳು ಕಲಿಕಾ ಪ್ರಕ್ರಿಯೆಗೆ ಲಭ್ಯವಿದೆ.

ನಿನ್ನೆಯಿಂದ ಶಾಲೆಗಳು ಶುರು

ಇನ್ನು ಒಂದೂವರೆ ವರ್ಷದ ಬಳಿಕ ನಿನ್ನೆಯಿಂದ 6, 7 ಮತ್ತು 8ನೇ ತರಗತಿಗಳ ಭೌತಿಕ ತರಗತಿಗಳು ರಾಜ್ಯದಲ್ಲಿ ಪುನಾರಂಭವಾಗಿದ್ದು, ಮಕ್ಕಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಸಕಾಲ ಸಚಿವರಾದ ಬಿ.ಸಿ ನಾಗೇಶ್ ತಿಳಿಸಿದರು.

ಪೋಷಕರಿಂದ ಒಪ್ಪಿಗೆ ಪತ್ರ ಕಡ್ಡಾಯ

ಬೆಂಗಳೂರಿನ ಜೀವನ್ ಬೀಮಾ ನಗರದಲ್ಲಿರುವ ಕರ್ನಾಟಕ್ ಪಬ್ಲಿಕ್ ಶಾಲೆಗೆ ಭೇಟಿ ನೀಡಿದ ಸಚಿವರು, ವಿದ್ಯಾರ್ಥಿಗಳಿಗೆ ಚಾಕೋಲೇಟ್, ಗುಲಾಬಿ ಹೂ ನೀಡಿ ಸ್ವಾಗತಿಸಿದರು. ಶಾಲೆಯ ಶಿಕ್ಷಕರು ಕೂಡ ವಿದ್ಯಾರ್ಥಿಗಳನ್ನು ಖುಷಿಯಿಂದ ಬರ ಮಾಡಿಕೊಂಡರು. ನಂತರ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, 'ಕೋವಿಡ್ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ. ಅದರಂತೆ ತರಗತಿಗಳಲ್ಲಿ ಒಂದು ಬೆಂಚಿಗೆ ಇಬ್ಬರು ಮಕ್ಕಳನ್ನು ಮಾತ್ರ ಕೂರಿಸಲಾಗಿದೆ. ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಶಾಲೆಗೆ ಹಾಜರಾಗುವ ಮಕ್ಕಳು ತಮ್ಮ ಪಾಲಕರು, ಪೋಷಕರಿಂದ ಒಪ್ಪಿಗೆ ಪತ್ರ ತರಬೇಕು ಎಂದು ಸೂಚಿಸಲಾಗಿದೆ' ಎಂದು ತಿಳಿಸಿದರು.

'ಪ್ರೌಢ ಶಾಲೆಯ 9 ಮತ್ತು 10ನೇ ತರಗತಿ ಮತ್ತು ಪಿಯು ತರಗತಿಗಳು ಸುರಕ್ಷತಾ ಕ್ರಮಗಳೊಂದಿಗೆ ಯಶಸ್ವಿಯಾಗಿ ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಉನ್ನತಾಧಿಕಾರಿಗಳು, ಕೋವಿಡ್ -19 ತಜ್ಞರು, ಮಕ್ಕಳ ತಜ್ಞರು ಸೇರಿದಂತೆ ಸಂಬಂಧಪಟ್ಟ ಎಲ್ಲರಿಂದ ಅಭಿಪ್ರಾಯ ಸಂಗ್ರಹಿಸಿ, ಒಪ್ಪಿಗೆ ಪಡೆದು ಸೂಕ್ತ ಸಿದ್ದತೆಗಳನ್ನು ಮಾಡಿಕೊಂಡು 6ರಿಂದ 8ನೇ ತರಗತಿಗಳ ಭೌತಿಕ ತರಗತಿಗಳನ್ನು ಆರಂಭಿಸಲಾಗಿದೆ' ಎಂದು ಸಚಿವ ಬಿ.ಸಿ ನಾಗೇಶ್ ನುಡಿದರು.

'1ರಿಂದ 5ನೇ ತರಗತಿಗಳ ಭೌತಿಕ ತರಗತಿಗಳ ಆರಂಭಕ್ಕೆ ಎಂದಿನಂತೆ ತಜ್ಞರ ಅಭಿಪ್ರಾಯ, ಒಪ್ಪಿಗೆ ಪಡೆಯಲಾಗುತ್ತದೆ. 6ರಿಂದ 8ನೇ ತರಗತಿಗಳ ಭೌತಿಕ ತರಗತಿಗಳಲ್ಲಿ ಕಂಡು ಬರುವ ಅಂಶಗಳ ಆಧಾರದ ಮೇಲೆ 1ರಿಂದ 5ನೇ ತರಗತಿಗಳ ಆರಂಭದ ಕುರಿತು ನಿರ್ಧರಿಸಲಾಗುತ್ತದೆ' ಎಂದು ಸಚಿವರು ತಿಳಿಸಿದರು.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: News18 Kannada

#Hashtags