ಪ್ರಜಾವಾಣಿ

1.5M Followers

ಶಾಲಾ ಬ್ಯಾಗ್‌, ಪುಸ್ತಕಗಳ ಮೇಲೆ ರಾಜಕೀಯ ನಾಯಕರ ಚಿತ್ರ ಮುದ್ರಿಸಬೇಡಿ: ಹೈಕೋರ್ಟ್‌

08 Sep 2021.06:25 AM

ಚೆನ್ನೈ: ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸುವ ಶಾಲಾ ಬ್ಯಾಗ್‌ಗಳು, ಪಠ್ಯ ಪುಸ್ತಕಗಳು ಮತ್ತು ಲೇಖನ ಸಾಮಗ್ರಿಗಳ ಮೇಲೆ ಮುಖ್ಯಮಂತ್ರಿ ಹಾಗೂ ಇತರ ರಾಜಕೀಯ ನಾಯಕರ ಚಿತ್ರಗಳನ್ನು ಮುದ್ರಿಸುವುದನ್ನು ನಿಲ್ಲಿಸುವಂತೆ ತಮಿಳುನಾಡು ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಮಂಗಳವಾರ ಆದೇಶ ನೀಡಿದೆ.

ಈ ಕುರಿತು ಸಲ್ಲಿಕೆಯಾಗಿದ್ದ ಪಿಐಎಲ್‌ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸಂಜಿವ್‌ ಬ್ಯಾನರ್ಜಿ ಮತ್ತು ನ್ಯಾಯಮೂರ್ತಿ ಪಿ.ಡಿ. ಆದಿಕೇಶವಲು ಅವರ ನ್ಯಾಯಪೀಠವು ಈ ಸಂಬಂಧ ಆದೇಶ ಹೊರಡಿಸಿದೆ.

'ಶಾಲೆಗೆ ಹೋಗುವ ಮಕ್ಕಳಿಗೆ ಮತದಾನದ ಹಕ್ಕು ಇರುವುದಿಲ್ಲ. ಅವರಿಗೆ ಸರ್ಕಾರ ನೀಡುವ ಪುಸ್ತಕ, ಬ್ಯಾಗ್‌ಗಳ ಮೇಲೆ ಮುಖ್ಯಮಂತ್ರಿ ಅಥವಾ ಇತರ ಸಾರ್ವಜನಿಕ ಕಾರ್ಯಕರ್ತರ ಚಿತ್ರಗಳು ಇರುವುದು ಹೇಸಿಗೆ ಮೂಡಿಸುತ್ತದೆ' ಎಂದು ಪೀಠ ಬೇಸರ ವ್ಯಕ್ತಪಡಿಸಿದೆ.

'ನಾಯಕರ ಚಿತ್ರಗಳನ್ನು ಮುದ್ರಿಸಲು ಸಾರ್ವಜನಿಕರ ಹಣವನ್ನು ದುರುಪಯೋಗ ಮಾಡಬಾರದು' ಎಂದು ಸೂಚಿಸಿರುವ ಪೀಠವು, 'ಈ ರೀತಿಯ ಅಭ್ಯಾಸವನ್ನು ಭವಿಷ್ಯದಲ್ಲಿ ಮುಂದುವರಿಸುವುದಿಲ್ಲ ಎಂದು ಸರ್ಕಾರ ಖಚಿತಪಡಿಸಬೇಕು' ಎಂದು ತಿಳಿಸಿದೆ.

ಈಚೆಗೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು, 'ಶಾಲಾ ಮಕ್ಕಳ ಬ್ಯಾಗ್‌ಗಳ ಮೇಲೆ ಮುದ್ರಿಸಲಾಗಿರುವ ಮಾಜಿ ಮುಖ್ಯಮಂತ್ರಿಗಳಾದ ಜೆ. ಜಯಲಲಿತಾ ಮತ್ತು ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರ ಚಿತ್ರ ತೆಗೆಯದಂತೆ' ಶಿಕ್ಷಣ ಇಲಾಖೆಗೆ ಸೂಚಿಸಿದ್ದರು. ಚಿತ್ರ ಬದಲಿಸಿದರೆ ಬೊಕ್ಕಸಕ್ಕೆ ₹ 13 ಕೋಟಿ ಹೊರೆಯಾಗುತ್ತದೆ ಎಂದು ಸರ್ಕಾರ ತಿಳಿಸಿತ್ತು.

ಅತ್ಯುತ್ತಮ ಶಿಕ್ಷಕರಿಗೆ ನೀಡುವ ಪ್ರಮಾಣಪತ್ರಗಳಲ್ಲಿ ಮುಖ್ಯಮಂತ್ರಿ ಚಿತ್ರ ಮುದ್ರಿಸುವ ಅಭ್ಯಾಸಕ್ಕೆ ಸ್ಟಾಲಿನ್ ತಡೆ ನೀಡಿದ್ದಾರೆ. ಅಲ್ಲದೆ ಕೋವಿಡ್ ಪರಿಹಾರವಾಗಿ ವಿತರಿಸಲಾದ ಟೋಕನ್‌ಗಳು ಮತ್ತು ಪಡಿತರ ಚೀಟಿದಾರರಿಗೆ ವಿತರಿಸಿದ 14 ದಿನಸಿ ವಸ್ತುಗಳಿದ್ದ ಚೀಲಗಳಲ್ಲಿಯೂ ಮುಖ್ಯಮಂತ್ರಿ ಛಾಯಾಚಿತ್ರ ಇರಲಿಲ್ಲ.

ತಮಿಳುನಾಡಿನಲ್ಲಿ ಆಡಳಿತ ನಡೆಸುವ ರಾಜಕೀಯ ಪಕ್ಷಗಳು ತಮ್ಮ ನಾಯಕರ ಚಿತ್ರಗಳನ್ನು ಶಾಲಾ ಬ್ಯಾಗ್‌ಗಳಲ್ಲಿ ಮತ್ತು ಪ್ರಮಾಣ ಪತ್ರಗಳಲ್ಲಿ ಮುದ್ರಿಸುವುದನ್ನು ಹಿಂದಿನಿಂದಲೂ ರೂಢಿಸಿಕೊಂಡು ಬಂದಿವೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Prajavani

#Hashtags