ವಿಜಯವಾಣಿ

505k Followers

5000 ಶಿಕ್ಷಕರ ನೇಮಕ; ಈ ವರ್ಷವೇ ಪ್ರಕ್ರಿಯೆ, ಮುಖ್ಯಮಂತ್ರಿ ಘೋಷಣೆ

06 Sep 2021.01:30 AM

ಬೆಂಗಳೂರು: ರಾಜ್ಯದಲ್ಲಿ ಶಿಕ್ಷಕರ ಕೊರತೆ ನೀಗಿಸುವ ಸಲುವಾಗಿ ಇದೇ ವರ್ಷ 5 ಸಾವಿರ ಶಿಕ್ಷಕರನ್ನು ನೇಮಕ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಶಿಕ್ಷಕರ ದಿನಾಚರಣೆಯ ಅಂಗವಾಗಿ ಭಾನುವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್​ನಲ್ಲಿ ಅತ್ಯುತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಶಿಕ್ಷಣ ಸಚಿವ ನಾಗೇಶ್ ಮನವಿಗೆ ಸ್ಪಂದಿಸಿ ಶಿಕ್ಷಕರ ನೇಮಕಕ್ಕೆ ಒಪ್ಪಿಗೆ ನೀಡಿರುವುದಾಗಿ ಹೇಳಿದರು.

ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯಾಗಲು ಶಿಕ್ಷಕರ ಪಾತ್ರ ದೊಡ್ಡದಿದೆ. ಶಿಕ್ಷಕರ ಕೊರತೆಯಾದರೆ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗುತ್ತದೆ. ಆದ್ದರಿಂದ ಈ ವರ್ಷ 5 ಸಾವಿರ ಶಿಕ್ಷಕರ ನೇಮಕಕ್ಕೆ ನಿರ್ಧಾರ ಮಾಡಲಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಅವರ ವಿಶೇಷ ಆಸಕ್ತಿಯಿಂದ ಶಿಕ್ಷಣ ನೀತಿ ರೂಪುಗೊಂಡಿದೆ. ಯಾವುದೇ ಬದಲಾವಣೆಯ ಸಂದರ್ಭದಲ್ಲಿ ವಿರೋಧ ಬರುತ್ತವೆ. ಈಗಲೂ ಬಂದಿದೆ ಎಂದು ಸಿಎಂ ಹೇಳಿದರು. 21ನೇ ಶತಮಾನ ಜ್ಞಾನದ ಶತಮಾನ. ಜ್ಞಾನದಿಂದ ವಿಜ್ಞಾನ, ವಿಜ್ಞಾನದಿಂದ ತಂತ್ರಜ್ಞಾನದತ್ತ ಮುನ್ನಡೆದಿರುವ ದೇಶ, ಇದೀಗ ತಂತ್ರಜ್ಞಾನದಿಂದ ತಂತ್ರಾಂಶ ಜ್ಞಾನದತ್ತ ವೇಗವಾಗಿ ಸಾಗಿದೆ. ಈ ವೇಗಕ್ಕೆ ಶಿಕ್ಷಕರು ಹೊಂದಿಕೊಳ್ಳುವುದು ಅನಿವಾರ್ಯ. ಉತ್ತಮ ವಿದ್ಯಾರ್ಥಿಗಳಾದಾಗ ಮಾತ್ರ ಉತ್ತಮ ಶಿಕ್ಷಕರಾಗಲು ಸಾಧ್ಯ ಎಂದು ಸಿಎಂ ಕಿವಿ ಮಾತು ಹೇಳಿದರು.

ಕೊನೆಯ ತನಕ ವಿದ್ಯಾರ್ಥಿ: ಒಮ್ಮೆ ವಿದ್ಯಾರ್ಥಿಯಾದವನು ಸಾಯುವ ತನಕ ವಿದ್ಯಾರ್ಥಿಯಾಗಿರುತ್ತಾನೆ. ದಿನ ನಿತ್ಯ ಕಲಿಯುವುದು ಇದ್ದೇ ಇರುತ್ತದೆ. ಎಂದಿಗೂ ಕಲಿಕೆಯಿಂದ ಹಿಂದೆ ಸರಿಯಬಾರದು. ಶಿಕ್ಷಕರಾದರೂ ಸಹ ನೀವು ಸಹ ವಿದ್ಯಾರ್ಥಿಗಳಂತೆ ಕಲಿಯುತ್ತಿರಬೇಕು ಎಂದು ಹೇಳಿದರು. ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಸಾತ್ವಿಕತೆ, ವೈಚಾರಿಕತೆ ಹೊಂದಿದ ಅಪರೂಪದ ನಾಯಕರಾಗಿದ್ದರು. ನೈತಿಕ ನಡೆಯ ಧೀಮಂತ ನಾಯಕರಾದ ರಾಧಾಕೃಷ್ಣನ್ ಅವರ ಆದರ್ಶದ ಜೀವನ ನಮಗೆ ದಾರಿದೀಪ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ನಾಗೇಶ್ ಮಾತನಾಡಿ , ಬುದ್ಧಿ, ಕರುಣೆ, ಕೌಶಲ್ಯ ತರಬೇತಿ ಮೈಗೂಡಿಸಿಕೊಂಡ ರಾಷ್ಟ್ರೀಯ ಶಿಕ್ಷಣ ನೀತಿ, ಭಾರತಕ್ಕೆ ಸ್ವಾಭಿಮಾನಿ, ಸ್ವಾವಲಂಬಿ ಸಮಾಜ ನಿರ್ವಣಕ್ಕೆ ಪೂರಕವಾಗಿದೆ. ಕೋವಿಡ್ ಸಂದರ್ಭದಲ್ಲಿ ಮಕ್ಕಳ ಕಲಿಕೆಗೆ ಅಡ್ಡಿಯಾಗದಂತೆ ಶ್ರಮಿಸಿದ ಹಾಗೂ ಯಶಸ್ವಿಯಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಿಕೊಟ್ಟ ಶಿಕ್ಷಕರನ್ನು ಶ್ಲಾಘಿಸಿದರು. ಕೋವಿಡ್​ನಿಂದ ಪ್ರಾಣ ಕಳೆದುಕೊಂಡ 31 ಶಿಕ್ಷಕರನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಶಾಲೆಗಳ ಅಭಿವೃದ್ಧಿಗೆ ದೇಣಿಗೆ ವರ್ಗಾವಣೆಗಾಗಿ ರೂಪಿಸಲಾದ ನಮ್ಮ ಶಾಲೆ ನನ್ನ ಕೊಡುಗೆ ತಂತ್ರಾಂಶವನ್ನು ಉದ್ಘಾಟಿಸಿದರು. ಶಾಸಕ ರಿಜ್ವಾನ್ ಅರ್ಷದ್ ಅಧ್ಯಕ್ಷತೆ ವಹಿಸಿದ್ದರು.

ಶಿಕ್ಷಕರು ಸರಸ್ವತಿಯ ಸ್ವರೂಪ, ಸರಸ್ವತಿಯ ವಾಹನ ಹಂಸ. ಹಂಸ ಬಿಳಿಯ ಬಣ್ಣ ಹೊಂದಿರುವ ಪಕ್ಷಿ, ಬಿಳಿ ಅಂದ್ರೆ ಶುಭ್ರತೆಯ ಸ್ವರೂಪ. ಹಂಸ ಅತಿ ಎತ್ತರಕ್ಕೆ ಏರುವ ಪಕ್ಷಿ. ಮಾನಸ ಸರೋವರಕ್ಕೆ ಹೋದರೆ ಅಲ್ಲಿ ಹಂಸಗಳಿರುತ್ತವೆ. ನೀವು ಈ ಹಂಸ ವಾಹನದಲ್ಲಿ ವಿದ್ಯಾರ್ಥಿಗಳನ್ನ ಕೂರಿಸಿಕೊಂಡು ಅತಿ ಎತ್ತರಕ್ಕೆ ಕೊಂಡೊಯ್ಯುತ್ತೀರಿ.

| ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ

ಪ್ರತಿ ಶಿಕ್ಷಕರು ಶಿಕ್ಷಣ ನೀತಿ ಓದಬೇಕು: ರಾಜ್ಯದಲ್ಲಿ ಹಿಂದೆ ಶಾಲೆಗಳ ದತ್ತು ಕಾರ್ಯಕ್ರಮ ಇತ್ತು. ಅಂತಹ ಕಾರ್ಯಕ್ರಮಗಳಿಂದ ಸಾಕಷ್ಟು ಬದಲಾವಣೆಗಳನ್ನು ಕಾಣಲು ಸಾಧ್ಯವಿದೆ. ಶಿಕ್ಷಕರ ಯೋಗಕ್ಷೇಮದ ಜತೆಗೆ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ವ್ಯವಸ್ಥೆ ರೂಪಿಸಲು ಹೊಸ ಶಿಕ್ಷಣ ನೀತಿಯಲ್ಲಿ ಅವಕಾಶ ಮಾಡಲಾಗಿದೆ. ಪ್ರತಿಯೊಬ್ಬ ಶಿಕ್ಷಕರು ಈ ನೀತಿಯನ್ನು ಓದಬೇಕು. ಇದರಿಂದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ಮಾಡಲು ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

ಶಿಕ್ಷಕರಿಗೆ ನಾವು ಕೊಟ್ಟಿರೋದು ಬಹಳ ಅಲ್ಲ. ಆದರೆ ಕೊಟ್ಟಿದ್ದರಲ್ಲೇ ತೃಪ್ತಿಪಟ್ಟುಕೊಂಡು ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ಶಾಲೆ ಪ್ರಾರಂಭ ಮಾಡಿದ್ದೇವೆ. ಅದಕ್ಕೆಲ್ಲ ಶಿಕ್ಷಕರ ಸಹಕಾರವೂ ಕಾರಣ.

| ಬಿ.ಸಿ. ನಾಗೇಶ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

ನಗರದಲ್ಲಿ ಮತ್ತೊಂದು ಕೋ-ಆಪರೇಟಿವ್ ಸೊಸೈಟಿಯಿಂದ ವಂಚನೆ; ಸಂಸ್ಥೆಯ ಉದ್ಯೋಗಿ ಅಡವಿಟ್ಟ ಚಿನ್ನವನ್ನೂ ಕೊಡದೆ ಮೋಸಗೈದ ಸಂಸ್ಥೆ

ಪತಿಯನ್ನು ಬಿಟ್ಟು ಹೊರಟಿದ್ದ ಪತ್ನಿಯನ್ನು ಮತ್ತೆ ಮನೆಗೆ ಸೇರಿಸಿದ ಚಾರ್ಜರ್; ಮನೆ ಬಿಡುವಂತೆ ಮಾಡಿದ್ದು ಗಂಡನ ಫೋನಲ್ಲಿದ್ದ ಆ ಆಟ!

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Vijayvani

#Hashtags