Kannada News Now

1.8M Followers

BIGG BREAKING NEWS: ಹೃದಯಾಘಾತದಿಂದ 'ನಟ ಪುನೀತ್ ರಾಜ್ ಕುಮಾರ್' ವಿಧಿವಶ

29 Oct 2021.2:28 PM

*ವಸಂತ ಲೀಲಾ ಬಿ ಈಶ್ವರಗೆರೆ

ಬೆಂಗಳೂರು: ಜಿಮ್ ಕಸರತ್ತು ನಡೆಸುತ್ತಿದ್ದಂತ ಸಂದರ್ಭದಲ್ಲಿ ಇಂದು, ಬೆಳಿಗ್ಗೆ ಹೃದಯಾಘಾತಕ್ಕೆ ಒಳಗಾಗಿದ್ದಂತ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು, ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿತ್ತು.

ಹೆಚ್ಚಿನ ಚಿಕಿತ್ಸೆಗಾಗಿ ವಿಕ್ರಂ ಆಸ್ಪತ್ರೆಗೆ ದಾಖಲಿಸಿ, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂತಹ ಅವರು ಚಿಕಿತ್ಸೆ ಫಲಕಾರಿಯಾಗದೇ ಇನ್ನಿಲ್ಲವಾಗಿದ್ದಾರೆ.

ಇಂದು ಬೆಳಿಗ್ಗೆ 11.30ಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ತೀವ್ರ ಹೃದಯಾಘಾತಕ್ಕೆ ಒಳಗಾಗಿ, ಖಾಸಗಿ ಕ್ಲಿನಿಕ್ ಒಂದರಲ್ಲಿ ಇಸಿಜಿ ಮಾಡಿಸಿಕೊಂಡು ಬಂದು, ವಿಕ್ರಂ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಅವರಿಗೆ ಚಿಕಿತ್ಸೆ ನೀಡಿದ್ದಂತ ವೈದ್ಯರು, ಅವರ ಸ್ಥಿತಿ ಗಂಭೀರಗೊಂಡಿದೆ. ಅಂತಿಮ ಹಂತದ ಎಲ್ಲಾ ಚಿಕಿತ್ಸೆ ನಡೆಸುತ್ತಿರೋದಾಗಿ ತಿಳಿಸಿದ್ದರು.

ಈ ಎಲ್ಲಾ ಬೆಳವಣಿಗೆಯ ನಂತ್ರ, ಹೃದಯಾಘಾತಕ್ಕೆ ಒಳಗಾದಂತ ಅವರಿಗೆ ಕಡೆಯ ಕ್ಷಣದ ಎಲ್ಲಾ ರೀತಿಯ ಪ್ರಯತ್ನವನ್ನು ನಡೆಸಿದರೂ, ಚಿಕಿತ್ಸೆಗೆ ಪ್ರತಿಸ್ಪಂದಿಸದ ಕಾರಣ, ಇಂದು ಸ್ಯಾಂಡಲ್ ವುಡ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ( Power Star Puneet Rajkumar No More ) ಅವರು ಇನ್ನಿಲ್ಲವಾಗಿದ್ದಾರೆ.

ಪುನೀತ್ ರಾಜ್ ಕುಮಾರ್ ಜೀವನ ಯಾತ್ರೆ

ಪುನೀತ್ ರಾಜ್‍ಕುಮಾರ್ ಅವರು, 17 ಮಾರ್ಚ್ 1975ರಂದು ಜನಿಸಿದ್ದರು. ನಟ, ಹಿನ್ನೆಲೆ ಗಾಯಕ ಮತ್ತು ದೂರದರ್ಶನ ನಿರೂಪಕರಾಗಿ ತೊಡಗಿಸಿಕೊಂಡಿದ್ದರು. ಬಾಲ್ಯದಿಂದಲೂ ಕನ್ನಡ ಚಿತ್ರರಂಗದಲ್ಲಿ ತಂದೆ ದಿವಂಗತ ಡಾ.ರಾಜ್ ಕುಮಾರ್ ಜೊತೆಗೆ ನಟರಾಗಿ ತೊಡಗಿಸಿಕೊಂಡಿದ್ದ ಅವರು, ಕನ್ನಡ ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಾರೆ.

ಪುನೀತ್ 26 ಚಲನಚಿತ್ರಗಳಲ್ಲಿ ನಾಯಕ ನಟನಾಗಿ ನಟನೆ ಮಾಡಿದ್ದಾರೆ. ಬಾಲ್ಯದಲ್ಲಿ ತನ್ನ ತಂದೆ ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲ್ಯ ನಟನಾಗಿ ವಸಂತ ಗೀತ (1980), ಭಾಗ್ಯದಾತ (1981), ಚಲಿಸುವ ಮೋಡಗಳು (1982), ಎರಡು ನಕ್ಷತ್ರಗಳು (1983) ಮತ್ತು ಬೆಟ್ಟದ ಹೂವು (1985) ಅವರು ನಟಿಸಿದ ಚಿತ್ರಗಳ ನಟನೆಗೆ ಮೆಚ್ಚುಗೆ ಪಡೆದರು.

ಅವರ ಬೆಟ್ಟದ ಹೂವು ಚಿತ್ರದ ರಾಮು ಪಾತ್ರದ ಬಾಲನಟನೆಗೆ ರಾಷ್ಟ್ರ ಚಲನಚಿತ್ರ ಪ್ರಶಸ್ತಿಗೆ ಪಾತ್ರರಾದರು. ಪುನೀತ್ ಮೊದಲ ಪ್ರಮುಖ ಪಾತ್ರದಲ್ಲಿ 2002′ ಅಪ್ಪು ಚಿತ್ರದಲ್ಲಿ ಅಭಿನಯಿಸಿದರು. ಅವರ ಅಭಿ (2003), ಆಕಾಶ್ (2005), ಅರಸು (2007), ಮಿಲನ (2007), ಜಾಕೀ (2010), ಹುಡುಗರು (2011), ಅಣ್ಣಾ ಬಾಂಡ್ (2012) ಮತ್ತು ಪವರ್ (2014) ಸೇರಿದಂತೆ ಇತರ ಯಶಸ್ವಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಪ್ರಸಿದ್ಧ ಟಿವಿ ಪ್ರದರ್ಶನ ಕನ್ನಡದ ಕೋಟ್ಯಧಿಪತಿ, ಹೂ ವಾಂಟ್ಸ್ ಟು ಬಿ ಮಿಲಿಯನೇರ್ ಎಂಬ ಕನ್ನಡ ಆವೃತ್ತಿಯ ಟೆಲಿವಿಷನ್ ಶೋ ನಿರೂಪಣೆ ಮಾಡಿದ್ದಾರೆ.

ವೈಯಕ್ತಿಕ ಜೀವನ

ಪುನೀತ್, ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಮಗನಾಗಿ 17 ಮಾರ್ಚ್ 1975ರಂದು ಜನಿಸಿದರು. ಇವರು ರಾಜಕುಮಾರ್ ದಂಪತಿಯ ಕಿರಿಯ ಮಗ. ನಟರಾದ ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಸಹೋದರರು. ಪುನೀತ್ ಆರು ವರ್ಷದವರಿದ್ದಾಗ, ಅವರ ಕುಟುಂಬ ಬೆಂಗಳೂರಿಗೆ ತೆರಳಿತು. ಅವರು ಹತ್ತು ವರ್ಷ ವಯಸ್ಸಿನ ತನಕ ಅವರ ತಂದೆ ಅವರನ್ನು ಮತ್ತು ಅವರ ಸಹೋದರಿ ಪೂರ್ಣಿಮಾರನ್ನು ಚಲನಚಿತ್ರದ ಸೆಟ್ ಗೆ ಕರೆದುಕೊಂಡು ಹೋಗುತ್ತಿದ್ದರು. ಪುನೀತ್ ಡಿಸೆಂಬರ್ 1 ,1999 ರಂದು ಅಶ್ವಿನಿ ರೇವಂತ್ ರನ್ನು ವಿವಾಹವಾದರು. ಇವರಿಗೆ ಇಬ್ಬರು ಪುತ್ರಿಯರಿದ್ದಾರೆ. ದ್ರಿತಿ ಮತ್ತು ವಂದಿತಾ. ಇವರ ಮೊದಲ ಹೆಸರು ಮಾ.ಲೋಹಿತ್ ಆಗಿತ್ತು.

ಅಭಿನಯಿಸಿದ ಚಲನಚಿತ್ರಗಳು

ಬಾಲ ನಟನಾಗಿ ಅಭಿನಯಿಸಿದಂತ ಚಿತ್ರಗಳು

  1. ಪ್ರೇಮದ ಕಾಣಿಕೆ
  2. ಭಾಗ್ಯವಂತ
  3. ಎರಡು ನಕ್ಷತ್ರಗಳು
  4. ಬೆಟ್ಟದ ಹೂವು
  5. ಚಲಿಸುವ ಮೋಡಗಳು
  6. ಶಿವ ಮೆಚ್ಚಿದ ಕಣ್ಣಪ್ಪ
  7. ಪರಶುರಾಮ್
  8. ಯಾರಿವನು
  9. ಭಕ್ತ ಪ್ರಹ್ಲಾದ
  10. ವಸಂತ ಗೀತ

ನಟರಾಗಿ ಅಭಿನಯಿಸಿದಂತ ಚಿತ್ರಗಳು

  • ಅಪ್ಪು
  • ಅಭಿ
  • ವೀರ ಕನ್ನಡಿಗ
  • ಮೌರ್ಯ
  • ಆಕಾಶ್
  • ನಮ್ಮ ಬಸವ
  • ಅಜಯ್
  • ಅರಸು
  • ಮಿಲನ
  • ಬಿಂದಾಸ್
  • ವಂಶಿ
  • ರಾಜ್ ದ ಶೋಮ್ಯಾನ್
  • ಪೃಥ್ವಿ
  • ರಾಮ್
  • ಜಾಕಿ
  • ಹುಡುಗರು
  • ಪರಮಾತ್ಮ
  • ಅಣ್ಣ ಬಾಂಡ್
  • ಯಾರೇ ಕೂಗಾಡಲಿ
  • ನಿನ್ನಿಂದಲೇ
  • ಮೈತ್ರಿ
  • ಪವರ್ ಸ್ಟಾರ್
  • ಧೀರ ರಣಧೀರ
  • ಚಕ್ರವ್ಯೂಹ
  • ದೊ‍ಡ್ಮನೆ ಹುಡುಗ
  • ರಾಜಕುಮಾರ
  • ಅಂಜನಿ ಪುತ್ರ
  • ನಟಸಾರ್ವಭೌಮ
  • ಯುವರತ್ನ

ಸೇರಿದಂತೆ ಇನ್ನೂ ಅನೇಕ ಚಿತ್ರಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಹೀಗೆ ಬಹುಮುಖ ಪ್ರತಿಭೆಯ ಮೂಲಕ, ಬಾಲನಟನಾಗಿ, ನಟನಾಗಿ, ನಿರ್ಮಾಪಕನಾಗಿ ತೊಡಗಿಸಿಕೊಂಡಿದ್ದಂತ ಕನ್ನಡದ ದೊಡ್ಮನೆಯ ಕೊಂಡಿಯೊಂದು, ಇಂದು ಇನ್ನಿಲ್ಲವಾಗಿದೆ. ಈ ಮೂಲಕ ನಟ ಪುನೀತ್ ರಾಜ್ ಕುಮಾರ್ ಬಾರದ ಲೋಕಕ್ಕೆ ತೆರಳಿದ್ದಾರೆ.

ಪುನೀತ್‌ ರಾಜ್‌ಕುಮಾರ್‌ ಬಗ್ಗೆ ಮಾಹಿತಿ ಕೃಪೆ : ವೀಕಿಪೀಡಿಯಾ



Disclaimer

Disclaimer

This story is auto-aggregated by a computer program and has not been created or edited by Dailyhunt Publisher: Kannada News Now

#Hashtags