ಉದಯವಾಣಿ

1.4M Followers

ಗ್ರಾಮ ಪಂಚಾಯತ್‌ಗೊಂದು ಮಾದರಿ ಶಾಲೆ

18 Oct 2021.07:00 AM

ಬೆಂಗಳೂರು: ರಾಜ್ಯದ ಪ್ರತೀ ಗ್ರಾಮ ಪಂಚಾಯತ್‌ನಲ್ಲಿ ಒಂದು ಸರಕಾರಿ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಪರಿವರ್ತಿಸಿ, ಅದರ ಸಂಪೂರ್ಣ ಜವಾಬ್ದಾರಿಯನ್ನು ಸ್ಥಳೀಯ ಶಾಸಕರ ಹೆಗಲಿಗೇರಿಸಲು ಸರಕಾರ ಗಂಭೀರ ಚಿಂತನೆ ನಡೆಸಿದೆ.

ಪ್ರತೀ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಕರ್ನಾಟಕ ಪಬ್ಲಿಕ್‌ ಶಾಲೆ ಇದೆ.

ಪೂರ್ವ ಪ್ರಾಥಮಿಕ ತರಗತಿಯಿಂದ 12ನೇ ತರಗತಿ ವರೆಗೆ ಒಂದೇ ಸೂರಿನಡಿ ಶಿಕ್ಷಣ ನೀಡಲು ಇವುಗಳನ್ನು ಆರಂಭಿಸಲಾಗಿದ್ದು, ಯಶಸ್ವಿಯಾಗಿದೆ. ಇದರ ಮುಂದುವರಿದ ಭಾಗವಾಗಿ ಪ್ರತೀ ಗ್ರಾ.ಪಂ.ನಲ್ಲೂ ಸರಕಾರಿ ಮಾದರಿ ಶಾಲೆ ರೂಪಿಸಲು ಚರ್ಚೆ ನಡೆಯುತ್ತಿದ್ದು, ಮುಂದಿನ ಬಜೆಟ್‌ನಲ್ಲಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಗ್ರಾ.ಪಂ.ಗೊಂದು ಮಾದರಿ ಶಾಲೆ ಶಿಕ್ಷಣ ಇಲಾಖೆಯ ಹೊಸ ಕಲ್ಪನೆಯಲ್ಲ. ಕಿಮ್ಮನೆ ರತ್ನಾಕರ ಅವರು ಶಿಕ್ಷಣ ಸಚಿವರಾಗಿದ್ದ ಸಂದರ್ಭದಲ್ಲಿ ಈ ಬಗ್ಗೆ ರೂಪುರೇಷೆ ಸಿದ್ಧಪಡಿಸಿದ್ದರು. ಈಗ ಸರಕಾರ ಮತ್ತೊಮ್ಮೆ ಈ ಪ್ರಯತ್ನಕ್ಕೆ ಕೈಹಾಕಿದೆ.

ಗ್ರಾ.ಪಂ. ಮಾದರಿ ಶಾಲೆ ಹೇಗೆ?
ಯೋಜನೆಯಡಿ ಹೊಸದಾಗಿ ಕಟ್ಟಡ ಅಥವಾ ಶಾಲಾವರಣ ನಿರ್ಮಾಣ ಮಾಡುವುದಿಲ್ಲ. ಆಯಾ ಗ್ರಾ.ಪಂ.ನಲ್ಲಿ ಉತ್ತಮ ನಿರ್ವಹಣೆ, ಮಕ್ಕಳ ಸಂಖ್ಯೆ ಹೆಚ್ಚಿರುವ ಸರಕಾರಿ ಶಾಲೆಯೊಂದನ್ನು ಆಯ್ಕೆ ಮಾಡಲಾಗುತ್ತದೆ.  ಈ ಶಾಲೆಯನ್ನು ಮಾದರಿ ಶಾಲೆಯಾಗಿ ಅಭಿವೃದ್ಧಿ ಪಡಿಸಲು ಬೇಕಾದ ಎಲ್ಲ ಸೌಲಭ್ಯಗಳನ್ನು ಸರಕಾರ ಅಥವಾ ಸ್ಥಳೀಯ ಶಾಸಕರ ಮೂಲಕ ಒದಗಿಸಲಾಗುತ್ತದೆ. ಗುಣಮಟ್ಟದ ಶಿಕ್ಷಣದ ಜತೆಗೆ ಸೌಲಭ್ಯಗಳನ್ನು ಉನ್ನತ ದರ್ಜೆಗೇರಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ವಿವರ ನೀಡಿದ್ದಾರೆ.

ದೇಶದ ಸಂಸ್ಕೃತಿ, ಇತಿಹಾಸ ಯುವ ಬರಹಗಾರರಿಗೆ ಆವಿಷ್ಕಾರ : ಚಂದ್ರಶೇಖರ ಕಂಬಾರ

ಶಾಲೆ ವಿಲೀನದ ಆತಂಕ
ರಾಜ್ಯದಲ್ಲಿ 48 ಸಾವಿರ ಸರಕಾರಿ ಶಾಲೆಗಳಿವೆ. ಗ್ರಾಮೀಣ ಭಾಗದಲ್ಲಿ ಹೆಚ್ಚಿದ್ದು, ಪ್ರತೀ ಗ್ರಾ.ಪಂ. ವ್ಯಾಪ್ತಿಯಲ್ಲಿ ಕನಿಷ್ಠ 5ರಿಂದ 10 ಸರಕಾರಿ ಶಾಲೆಗಳಿವೆ. ಇವುಗಳಲ್ಲಿ ಒಂದನ್ನು ಆಯ್ದುಕೊಂಡು ಮಾದರಿ ಶಾಲೆಯನ್ನಾಗಿಸಲಾಗುತ್ತದೆ. ಉಳಿದ ಅಥವಾ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಇರುವ ಶಾಲೆಯನ್ನು ಮಾದರಿ ಶಾಲೆಯೊಂದಿಗೆ ವಿಲೀನ ಮಾಡಿ, ಅಲ್ಲಿನ ಬೋಧಕ ಸಿಬಂದಿ ಮತ್ತು ವಿದ್ಯಾರ್ಥಿಗಳನ್ನು ಮಾದರಿ ಶಾಲೆಗೆ ವರ್ಗಾಯಿಸಲಾಗುತ್ತದೆ. ಇದರಿಂದ ಸರಕಾರಿ ಶಾಲೆಗಳು ಮುಚ್ಚುವ ಭೀತಿಯೂ ಇದೆ ಎನ್ನಲಾಗುತ್ತಿದೆ.

ಪ್ರತೀ ಗ್ರಾ.ಪಂ.ನಲ್ಲಿ ಒಂದೊಂದು ಶಾಲೆಯನ್ನು ಮಾದರಿಯನ್ನಾಗಿಸುವ ಯೋಜನೆ ಇದೆ. ಈ ಮಾದರಿ ಶಾಲೆಯ ಸಂಪೂರ್ಣ ಜವಾಬ್ದಾರಿಯನ್ನು ಶಾಸಕರಿಗೆ ವಹಿಸಲಾಗುತ್ತದೆ. ಕೆಲವು ಶಾಸಕರೊಂದಿಗೆ ಈ ಬಗ್ಗೆ ಮಾತುಕತೆಯನ್ನು ನಡೆಸಿದ್ದೇನೆ.
-ಬಿ.ಸಿ. ನಾಗೇಶ್‌, ಶಿಕ್ಷಣ ಸಚಿವ

-ರಾಜು ಖಾರ್ವಿ ಕೊಡೇರಿ

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Udayavani

#Hashtags