Oneindia

1.1M Followers

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಪ್ಪು ಪಟ್ಟಿ ಧರಿಸಿ ಶಾಲೆಗೆ ಬರಲು ನಿರ್ಧರಿಸಿದ ಶಿಕ್ಷಕರು

19 Oct 2021.2:24 PM

ಬೆಂಗಳೂರು, ಅ.18: ರಾಜ್ಯದಲ್ಲಿ 1ರಿಂದ 10ನೇ ತರಗತಿವರೆಗೆ ಪೂರ್ಣ ಪ್ರಮಾಣದಲ್ಲಿ ಶಾಲೆ ಆರಂಭಿಸಲು ಸರ್ಕಾರ ತಜ್ಞರ ಸಮಿತಿ ಸಭೆಯನ್ನು ಸೋಮವಾರ ನಡೆಸಲು ಮುಂದಾಗಿದೆ. ಮತ್ತೊಂದೆಡೆ ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಶಿಕ್ಷಕರು ಅ.21ರಿಂದ ಕಪ್ಪುಪಟ್ಟಿ ಧರಿಸಿ ಶಾಲೆಗಳಿಗೆ ಹಾಜರಾಗಲು ನಿರ್ಧರಿಸಿದ್ದಾರೆ.

6ರಿಂದ 10ನೇ ತರಗತಿವರೆಗೆ ಈಗಾಗಲೇ ಪೂರ್ಣ ಪ್ರಮಾಣದಲ್ಲಿ ಶಾಲೆಗಳು ಪ್ರಾರಂಭವಾಗಿವೆ. ದಸರಾ ಕಳೆದ ನಂತರ 1ರಿಂದ 5ನೇ ತರಗತಿ ಶಾಲೆಗಳನ್ನು ಪ್ರಾರಂಭಿಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹಲವು ಬಾರಿ ಪುನರುಚ್ಚರಿಸಿದ್ದಾರೆ. ಕೋವಿಡ್ ತಾಂತ್ರಿಕ ಸಲಹಾ ಸಮಿತಿ ತೀರ್ಮಾನದಂತೆ ಶಾಲೆ ಪ್ರಾರಂಭಿಸಲಾಗುವುದು ಎಂದು ಸಚಿವರು ಹೇಳಿದ್ದರು.

ಮತ್ತೊಂದೆಡೆ ಸಾರ್ವಜನಿಕ ಶಿಕ್ಷಣ ಇಲಾಖೆ ಅ.21ರಿಂದ ಶಾಲೆಗಳನ್ನು ಪೂರ್ಣ ಪ್ರಮಾಣದಲ್ಲಿ ಪುನರಾರಂಭಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ. ಈ ಸಂಬಂಧ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಶಿಕ್ಷಕರಿಗೆ ಸಲಹೆ ಸೂಚನೆಗಳನ್ನೂ ನೀಡಲಾಗಿದೆ. ಅಲ್ಲದೆ, ಕೋವಿಡ್ ಕಾರಣದಿಂದ ನಿಲ್ಲಿಸಲಾಗಿದ್ದ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಅ.21ರಿಂದ ಶಾಲೆಗಳಲ್ಲಿ ಮತ್ತೆ ಆರಂಭಿಸಲುವಂತೆ ಈಗಾಗಲೇ ಆದೇಶ ಹೊರಡಿಸಲಾಗಿದೆ.

ಮುಖ್ಯಮಂತ್ರಿ ಸಭೆ ಸಾಧ್ಯತೆ:

ಶಾಲೆಗಳನ್ನು ಪುನರಾರಂಭಿಸುವ ಕುರಿತು ರಾಜ್ಯದಲ್ಲಿನ ಕೋವಿಡ್ ತಾಂತ್ರಿಕಾ ಸಲಹಾ ಸಮಿತಿಯೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಬಿ.ಸಿ. ನಾಗೇಶ್ ಸೋಮವಾರ (ಅ.19) ಸಭೆ ನಡೆಸುವ ಸಾಧ್ಯತೆ ಇದೆ. ಈಗಾಗಲೇ ಕೋವಿಡ್ ತೀವ್ರತೆ ಕಡಿಮೆಯಾಗಿದೆ. ಅಲ್ಲದೆ, ಕಳೆದ ತಿಂಗಳು ಇದ್ದಂತಹ ವೈರಲ್ ಜ್ವರದ ಪ್ರಕರಣಗಳೂ ಈಗ ಅಷ್ಟಾಗಿ ಪರಿಣಾಮಕಾರಿಯಾಗಿ ಇಲ್ಲ. ಈ ಎಲ್ಲ ಕಾರಣಗಳಿಂಧ ಶಾಲೆಗಳನ್ನು ಪುನರಾರಂಭಿಸುವ ಉದ್ದೇಶ ಇದೆ ಎನ್ನಲಾಗಿದೆ. ಒಂದು ವೇಳೆ 1ನೇ ತರಗತಿಯಿಂದಲೇ ಅವಕಾಶ ಸಿಗದೆ ಇದ್ದರೂ ಸಹ, 3ನೇ ತರಗತಿಯಿಂದ ಶಾಲೆಗಳನ್ನು ಪುನರಾರಂಭಿಸುವ ಬಗ್ಗೆಯೂ ಶಿಕ್ಷಣ ಇಲಾಖೆ ಒಲವು ಹೊಂದಿದೆ. ಒಟ್ಟಾರೆ ತಜ್ಞರ ಸಮಿತಿ ಏನು ತೀರ್ಮಾನ ಕೊಡುತ್ತದೆ ಎಂಬುದರ ಮೇಲೆ ಶಿಕ್ಷಣ ಇಲಾಖೆ ಅವಲಂಬಿತ ಆಗಿದೆ.

ಕಪ್ಪು ಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರು

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರು ಕಪ್ಪುಪಟ್ಟಿ ಧರಿಸಿ ಅ.21ರಿಂದ ಶಾಲೆಗಳಿಗೆ ಹಾಜರಾಗಲು ತೀರ್ಮಾನಿಸಿದ್ದಾರೆ.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ತುಮಕೂರು ನಗರದಲ್ಲಿ ರಾಜ್ಯ ಕಾರ್ಯಕಾರಿ ಸಮಿತಿ ಸಭೆ ನಡೆಸಿದೆ. ರಾಜ್ಯದ ಎಲ್ಲಾ ಜಿಲ್ಲೆಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಜ್ಯ ಪದಾಧಿಕಾರಿಗಳು ಭಾಗವಹಿಸಿ ತಮ್ಮದೇ ಆದ ಸಂಘಟನಾತ್ಮಕ ವಿಚಾರಗಳನ್ನು, ಅಭಿಪ್ರಾಯವನ್ನು ಮಂಡಿಸಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸಂಘದ ರಾಜ್ಯ ಅಧ್ಯಕ್ಷ ಶಂಭುಲಿಂಗನಗೌಡ ಪಾಟೀಲ ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ತಿಳಿಸಿದ್ದಾರೆ.

Chahal ಅವರ ಜಾಗ ಕಸಿದುಕೊಂಡ ಆಟಗಾರ ಯಾರು ? | Oneindia Kannada

ಸಭೆಯ ನಿರ್ಣಯಗಳು:

* ಈಗಾಗಲೇ ಶಿಕ್ಷಕರ ಪ್ರಮುಖ ಬೇಡಿಕೆಗಳಾದ ಸಿ & ಆರ್ ನಿಯಮ ತಿದ್ದುಪಡಿ, ವರ್ಗಾವಣೆ ಸಮಸ್ಯೆ, ಮುಖ್ಯ ಗುರುಗಳ ಸಮಸ್ಯೆ ಹಾಗೂ ಇನ್ನೀತರ ಬೇಡಿಕೆಗಳ ಈಡೇರಿಕೆಗಾಗಿ ತರಬೇತಿಯನ್ನು ಬಹಿಷ್ಕಾರ ಮಾಡಲಾಗಿದೆ. ತರಬೇತಿ ಬಹಿಷ್ಕಾರವನ್ನು ಮುಂದುವರೆಸುವುದರ ಜೊತೆಗೆ; ಮುಂದುವರಿದ ಭಾಗವಾಗಿ ಅಕ್ಟೋಬರ್ 21 ರಿಂದ ಕಪ್ಪು ಪಟ್ಟಿ ಧರಿಸಿ ಒಂದು ವಾರ ಕಾಲ ಶಾಲೆಯ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸುವುದು.

* ಶಿಕ್ಷಕರ ಸಮಸ್ಯೆಗಳ ಈಡೇರಿಕೆಗಾಗಿ ನಿರಂತರವಾದ ತೀವ್ರ ಹೋರಾಟವನ್ನು ಕೈಗೊಳ್ಳುವ ನಿರ್ಣಯ ಮಾಡಲಾಗಿದೆ.

* ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ರದ್ದತಿ, ವೇತನ ಆಯೋಗದ ಜಾರಿ ಹಾಗೂ ಇನ್ನಿತರ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಹೋರಾಟಕ್ಕೆ ಸಹಕಾರ ನೀಡುವುದು ಹಾಗೂ ಶಿಕ್ಷಕರ ಸಂಘಟನೆ ಕೈಗೊಳ್ಳುವ ಹೋರಾಟಕ್ಕೆ ಸರ್ಕಾರಿ ನೌಕರ ಸಂಘದ ಸಹಕಾರವನ್ನು ಪಡೆದುಕೊಳ್ಳಲು ಸಭೆಯು ನಿರ್ಣಯಿಸಿತು.

source: oneindia.com

Disclaimer

Disclaimer

This story is auto-aggregated by a computer program and has not been created or edited by Dailyhunt Publisher: OneIndia Kannada

#Hashtags