ಈ ಸಂಜೆ

803k Followers

ಸರ್ಕಾರಿ ನೌಕರರ ಸ್ಥಿರಾಸ್ತಿ ಮಾರಾಟಕ್ಕೆ ಅನುಮತಿ ಕಡ್ಡಾಯ

06 Nov 2021.4:18 PM

ಬೆಂಗಳೂರು, ನ.6- ಸರ್ಕಾರಿ ನೌಕರರು ಅಧಿಕೃತ ವ್ಯವಹಾರ ಹೊಂದಿರುವ ವ್ಯಕ್ತಿಯೊಂದಿಗೆ ಸ್ಥಿರಾಸ್ತಿ ವಿಲೇವಾರಿ ವ್ಯವಹಾರ ಮಾಡುವ ಮುನ್ನ ನೇಮಿಸಲಾದ ಪ್ರಾಧಿಕಾರಿಯ ಪೂರ್ವ ಮಂಜೂರಾತಿ ಪಡೆಯಬೇಕಾಗಿದೆ.

ಈ ಸಂಬಂಧ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸುತ್ತೋಲೆ ಹೊರಡಿಸಿದ್ದು, ಸರ್ಕಾರಿ ನೌಕರರು ಸ್ಥಿರಾಸ್ತಿ ವಿಲೇವಾರಿ ಮಾಡುವಾಗ ಅಧಿಕೃತ ವ್ಯಕ್ತಿಯೊಂದಿಗಿನ ವ್ಯವಹಾರದ ಬಗ್ಗೆ ನೇಮಿಸಲಾದ ಪ್ರಾಧಿಕಾರಿಯ ಪೂರ್ವ ಮಂಜೂರಾತಿ ಪಡೆಯುವ ಅಗತ್ಯವಿದೆ ಎಂದು ಸ್ಪಷ್ಟಪಡಿಸಿದೆ.

ಕಳೆದ ಜ.7ರಿಂದ ಜಾರಿಗೆ ಬಂದಿರುವ ಕಾಯ್ದೆ ಪ್ರಕಾರ ಅಧಿಕೃತ ವ್ಯವಹಾರ ಹೊಂದಿರುವ ವ್ಯಕ್ತಿಯನ್ನು ಹೊರತುಪಡಿಸಿ ಬೇರೆ ಮೂಲಗಳಿಂದ ಸರ್ಕಾರಿ ನೌಕರರು ತಮ್ಮ ಹೆಸರಿನಲ್ಲಾಗಲಿ ಅಥವಾ ತಮ್ಮ ಕುಟುಂಬದ ಯಾವುದೇ ಸದಸ್ಯರ ಹೆಸರಿನಲ್ಲಾಗಲಿ ಗುತ್ತಿಗೆ, ಅಡಮಾನ, ಖರೀದಿ, ಮಾರಾಟ, ಉಡುಗೊರೆ ಮೂಲಕ ಸ್ಥಿರ ಸ್ವತ್ತನ್ನು ವಿಲೇವಾರಿ ಮಾಡುವಾಗ ನೇಮಿಸಲಾದ ಪ್ರಾಧಿಕಾರಕ್ಕೆ ಮೊದಲೇ ತಿಳಿಸಬೇಕು.

ಒಂದು ವೇಳೆ ಸಮರ್ಥನೀಯ ಕಾರಣಗಳಿಂದಾಗಿ ನಿಯಮಿತ ಪ್ರಾಧಿಕಾರಕ್ಕೆ ಮೊದಲೇ ತಿಳಿಸದೆ ಸ್ಥಿರ ಸ್ವತ್ತನ್ನು ವಿಲೇವಾರಿ ಮಾಡಿದಾಗ ಅಂತಹ ವ್ಯವಹಾರ ಕೈಗೊಂಡ ಎರಡು ತಿಂಗಳೊಳಗೆ ವಿವರ ಹಾಗೂ ಪೂರಕ ದಾಖಲೆ ಮತ್ತು ಸಮರ್ಥ ಕಾರಣಗಳೊಂದಿಗೆ ನಿಯಮಿತ ಪ್ರಾಧಿಕಾರಕ್ಕೆ ವರದಿ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಸರ್ಕಾರಿ ನೌಕರ ನೀಡಿದ ಕಾರಣ ಅಂಗೀಕಾರಕ್ಕೆ ಅರ್ಹವೆಂದು ತೃಪ್ತಿಪಟ್ಟಲ್ಲಿ ನೌಕರರು ಸಲ್ಲಿಸಿದ ದಾಖಲೆ ಮತ್ತು ವಿವರಗಳನ್ನು ಪರಿಶೀಲಿಸಿ ಅಂತಹ ವ್ಯವಹಾರವನ್ನು ಘಟನೋತ್ತರವಾಗಿ ಪ್ರಾಧಿಕಾರವು ಟಿಪ್ಪಣಿ ಮಾಡಿಕೊಳ್ಳಬಹುದಾಗಿದೆ.

ಸರ್ಕಾರಿ ನೌಕರ ತನ್ನ ಸ್ವಂತ ಹೆಸರಿನಲ್ಲಾಗಲಿ ಅಥವಾ ಕುಟುಂಬದ ಯಾರೇ ಸದಸ್ಯರ ಹೆಸರಿನಲ್ಲಿ ಒಡೆತನ ಹೊಂದಿರುವ ಚರಾಸ್ತಿಗೆ ಸಂಬಂಧಿಸಿದಂತೆ ಮಾಡುವ ಪ್ರತಿಯೊಂದು ವ್ಯವಹಾರಕ್ಕೂ ಮುನ್ನ ನೇಮಿಸಲಾದ ಪ್ರಾಧಿಕಾರದ ಪೂರ್ವ ಮಂಜೂರಾತಿ ಪಡೆಯಬೇಕು. ಸ್ವತ್ತಿನ ಮೌಲ್ಯವು ಸರ್ಕಾರಿ ನೌಕರರ ಮಾಸಿಕ ಮೂಲ ವೇತನ ಮೀರಿದಾಗ ಈ ಮಂಜೂರಾತಿ ಪಡೆಯುವ ಅಗತ್ಯವದೆ.

ಈ ವಿಚಾರವನ್ನು ನೇಮಿಸಿದ ಪ್ರಾಧಿಕಾರಗಳು ಹಾಗೂ ಸರ್ಕಾರಿ ನೌಕರರ ಗಮನಕ್ಕೆ ತರಲು ಸರ್ಕಾರದ ಎಲ್ಲ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಹಾಗೂ ಇಲಾಖಾ ಮುಖ್ಯಸ್ಥರಿಗೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: eesanje

#Hashtags