ಪ್ರಜಾವಾಣಿ

1.5M Followers

ಮಾತೃ ಇಲಾಖೆಗೇ ನೌಕರಿ ಸೀಮಿತ; ಪಿಂಚಣಿ ವಿಷಯ ಕಂದಾಯ ಇಲಾಖೆ ವ್ಯಾಪ್ತಿಗೆ

26 Nov 2021.02:26 AM

ಬೆಂಗಳೂರು: ಒಂದು ಇಲಾಖೆಯಿಂದ ಮತ್ತೊಂದು ‌ಇಲಾಖೆಗೆ ಸಿಬ್ಬಂದಿ ನಿಯೋಜನೆ ಅಥವಾ ಹುದ್ದೆ ವರ್ಗಾವಣೆಗೆ ನಿಷೇಧ ವಿಧಿಸಬೇಕು ಎಂದು ಶಿಫಾರಸು ಮಾಡಲು ಕಂದಾಯ ಸಚಿವ ಆರ್‌. ಅಶೋಕ ಅಧ್ಯಕ್ಷತೆಯ ಸಚಿವ ಸಂಪುಟ ಉಪ ಸಮಿತಿ ನಿರ್ಧರಿಸಿದೆ.

ಇದಕ್ಕೆ ಪೂರಕವಾಗಿ, 'ವೃಂದ ಮತ್ತು ನೇಮಕಾತಿ ನಿಯಮ'ಗಳಿಗೆ ತಿದ್ದುಪಡಿ ತರುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ (ಡಿಪಿಎಆರ್‌) ಸಮಿತಿ ಸೂಚಿಸಿದೆ.

ವಿವಿಧ ಇಲಾಖೆ, ಕಚೇರಿಗಳ ವಿಲೀನ ಅಥವಾ ರದ್ದು, ಮಂಜೂರಾಗಿರುವ ವಿವಿಧ ವೃಂದ ಬಲದ ವೈಜ್ಞಾನಿಕ ಪರಿಷ್ಕರಣೆ, ಹುದ್ದೆಗಳ ರದ್ದತಿ, ಮರುವಿನ್ಯಾಸ ಹಾಗೂ ಆರನೇ ವೇತನ ಆಯೋಗವು ಆಡಳಿತದಲ್ಲಿ ಸುಧಾರಣೆ ತರಲು ಮಾಡಿರುವ ಶಿಫಾರಸುಗಳನ್ನು ಪರಿಶೀಲಿಸಲು ಈ ಸಮಿತಿ ರಚಿಸಲಾಗಿತ್ತು.

ವಿವಿಧ ಸಚಿವಾಲಯಗಳಲ್ಲಿ ಬಹಳಷ್ಟು ಹುದ್ದೆಗಳು ಖಾಲಿ ಇವೆ. ಸಚಿವಾಲಯದ ಅಧಿಕಾರಿಗಳು ಬೇರೆ ಇಲಾಖೆಗೆ ಹಾಗೂ ವಿವಿಧ ಇಲಾಖೆಗಳಿಂದ ಬೇರೆ ಬೇರೆ ಇಲಾಖೆಗಳಿಗೆ ನಿಯೋಜನೆಯಲ್ಲಿ ತೆರಳುತ್ತಿರುವುದರಿಂದ ಸಮಸ್ಯೆಗಳಾಗುತ್ತಿದೆ. ನಿಯೋಜನೆ ಮೇಲೆ ತೆರಳುವ ಸಿಬ್ಬಂದಿಯ ವಿವರಗಳನ್ನು ಇಲಾಖಾವಾರು ಸಂಗ್ರಹಿಸಿ ಮಂಡಿಸಬೇಕು ಎಂದು ಡಿಪಿಎಆರ್‌ ಮತ್ತು ಎಲ್ಲ ಇಲಾಖೆಗಳಿಗೆ ಸಮಿತಿ ಸೂಚಿಸಿದೆ. ಇದನ್ನು ನಿರ್ಬಂಧಿಸಲು ಸಾಮಾನ್ಯ ನೇಮಕಾತಿ ನಿಯಮ 16 (2) ನಿಯೋಜನೆ ಮೇಲೆ ತೆರಳುವ ನಿಯಮಕ್ಕೆ ತಿದ್ದುಪಡಿ ತರುವ ಅಗತ್ಯವಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದೆ.

'ಅವಧಿಪೂರ್ವ ವರ್ಗಾವಣೆ ಇಲ್ಲ'

'ಮುಂದಿನ ಸಾರ್ವತ್ರಿಕ ವರ್ಗಾವಣೆ ಅವಧಿಯವರೆಗೆ ಯಾವುದೇ ಅವಧಿಪೂರ್ವ ವರ್ಗಾವಣೆ ಮಾಡುವಂತಿಲ್ಲ. ಇಂತಹ ವರ್ಗಾವಣೆ ಪ್ರಸ್ತಾವನೆಗಳನ್ನು ಮುಖ್ಯಮಂತ್ರಿಗೆ ಸಲ್ಲಿಸುವಂತಿಲ್ಲ' ಎಂದು ಡಿಪಿಎಆರ್‌ ಆದೇಶಿಸಿದೆ.

ಲಭ್ಯ ಇರುವ ಖಾಲಿ, ರಿಕ್ತ ಸ್ಥಾನಗಳಿಗೆ ಮಾತ್ರ ಕನಿಷ್ಠ ಸೇವಾ ಅವಧಿ ಪೂರೈಸಿರುವ ಅಧಿಕಾರಿ, ಸಿಬ್ಬಂದಿಯ ವರ್ಗಾವಣೆಯನ್ನು ಅನುಮೋದಿಸಲು ಆಯಾ ಇಲಾಖೆಗಳ ಸಚಿವರಿಗೆ ಅಧಿಕಾರ ಇದೆ. ಈ ಅಧಿಕಾರ ನ.24ರಿಂದ ಒಂದು ತಿಂಗಳ ಅವಧಿಗೆ ಸೀಮಿತ. ಈ ರೀತಿಯ ವರ್ಗಾವಣೆಯಿಂದ ತೆರವಾಗುವ ಸ್ಥಾನವನ್ನು ಮತ್ತೊಂದು ವರ್ಗಾವಣೆ ಮೂಲಕ ಭರ್ತಿ ಮಾಡುವಂತೆ ಇಲ್ಲ' ಎಂದೂ ಆದೇಶ ಸ್ಪಷ್ಟಪಡಿಸಿದೆ.

ಗ್ರೂಪ್‌ 'ಬಿ', 'ಸಿ' ಮತ್ತು 'ಡಿ' ಶ್ರೇಣಿಯ ಸಿಬ್ಬಂದಿಗೆ ಈ ಆದೇಶ ಅನ್ವಯ ಆಗಲಿದೆ.

ಸಾರ್ವತ್ರಿಕ ವರ್ಗಾವಣೆ ಅವಧಿ ಜುಲೈ 22ಕ್ಕೆ ಮುಕ್ತಾಯಗೊಂಡಿದೆ. ಕೆಲವು ವಿಶೇಷ ಪ್ರಕರಣಗಳಲ್ಲಿ ಮುಖ್ಯಮಂತ್ರಿಯ ಅನುಮೋದನೆ ಪಡೆದು ವರ್ಗಾವಣೆ ಮಾಡಲು ಅವಕಾಶ ಇದೆ. ಇದನ್ನು ಬಳಸಿಕೊಂಡು, ಕೆಲವು ನಿಯಮಿತ (ರೆಗ್ಯುಲರ್‌) ಸ್ವರೂಪದ ವರ್ಗಾವಣಾ ಪ್ರಸ್ತಾವನೆಗಳನ್ನೂ ಮುಖ್ಯಮಂತ್ರಿ ಅನುಮೋದನೆಗೆ ಸಲ್ಲಿಸಲಾಗುತ್ತಿದೆ. ಈ ಪ್ರವೃತ್ತಿಯಿಂದ ಕೆಲವು ಇಲಾಖೆಗಳಲ್ಲಿ ಕೆಲಸಗಳು ಕುಂಠಿತಗೊಳ್ಳುತ್ತಿವೆ ಎಂಬ ಕಾರಣಕ್ಕೆ ಈ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಪ್ರಮುಖ ಶಿಫಾರಸುಗಳು

*ಎಲ್ಲ ಇಲಾಖೆಗಳ ಪಿಂಚಣಿ ವಿಷಯ, ತಗಾದೆಗಳನ್ನು ನಿರ್ವಹಿಸುವ ಹೊಣೆ ಕಂದಾಯ ಇಲಾಖೆಯ ಪಿಂಚಣಿ ನಿರ್ದೇಶನಾಲಯಕ್ಕೆ

* ಖಜಾನೆ ಇಲಾಖೆ ಜೊತೆ ಕರ್ನಾಟಕ ಸರ್ಕಾರಿ ವಿಮಾ ಇಲಾಖೆ (ಕೆಜಿಐಡಿ) ವಿಲೀನ

*ಕೆಲಸದ ಒತ್ತಡ ಕಡಿಮೆ ಇರುವುದರಿಂದ ನಾಲ್ಕು ಪ್ರಾದೇಶಿಕ ಆಯುಕ್ತ (ಕಲಬುರಗಿ, ಮೈಸೂರು, ಬೆಳಗಾವಿ, ಬೆಂಗಳೂರು) ಹುದ್ದೆ ರದ್ದು

*ಸಾಮಾಜಿಕ ಅರಣ್ಯ ಸಂರಕ್ಷಣಾಧಿಕಾರಿ (ಎಸ್‌ಎಫ್‌ಒ) ಹುದ್ದೆ, ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಒ) ಹುದ್ದೆ ಜೊತೆ ವಿಲೀನಗೊಳಿಸುವುದು

* ಸಚಿವಾಲಯದಲ್ಲಿ ಇ- ಆಫೀಸ್‌ ಜಾರಿಗೆ ಬಂದಿರುವುದರಿಂದ ಅಲ್ಲಿನ 542 ಕಿರಿಯ ಸಹಾಯಕರ ಹುದ್ದೆಗಳಲ್ಲಿ 164 ಕಾರ್ಯನಿರತ ಹುದ್ದೆಗಳನ್ನು ಮುಂದುವರಿಸಿ, ಖಾಲಿ ಹುದ್ದೆಗಳ ರದ್ದು

*ಬಿಡಿಎ ಮತ್ತು ಸ್ಥಳೀಯ ಯೋಜನಾ ಪ್ರಾಧಿಕಾರಗಳನ್ನು ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ (ಬಿಎಂಆರ್‌ಡಿಎ) ಜೊತೆ ವಿಲೀನಗೊಳಿಸುವುದು. ಅದು ಸಾಧ್ಯವಾಗದ ಪಕ್ಷದಲ್ಲಿ ಕನಿಷ್ಠ ಬಿಡಿಎಯನ್ನು ಬಿಎಂಆರ್‌ಡಿಎ ಜೊತೆ ಬಿಬಿಎಂಪಿ ವ್ಯಾಪ್ತಿಯಲ್ಲಿ ವಿಲೀನ.

Disclaimer

Disclaimer

This story is auto-aggregated by a computer program and has not been created or edited by Dailyhunt Publisher: Prajavani

#Hashtags